ಕಮಲ್ ಹಾಸನ್‌ರ ವಿವಾದಾತ್ಮಕ ಹೇಳಿಕೆ: ಸಾ.ರಾ.ಗೋವಿಂದು ಆಕ್ರೋಶ, ಕ್ಷಮೆಗೆ ಆಗ್ರಹ
ದ ಫೆಡರಲ್ ಕರ್ನಾಟಕಕ್ಕೆ ವಿಶೇಷ ಸಂದರ್ಶನ ನೀಡಿದ ಅವರು, ಕನ್ನಡ ಹಾಗೂ ಕನ್ನಡಿಗರಿಗೆ ಮಾಡುವ ಅಪಮಾನವನ್ನು ಎಂದಿಗೂ ಸಹಿಸಲಾಗುವುದಿಲ್ಲ ಎಂದು ಹೇಳಿದ್ದಾರೆ.;
ತಮಿಳು ಚಿತ್ರರಂಗದ ಖ್ಯಾತ ನಟ ಕಮಲ್ ಹಾಸನ್‌ರ "ಕನ್ನಡ ಭಾಷೆ ತಮಿಳಿನಿಂದ ಹುಟ್ಟಿದೆ" ಎಂಬ ಹೇಳಿಕೆಗೆ ಕನ್ನಡಪರ ಹೋರಾಟಗಾರ ಹಾಗೂ ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿಯ ಮಾಜಿ ಅಧ್ಯಕ್ಷ ಸಾ.ರಾ.ಗೋವಿಂದು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಕಮಲ್ ಹಾಸನ್ ಕೂಡಲೇ ಬಹಿರಂಗ ಕ್ಷಮೆಯಾಚಿಸಬೇಕೆಂದು ಅವರು ಒತ್ತಾಯಿಸಿದ್ದಾರೆ.
ದ ಫೆಡರಲ್ ಕರ್ನಾಟಕಕ್ಕೆ ವಿಶೇಷ ಸಂದರ್ಶನ ನೀಡಿದ ಅವರು, ಕನ್ನಡ ಹಾಗೂ ಕನ್ನಡಿಗರಿಗೆ ಮಾಡುವ ಅಪಮಾನವನ್ನು ಎಂದಿಗೂ ಸಹಿಸಲಾಗುವುದಿಲ್ಲ ಎಂದು ಹೇಳಿದ್ದಾರೆ.
"ಕನ್ನಡ ಭಾಷೆಗೆ 2,000 ವರ್ಷಗಳಿಗೂ ಹೆಚ್ಚಿನ ಇತಿಹಾಸವಿದೆ. ಕಮಲ್ ಹಾಸನ್‌ಗೆ ಇದರ ಬಗ್ಗೆ ಜ್ಞಾನವಿಲ್ಲ. ತಮಿಳುನಾಡಿನವರನ್ನು ಮೆಚ್ಚಿಸಲು ಮೂಲತಃ ಮಲಯಾಳಿಯಾಗಿರುವ ಕಮಲ್ ಈ ರೀತಿ ಹಗುರವಾಗಿ ಮಾತನಾಡಿರುವುದು ಕನ್ನಡಿಗರಿಗೆ ಮಾಡಿರುವ ಅವಮಾನ" ಎಂದು ಗೋವಿಂದು ಸಂದರ್ಶನದ ವೇಳೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಮಲ್ ಕ್ಷಮೆಯಾಚಿಸದಿದ್ದರೆ ಅವರ 'ಥಗ್ ಲೈಫ್' ಚಿತ್ರ ಸೇರಿದಂತೆ ಇತರ ಚಿತ್ರಗಳ ಕರ್ನಾಟಕದಲ್ಲಿ ಬಿಡುಗಡೆ ಕಷ್ಟಕರವಾಗಲಿದೆ ಎಂದು ಗೋವಿಂದು ಎಚ್ಚರಿಕೆ ನೀಡಿದ್ದಾರೆ. "ಕನ್ನಡಕ್ಕೆ ಅವಮಾನ ಮಾಡುವ ಯಾವುದೇ ಹೇಳಿಕೆಯನ್ನು ಕನ್ನಡಿಗರು ಸಹಿಸುವುದಿಲ್ಲ. ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿ ಮತ್ತು ನಟರು ಈ ಬಗ್ಗೆ ತಕ್ಷಣ ಪ್ರತಿಕ್ರಿಯಿಸಬೇಕು" ಎಂದು ಅವರು ಆಗ್ರಹಿಸಿದ್ದಾರೆ.
