ಕಾಂತಾರ ಶುಭ ಮುಹೂರ್ತ: ನಾಳೆ 12.29ಕ್ಕೆ ಟಿಕೆಟ್ ಬುಕಿಂಗ್ ಆರಂಭಿಸಲು ಇಲ್ಲಿದೆ ಕಾರಣ!
x

'ಕಾಂತಾರ' ಶುಭ ಮುಹೂರ್ತ: ನಾಳೆ 12.29ಕ್ಕೆ ಟಿಕೆಟ್ ಬುಕಿಂಗ್ ಆರಂಭಿಸಲು ಇಲ್ಲಿದೆ ಕಾರಣ!

ಪಂಚಾಂಗದ ಪ್ರಕಾರ, ಈ ಸಮಯವು ಶುಭಕಾರ್ಯಗಳಿಗೆ ಅತ್ಯುತ್ತಮವೆಂದು ಪರಿಗಣಿಸಲಾದ ಅಭಿಜಿತ್ ಮುಹೂರ್ತದ (ಬೆಳಿಗ್ಗೆ 11.48 ರಿಂದ ಮಧ್ಯಾಹ್ನ 12.36) ವ್ಯಾಪ್ತಿಯಲ್ಲಿ ಬರುತ್ತದೆ.


ಭಾರತೀಯ ಚಿತ್ರರಂಗದಲ್ಲಿ ಹೊಸ ಇತಿಹಾಸ ಬರೆಯಲು ಸಜ್ಜಾಗಿರುವ 'ಕಾಂತಾರ ಅಧ್ಯಾಯ 1' ಸಿನಿಮಾದ ಪ್ರತಿಯೊಂದು ಹೆಜ್ಜೆಯೂ ಕುತೂಹಲ ಕೆರಳಿಸುತ್ತಿದೆ. ಇದೀಗ ಚಿತ್ರದ ಮುಂಗಡ ಟಿಕೆಟ್ ಬುಕಿಂಗ್ ಪ್ರಕ್ರಿಯೆಯು ನಾಳೆ (ಸೆಪ್ಟೆಂಬರ್ 26) ಮಧ್ಯಾಹ್ನ 12.29ಕ್ಕೆ ಆರಂಭವಾಗಲಿದ್ದು, ಈ ನಿರ್ದಿಷ್ಟ ಸಮಯದ ಹಿಂದೊಂದು ವಿಶೇಷ ಕಾರಣವಿದೆ.

ದೈವಾರಾಧನೆ ಮತ್ತು ಸಂಸ್ಕೃತಿಯನ್ನು ಜಗತ್ತಿಗೆ ಪರಿಚಯಿಸಿದ 'ಕಾಂತಾರ' ಚಿತ್ರತಂಡ, ತಮ್ಮ ಹೊಸ ಅಧ್ಯಾಯದ ಪಯಣವನ್ನೂ ಶುಭ ಮುಹೂರ್ತದಲ್ಲೇ ಆರಂಭಿಸಲು ನಿರ್ಧರಿಸಿದೆ. ನಾಳೆ, ಶುಕ್ರವಾರ, ಸೆಪ್ಟೆಂಬರ್ 26, 2025ರ ಪಂಚಾಂಗದ ಪ್ರಕಾರ ಮಧ್ಯಾಹ್ನ 12:29 ಅತ್ಯಂತ ಶುಭ ಸಮಯವಾಗಿದೆ.

12.29ರ ಸಮಯ ಯಾಕೆ ವಿಶೇಷ?

