ಅಂಗಡಿಗಳ ನಾಮಫಲಕಗಳಲ್ಲಿ ಶೇ. 60 ಕನ್ನಡ ಕಡ್ಡಾಯ: ಹಲ್ಲು ಮುರಿದ ಹಾವಾದ ಕಾನೂನು!
ನಾಮಫಲಕಗಳ ಒಟ್ಟಾರೆ ವಿಸ್ತೀರ್ಣದಲ್ಲಿ ಕನ್ನಡ ಭಾಷೆಯನ್ನು ಮೇಲ್ಭಾಗದಲ್ಲಿ ಶೇ.60 ರಷ್ಟು ಪ್ರದರ್ಶಿಸುವುದು ಕಡ್ಡಾಯ ಮಾಡಲಾಗಿದ್ದು, ಶೇ.40 ರಷ್ಟು ಇತರ ಭಾಷೆಯನ್ನು ಕೆಳಭಾಗದಲ್ಲಿ ಬಳಸಬಹುದಾಗಿದೆ.;
ಸಾಂದರ್ಭಿಕ ಚಿತ್ರ
"ಕನ್ನಡವೇ ಸತ್ಯ, ಕನ್ನಡವೇ ನಿತ್ಯ" ಎಂಬ ಅಸ್ಮಿತೆಯೊಂದಿಗೆ ರಾಜ್ಯದ ಎಲ್ಲಾ ನಾಮಫಲಕಗಳಲ್ಲಿ ಶೇ. 60ರಷ್ಟು ಕನ್ನಡ ಬಳಕೆ ಕಡ್ಡಾಯಗೊಳಿಸಿ ಸರ್ಕಾರ ಐತಿಹಾಸಿಕ ಕಾನೂನು ಜಾರಿಗೊಳಿಸಿತ್ತು. ಕನ್ನಡಿಗರ ಬಹುದಿನಗಳ ಈ ಬೇಡಿಕೆಗೆ ಭರ್ಜರಿ ಬೆಂಬಲ ವ್ಯಕ್ತವಾಗಿತ್ತು. ಆದರೆ, ಈ ಆದೇಶ ಹೊರಬಿದ್ದು ಹದಿನೆಂಟು ತಿಂಗಳು ಕಳೆದರೂ, ಕನ್ನಡದ ರಾಜಧಾನಿ ಬೆಂಗಳೂರಿನಲ್ಲೇ ಈ ಕಾನೂನು ಮೂಲೆಗುಂಪಾಗಿದೆ.
ಇಂದಿಗೂ ನಗರದ ಪ್ರಮುಖ ರಸ್ತೆಗಳಲ್ಲಿ, ವಾಣಿಜ್ಯ ಮಳಿಗೆಗಳಲ್ಲಿ ಪರಭಾಷೆಯ ನಾಮಫಲಕಗಳೇ ಅಬ್ಬರಿಸುತ್ತಿವೆ. ಇದರೊಂದಿಗೆ ಸರ್ಕಾರದ ಆದೇಶ ಕೇವಲ ಕಾಗದಕ್ಕೆ ಸೀಮಿತವಾಗಿದ್ದು, ಅಧಿಕಾರಿಗಳ ನಿರ್ಲಕ್ಷ್ಯದಿಂದ ಕನ್ನಡದ ಕಾನೂನು ಹಲ್ಲು ಮುರಿದ ಹಾವಿನಂತಾಗಿದೆ ಎಂದು ಕನ್ನಡಪರ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿವೆ. ಈ "ಕನ್ನಡ ಹೋರಾಟ"ಕ್ಕೆ ನಿಜವಾದ ಶಕ್ತಿ ಬರುವುದು ಯಾವಾಗ ಎಂಬ ಪ್ರಶ್ನೆ ಪ್ರತಿಬೊಬ್ಬ ಕನ್ನಡಿಗನನ್ನೂ ಕಾಡಲು ಆರಂಭಿಸಿದೆ.
ಎಲ್ಲೆಲ್ಲಿ ಕಡ್ಡಾಯ ?
