ಕನ್ನಡ ನಾಮಫಲಕ | ಕನ್ನಡ ಪರ ಸಂಘಟನೆಗಳ ಹೋರಾಟಕ್ಕೆ ಜಯ

ಮಾರ್ಚ್‌ 20ರ ನಂತರ ಮತ್ತೆ ಹೋರಾಟ ಮುಂದುವರಿಸುವುದಾಗಿ ಕರವೇ ಎಚ್ಚರಿಕೆ | ಬಿಬಿಎಂಪಿ ಮುಖ್ಯ ಆಯುಕ್ತರ ಮಟ್ಟದಲ್ಲಿ ಕಡತ;

By :  Hitesh Y
Update: 2024-03-14 11:37 GMT
ಕನ್ನಡ ನಾಮಫಲಕ

ಸಿಲಿಕಾನ್‌ ಸಿಟಿ ಬೆಂಗಳೂರಿನ ವಾಣಿಜ್ಯ ಉದ್ದಿಮೆಗಳ ನಾಮಫಲಕಗಳಲ್ಲಿ ಕನ್ನಡ ಅಳವಡಿಸಿಕೊಳ್ಳಲು ಸರ್ಕಾರ ನೀಡಿದ್ದ ಗಡುವಿನ ಒಳಗಾಗಿ ಬಹುತೇಕ ಮಳಿಗೆಗಳು ಕನ್ನಡ ನಾಮಫಲಕ ಅಳವಡಿಸಿಕೊಂಡಿವೆ ಎಂದು ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ)ಯ ವರದಿ ತಿಳಿಸಿದೆ.

ಬೆಂಗಳೂರಿನ ವಾಣಿಜ್ಯ ಉದ್ದಿಮೆಗಳ ನಾಮಫಲಕಗಳಲ್ಲಿ ಕನ್ನಡ ಅಳವಡಿಸಿಕೊಳ್ಳಲು ಸರ್ಕಾರ ಹಾಗೂ ಬಿಬಿಎಂಪಿ ಎರಡು ಬಾರಿ ಗಡುವು ನೀಡಿದ್ದವು. ಎರಡನೇ ಬಾರಿ ನೀಡಿದ್ದ ಗಡುವಿನ ಅವಧಿಯು ಮಾರ್ಚ್ 13ರಂದು ಮುಕ್ತಾಯವಾಗಿತ್ತು. ಅದರ ಬೆನ್ನಲ್ಲೇ ಬಿಬಿಎಂಪಿಯ ಅಧಿಕಾರಿಗಳು ಬೆಂಗಳೂರಿನಲ್ಲಿ ಎಷ್ಟು ವಾಣಿಜ್ಯ ಉದ್ದಿಮೆಗಳು ಕನ್ನಡ ನಾಮಫಲಕ ಅಳವಡಿಸಿಕೊಂಡಿವೆ ಎನ್ನುವ ವಿವರವನ್ನು ನೀಡಿದ್ದಾರೆ.

ಬಿಬಿಎಂಪಿಯ ಪ್ರಕಾರ,ಬಿಬಿಎಂಪಿಯ ಎಂಟು ವಲಯಗಳ ವ್ಯಾಪ್ತಿಯಲ್ಲಿ ಕನ್ನಡ ನಾಮಫಲಕ ಅಳವಡಿಸಿಕೊಳ್ಳುವ ನಿಯಮವನ್ನು 50357 ಮಳಿಗೆಗಳು ಉಲ್ಲಂಘನೆ ಮಾಡಿದ್ದು, ಅಷ್ಟೂ ಮಳಿಗೆಗಳಿಗೆ ನೋಟಿಸ್‌ ಜಾರಿ ಮಾಡಲಾಗಿತ್ತು. ಇದರಲ್ಲಿ 49,732 ಮಳಿಗೆಗಳು ನಾಮಫಲಕದಲ್ಲಿ ಕನ್ನಡ ಅಳವಡಿಸಿಕೊಂಡಿವೆ. ಇನ್ನು 625 ಮಳಿಗೆಗಳು ಇನ್ನಷ್ಟೇ ಕನ್ನಡ ನಾಮಫಲಕ ಅಳವಡಿಸಿಕೊಳ್ಳಬೇಕು ಎಂದು ತಿಳಿಸಿದೆ.

