Kantara: Chapter 1‘| ಟಿಕೆಟ್ ದುಬಾರಿಯಾದ್ರೂ ಕ್ಷಣಮಾತ್ರದಲ್ಲಿ ಸೋಲ್ಡ್ಔಟ್
ಕಾಂತಾರ ಮುಂಗಡ ಟಿಕೆಟ್ ಬುಕ್ಕಿಂಗ್ ಪ್ರಾರಂಭವಾಗುತ್ತಿದ್ದಂತೆಯೇ ಕ್ಷಣಮಾತ್ರದಲ್ಲಿ ಟಿಕೆಟ್‌ಗಳು ಮುಗಿಯುತ್ತಿರುವುದು ಇದಕ್ಕೆ ಸಾಕ್ಷಿ. ಹಳ್ಳಿಗಳಿಂದ ನಗರಗಳವರೆಗೂ ಜನರು ಈ ಚಿತ್ರವನ್ನು ನೋಡಲು ಕಾತುರದಲ್ಲಿದ್ದಾರೆ.
‘ಕಾಂತಾರ: ಚಾಪ್ಟರ್ 1’
'ಕಾಂತಾರ: ಅಧ್ಯಾಯ 1' ʻಫಸ್ಟ್ ಡೇ ಫಸ್ಟ್ ಶೋʼ ನೋಡಬೇಕು ಎನ್ನುವ ಸಿನಿಪ್ರಿಯರಿಗೆ ಈಗಾಗಲೇ ಮುಂಗಡ ಟಿಕೆಟ್ ಬುಕ್ಕಿಂಗ್ ಆರಂಭವಾಗಿದೆ. ಆದರೆ ಟಿಕೆಟ್ ವಿವಾದದ ಲಾಭ ಪಡೆದಿರುವ ಈ ಸಿನಿತಂಡ ಟಿಕೆಟ್ ದರಗಳನ್ನು 400ರಿಂದ 1000 ರೂ.ಗಳವರೆಗೆ ಏರಿಕೆ ಮಾಡಿವೆ. ಈ ದುಬಾರಿ ಟಿಕೆಟ್‌ದರ ಸಾಮಾನ್ಯ ಜನರಿಗೆ ಹೊರೆಯಾಗಿಸಿದೆ. ಆದರೆ ಮುಂಗಡ ಬುಕಿಂಗ್ ಆರಂಭ ಆಗುತ್ತಿದ್ದಂತೆ ಹಲವು ಶೋಗಳು ಈಗಾಗಲೇ ಸೋಲ್ಡ್ಔಟ್ ಆಗಿವೆ.
ಸಾಮಾನ್ಯವಾಗಿ ಯಾವುದೇ ದೊಡ್ಡ ಸಿನಿಮಾ ಬಿಡುಗಡೆಯ ದಿನದಂದು ಉತ್ಸಾಹ ಕಂಡುಬರುವುದು ಸಹಜ. ಆದರೆ ʻಕಾಂತಾರ: ಅಧ್ಯಾಯ 1ʼ ಅಭಿಮಾನಿಗಳಿಗೆ ಕೇವಲ ಸಿನಿಮಾ ಅಲ್ಲ. 2022ರಲ್ಲಿ ಬಿಡುಗಡೆಯಾದ ʻಕಾಂತಾರʼ ಸಿನಿಮಾ ಕೇವಲ ವಾಣಿಜ್ಯ ಯಶಸ್ಸು ಮಾತ್ರವಲ್ಲ, ಕರ್ನಾಟಕದ ತುಳುನಾಡಿದ ಗ್ರಾಮೀಣ ಸಂಸ್ಕೃತಿ, ಭೂ ದೇವತೆಗಳ ಆರಾಧನೆ, ಮಾನವ-ಪ್ರಕೃತಿ ಸಂಬಂಧಗಳ ಹೃದಯಸ್ಪರ್ಶಿ ಚಿತ್ರಣದಿಂದ ಕೋಟ್ಯಂತರ ಜನರ ಹೃದಯ ಗೆದ್ದಿತ್ತು. ಆ ಚಿತ್ರದ ಯಶಸ್ಸಿನ ಭಾಗವೇ ಇಂದು ಈ ಸಿನಿಮಾದ ಪೂರ್ವಭಾಗದ ಕತೆಯನ್ನು ಜನರಿಗೆ ಹೇಳಹೊರಟಿರುವ ʻಕಾಂತಾರ: ಅಧ್ಯಾಯ 1ʼ ಸಿನಿಮಾವನ್ನು ನೋಡಲು ಅಭಿಮಾನಿಗಳು ಕಾತರದಿಂದ ಕಾಯುವಂತಾಗಿದೆ. ಹಾಗಾಗಿ ಮುಂಗಡ ಟಿಕೆಟ್ ಬುಕ್ಕಿಂಗ್ ಪ್ರಾರಂಭವಾಗುತ್ತಿದ್ದಂತೆಯೇ ಕ್ಷಣಮಾತ್ರದಲ್ಲಿ ಟಿಕೆಟ್‌ಗಳು ಮುಗಿಯುತ್ತಿರುವುದು ಇದಕ್ಕೆ ಸಾಕ್ಷಿ. ಹಳ್ಳಿಗಳಿಂದ ನಗರಗಳವರೆಗೂ ಜನರು ಈ ಚಿತ್ರವನ್ನು ನೋಡಲು ಕಾತರದಲ್ಲಿದ್ದಾರೆ.