ಪಂಚಾಂಗದ ಪ್ರಕಾರ, ಈ ಸಮಯವು ಶುಭಕಾರ್ಯಗಳಿಗೆ ಅತ್ಯುತ್ತಮವೆಂದು ಪರಿಗಣಿಸಲಾದ ಅಭಿಜಿತ್ ಮುಹೂರ್ತದ (ಬೆಳಿಗ್ಗೆ 11.48 ರಿಂದ ಮಧ್ಯಾಹ್ನ 12.36) ವ್ಯಾಪ್ತಿಯಲ್ಲಿ ಬರುತ್ತದೆ. ಇದಲ್ಲದೆ, ಈ ಅವಧಿಯು "ಶುಭ" ಚೋಘಡಿಯದಲ್ಲಿದ್ದು (ಮಧ್ಯಾಹ್ನ 12.12 ರಿಂದ 1.42), ಯಾವುದೇ ದೋಷಗಳಿಲ್ಲದ ಸಮಯವಾಗಿದೆ. ಅಶುಭಕರವೆಂದು ಪರಿಗಣಿಸುವ ರಾಹುಕಾಲವು 12:12ಕ್ಕೆ ಮುಗಿದಿರುವುದರಿಂದ, 12:29ಕ್ಕೆ ಟಿಕೆಟ್ ಬುಕಿಂಗ್ ಆರಂಭಿಸುವುದು ಚಿತ್ರದ ಯಶಸ್ಸಿಗೆ ನಾಂದಿ ಹಾಡಲಿದೆ ಎಂಬುದು ಚಿತ್ರತಂಡದ ನಂಬಿಕೆಯಾಗಿದೆ.

'ಕಾಂತಾರ' ಮೊದಲ ಭಾಗದ ಯಶಸ್ಸಿನ ನಂತರ, ಅದರ ಪ್ರೀಕ್ವೆಲ್ 'ಕಾಂತಾರ ಅಧ್ಯಾಯ 1' ಮೇಲೆ ನಿರೀಕ್ಷೆಗಳು ಗಗನಕ್ಕೇರಿವೆ. ಅಕ್ಟೋಬರ್ 2ರಂದು ವಿಶ್ವಾದ್ಯಂತ 7000ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುತ್ತಿರುವ ಈ ಸಿನಿಮಾದ ಟಿಕೆಟ್ ಬುಕಿಂಗ್, ಈ ಶುಭ ಮುಹೂರ್ತದಲ್ಲಿ ಆರಂಭವಾಗುತ್ತಿರುವುದು ಅಭಿಮಾನಿಗಳಲ್ಲಿ ಮತ್ತಷ್ಟು ಕುತೂಹಲ ಹೆಚ್ಚಿಸಿದೆ.

ಟ್ರೇಲರ್​ನಲ್ಲಿ ಏನಿದೆ?

ಟ್ರೇಲರ್‌ನ ಕಥಾಹಂದರವು ಒಂದು ದಂತಕಥೆಯ ಮೂಲಕ ಆರಂಭವಾಗಿ, ಪ್ರೇಮ, ಸಂಘರ್ಷ ಮತ್ತು ದೈವಿಕತೆಯ ಎಳೆಗಳನ್ನು ಒಂದೊಂದಾಗಿ ಬಿಚ್ಚಿಡುತ್ತದೆ.

ಟ್ರೇಲರ್‌ನ ಆರಂಭದಲ್ಲಿ, "ನನ್ನ ತಂದೆ ಕಾಣೆಯಾದ ಜಾಗ ಇದೇನಾ?" ಎಂಬ ಬಾಲಕನೊಬ್ಬನ ಪ್ರಶ್ನೆಯು, ಒಂದು ಮರೆತುಹೋದ ಕಥೆಗೆ ಮುನ್ನುಡಿ ಬರೆಯುತ್ತದೆ. 'ದೈವೀ ಸ್ವರೂಪಿ ಈಶ್ವರನು ಧರ್ಮ ರಕ್ಷಣೆಗಾಗಿ ಗಣಗಳನ್ನು ಕಳುಹಿಸಿಕೊಡುತ್ತಾನೆ' ಎಂಬ ಹಿನ್ನೆಲೆ ಧ್ವನಿಯೊಂದಿಗೆ, 'ಕಾಂತಾರ' ಎಂಬ ಊರಿನ ಉಗಮ ಮತ್ತು ಅಲ್ಲಿನ ಜನರ ಬದುಕಿನ ಚಿತ್ರಣ ತೆರೆದುಕೊಳ್ಳುತ್ತದೆ. ಆದರೆ, ಈ ಸಮುದಾಯಕ್ಕೆ 'ಬ್ರಹ್ಮ ರಾಕ್ಷಸ ಗಣ' ಎಂಬ ವಿರೋಧಿ ಗುಂಪಿನಿಂದ ಸಂಕಷ್ಟ ಎದುರಾಗುತ್ತದೆ.