ರಾಜ್ಯ ಸರ್ಕಾರದ ಎಲ್ಲಾ ಇಲಾಖೆಗಳು, ಉದ್ಯಮಗಳು, ಸ್ವಾಯತ್ತ ಸಂಸ್ಥೆಗಳು, ಸಹಕಾರ ಮತ್ತು ಸಾರ್ವಜನಿಕ ವಲಯದ ಉದ್ಯಮಗಳು, ಬ್ಯಾಂಕುಗಳು, ಇತರ ಹಣಕಾಸು ಸಂಸ್ಥೆಗಳು, ಖಾಸಗಿ ಕೈಗಾರಿಕೆಗಳು ಮತ್ತು ವಿಶ್ವವಿದ್ಯಾಲಯಗಳು ಸೇರಿದಂತೆ ಎಲ್ಲಾ ಸಂಸ್ಥೆಗಳು ತಮ್ಮ ನಾಮಫಲಕಗಳಲ್ಲಿ ಕನ್ನಡವನ್ನು ಕಡ್ಡಾಯವಾಗಿ ಅಳವಡಿಸಿಕೊಳ್ಳಬೇಕು. ಈ ನಿಯಮದ ಪ್ರಕಾರ, ನಾಮಫಲಕಗಳ ಒಟ್ಟಾರೆ ವಿಸ್ತೀರ್ಣದಲ್ಲಿ ಶೇ. 60ರಷ್ಟು ಭಾಗವನ್ನು ಕನ್ನಡ ಭಾಷೆಗಾಗಿ ಮೀಸಲಿಡಬೇಕು ಮತ್ತು ಅದನ್ನು ಫಲಕದ ಮೇಲ್ಭಾಗದಲ್ಲಿ ಪ್ರದರ್ಶಿಸಬೇಕು. ಉಳಿದ ಶೇ. 40ರಷ್ಟು ಜಾಗದಲ್ಲಿ ಇತರ ಭಾಷೆಗಳನ್ನು ಕೆಳಭಾಗದಲ್ಲಿ ಬಳಸಲು ಅವಕಾಶವಿದೆ. ಈ ಹಿಂದೆ ಜಾರಿಯಲ್ಲಿದ್ದ ಶೇ. 50:50 ಅನುಪಾತದ ನಿಯಮವನ್ನು ಇದೀಗ ಬದಲಾವಣೆ ಮಾಡಲಾಗಿದ್ದು, ಕನ್ನಡಕ್ಕೆ ಹೆಚ್ಚಿನ ಪ್ರಾಧಾನ್ಯತೆ ನೀಡಲಾಗಿದೆ.
2024 ಫೆ.28 ಕ್ಕೆ ಗಡುವು ನೀಡಿದ್ದ ಸಿಎಂ
ರಾಜ್ಯದಲ್ಲಿ ನಾಮಫಲಕಗಳಲ್ಲಿ ಕನ್ನಡ ಬಳಕೆಯನ್ನು ಕಡ್ಡಾಯಗೊಳಿಸುವ ನಿಟ್ಟಿನಲ್ಲಿ, ವಿಧಾನಸಭೆಯಲ್ಲಿ 'ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ (ತಿದ್ದುಪಡಿ) ವಿಧೇಯಕ' ಅಂಗೀಕಾರಗೊಂಡ ನಂತರ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ನಿಯಮವನ್ನು ಕಟ್ಟುನಿಟ್ಟಾಗಿ ಜಾರಿಗೆ ತರಲು ಸೂಚಿಸಿದ್ದರು. ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ಕಾಯ್ದೆಯ ಅನ್ವಯ, ಸರ್ಕಾರದ ಅಥವಾ ಸ್ಥಳೀಯ ಪ್ರಾಧಿಕಾರದಿಂದ ಅನುಮೋದನೆ ಪಡೆದು ಕಾರ್ಯನಿರ್ವಹಿಸುತ್ತಿರುವ ಎಲ್ಲಾ ವಾಣಿಜ್ಯ, ಕೈಗಾರಿಕೆ, ವ್ಯಾಪಾರ ಸಂಸ್ಥೆಗಳು, ಸಲಹಾ ಕೇಂದ್ರಗಳು, ಆಸ್ಪತ್ರೆಗಳು, ಪ್ರಯೋಗಾಲಯಗಳು, ಮನೋರಂಜನಾ ಕೇಂದ್ರಗಳು ಮತ್ತು ಹೋಟೆಲ್‌ಗಳಂತಹ ಸಂಸ್ಥೆಗಳು ತಮ್ಮ ನಾಮಫಲಕಗಳಲ್ಲಿ ಶೇ. 60ರಷ್ಟು ಭಾಗವನ್ನು ಕನ್ನಡದಲ್ಲಿ ಪ್ರದರ್ಶಿಸಬೇಕು ಎಂದು ಸ್ಪಷ್ಟಪಡಿಸಿದ್ದರು. ಈ ನಿಯಮವನ್ನು ಪಾಲಿಸಲು 2024ರ ಫೆಬ್ರವರಿ 28ರ ಗಡುವನ್ನು ನೀಡಲಾಗಿತ್ತು. ಈ ಗಡುವನ್ನು ನಂತರ ಮಾರ್ಚ್ 15ರವರೆಗೆ ವಿಸ್ತರಿಸಲಾಗಿತ್ತು.