ಬುಕ್ಕಿಂಗ್ ಆರಂಭವಾಗುತ್ತಿದ್ದಂತೆಯೇ ಸೋಲ್ಡ್ ಔಟ್
ಶುಕ್ರವಾರ ಮುಂಗಡ ಬುಕ್ಕಿಂಗ್ ಪ್ರಾರಂಭವಾದ ಕೇವಲ ಒಂದು ಗಂಟೆಯಲ್ಲಿ ಬುಕ್‌ಮೈಶೋನಲ್ಲಿ ಕನಿಷ್ಠ 30 ಪ್ರತಿಶತ ಟಿಕೆಟ್‌ಗಳು ಮಾರಾಟವಾಗಿವೆ. ಬುಕ್ಕಿಂಗ್ ಪೋರ್ಟಲ್‌ಗಳಲ್ಲಿ ಮೇಕ್‌ಮೈಶೋನಲ್ಲಿ 160ಕ್ಕೂ ಹೆಚ್ಚು ಪ್ರದರ್ಶನಗಳನ್ನು ಪಟ್ಟಿ ಮಾಡಲಾಗಿದೆ. ಬೆಂಗಳೂರಿನಲ್ಲಿ ಮಾತ್ರ ಮೊದಲ ದಿನದಂದು 1000ಕ್ಕೂ ಹೆಚ್ಚು ಪ್ರದರ್ಶನಗಳನ್ನು ಪಡೆಯುವ ನಿರೀಕ್ಷೆಯಿದೆ. ಮೊದಲ ಪ್ರದರ್ಶನವು ಬೆಳಿಗ್ಗೆ 6.30ಕ್ಕೆ ಅನೇಕ ಸಿಂಗಲ್ ಸ್ಕ್ರೀನ್‌ಗಳಲ್ಲಿ ಆರಂಭವಾಗುತ್ತಿದೆ.
ಸಿದ್ದೇಶ್ವರ, ಗೋಪಾಲನ್ ಮಿನಿಪ್ಲೆಕ್ಸ್, ರವಿ ಡಿಜಿಟಲ್, ಗೋಪಾಲನ್ ಸಿನಿಮಾಸ್ (ಮೈಸೂರು ರಸ್ತೆ), ಗೋಪಾಲನ್ ಮಾಲ್ (ಸಿರ್ಸಿ ವೃತ್ತ), ಐನಾಕ್ಸ್ (ಮಾಲ್ ಆಫ್ ಏಷ್ಯಾ), ಪಿವಿಆರ್ (ಕನಕಪುರ ರಸ್ತೆ), ಪಿವಿಆರ್ ಓರಿಯನ್ ಮಾಲ್, ಬಾಲಾಜಿ ಥಿಯೇಟರ್, ರಾಜಕಮಲ್, ಶ್ರೀನಿವಾಸ್ ಥಿಯೇಟರ್, ಕೆಆರ್‌ಜಿ ಸೌಂದರ್ಯ ಮಹಲ್, ಶ್ರೀ ರೇಣುಕಾ ಪ್ರಸನ್ನ, ವಿಆರ್ ಸಿನಿಮಾಸ್, ಸ್ವಾಗತ್ ಶಂಕರ್ ನಾಗ್, ವಿಕ್ಟರಿ ಸಿನಿಮಾಸ್, ವೈಷ್ಣವಿ ಮತ್ತು ವೈಭವಿ ಸಿನಿಮಾ, ವೀರೇಶ್ ಸಿನಿಮಾಸ್, ಮಾನಸ ಥಿಯೇಟರ್ ಮತ್ತು ಶ್ರೀ ವೆಂಕಟೇಶ್ವರ ಸೇರಿದಂತೆ ಅನೇಕ ಚಿತ್ರಮಂದಿರಗಳಲ್ಲಿ ಮುಂಗಡ ಕಾಯ್ದಿರಿಸಿಕೊಂಡಿದ್ದಾರೆ.