ಬೆಂಗಳೂರಿನ ವಾಣಿಜ್ಯ ಉದ್ದಿಮೆಗಳಲ್ಲಿ ಕನ್ನಡಕ್ಕೆ ಆದ್ಯತೆ (ಮಳಿಗೆಗಳ ಸಂಖ್ಯೆ)


ಸಾವಿರಾರು ವಾಣಿಜ್ಯ ಉದ್ದಿಮೆಗಳು ನಾಮಫಲಕದಲ್ಲಿ ಕನ್ನಡ ಅಳವಡಿಸಿಕೊಂಡಿದ್ದು, ಈ ಮೂಲಕ ಬೆಂಗಳೂರಿನ ವಾಣಿಜ್ಯ ಉದ್ದಿಮೆಗಳ ನಾಮಫಲಕದಲ್ಲಿ ಕನ್ನಡಕ್ಕೆ ಆದ್ಯತೆ ಸಿಕ್ಕಂತಾಗಿದೆ. ಬೆಂಗಳೂರಿನ ವಾಣಿಜ್ಯ ಉದ್ದಿಮೆಗಳ ನಾಮಫಲಕದಲ್ಲಿ ಕನ್ನಡಕ್ಕೆ ಆದ್ಯತೆ ನೀಡಬೇಕು ಎಂದು ಆಗ್ರಹಿಸಿ, ಕನ್ನಡ ಪರ ಹೋರಾಟಗಾರರು ಹಾಗೂ ಕನ್ನಡಪರ ಸಂಘಟನೆಗಳಿಂದ ಪ್ರತಿಭಟನೆ ನಡೆದಿತ್ತು. ಭಾರೀ ಒತ್ತಡದ ನಂತರ ರಾಜ್ಯ ಸರ್ಕಾರವು ವಾಣಿಜ್ಯ ಉದ್ದಿಮೆಗಳ ನಾಮಫಲಕದಲ್ಲಿ ಶೇ.60ರಷ್ಟು ಕನ್ನಡ ಅಳವಡಿಸಿಕೊಳ್ಳುವುದಕ್ಕೆ ಕಾನೂನು ರೂಪಿಸಿತ್ತು.

ಬಿಬಿಎಂಪಿ ಮುಖ್ಯ ಆಯುಕ್ತರಿಗೆ ಕಡತ

"ಬೆಂಗಳೂರಿನ ವಾಣಿಜ್ಯ ಉದ್ದಿಮೆಗಳ ನಾಮಫಲಕದಲ್ಲಿ ಕನ್ನಡ ಅಳವಡಿಸಿಕೊಳ್ಳಲು ನೀಡಲಾಗಿದ್ದ ಗಡುವು ಮುಗಿದಿದೆ. ಈಗಾಗಲೇ ಬಹುತೇಕ ಮಳಿಗೆಗಳು ನಾಮಫಲಕದಲ್ಲಿ ಕನ್ನಡ ಅಳವಡಿಸಿಕೊಂಡಿವೆ. ಉದ್ದಿಮೆಗಳ ನಾಮಫಲಕದಲ್ಲಿ ಕನ್ನಡ ಅಳವಡಿಸಿಕೊಳ್ಳುವ ವಿಷಯದ ಕಡತವನ್ನು ಬಿಬಿಎಂಪಿ ಮುಖ್ಯ ಆಯುಕ್ತರಿಗೆ ರವಾನಿಸಲಾಗಿದೆ. ಅವರ ನಿರ್ದೇಶನದ ಅನುಸಾರ ಮುಂದಿನ ಕ್ರಮ ಕೈಗೊಳ್ಳಲಾಗುವುದು" ಎಂದು ಬಿಬಿಎಂಪಿಯ ಆರೋಗ್ಯ ವಿಭಾಗದ ವಿಶೇಷ ಆಯುಕ್ತ ಸುರೋಳ್ಕರ್ ವಿಕಾಸ್ ಕಿಶೋರ್ ಅವರು ದ ಫೆಡರಲ್ ಕರ್ನಾಟಕಕ್ಕೆ ತಿಳಿಸಿದ್ದಾರೆ.

ಮಾರ್ಚ್ 20ರ ನಂತರ ಪ್ರತಿಭಟನೆ: ಕರವೇ ಎಚ್ಚರಿಕೆ

ಬೆಂಗಳೂರಿನಲ್ಲಿ ಎಲ್ಲಾ ವಾಣಿಜ್ಯ ಉದ್ದಿಮೆಗಳಲ್ಲಿ ಕನ್ನಡ ನಾಮಫಲಕ ಅಳವಡಿಸಿಕೊಳ್ಳುವ ವರೆಗೆ ಹೋರಾಟ ನಿಲ್ಲುವುದಿಲ್ಲ ಎಂದು ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ನಾರಾಯಣಗೌಡ ಅವರು ತಿಳಿಸಿದ್ದಾರೆ. ದ ಫೆಡರಲ್‌ ಕರ್ನಾಟಕದೊಂದಿಗೆ ಮಾತನಾಡಿದ ಅವರು, "ಬೆಂಗಳೂರಿನಲ್ಲಿ ಎಲ್ಲಾ ವಾಣಿಜ್ಯ ಉದ್ದಿಮೆಗಳಲ್ಲಿ ಕಡ್ಡಾಯ ಕನ್ನಡ ಅಳವಡಿಸಿಕೊಳ್ಳಬೇಕು. ಈಗಾಗಲೇ ನಾಮಫಲಕದಲ್ಲಿ ಕನ್ನಡ ಅಳವಡಿಸಿಕೊಳ್ಳುವುದಕ್ಕೆ ಸರ್ಕಾರ ನೀಡಿದ್ದ ಗಡುವು ಮುಗಿದಿದೆ. ನಾವು ಮಾರ್ಚ್‌ 20ರ ವರೆಗೆ ಕಾಯುತ್ತೇವೆ. ಅಷ್ಟರ ಒಳಗಾಗಿ ಎಲ್ಲಾ ವಾಣಿಜ್ಯ ಉದ್ದಿಮೆಗಳೂ ನಾಮಫಲಕದಲ್ಲಿ ಕನ್ನಡ ಅಳವಡಿಸಿಕೊಳ್ಳಬೇಕು. ಇಲ್ಲದಿದ್ದರೆ ಹೋರಾಟ ಮುಂದುವರಿಸುತ್ತೇವೆ. ಈಗ ಬಾಕಿ ಇರುವ ಉದ್ದಿಮೆಗಳೂ ಮಾರ್ಚ್‌ 20ರ ಒಳಗಾಗಿ ನಾಮಫಲಕದಲ್ಲಿ ಕನ್ನಡ ಅಳವಡಿಸಿಕೊಳ್ಳಬೇಕು" ಎಂದು ಎಚ್ಚರಿಸಿದರು.