ಹೈಕೋರ್ಟ್ ಮೆಟ್ಟಿಲೇರಿದ್ದ ಅಂಗಡಿ ಮಾಲೀಕರು
ನಾಮಫಲಕಗಳಲ್ಲಿ ಶೇ. 60ರಷ್ಟು ಕನ್ನಡವನ್ನು ಕಡ್ಡಾಯಗೊಳಿಸಿದ ರಾಜ್ಯ ಸರ್ಕಾರದ ಕಾಯ್ದೆಯನ್ನು ಪ್ರಶ್ನಿಸಿ ಕೆಲವು ಅಂಗಡಿ ಮಾಲೀಕರು ಹೈಕೋರ್ಟ್ ಮೊರೆ ಹೋಗಿದ್ದರು. ತಮ್ಮ ವಿರುದ್ಧ ಬಲವಂತದ ಕ್ರಮ ಕೈಗೊಳ್ಳದಂತೆ ತಡೆಯಾಜ್ಞೆ ನೀಡಬೇಕೆಂದು ಅವರು ಅರ್ಜಿಯಲ್ಲಿ ಕೋರಿದ್ದರು. ಈ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠ, ಶೇ. 60ರಷ್ಟು ಕನ್ನಡ ನಾಮಫಲಕ ಅಳವಡಿಸದ ಅಂಗಡಿಗಳ ಮೇಲೆ ಸದ್ಯಕ್ಕೆ ಯಾವುದೇ ಬಲವಂತದ ಕ್ರಮ ಜರುಗಿಸದಂತೆ ಸರ್ಕಾರಕ್ಕೆ ಸೂಚಿಸಿತು. ಅಲ್ಲದೆ, ನಾಮಫಲಕ ಬದಲಾವಣೆಗೆ ಅಂಗಡಿ ಮಾಲೀಕರಿಗೆ ಹೆಚ್ಚಿನ ಕಾಲಾವಕಾಶ ನೀಡುವಂತೆ ಸಲಹೆ ನೀಡಿತು. ವಿಚಾರಣೆ ವೇಳೆ ಪೀಠವು, "ಕರ್ನಾಟಕದಲ್ಲಿ ವ್ಯಾಪಾರ ಮಾಡುವಾಗ ಕನ್ನಡದಲ್ಲಿ ನಾಮಫಲಕ ಇರಬೇಕು. ನಾಮಫಲಕದಲ್ಲಿ ಎರಡು ಸಾಲು ಕನ್ನಡ ಇದ್ದರೆ ಏನಾಗುತ್ತದೆ? ಶೇ. 60ರಷ್ಟು ಕನ್ನಡ ನಾಮಫಲಕ ಹಾಕಿದರೆ ಸಮಸ್ಯೆ ಏನು?" ಎಂದು ವಾಣಿಜ್ಯ ಮಳಿಗೆಗಳ ಸಂಘದ ಪರ ವಕೀಲರನ್ನು ಮೌಖಿಕವಾಗಿ ಪ್ರಶ್ನಿಸಿತ್ತು. "ಉದ್ಯಮಗಳನ್ನು ಮುಚ್ಚುವುದಕ್ಕೆ ನಮ್ಮ ಸಹಮತವಿಲ್ಲ," ಎಂದು ಸ್ಪಷ್ಟಪಡಿಸಿತ್ತು.