ಈ ಭಾರಿ ಪ್ರಚಾರದ ಲಾಭ ಪಡೆಯಲು ಹೆಚ್ಚಿನ ಸಿಂಗಲ್ ಸ್ಕ್ರೀನ್‌ಗಳು ಮತ್ತು ಮಲ್ಟಿಪ್ಲೆಕ್ಸ್‌ಗಳು ತಮ್ಮ ಪರದೆಗಳನ್ನು ಸಂಪೂರ್ಣವಾಗಿ ಕಾಂತಾರ 2 ಗೆ ಮೀಸಲಿಟ್ಟಿವೆ. ಆದರೆ ಮತ್ತೊಂದೆಡೆ, ಸಿದ್ದರಾಮಯ್ಯ ಸರ್ಕಾರ ಘೋಷಿಸಿದ್ದ ಚಲನಚಿತ್ರ ಟಿಕೆಟ್‌ಗಳ ಗರಿಷ್ಠ ದರವನ್ನು 200 ರೂ.ಗೆ ಮಿತಿಗೊಳಿಸುವ ನಿರ್ಧಾರಕ್ಕೆ ಕರ್ನಾಟಕ ಹೈಕೋರ್ಟ್ ಕಳೆದ ಮಂಗಳವಾರ ತಾತ್ಕಾಲಿಕ ತಡೆ ನೀಡಿದೆ.
ಹೀಗಾಗಿ 'ಕಾಂತಾರ: ಅಧ್ಯಾಯ 1' ಚಿತ್ರದ ಟಿಕೆಟ್‌ಗಳಿಗೆ ದುಬಾರಿ ಹಣ ಪಾವತಿಸಬೇಕಾಗಿದೆ. ವಿಶೇಷವಾಗಿ ಸಿಂಗಲ್ ಸ್ಕ್ರೀನ್‌ಗಳಲ್ಲಿ ಬೆಳಿಗ್ಗೆ 6.30ರ ಪ್ರದರ್ಶನಗಳ ಟಿಕೆಟ್ ದರ 400 ರೂ.ರಿಂದ 700 ರೂವರೆಗೆ ಇದೆ. ಕೆಲವು ಕಡೆಗಳಲ್ಲಿ ಟಿಕೆಟ್‌ಗಳು 800 ರೂ.ರಿಂದ 1000 ರೂ.ರವರೆಗೆ ಮಾರಾಟವಾಗುತ್ತಿವೆ.
ಈ ಟಿಕೆಟ್ ದರ ವಿವಾದ ಜನರಲ್ಲಿ ನಿರಾಸೆಯನ್ನು ತಂದಿದೆ. ಸರ್ಕಾರವು ಗರಿಷ್ಠ 200 ರೂಪಾಯಿಗೆ ಟಿಕೆಟ್ ದರ ನಿಗದಿ ಮಾಡಿದ್ದರೂ, ಹೈಕೋರ್ಟ್ ತಾತ್ಕಾಲಿಕ ತಡೆಯಾಜ್ಞೆಯಿಂದಾಗಿ ಮಲ್ಟಿಪ್ಲೆಕ್ಸ್‌ಗಳಲ್ಲಿ 400 ರಿಂದ 1000 ರೂಪಾಯಿ ತನಕ ದರ ಏರಿಕೆಯಾಗಿದೆ. ಇದು ಸಿನಿಮಾ ನೋಡಬೇಕು ಎನ್ನುವ ಸಾಮಾನ್ಯ ಕುಟುಂಬಗಳಿಗೆ ದೊಡ್ಡ ಹೊರೆ. ಸಿನಿಮಾ ನೋಡಲು ಹೃದಯ ಬಯಸಿದರೂ, ಖಾಲಿ ಜೇಬುಗಳು ಅವಕಾಶ ಕೊಡುತ್ತಿಲ್ಲ ಎನ್ನುವಂತಾಗಿದೆ. ನಗರಗಳಲ್ಲಿ ವಿದ್ಯಾರ್ಥಿಗಳು, ಕಾರ್ಮಿಕರು, ಮಧ್ಯಮ ವರ್ಗದ ಜನರು ದುಬಾರಿ ಹಣ ಕೊಟ್ಟು ಟಿಕೇಟ್ ಖರೀದಿಸುವ ಶಕ್ತಿಯೂ ಇರುವುದಿಲ್ಲ. ಇನ್ನೊಂದೆಡೆ ಇದು ಸಣ್ಣ ಸಿನಿಮಾಗಳಿಗೂ ತೊಂದರೆಯಾಗುವ ಸಾಧ್ಯತೆಯಿದೆ ಎಂಬ ಆತಂಕ ಚರ್ಚೆಯಲ್ಲಿದೆ.
