ಕನ್ನಡ ನಾಮಫಲಕ | ಬಲವಂತದ ಕ್ರಮ ಬೇಡ : ಹೈಕೋರ್ಟ್ ಸೂಚನೆ

ವಿವರ ಸಲ್ಲಿಸಲು ಸರ್ಕಾರಕ್ಕೆ ಸೂಚನೆ | ವಿಚಾರಣೆ ಮುಂದೂಡಿಕೆ

Update: 2024-03-19 13:25 GMT
ಹೈಕೋರ್ಟ್‌

ವಾಣಿಜ್ಯ ಉದ್ದಿಮೆಗಳ ನಾಮಫಲಕದಲ್ಲಿ ಕನ್ನಡ ಅಳವಡಿಸಿಕೊಳ್ಳುವ ಪ್ರಕ್ರಿಯೆಗೆ ಹೈಕೋರ್ಟ್ ಮಧ್ಯಂತರ ಆದೇಶ ಹೊರಡಿಸಿದ್ದು, ಬಲವಂತದ ಕ್ರಮ ಬೇಡ ಎಂದು ಅಭಿಪ್ರಾಯಪಟ್ಟಿದೆ. ವಾಣಿಜ್ಯ ಉದ್ದಿಮೆಗಳ ನಾಮಫಲಕದಲ್ಲಿ ಶೇ 60ರಷ್ಟು ಕನ್ನಡ ಅಳವಡಿಸಿಕೊಳ್ಳದೆ ಇದ್ದರೆ, ಉದ್ದಿಮೆಗಳನ್ನು ಮುಚ್ಚಬಾರದು ಎಂದು ನಿರ್ದೇಶನ ನೀಡಿದೆ.

ಈ ಪ್ರಕರಣದ ವಿಚಾರಣೆಯನ್ನು ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ವಿಚಾರಣೆ ನಡೆಸಿದ್ದು, ವಾದ- ವಿವಾದ ಆಲಿಸಿದ ನಂತರ ಈ ನಿರ್ದೇಶನ ನೀಡಿದೆ. ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯವು, "ಕರ್ನಾಟಕದಲ್ಲಿ ವ್ಯಾಪಾರ ಮಾಡಲಾಗುತ್ತಿದೆ. ಇಲ್ಲಿ ವ್ಯಾಪಾರ ಮಾಡುವಾಗ ಕನ್ನಡ ನಾಮಫಲಕವಿರಬೇಕು. ಶೇ 60ರಷ್ಟು ಕನ್ನಡ ನಾಮಫಲಕ ಅಳವಡಿಸಿಕೊಳ್ಳುವುದರಿಂದ ಏನು ಸಮಸ್ಯೆ ಆಗಲಿದೆ" ಎಂದು ಪ್ರಶ್ನಿಸಿದೆ.

ಈ ಪ್ರಶ್ನೆಗೆ ಉತ್ತರಿಸಿದ ಅರ್ಜಿದಾರರ ಪರ ವಕೀಲರು, ನಾಮಫಲಕಗಳಲ್ಲಿ ಶೇ 60ರಷ್ಟು ಕನ್ನಡ ಕಡ್ಡಾಯ ಮಾಡಿರುವ ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ಕಾಯ್ದೆ-2022ರ ಜಾರಿ ಸಮರ್ಪಕವಾಗಿಲ್ಲ. ಜಾರಿ ಮಾಡಿರುವ ದಿನಾಂಕದ ಬಗ್ಗೆ ಗೆಜೆಟ್ ಅಧಿಸೂಚನೆ ಹೊರಡಿಸಿಲ್ಲ. ಅಲ್ಲದೇ ಡಿಜಿಟಲ್ ನಾಮಫಲಕಗಳನ್ನು ಬದಲಿಸಲು ಇನ್ನಷ್ಟು ಕಾಲಾವಕಾಶದ ಅವಶ್ಯಕತೆ ಇದೆ ಎಂದು ಹೇಳಿದರು.

ಹೈಕೋರ್ಟ್ ಹೇಳಿದ್ದೇನು ?

