ರಾಜ್ಯ ಬಜೆಟ್ 2025: ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಸವಾಲು 'ಗ್ಯಾರಂಟಿ'
ಸದಾ ಆರ್ಥಿಕ ಶಿಸ್ತಿನ ಕುರಿತು ಮಾತನಾಡುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಈ ಸಾಲಿನ ಬಜೆಟ್ ಮಂಡನೆ ಸವಾಲಾಗಿದೆಯಾ?. ಹಿಗೋಂದು ಚರ್ಚೆ ನಡೆಯುತ್ತಿರುವುದಕ್ಕೆ ಕಾರಣಗಳು ಇವೆ.;
ಸದಾ ಆರ್ಥಿಕ ಶಿಸ್ತಿನ ಕುರಿತು ಮಾತನಾಡುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಈ ಸಾಲಿನ ಬಜೆಟ್ ಮಂಡನೆ ಸವಾಲಾಗಿದೆಯಾ? ಈ ರೀತಿಯದ್ದೊಂದು ಚರ್ಚೆ ನಡೆಯುತ್ತಿದೆ. ಅದಕ್ಕೆ ಕಾರಣಗಳೂ ಇವೆ. ಜನಪ್ರಿಯ ಗ್ಯಾರಂಟಿ ಯೋಜನೆಗಳಿಗೆ ಹಣ ಹೊಂದಿಸಲು ರಾಜ್ಯ ಸರ್ಕಾರ ಪರದಾಡುತ್ತಿದೆ. ಹೀಗಾಗಿ ಗ್ಯಾರಂಟಿ ಯೋಜನೆಗಳಿಗೆ ಕಾಂಗ್ರೆಸ್ ಪಕ್ಷದಲ್ಲಿಯೇ ಅಪಸ್ವರ ಕೇಳಿ ಬಂದಿರುವುದು ಗುಟ್ಟಾಗಿಯೇನು ಇಲ್ಲ.
ಗ್ಯಾರಂಟಿ ಯೋಜನೆಗಳಿಂದಾಗಿ ರಾಜ್ಯದ ಆರ್ಥಿಕ ಸ್ಥಿತಿ ಹದಗೆಟ್ಟಿದೆ ಎಂಬ ಆರೋಪಗಳಿವೆ. ಹೀಗಾಗಿಯೇ ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ರಾಜ್ಯದ ಆರ್ಥಿಕ ಸ್ಥಿತಿಯ ಕುರಿತು ಶ್ವೇತಪತ್ರ ಹೊರಡಿಸುವಂತೆ ಮುಖ್ಯಮಂತ್ರಿಗಳನ್ನು ಆಗ್ರಹಿಸಿದ್ದಾರೆ.
ಸವಾಲಿನ ಸಂದರ್ಭದಲ್ಲಿ ಹಣಕಾಸು ಸಚಿವರೂ ಆಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಾರ್ಚ್ 7 ರಂದು ಚತಮ್ಮ 16ನೇ ಬಜೆಟ್ ಮಂಡನೆ ಮಾಡಲಿದ್ದಾರೆ.
ಈ ಸಾಲಿನ ಬಜೆಟ್ ಆಶಯಗಳು ಹಾಗೂ ಸವಾಲುಗಳ ಕುರಿತು 'ದ ಫೆಡರಲ್ ಕರ್ನಾಟಕ' ವಿಶೇಷ ಚರ್ಚೆ ನಡೆಸಿತು. ವಿಧಾನ ಪರಿಷತ್ ಕಾಂಗ್ರೆಸ್ ಸದಸ್ಯ ನಾಗರಾಜ್ ಯಾದವ್ ಹಾಗೂ ಬಿಜೆಪಿ ರಾಜ್ಯ ವಕ್ತಾರ ಸತ್ಯನಾರಾಯಣ ಹೇಮಾದ್ರಿ ಚರ್ಚೆಯಲ್ಲಿ ಭಾಗವಹಿಸಿದ್ದರು.