ಏನಿದು ಟಿಕೆಟ್ ವಿವಾದ
ರಾಜ್ಯ ಸರ್ಕಾರವು ಚಿತ್ರಮಂದಿರಗಳಲ್ಲಿ, ವಿಶೇಷವಾಗಿ ಮಲ್ಟಿಪ್ಲೆಕ್ಸ್‌ಗಳಲ್ಲಿ ವಿಧಿಸುತ್ತಿದ್ದ ದುಬಾರಿ ಟಿಕೆಟ್ ದರಗಳಿಗೆ ಕಡಿವಾಣ ಹಾಕಲು, ಎಲ್ಲಾ ಚಿತ್ರಮಂದಿರಗಳಲ್ಲಿ ಟಿಕೆಟ್ ದರವನ್ನು ಗರಿಷ್ಠ 200 ರೂಪಾಯಿಗೆ ನಿಗದಿಪಡಿಸಿ ಆದೇಶ ಹೊರಡಿಸಿತ್ತು. ಈ ಆದೇಶ ಆ.1ರಿಂದ ಜಾರಿಗೆ ಬಂದಿತ್ತು. ಆದರೆ ಸರ್ಕಾರದ ಈ ನಿರ್ಧಾರವನ್ನು ಪ್ರಶ್ನಿಸಿ ಹೊಂಬಾಳೆ ಫಿಲ್ಮ್ಸ್ ಮತ್ತು ಮಲ್ಟಿಪ್ಲೆಕ್ಸ್ ಅಸೋಸಿಯೇಷನ್ ಆಫ್ ಇಂಡಿಯಾ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದವು. ಈ ಅರ್ಜಿಯ ವಿಚಾರಣೆ ನಡೆಸಿದ್ದ ನ್ಯಾಯಮೂರ್ತಿ ರವಿ ಹೊಸಮನಿ ಅವರ ನೇತೃತ್ವದ ನ್ಯಾಯಪೀಠವು, ಸರ್ಕಾರದ ಆದೇಶಕ್ಕೆ ಮಧ್ಯಂತರ ತಡೆಯಾಜ್ಞೆ ನೀಡಿತ್ತು.
ಪಂಜುರ್ಲಿ ಮತ್ತು ಗುಳಿಗ ದೈವದ ಮೂಲ
ಕಾಂತಾರ ಚಿತ್ರದ ವಿಶೇಷತೆ ಎಂದರೆ ಅದು ಕೇವಲ ಕಲ್ಪನೆ ಅಲ್ಲ, ಸ್ಥಳೀಯ ಭೂ ಸಂಸ್ಕೃತಿಯಿಂದ ಪ್ರೇರಿತವಾದ ಕತೆಯನ್ನು ಹೊತ್ತು ತರುತ್ತದೆ. ಈ ಬಾರಿ ಕಥೆ ಪಂಜುರ್ಲಿ ದೈವ ಮತ್ತು ಗುಳಿಗ ದೈವದ ಮೂಲದ ಸುತ್ತ ಹೆಣೆಯಲ್ಪಟ್ಟಿದೆ ಎಂದು ಹೇಳಲಾಗುತ್ತಿದೆ. ಕರ್ನಾಟಕದ ಕರಾವಳಿ ಜಿಲ್ಲೆಗಳಲ್ಲಿ ದೈವ ಆರಾಧನೆ ಜನಜೀವನದ ಅಂಗ. ಈ ನಂಬಿಕೆಗಳು, ಆಚರಣೆಗಳು, ಪೀಳಿಗೆಯಿಂದ ಪೀಳಿಗೆ ಸಾಗಿರುವ ಭಕ್ತಿಭಾವವನ್ನು ದೊಡ್ಡ ಪರದೆ ಮೇಲೆ ನೋಡುವ ಅವಕಾಶವೇ ಜನರಿಗೆ ಉತ್ಸಾಹ ತಂದಿದೆ.