ಸರ್ಕಾರದಿಂದ ಎರಡು ಬಾರಿ ಗಡುವು
ವಾಣಿಜ್ಯ ಉದ್ದಿಮೆಗಳಲ್ಲಿ ನಾಮಫಲಕ ಅಳವಡಿಸಿಕೊಳ್ಳುವುದಕ್ಕೆ ಸರ್ಕಾರ ಎರಡು ಬಾರಿ ಗಡುವು ನೀಡಿತ್ತು. ಮೊದಲು ಫೆಬ್ರವರಿ 28ರ ವರೆಗೆ ಗಡುವು ನೀಡಲಾಗಿತ್ತು. ಇದಾದ ನಂತರ ಫೆಬ್ರವರಿ 29ರಂದು ಮಧ್ಯಪ್ರವೇಶಿಸಿದ್ದ ಸರ್ಕಾರವು ನಾಮಫಲಕದಲ್ಲಿ ಕನ್ನಡ ಅಳವಡಿಸಿಕೊಳ್ಳುವುದಕ್ಕೆ ನೀಡಿದ್ದ ಗಡುವನ್ನು ಎರಡು ವಾರಗಳ ವರೆಗೆ ಅಂದರೆ, ಮಾರ್ಚ್‌ 13ರ ವರೆಗೆ ವಿಸ್ತರಿಸಿತ್ತು. ಈ ಅವಧಿಯಲ್ಲಿ ಬೆಂಗಳೂರಿನ ಸಾವಿರಾರು ಮಳಿಗೆಗಳು ನಾಮಫಲಕದಲ್ಲಿ ಕನ್ನಡ ಅಳವಡಿಸಿಕೊಂಡಿವೆ.

ಕನ್ನಡ ಪರ ಸಂಘಟನೆಗಳಿಂದ ಭಾರೀ ಪ್ರತಿಭಟನೆ 

ಬೆಂಗಳೂರು ಸೇರಿದಂತೆ ರಾಜ್ಯದ ಪ್ರಮುಖ ನಗರಗಳ ವಾಣಿಜ್ಯ ಉದ್ದಿಮೆಗಳಲ್ಲಿ ಕನ್ನಡಕ್ಕೆ ಆದ್ಯತೆ ನೀಡಬೇಕು ಎಂದು ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ ಸೇರಿದಂತೆ ಹಲವು ಕನ್ನಡ ಪರ ಸಂಘಟನೆಗಳು ಪ್ರತಿಭಟನೆ ನಡೆಸಿದ್ದವು. ಒಂದು ಹಂತದಲ್ಲಿ ಈ ಹೋರಾಟ ಉಗ್ರ ಸ್ವರೂಪವನ್ನೂ ಪಡೆದುಕೊಂಡಿತ್ತು. ನಾಮಫಲಕದಲ್ಲಿ ಕನ್ನಡಕ್ಕೆ ಆದ್ಯತೆ ನೀಡಬೇಕು ಎಂದು ಆಗ್ರಹಿಸಿ ನಡೆಯುತ್ತಿದ್ದ ಹೋರಾಟದಲ್ಲಿ ಆಂಗ್ಲ ಭಾಷೆ ಸೇರಿದಂತೆ ಕೆಲವು ಅನ್ಯ ಭಾಷೆಗಳ ನಾಮಫಲಕಗಳನ್ನು ಕನ್ನಡ ಪರ ಹೋರಾಟಗಾರರು ಧ್ವಂಸ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದರು. ಈ ಪ್ರತಿಭಟನೆಯಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯ ಅಧ್ಯಕ್ಷ ನಾರಾಯಣಗೌಡ ಅವರನ್ನು ಬಂಧಿಸಲಾಗಿತ್ತು.

Tags:    

Similar News