ಗ್ಯಾರಂಟಿ ಯೋಜನೆಗಳಿಂದ ಸರ್ಕಾರ ಮೇಲೆ ಯಾವುದೇ ಹೊರೆ ಆಗಿಲ್ಲ ಎಂದು ವಿಧಾನ ಪರಿಷತ್ ಕಾಂಗ್ರೆಸ್ ಸದಸ್ಯ ನಾಗರಾಜ್ ಯಾದವ್ ಪ್ರತಿಪಾದಿಸಿದರು. ಹಣಕಾಸು ಸಚಿವರಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈಗಾಗಲೇ 15 ಬಜೆಟ್ಗಳನ್ನು ಮಂಡಿಸಿದ್ದಾರೆ. ಇದು ಅವರು ಮಂಡಿಸಲಿರುವ 16ನೇ ಬಜೆಟ್. ಹೀಗಾಗಿ ಆರ್ಥಿಕ ಶಿಸ್ತು ಕಾಪಾಡಿಕೊಳ್ಳುವುದನ್ನು ಸಿದ್ದರಾಮಯ್ಯ ಅವರು ಯಾರಿಂದಲೂ ಕಲಿಯುವ ಅಗತ್ಯವಿಲ್ಲ. ಸರ್ಕಾರಕ್ಕೆ ಆರ್ಥಿಕ ಹೊರೆ ಆಗುತ್ತಿರುವುದು ಹಿಂದಿನ ಬಿಜೆಪಿ ಸರ್ಕಾರ ಮಾಡಿರುವ ಸಾಲದ ಹೊರೆ ಎಂದು ಅವರು ಗ್ಯಾರಂಟಿ ಯೋಜನೆಗಳನ್ನು ಸಮರ್ಥಿಸಿಕೊಂಡರು.
ಇದನ್ನು ಒಪ್ಪದ ರಾಜ್ಯ ಬಿಜೆಪಿ ವಕ್ತಾರ ಸತ್ಯನಾರಾಯಣ ಹೇಮಾದ್ರಿ, ಗ್ಯಾರಂಟಿ ಯೋಜನೆಗಳಿಗೆ ಬೇರೆ ಬೇರೆ ಇಲಾಖೆಗಳಿಗೂ ಹಂಚಿಕೆ ಮಾಡಿದ್ದ ಅನುದಾನವನ್ನು ಬಳಸಲಾಗುತ್ತಿದೆ. ಎಸ್ಸಿಪಿ, ಟಿಎಸ್ಪಿ ಅನುದಾನವನ್ನೂ ಗ್ಯಾರಂಟಿ ಯೋಜನೆಗಳಿಗೆ ಬಳಸಿಕೊಳ್ಳುತ್ತಿದ್ದಾರೆ. ಸಿದ್ದರಾಮಯ್ಯ ಅವರು ತಮ್ಮ ಆರ್ಥಿಕ ಶಿಸ್ತು ಕಾಪಾಡಿಕೊಳ್ಳುವಲ್ಲಿ ದಾರಿ ತಪ್ಪಿರುವುದು ಇದರಿಂದ ಸ್ಪಷ್ಟ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಕಳೆದ ಬಾರಿ ಗ್ಯಾರಂಟಿ ಯೋಜನೆಗಳಿಗೆ 52 ಸಾವಿರ ಕೋಟಿ ರೂಪಾಯಿಗಳನ್ನು ಹಂಚಿಕೆ ಮಾಡಿ ಒಟ್ಟು 2024-25ನೇ ಸಾಲಿನ ಕರ್ನಾಟಕ ರಾಜ್ಯ ಬಜೆಟ್‌ನ ಒಟ್ಟು ಮೊತ್ತವು ₹3,71,383 ಕೋಟಿ ರೂಪಾಯಿಗಳಷ್ಟಾಗಿತ್ತು. ಈ ಸಲದ ಬಜೆಟ್ 4 ಲಕ್ಷ ಕೋಟಿ ರೂಪಾಯಿ ಮೀರುವ ಅಂದಾಜಿದೆ. ಸಿದ್ದರಾಮಯ್ಯ ಅವರು ಒಟ್ಟು ಸುಮಾರು 4.1 ಲಕ್ಷ ಕೋಟಿ ರೂಪಾಯಿಗಳ ಬಜೆಟ್ ಮಂಡನೆ ಮಾಡಲಿದ್ದಾರೆ ಎಂಬ ಮಾಹಿತಿಯಿದೆ. ಹೀಗಾಗಿ ಈ ಬಾರಿಯ ಬಜೆಟ್ ನಾಡಿನ ಜನರ ಗಮನ ಸೆಳೆದಿದೆ.