ಈ ಸಿನಿಮಾದಲ್ಲಿ ರಿಷಬ್ ಶೆಟ್ಟಿ ಬೆರ್ಮೆ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ಹೇಳಲಾಗುತ್ತಿದೆ. ರುಕ್ಮಿಣಿ ವಸಂತ್ ಕನಕಾವತಿ ಪಾತ್ರದಲ್ಲಿ ಮತ್ತು ಗುಲ್ಶನ್ ದೇವಯ್ಯ ಕುಲಶೇಖರ ಪಾತ್ರದಲ್ಲಿ ನಟಿಸಿದ್ದಾರೆ. ಜಯರಾಮ್ ಮಹತ್ವದ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ, ಪ್ರಮೋದ್ ಶೆಟ್ಟಿ, ರಾಕೇಶ್ ಪೂಜಾರಿ, ಪ್ರಕಾಶ್ ತುಮಿನಾಡ್, ದೀಪಕ್ ರೈ ಪಾಣಾಜೆ ಮತ್ತು ಹರಿಪ್ರಶಾಂತ್ ಎಂ ಜಿ ಕೂಡ ಈ ಚಿತ್ರದ ಭಾಗವಾಗಿದ್ದಾರೆ. ಚಿತ್ರದ ಛಾಯಾಗ್ರಹಣ ಅರವಿಂದ್ ಕಶ್ಯಪ್, ಸಂಗೀತ ಅಜನೀಶ್ ಲೋಕನಾಥ್ ಮತ್ತು ಸಂಕಲನ ಸುರೇಶ್ ಮಲ್ಲಯ್ಯ ನೀಡಿದ್ದಾರೆ.
ಕಾಂತಾರ ಸಿನಿಮಾದ ಬಗ್ಗೆ
2022ರ ಕಾಂತಾರ ಸಿನಿಮಾ ಸುಮಾರು 407 ಕೋಟಿಗಳ ದಾಖಲೆ ಬರೆದಿತ್ತು. ಅದರಲ್ಲೂ ಹಿಂದಿ ಆವೃತ್ತಿಯೇ 100 ಕೋಟಿಗೂ ಹೆಚ್ಚು ಗಳಿಸಿ ಕನ್ನಡ ಸಿನಿ ಉದ್ಯಮಕ್ಕೆ ಹೊಸ ಇತಿಹಾಸ ಬರೆದಿತ್ತು. ಅದರ ಬಳಿಕ ಜನರಲ್ಲಿ ಕನ್ನಡ ಚಿತ್ರಗಳು ವಿಶ್ವಮಟ್ಟಕ್ಕೆ ಹೋಗಬಹುದು ಎನ್ನುವ ವಿಶ್ವಾಸ ಹುಟ್ಟಿತು. ಇದೀಗ ಕಾಂತಾರ: ಅಧ್ಯಾಯ 1 ಕನಿಷ್ಠ 1000 ಕೋಟಿ ರೂ. ಗುರಿಯನ್ನು ತಲುಪಬಹುದು ಎಂಬ ನಿರೀಕ್ಷೆ ಮೂಡಿದೆ. ಕೆಜಿಎಫ್: ಅಧ್ಯಾಯ 2 ನಂತರ ಈ ಮೈಲಿಗಲ್ಲು ತಲುಪುವ ಎರಡನೇ ಸಿನಿಮಾ ಇದಾಗಬಹುದು ಎನ್ನಲಾಗಿದೆ.
