Jindal Land Deal | ವಿರೋಧ ಬದಿಗೊತ್ತಿ ಸಂಪುಟ ನಿರ್ಧಾರ: ಸಿಎಂಗೆ ಸುತ್ತಿಕೊಳ್ಳುವುದೇ ಮತ್ತೊಂದು ಭೂ ವಿವಾದ?

ಮೈಸೂರು ಮುಡಾ ಹಗರಣದ ವಿಷಯದಲ್ಲಿ ಈಗಾಗಲೇ ಕಾನೂನಿನ ತೂಗುಗತ್ತಿಯ ಕೆಳಗೆ ನಿಂತಿರುವ ಸಿಎಂ ಸಿದ್ದರಾಮಯ್ಯ ಪಾಲಿಗೆ ಜಿಂದಾಲ್ ಲ್ಯಾಂಡ್‌ ಡೀಲ್ ಮತ್ತೊಂದು ಉರುಳಾಗುವ ಸಾಧ್ಯತೆ ಇದೆ;

Update: 2024-08-24 12:15 GMT

ಐದು ವರ್ಷಗಳ ಹಿಂದೆ ವಿವಾದಕ್ಕೆ ಈಡಾದ ಹಿನ್ನೆಲೆಯಲ್ಲಿ ಕೈಬಿಟ್ಟಿದ್ದ ʼಜಿಂದಾಲ್ ಭೂ ವ್ಯವಹಾರʼ ಇದೀಗ ಮತ್ತೊಮ್ಮೆ ರಾಜ್ಯ ಸಚಿವ ಸಂಪುಟ ತೀರ್ಮಾನದೊಂದಿಗೆ ಸಾರ್ವಜನಿಕ ಚರ್ಚೆಯ ಮುನ್ನೆಲೆಗೆ ಬಂದಿದೆ. 

ಗುರುವಾರ ನಡೆದ ಸಂಪುಟ ಸಭೆಯಲ್ಲಿ, ಜಿಂದಾಲ್ ಉಕ್ಕು ಕಂಪನಿಗೆ 3,677 ಎಕರೆ ಜಮೀನು ಮಾರಾಟ ಮಾಡಲು ನಿರ್ಧಾರ ಕೈಗೊಳ್ಳಲಾಗಿದೆ. ಐದು ವರ್ಷಗಳ ಹಿಂದೆ, 2019ರಲ್ಲಿ ಇದೇ ಜಮೀನನ್ನು ಜಿಂದಾಲ್ ಕಂಪನಿಗೆ ಪರಭಾರೆ ಮಾಡಲು ಸರ್ಕಾರ ಮುಂದಾದಾಗ ವಿರೋಧಿಸಿದ್ದ ಹಿರಿಯ ಕಾಂಗ್ರೆಸ್ ನಾಯಕರು, ಸಂಪುಟದ ಈ ನಿರ್ಧಾರವನ್ನೂ ಈಗ ವಿರೋಧಿಸಿದ್ದಾರೆ.

ಅಂದು ಕಾಂಗ್ರೆಸ್- ಜೆಡಿಎಸ್ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಸರ್ಕಾರದ ನಿರ್ಧಾರಕ್ಕೆ ಪ್ರಬಲ ವಿರೋಧ ವ್ಯಕ್ತಪಡಿಸಿ ಅಂದಿನ ಕೈಗಾರಿಕಾ ಸಚಿವರಾಗಿದ್ದ ಕೆ.ಜೆ ಜಾರ್ಜ್ ಅವರಿಗೆ ಪತ್ರವನ್ನೂ ಬರೆದು ವಿರೋಧಿಸಿದ್ದ ಹಿರಿಯ ನಾಯಕ ಎಚ್ ಕೆ ಪಾಟೀಲರು, ಇದೀಗ ಸಚಿವರಾಗಿ ಸಚಿವ ಸಂಪುಟದ ನಿರ್ಧಾರಕ್ಕೂ ಆಕ್ಷೇಪವೆತ್ತಿದ್ದಾರೆ. ಸಚಿವ ಸಂಪುಟ ಸಭೆಯಲ್ಲಿ ಈ ವಿಷಯ ಚರ್ಚೆಗೆ ಬಂದಾಗ, ಸಚಿವ ಪಾಟೀಲರೊಂದಿಗೆ ಸಚಿವರಾದ ಎಚ್ ಸಿ ಮಹದೇವಪ್ಪ, ಈಶ್ವರ ಖಂಡ್ರೆ ಕೂಡ ದನಿಗೂಡಿಸಿದ್ದಾರೆ ಎನ್ನಲಾಗಿದೆ.