ಆದೇಶಗಳ ಅನುಷ್ಠಾನಕ್ಕೆ ಅಧಿಕಾರಗಳ ಪಾತ್ರ ಪ್ರಮುಖ
ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ. ಪುರುಷೋತ್ತಮ ಬಿಳಿಮಲೆ ʼದ ಫೆಡರಲ್ ಕರ್ನಾಟಕʼದೊಂದಿಗೆ ಮಾತನಾಡಿ, "ಸರ್ಕಾರದ ಆದೇಶಗಳನ್ನು ಅನುಷ್ಠಾನ ಮಾಡುವುದು ಅಧಿಕಾರಿಗಳ ಕರ್ತವ್ಯ. ನಾಮಫಲಕಗಳಲ್ಲಿ ಶೇ.60 ರಷ್ಟು ಕಡ್ಡಾಯ ಕನ್ನಡವಿರಬೇಕು ಎಂಬ ನಿಯಮದ ಅನುಷ್ಠಾನದ ಹೊಣೆಯನ್ನು ಕನ್ನಡ ಅಭಿವೃದ್ಧಿ ಪ್ರಾಧಿಕರ ಸಮರ್ಥವಾಗಿ ನಿಭಾಯಿಸುತ್ತಿದೆ. ಇಲ್ಲಿಯವರೆಗೂ ಸುಮಾರು 19 ಜಿಲ್ಲೆಗಳಿಗೆ ಭೇಟಿ ನೀಡಿ ಜಿಲ್ಲಾಧಿಕಾರಿಗಳೊಂದಿಗೆ ಸಭೆ ನಡೆಸಿ ಸರ್ಕಾರದ ಆದೇಶವನ್ನು ಅನುಷ್ಠಾನಗೊಳಿಸಲು ಸೂಚನೆ ನೀಡಲಾಗಿದೆ. ಉಡುಪಿ , ಉತ್ತರ ಕನ್ನಡ ಜಿಲ್ಲೆಗಳಿಂದ ಉತ್ತಮ ಪ್ರತಿಕ್ರಿಯೆ ಬಂದಿದೆ. ಪ್ರತಿವರ್ಷ ನಾಮಫಲಕಗಳನ್ನು ನವೀಕರಣ ಮಾಡಬೇಕು ಎಂಬ ನಿಯಮವಿದೆ. ಇಂತಹ ಸಂದರ್ಭದಲ್ಲಿ ಅಧಿಕಾರಿಗಳು ಶೇ. 60 ರಷ್ಟು ಕನ್ನಡ ಇದೆಯೇ ಎಂದು ಖಾತರಿಪಡಿಸಿಕೊಂಡು ನಂತರ ನಾಮಫಲಕ ಅಳವಡಿಸಲು ಅನುಮತಿ ನೀಡಬೇಕು,'' ಎಂದು ಹೇಳಿದರು.
ಶೀಘ್ರವೇ ಜಿಬಿಎ ಆಯುಕ್ತರೊಂದಿಗೆ ಸಭೆ
2024 ನವೆಂಬರ್ ಅಂತ್ಯಕ್ಕೆ ಗಡುವು ನೀಡಲಾಗಿತ್ತು. ಇದರಿಂದ ಶೇ.60 ರಷ್ಟು ಪ್ರಗತಿ ಸಾಧಿಸಿದ್ದು, 2025 ನವೆಂಬರ್ ವೇಳೆಗೆ ಇನ್ನೂ ಶೇ. 40 ರಷ್ಟು ನಾಮಫಲಕಗಳು ಬದಲಾಗುವ ವಿಶ್ವಾಸವಿದೆ. ಗಡಿ ಜಿಲ್ಲೆ ಬೆಳಗಾವಿಯಲ್ಲಿ ಮರಾಠಿ ಭಾಷಿಕರಿಂದ ಅನುಷ್ಠಾನಕ್ಕೆ ತೊಂದರೆ ನೀಡುವ ಪ್ರಯತ್ನಗಳಾದರೂ ಅಧಿಕಾರಿಗಳು ಶೇ. 