ನಾಮಫಲಕದಲ್ಲಿ ಕನ್ನಡ ಅಳವಡಿಸಿಕೊಳ್ಳುವ ವಿಚಾರವಾಗಿ ಸದ್ಯಕ್ಕೆ ಬಲವಂತದ ಕ್ರಮ ಬೇಡ. ಕಾಯ್ದೆ ಯಾವಾಗಿನಿಂದ ಜಾರಿಗೆ ಬಂದಿದೆ. ಯಾವಾಗ ಸರ್ಕಾರದ ರಾಜ್ಯಪತ್ರದಲ್ಲಿ ಅಧಿಕೃತವಾಗಿ ಅಧಿಸೂಚನೆಗೊಂಡು ಪ್ರಕಟವಾಗಿದೆ ಎನ್ನುವ ಎಲ್ಲಾ ಮಾಹಿತಿಯನ್ನು ಬಹಿರಂಗಪಡಿಸಬೇಕು. ಇದಕ್ಕೆ ಸಂಬಂಧಿಸಿದ ಮಾಹಿತಿ ನೀಡುವಂತೆ ಅಡ್ವಕೇಟ್ ಜನರಲ್ ಕೆ.ಶಶಿಕಿರಣ ಶೆಟ್ಟಿ ಅವರಿಗೆ ಸೂಚಿಸಿರುವ ಹೈಕೋರ್ಟ್ ಪ್ರಕರಣದ ವಿಚಾರಣೆಯನ್ನು ಮಾರ್ಚ್ 22ಕ್ಕೆ ಮುಂದೂಡಿದೆ.

ಪ್ರಕರಣದ ಹಿನ್ನೆಲೆ ಏನು ?

ಬೆಂಗಳೂರು ಸೇರಿದಂತೆ ಕರ್ನಾಟಕದ ವಾಣಿಜ್ಯ ಉದ್ದಿಮೆಗಳ ನಾಮಫಲಕದಲ್ಲಿ ಶೇ 60ರಷ್ಟು ಕನ್ನಡ ಅಳವಡಿಸಿಕೊಳ್ಳಬೇಕು ಎಂದು ಬಿಬಿಎಂಪಿ ಹಾಗೂ ರಾಜ್ಯ ಸರ್ಕಾರ  ಎಲ್ಲಾ ವಾಣಿಜ್ಯ ಉದ್ದಿಮೆಗಳಿಗೆ ನಿರ್ದೇಶನ ನೀಡಿತ್ತು. ಅಲ್ಲದೇ ಉದ್ದಿಮೆಗಳ ನಾಮಫಲಕದಲ್ಲಿ ಕನ್ನಡ ಅಳವಡಿಸಿಕೊಳ್ಳುವುದಕ್ಕೆ ಎರಡು ಬಾರಿ ಗಡುವನ್ನೂ ನೀಡಲಾಗಿತ್ತು. ಈ ಅವಧಿಯಲ್ಲಿ ಬಹುತೇಕ ವಾಣಿಜ್ಯ ಉದ್ದಿಮೆಗಳು ನಾಮಫಲಕದಲ್ಲಿ ಕನ್ನಡ ಅಳವಡಿಸಿಕೊಂಡಿವೆ. ಇದೇ ಸಂದರ್ಭದಲ್ಲಿ ಕನ್ನಡ ಕಡ್ಡಾಯ ಕಾಯ್ದೆ, ಸರ್ಕಾರ ಹಾಗೂ ಬಿಬಿಎಂಪಿಯ ಸುತ್ತೋಲೆಯನ್ನು ಪ್ರಶ್ನಿಸಿ, ಎಂಟು ಕಂಪನಿಗಳು ಹೈಕೋರ್ಟ್‌ನಲ್ಲಿ  ರಿಟ್ ಅರ್ಜಿಯನ್ನು ಸಲ್ಲಿಸಿತ್ತು. ಅದರ ವಿಚಾರಣೆ ಈಗ ನಡೆಯುತ್ತಿದೆ.

Tags:    

Similar News