ಆದರೆ, ಇಂಧನ ಸಚಿವ ಕೆ.ಜೆ ಜಾರ್ಜ್ ಮತ್ತು ಕೈಗಾರಿಕಾ ಸಚಿವ ಎಂ ಬಿ ಪಾಟೀಲರು ಜಿಂದಾಲ್ ಕಂಪನಿಗೆ ಬಿಡಿಗಾಸಿಗೆ ಭೂಮಿ ಪರಭಾರೆ ಮಾಡಲೇಬೇಕು ಎಂದು ಪಟ್ಟು ಹಿಡಿದು ಮುಖ್ಯಮಂತ್ರಿಗಳನ್ನು ಒಪ್ಪಿಸಲು ಯಶಸ್ವಿಯಾಗಿದ್ದಾರೆ. ಹಾಗಾಗಿ ಅಂತಿಮವಾಗಿ ಸಂಡೂರು ತಾಲೂಕಿನ ತೋರಣಗಲ್ಲು ಮತ್ತು ಕುರೇಕುಪ್ಪ ಗ್ರಾಮಗಳ 2000 ಎಕರೆ ಜಮೀನನ್ನು ಎಕರೆಗೆ ಕೇವಲ 1.22 ಲಕ್ಷ ರೂ ದರದಲ್ಲಿ ಮತ್ತು ಅದೇ ತಾಲೂಕಿನ ಮುಸೇನಾಯಕನಹಳ್ಳಿ ಮತ್ತು ಯರಬನಹಳ್ಳಿ ಗ್ರಾಮಗಳ 1666 ಎಕರೆ ಜಮೀನನ್ನು ಕೇವಲ 1.50 ಲಕ್ಷ ದರದಲ್ಲಿ ಪರಭಾರೆ ಮಾಡಲು ಸಚಿವ ಸಂಪುಟ ತೀರ್ಮಾನಿಸಿದೆ.

ಈ ತೀರ್ಮಾನಕ್ಕೆ ಸಚಿವ ಸಂಪುಟ ಸಭೆಯಲ್ಲಿಯೇ ಪ್ರಬಲ ವಿರೋಧ ವ್ಯಕ್ತವಾದರೂ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ ಕೆ ಶಿವಕುಮಾರ್ ಇಬ್ಬರು ಪ್ರಭಾವಿ ಸಚಿವರ ಒತ್ತಡಕ್ಕೆ ಮಣಿದು ಒಪ್ಪಿಗೆ ಸೂಚಿಸಿರುವುದು ಇದೀಗ ಸಾರ್ವಜನಿಕ ವಲಯದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ.

ಅದರಲ್ಲೂ ಐದು ವರ್ಷಗಳ ಹಿಂದೆ ಇದೇ ವಿಷಯದಲ್ಲಿ ಪಟ್ಟು ಹಿಡಿದು ಜಿಂದಾಲ್ ಕಂಪನಿಯ ಪರ ಪ್ರಬಲ ಲಾಬಿ ನಡೆಸಿದ್ದ ಸಚಿವ ಕೆ ಜೆ ಜಾರ್ಜ್ ಮತ್ತು ಡಾ ಎಂ ಬಿ ಪಾಟೀಲರು ಇದೀಗ ಮತ್ತೆ ಪಟ್ಟು ಹಿಡಿದು ಸರ್ಕಾರದ ತೀರ್ಮಾನ ಕಂಪನಿ ಪರ ಇರುವಂತೆ ನೋಡಿಕೊಂಡಿರುವ ವಿಚಾರ ಸಾಕಷ್ಟು ಶಂಕೆ ಮತ್ತು ಅನುಮಾನಗಳಿಗೆ ಕಾರಣವಾಗಿದೆ.