ರಾಜ್‌ಕುಮಾರ್ ಮಾದರಿ
ಕನ್ನಡ ಭಾಷೆಯ ರಕ್ಷಣೆಗಾಗಿ ನಡೆದ ಗೋಕಾಕ್ ಚಳವಳಿಯಲ್ಲಿ ಡಾ. ರಾಜ್‌ಕುಮಾರ್‌ರಂತಹ ದಿಗ್ಗಜರು ಸ್ವಯಂಪ್ರೇರಿತವಾಗಿ ಭಾಗವಹಿಸಿದ್ದನ್ನು ಗೋವಿಂದು ಸ್ಮರಿಸಿದರು. "ಗೋಕಾಕ್ ಚಳವಳಿಗೆ ಡಾ. ರಾಜ್‌ಕುಮಾರ್ ಯಾರಿಂದಲೂ ಹೇಳಿಸಿಕೊಳ್ಳದೇ ಬಂದಿದ್ದರು. ಕಾವೇರಿ ನೀರಿನ ವಿಷಯದಲ್ಲಿ ಅಂಬರೀಶ್ ಕೇಂದ್ರ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಕನ್ನಡ ನಟರು ಭಾಷೆಯ ವಿಷಯದಲ್ಲಿ ಒಗ್ಗಟ್ಟಾಗಬೇಕು" ಎಂದು ಅವರು ಕರೆ ನೀಡಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ಕನ್ನಡಿಗರು ಕಮಲ್ ಅವರ ಹೇಳಿಕೆಯನ್ನು ಖಂಡಿಸಿದ್ದು, "ಕನ್ನಡ ತಮಿಳಿನಿಂದ ಹುಟ್ಟಿಲ್ಲ, ಎರಡೂ ಸಹೋದರ ದ್ರಾವಿಡ ಭಾಷೆಗಳು" ಎಂದು ಹೇಳಿದ್ದಾರೆ. ಇದೇ ಕನ್ನಡಪರ ಸಂಘಟನೆಗಳು 'ಥಗ್ ಲೈಫ್' ಚಿತ್ರದ ಬಿಡುಗಡೆ ವಿರೋಧಿಸುವ ಎಚ್ಚರಿಕೆ ನೀಡಿವೆ. "ಕನ್ನಡದ ಸ್ವಾಭಿಮಾನಕ್ಕೆ ಧಕ್ಕೆ ತಂದವರಿಗೆ ರಾಜ್ಯದಲ್ಲಿ ಸ್ಥಾನವಿಲ್ಲ" ಎಂದು ಗೋವಿಂದು ಖಡಾಖಂಡಿತವಾಗಿ ಹೇಳಿದ್ದಾರೆ.
ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ್ ತಂಗಡಗಿ ಕೂಡ ಕಮಲ್ ಅವರ ಹೇಳಿಕೆಯನ್ನು ಖಂಡಿಸಿದ್ದು, ಕ್ಷಮೆಯಾಚಿಸದಿದ್ದರೆ ಕಾನೂನು ಕ್ರಮಕ್ಕೆ ಒತ್ತಾಯಿಸಲಾಗುವುದು ಎಂದಿದ್ದಾರೆ. ಕನ್ನಡ ಭಾಷೆಯ ಗೌರವಕ್ಕಾಗಿ ಒಗ್ಗಟ್ಟಿನ ಹೋರಾಟಕ್ಕೆ ಸಾ.ರಾ.ಗೋವಿಂದು ಅವರು ಕರೆ ನೀಡಿದ್ದಾರೆ.