ಕಾಡಿನ ಸಂಪತ್ತನ್ನು ನಂಬಿ ಬದುಕುವ 'ಕಾಂತಾರ'ದ ಜನರು, ತಾವು ಬೆಳೆದ ಬೆಳೆಯಲ್ಲಿ 'ಬ್ರಹ್ಮ ರಾಕ್ಷಸ ಗಣ'ಕ್ಕೆ ಪಾಲು ನೀಡುವುದನ್ನು ನಿಲ್ಲಿಸಿದಾಗ, ಎರಡು ಗುಂಪುಗಳ ನಡುವೆ ಸಂಘರ್ಷ ಭುಗಿಲೇಳುತ್ತದೆ. ಈ ದ್ವೇಷದ ವಾತಾವರಣದಲ್ಲಿಯೇ, ನಾಯಕ (ರಿಷಬ್ ಶೆಟ್ಟಿ) ಮತ್ತು ಯುವರಾಣಿ (ರುಕ್ಮಿಣಿ ವಸಂತ್) ನಡುವೆ ಪ್ರೇಮಾಂಕುರವಾಗುತ್ತದೆ. "ನಮ್ಮನ್ನು ನೋಡೋಕೆ ನೀವು ಬಂದಿದ್ದಿರಿ, ನಿಮ್ಮನ್ನು ನೋಡೋಕೆ ನಾವು ಬರಬಾರದೇ?" ಎಂಬ ನಾಯಕನ ಮಾತು, ಅವರಿಬ್ಬರ ನಡುವಿನ ಸಂಬಂಧದ ಆರಂಭಕ್ಕೆ ನಾಂದಿ ಹಾಡುತ್ತದೆ.

ಈ ಪ್ರೇಮಕ್ಕೆ ಅರಮನೆಯಲ್ಲಿಯೇ ವಿರೋಧ ವ್ಯಕ್ತವಾಗುತ್ತದೆ. ಯುವರಾಣಿಯ ಅಂಗರಕ್ಷಕನು, "ಆತ ನಿಮ್ಮ ಗದ್ದುಗೆ ಮೇಲೆ ಕಣ್ಣು ಹಾಕಿದಂತಿದೆ" ಎಂದು ಎಚ್ಚರಿಸುವ ಮೂಲಕ, ಪ್ರೇಮ ಕಥೆಯು ರಕ್ತಸಿಕ್ತ ಸಂಘರ್ಷಕ್ಕೆ ತಿರುಗುವ ಮುನ್ಸೂಚನೆ ನೀಡುತ್ತಾನೆ. ದಂತಕಥೆಯು ಮುಗಿದು, ನಿಜ ಜೀವನದ ಕಥೆ ಆರಂಭವಾಗುವ ಹಂತದಲ್ಲಿ, "ಈಶ್ವರ ದೇವ ಇಲ್ಲಿಗೆ ಬಂದಿದ್ದಷ್ಟೇ ಅಲ್ಲ, ಇಲ್ಲಿಯೇ ನೆಲೆಸಿದ್ದರು" ಎಂಬ ನಾಯಕನ ಮಾತು, ಚಿತ್ರದ ದೈವಿಕ ಹಿನ್ನೆಲೆಯನ್ನು ಮತ್ತಷ್ಟು ಬಲಪಡಿಸುತ್ತದೆ.

'ಕಾಂತಾರ: ಅಧ್ಯಾಯ 1' ಟ್ರೇಲರ್ ಒಂದು ಪರಿಪೂರ್ಣ ದೃಶ್ಯಕಾವ್ಯವಾಗಿದ್ದು, ಪ್ರೇಕ್ಷಕರನ್ನು ಸಿನಿಮಾ ಬಿಡುಗಡೆಗಾಗಿ ಕಾತುರದಿಂದ ಕಾಯುವಂತೆ ಮಾಡಿದೆ. ಈ ಚಿತ್ರವು ಅಕ್ಟೋಬರ್ 2 ರಂದು ವಿಶ್ವಾದ್ಯಂತ ತೆರೆಕಾಣಲಿದೆ.

Read More
Next Story