ರಾಜ್ಯದ ರೈತ ಹೋರಾಟಗಾರರು, ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ತಜ್ಞರು ಕೂಡ ಸರ್ಕಾರದ ಈ ನಡೆ ಮತ್ತು ಅದರ ಹಿಂದೆ ಕೆಲಸ ಮಾಡಿರುವ ಇಬ್ಬರು ಪ್ರಭಾವಿ ಸಚಿವರ ಲಾಬಿಯ ಬಗ್ಗೆ ತೀವ್ರ ಆಕ್ಷೇಪ ವೆತ್ತಿದ್ದಾರೆ.

ಅದರಲ್ಲೂ ಸಂಡೂರಿನ ಈ ಗ್ರಾಮಗಳ ಖನಿಜ ಸಂಪನ್ಮೂಲದಿಂದ ಸಂಪದ್ಭರಿತವಾದ ಜಮೀನನ್ನು ಕೇವಲ ಎಕರೆಗೆ ಲಕ್ಷ ರೂ ಆಸುಪಾಸಿನಲ್ಲಿ ಬಿಡಿಗಾಸಿನ ಬೆಲೆಗೆ ಪರಭಾರೆ ಮಾಡುವ ಮೂಲಕ ಸಚಿವರಿಬ್ಬರು ಸಾರ್ವಜನಿಕ ಹಿತಾಸಕ್ತಿ ಉಪೇಕ್ಷಿಸಿದ್ದಲ್ಲದೆ, ಸರ್ಕಾರದ ಬೊಕ್ಕಸಕ್ಕೂ ಭಾರೀ ನಷ್ಟ ಉಂಟು ಮಾಡಿದ್ದಾರೆ. ಜೊತೆಗೆ ಕಂಪನಿಗೆ ನೂರಾರು ಕೋಟಿ ಲಾಭ ಮಾಡಿಕೊಡುವಲ್ಲಿ ನಿರ್ಣಾಯಕ ಪಾತ್ರ ವಹಿಸಿದ್ದಾರೆ. ಸರ್ಕಾರದ ಭಾಗವಾಗಿ ಸರ್ಕಾರ ಮತ್ತು ಜನರ ಹಿತ ಕಾಯುವ ಬದಲಾಗಿ ಖಾಸಗಿ ಕಂಪನಿಯೊಂದರ ಹಿತಕ್ಕೆ ಸಾರ್ವಜನಿಕ ಹಿತಾಸಕ್ತಿಯನ್ನು ಬಲಿ ಕೊಟ್ಟಿದ್ದಾರೆ ಎಂಬ ಗಂಭೀರ ಆರೋಪಗಳು ಈ ಸಚಿವರಿಬ್ಬರ ವಿರುದ್ದ ಭುಗಿಲೆದ್ದಿವೆ.

ಸಂಪುಟ ಸಭೆಯಲ್ಲೇ ವಿರೋಧ

2019ರಲ್ಲಿ ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಜಿಂದಾಲ್ ಕಂಪನಿಗೆ ಬಿಡಿಗಾಸಿನ ಬೆಲೆಗೆ ಸಾವಿರಾರು ಎಕರೆ ಖನಿಜ ಭೂಮಿ ಮಾರಾಟ ಮಾಡುವ ಪ್ರಸ್ತಾಪ ಸಚಿವ ಸಂಪುಟದ ಮುಂದೆ ಬಂದಿತ್ತು. ಆಗಲೂ ಎಚ್ ಕೆ ಪಾಟೀಲರು ಅದಕ್ಕೆ ವಿರೋಧ ಮಾಡಿದ್ದರು. ಆಗ ಒಬ್ಬ ಶಾಸಕರಷ್ಟೇ ಆಗಿದ್ದ ಅವರು, ಸಂಪುಟದ ಚರ್ಚೆಯ ವಿಷಯ ತಿಳಿಯುತ್ತಿದ್ದಂತೆ, “ಕಂಪನಿಯ ಪ್ರಸ್ತಾವನೆಯಲ್ಲಿ ಪಾರದರ್ಶಕತೆ ಇಲ್ಲ. ಮೈಸೂರು ಮಿನರಲ್ಸ್ ಕಂಪನಿಗೆ ಜಿಂದಾಲ್ ಕಂಪನಿ 1200 ಕೋಟಿ ರೂಪಾಯಿಗೂ ಹೆಚ್ಚು ಬಾಕಿ ಉಳಿಸಿಕೊಂಡಿದೆ. ಆ ಹಿನ್ನೆಲೆಯಲ್ಲಿ ಕಾನೂನು ಇಲಾಖೆಯ ಅಭಿಪ್ರಾಯ ಪಡೆಯದೆ ನಿರ್ಧಾರ ಕೈಗೊಳ್ಳಬಾರದು” ಎಂದು ದನಿ ಎತ್ತಿದ್ದರು.