ಸಿನಿಮಾಗಳು ಸಾಮಾನ್ಯವಾಗಿ ಮನರಂಜನೆಗಾಗಿ ಬಂದರೂ, ಕೆಲವೊಂದು ಸಂಸೃತಿಗಳು ಜನರ ಜೀವನದ ಪ್ರತಿಬಿಂಬವಾಗುತ್ತವೆ. ಕಾಂತಾರ: ಅಧ್ಯಾಯ 1 ಅಂತಹದೇ ಒಂದು ಸಂಸೃತಿಯ ಕಥೆ. ಈ ಸಿನಿಮಾ ಬಿಡುಗಡೆಗೊಳ್ಳಲಿರುವ ಅಕ್ಟೋಬರ್ 2ರ ದಿನ ಕೇವಲ ಬಿಡುಗಡೆ ದಿನವಲ್ಲ, ಕನ್ನಡ ಸಿನಿಪ್ರಿಯರಿಗೆ ಹಬ್ಬದ ದಿನ. ಆ ದಿನ ಚಿತ್ರಮಂದಿರಗಳು ಕೇವಲ ಪರದೆಗಳಲ್ಲ, ಒಂದು ಸಂಸ್ಕೃತಿಯ ನಾಟಕಮಂದಿರವಾಗಿ ಪರಿವರ್ತನೆಗೊಳ್ಳಲಿವೆ. ಟಿಕೆಟ್ ದರ ವಿವಾದ, ಬುಕಿಂಗ್ ಒತ್ತಡದ ನಡುವೆಯೂ ಜನರು ತಮ್ಮ ನೆಚ್ಚಿನ ಸಿನಿಮಾವನ್ನು ದೊಡ್ಡ ಪರದೆಯಲ್ಲಿ ನೋಡುವುದಕ್ಕಾಗಿ ಯಾವ ತ್ಯಾಗಕ್ಕೂ ಸಿದ್ಧರಾಗಿದ್ದಾರೆ ಎಂಬುವುದು ಇಂದು ಬುಕ್ಕಿಂಗ್ ಆಗುತ್ತಿರುವುದಕ್ಕೆ ಸಾಕ್ಷಿ.
ಏಳು ಭಾಷೆಗಳಲ್ಲಿ 7,000ಕ್ಕೂ ಹೆಚ್ಚು ಪರದೆಗಳಲ್ಲಿ ಬಿಡುಗಡೆ
ಈ ಸಿನಿಮಾ ಅಕ್ಟೋಬರ್ 2 ರಂದು ಏಳು ಭಾಷೆಗಳಲ್ಲಿ 7,000 ಕ್ಕೂ ಹೆಚ್ಚು ಪರದೆಗಳಲ್ಲಿ ವಿಶ್ವಾದ್ಯಂತ ಅದ್ದೂರಿಯಾಗಿ ಪ್ರದರ್ಶನಗೊಳ್ಳಲಿದ್ದು, ಏಳು ಭಾಷೆಗಳಲ್ಲಿ ಬಿಡುಗಡೆಯಾಗಲಿದೆ. ಅಕ್ಟೋಬರ್ 1 ರಂದು 2,500 ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಪಾವತಿಸಿದ ಪ್ರೀಮಿಯರ್‌ಗಳನ್ನು ನಿಗದಿಪಡಿಸಲಾಗಿದೆ. ದೇಶಾದ್ಯಂತ ಮತ್ತು ವಿದೇಶಗಳಲ್ಲಿ ವಿತರಕರು ಸಿನಿಮಾ ವಿತರಿಸಲು ಉತ್ಸಹವಾಗಿದ್ದು, ಹಿಂದಿಯಲ್ಲಿ ಎಎ ಫಿಲ್ಮ್ಸ್ ಕೇರಳದಲ್ಲಿ ಪೃಥ್ವಿರಾಜ್ ಪ್ರೊಡಕ್ಷನ್ಸ್, ಆಂಧ್ರ ಮತ್ತು ತೆಲಂಗಾಣದಲ್ಲಿ ಮೈತ್ರಿ ಮೂವಿ ಮೇಕರ್ಸ್ ಮತ್ತು ಗೀತಾ ಆರ್ಟ್ಸ್ ಜವಾಬ್ದಾರಿಯನ್ನು ವಹಿಸಿಕೊಂಡಿವೆ. ತಮಿಳುನಾಡು ಮತ್ತು ಅದರಾಚೆಗಿನ ಇತರ ಪ್ರಮುಖ ಬ್ಯಾನರ್‌ಗಳು ಕೈಜೋಡಿಸಿ, ಚಿತ್ರವು ಪ್ರತಿಯೊಂದು ಪ್ರಮುಖ ಮಾರುಕಟ್ಟೆಯನ್ನು ತಲುಪುವಂತೆ ನೋಡಿಕೊಳ್ಳುತ್ತಿವೆ.