60 ಕಡ್ಡಾಯ ಕನ್ನಡವಿರುವ ನಾಮಫಲಕಗಳನ್ನು ಅಳವಡಿಸಿದ್ದಾರೆ. ಬೀದರ್ ನಗರಸಭೆ ನಾಮಫಲಕ ವಿಚಾರದಲ್ಲೂ ಮುಸ್ಲಿಂ ಸಮುದಾಯದಿಂದ ವಿರೋಧ ವ್ಯಕ್ತವಾಗಿತ್ತು. ಶೇ. 60 ರಷ್ಟು ಕನ್ನಡ ಹಾಗೂ ಶೇ.40 ರಷ್ಟು ಉರ್ದುವಿನಲ್ಲಿ ನಾಮಫಲಕ ಹಾಕಲು ಸೂಚಿಸಲಾಗಿದೆ. ಪ್ರಮುಖವಾಗಿ ಕೈಗಾರಿಕಾ ವಲಯಗಳು ಹಾಗೂ ಅನಧಿಕೃತ ಅಂಗಡಿಗಳಿಂದಲೂ ಅನುಷ್ಠಾನಕ್ಕೆ ಸ್ವಲ್ಪ ಹಿನ್ನಡೆಯಾಗಿದ್ದು, ಅಧಿಕಾರಿಗಳೊಂದಿಗೆ ಸಭೆ ನಡೆಸಿ ಈ ಕುರಿತು ಚರ್ಚಿಸಲಾಗುವುದು. ಗ್ರೇಟರ್ ಬೆಂಗಳೂರು ವ್ಯಾಪ್ತಿಯಲ್ಲಿಯೂ ಎಲ್ಲಾ ಆಯುಕ್ತರೊಂದಿಗೆ ಸಭೆ ನಡೆಸಿ ಶೇ. 100 ರಷ್ಟು ಅನುಷ್ಠಾನಕ್ಕೆ ಸೂಚಿಸಲಾಗುವುದು. ಈ ಕುರಿತು ಈಗಾಗಲೇ ಪತ್ರ ಬರೆಯಲಾಗಿದೆ ಎಂದು ತಿಳಿಸಿದರು.
ಡಿಸೆಂಬರ್‌ಗೆ ಪ್ರತಿಭಟನೆ
ʼಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷʼ ಟಿ. ನಾರಾಯಣಗೌಡ ʼದ ಫೆಡರಲ್ ಕರ್ನಾಟಕʼದ ಜತೆ ಮಾತನಾಡಿ, "ಅಂಗಡಿಗಳು ಹಾಗೂ ಕಚೇರಿಗಳ ನಾಮಫಲಕದಲ್ಲಿ ಶೇ.60 ಕಡ್ಡಾಯ ಕನ್ನಡವಿರಬೇಕು ಎಂದು ಹಲವಾರು ಬಾರಿ ಸರ್ಕಾರಕ್ಕೆ ಮನವಿ ಸಲ್ಲಿಸಿ ಪ್ರತಿಭಟನೆ ನಡೆಸಿ, ಜೈಲಿಗೆ ಹೋಗಿ ಬಂದಿದ್ದೇವೆ. ಹಲವಾರು ಹೋರಾಟಗಳ ಪರಿಣಾಮವಾಗಿ ಸರ್ಕಾರ 2024 ಫೆಬ್ರವರಿಯಲ್ಲಿ ಆದೇಶ ಹೊರಡಿಸಿತ್ತು. ರಾಜ್ಯದಲ್ಲಿಈಗಾಗಲೇ ಶೇ. 80 ರಷ್ಟು ನಾಮಫಲಕಗಳು ಕನ್ನಡದಲ್ಲಿವೆ. ಶೇ.20 ರಷ್ಟು ನಾಮಫಲಕಗಳು ಅಳವಡಿಸಿಕೊಳ್ಳುವಂತೆ ನವೆಂಬರ್ ಅಂತ್ಯದವರೆಗೂ ಗಡುವು ನೀಡಲಾಗಿದೆ. ತಪ್ಪಿದಲ್ಲಿ ಮತ್ತೊಮ್ಮೆ ರಾಜ್ಯಾದ್ಯಂತ ʼಕರ್ನಾಟಕ ರಕ್ಷಣಾ ವೇದಿಕೆʼ ಹೋರಾಟ ನಡೆಸಲಿದೆ" ಎಂದು ಎಚ್ಚರಿಕೆ ನೀಡಿದರು.