ಅಲ್ಲದೆ, ಅಂದಿನ ಭಾರೀ ಕೈಗಾರಿಕಾ ಸಚಿವರಾಗಿದ್ದ ಕೆ ಜೆ ಜಾರ್ಜ್ ಅವರಿಗೆ ಪತ್ರ ಬರೆದು "ಸಾರ್ವಜನಿಕ ಹಿತಾಸಕ್ತಿಗೆ ವಿರುದ್ಧವಾಗಿ ಅತಿ ಕಡಿಮೆ ಬೆಲೆಗೆ ಜಮೀನು ಮಾರಾಟ ಮಾಡುವ ನಿರ್ಧಾರದಿಂದ ಹಿಂದೆ ಸರಿಯಬೇಕು” ಎಂದು ಒತ್ತಾಯಿಸಿದ್ದರು. ಪಾಟೀಲರ ಆ ಪತ್ರ ಅಂದು ರಾಜ್ಯ ರಾಜಕಾರಣದಲ್ಲಿ ದೊಡ್ಡ ಚರ್ಚೆಗೆ ನಾಂದಿ ಹಾಡಿತ್ತು.

ಗುರುವಾರದ ಸಂಪುಟ ಸಭೆಯಲ್ಲಿ ಕೂಡ ಎಚ್ ಕೆ ಪಾಟೀಲರು, “2019ಕ್ಕೂ, ಇವತ್ತಿಗೂ ಕಂಪನಿಯ ವಿಷಯದಲ್ಲಾಗಲೀ, ಭೂಮಿಯ ವಿಷಯದಲ್ಲಾಗಲೀ ಪರಿಸ್ಥಿತಿ ಬದಲಾಗಿಲ್ಲ. ಆದರೆ, ಕೇವಲ ಅಡ್ವೋಕೇಟ್ ಜನರಲ್ ಅಭಿಪ್ರಾಯ ಮುಂದಿಟ್ಟುಕೊಂಡು ಭೂಮಿ ಪರಭಾರೆಗೆ ಒಪ್ಪಿಗೆ ನೀಡುವುದು ಸರಿಯಲ್ಲ” ಎಂದು ಮುಖ್ಯಮಂತ್ರಿಗಳಿಗೆ ಕಿವಿಮಾತು ಹೇಳಿದ್ದಾರೆ. ಆದರೆ, ಸಚಿವ ಜಾರ್ಜ್ ಮತ್ತು ಎಂ ಬಿ ಪಾಟೀಲರ ಪಟ್ಟಿನ ಎದುರು ಸಿಎಂ ಕೂಡ ಅಸಹಾಯಕರಾಗಿ ಜಿಂದಾಲ್ ಪರ ಒಪ್ಪಿಗೆ ಕೊಟ್ಟಿದ್ದಾರೆ ಎಂದು ಮೂಲಗಳು ಹೇಳಿವೆ.

"ದಶಕಗಳ ಹಿಂದೆ ನಿಗದಿಯಾಗಿದ್ದ ಬೆಲೆಗೆ ಈಗ ಆ ಭೂಮಿಯನ್ನು ಮಾರಾಟ ಮಾಡುವುದು ಮತ್ತು ಮಾರಾಟ ಮಾಡುವಂತಹ ಮಹತ್ವದ ನಿರ್ಧಾರ ಕೈಗೊಳ್ಳುವ ಮುನ್ನ ಸರಿಯಾದ ಕಾನೂನು ಸಲಹೆ ಮತ್ತು ಸಾರ್ವಜನಿಕ ಹಿತಾಸಕ್ತಿಯ ಬಗ್ಗೆ ವಿವೇಚಿಸದೇ ಇರುವುದು ಒಳ್ಳೆಯ ಬೆಳವಣಿಗೆ ಅಲ್ಲ. ಇದರಿಂದಾಗಿ ಸರ್ಕಾರಕ್ಕೆ ಕೆಟ್ಟ ಹೆಸರು ಬರಲಿದೆ" ಎಂದು ಹಿರಿಯ ಸಚಿವರು ಸಂಪುಟ ಸಭೆಯಲ್ಲೇ ಹೇಳಿದರೂ ಅವರ ಮಾತನ್ನು ಯಾರೂ ಕಿವಿಗೆ ಹಾಕಿಕೊಳ್ಳಲಿಲ್ಲ ಎನ್ನಲಾಗಿದೆ.

1800 ಕೋಟಿ ರೂ. ಭೂಮಿ ಕೇವಲ 48 ಕೋಟಿಗೆ!

ಈ ನಡುವೆ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಸೇರಿದಂತೆ ವಿವಿಧ ರೈತ ಸಂಘಟನೆಗಳು ಸರ್ಕಾರದ ಈ ನಿರ್ಧಾರದ ವಿರುದ್ಧ ಸಿಡಿದೆದ್ದಿವೆ.

“ಹಾಲಿ ಎಕರೆಗೆ 50 ಲಕ್ಷದಿಂದ 1 ಕೋಟಿ ಬೆಲೆ ಬಾಳುವ ಜಮೀನನ್ನು ಕೇವಲ ಒಂದು ಲಕ್ಷಕ್ಕೆ ದಾನ ನೀಡಿದಂತೆ ನೀಡುವುದು ಎಂದರೆ ಏನಿದು? ಈ ಹಿಂದೆ ಜನಾರ್ದನ ರೆಡ್ಡಿಗೆ ಅದೇ ಜಿಲ್ಲೆಯಲ್ಲಿ ನೀಡಿದ ಎರಡು ಸಾವಿರ ಎಕರೆ ಜಮೀನು ಈಗ ಏನಾಗಿದೆ ಎಂಬುದು ಎಲ್ಲರಿಗೂ ಗೊತ್ತಿದೆ. ಕಾರ್ಖಾನೆಯ ಉದ್ದೇಶಕ್ಕೆ ನೀಡಿದ ಭೂಮಿ, ನಿಗದಿತ ಅವಧಿಯಲ್ಲಿ ಬಳಕೆಯಾಗದೇ ಇದ್ದಲ್ಲಿ ವಾಪಸ್ ಪಡೆಯಬೇಕು ಎಂಬ ಷರತ್ತನ್ನು ಈ ಹಿಂದೆ ರದ್ದು ಮಾಡಿದ ಹಿಂದಿನ ಹುನ್ನಾರ ಏನೆಂಬುದು ಈಗ ಗೊತ್ತಾಗುತ್ತಿದೆ” ಎಂದು ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯ ರಾಜ್ಯಾಧ್ಯಕ್ಷ ಎಚ್ ಆರ್ ಬಸವರಾಜಪ್ಪ ಹೇಳಿದರು.

ʼದ ಫೆಡರಲ್ ಕರ್ನಾಟಕʼಕ್ಕೆ ಈ ಕುರಿತು ಪ್ರತಿಕ್ರಿಯಿಸಿದ ಅವರು, “ಒಟ್ಟಾರೆ ಕಂಪನಿ ಉದ್ದಾರ ಅಥವಾ ಉದ್ಯೋಗ ಸೃಷ್ಟಿಗೆ ಈ ಮಾರಾಟ ವ್ಯವಹಾರ ನಡೆದಿಲ್ಲ. ಬದಲಾಗಿ ಯಾರದೋ ವೈಯಕ್ತಿಕ ಉದ್ದಾರಕ್ಕೆ ಈ ವ್ಯವಹಾರ ಎನಿಸುತ್ತಿದೆ. ಏಕೆಂದರೆ, ಅಷ್ಟು ಅಪಾರವಾದ ಭೂಮಿಯಲ್ಲಿ ಕಂಪನಿ ಹೆಚ್ಚೆಂದರೆ ಕೆಲವು ಸಾವಿರ ಉದ್ಯೋಗ ಸೃಷ್ಟಿಸಬಹುದು. ಆದರೆ, ಅದೇ ಭೂಮಿಯನ್ನು ಕೃಷಿಕರಿಗೆ ನೀಡಿದರೆ ನಾಲ್ಕು ಲಕ್ಷಕ್ಕೂ ಅಧಿಕ ಉದ್ಯೋಗ ಸೃಷ್ಟಿಯಾಗಲಿದೆ. ರೈತರೂ ಈಗಿನ ಸರ್ಕಾರದ ಬೆಲೆಗಿಂತ ಹತ್ತು ಪಟ್ಟು ಬೆಲೆ ಕೊಡಲು ಸಿದ್ಧರಿದ್ದಾರೆ. ನಮಗೇ ಕೊಡಲಿ” ಎಂದರು.

“ಮೂರೂ ರಾಜಕೀಯ ಪಕ್ಷಗಳು ಅಧಿಕಾರದಲ್ಲಿದ್ದಾಗ ಈ ಭೂಮಿ ಪರಭಾರೆಗೆ ಪೈಪೋಟಿ ನಡೆಸಿದ್ದವು. ಈಗ ಈ ಸರ್ಕಾರ ನಿರ್ಧಾರ ಕೈಗೊಂಡ ವಿಷಯ ಬಹಿರಂಗವಾಗಿ ಇಷ್ಟು ದಿನವಾದರೂ ಪ್ರತಿಪಕ್ಷಗಳು ಬಾಯಿ ಬಿಡದೆ ಮುಗುಮ್ಮಾಗಿ ಇರುವುದನ್ನು ನೋಡಿದರೆ ಎಲ್ಲರೂ ಇದರಲ್ಲಿ ಶಾಮೀಲಾಗಿರುವ ಶಂಕೆ ಬಲವಾಗುತ್ತಿದೆ. ಈ ವಿಷಯವನ್ನು ರಾಜ್ಯ ರೈತ ಸಂಘ ಮತ್ತು ವಿವಿಧ ಸಂಘಟನೆಗಳು ಇಲ್ಲಿಗೇ ಬಿಡುವುದಿಲ್ಲ. ಬೀದಿ ಹೋರಾಟ ಮತ್ತು ಕಾನೂನು ಹೋರಾಟ ನಡೆಸುತ್ತೇವೆ” ಎಂದು ಅವರು ಹೇಳಿದರು.

ರೈತ ಮುಖಂಡರ ಲೆಕ್ಕಾಚಾರದ ಪ್ರಕಾರ, ಸರ್ಕಾರ ಜಿಂದಾಲ್‌ ಕಂಪನಿಗೆ ಪರಭಾರೆ ಮಾಡಲು ತೀರ್ಮಾನಿಸಿರುವ ಭೂಮಿಯ ಒಟ್ಟು ಮೌಲ್ಯ ಸದ್ಯದ ಮಾರುಕಟ್ಟೆ ಮೌಲ್ಯದ ಪ್ರಕಾರ, ಕನಿಷ್ಟ 1800 ಕೋಟಿ ರೂಪಾಯಿ! ಆದರೆ, ಸರ್ಕಾರದ ಈಗಿನ ತೀರ್ಮಾನದ ಪ್ರಕಾರ ಅದರ ಮೌಲ್ಯ ಕೇವಲ 48 ಕೋಟಿ!

ಸಿಎಂ ಗಳಿಗೆ ಕಂಟಕವಾಗಿದ್ದ ಜಿಂದಾಲ್!

ಜಿಂದಾಲ್ ಕಂಪನಿಯ ಗಣಿ ಮತ್ತು ಭೂ ವ್ಯವಹಾರಗಳಿಗೆ ಸಂಬಂಧಿಸಿದಂತೆ ರಾಜ್ಯದ ಮುಖ್ಯಮಂತ್ರಿಗಳು ಸಂಕಷ್ಟ ಎದುರಿಸಿದ, ಹುದ್ದೆ ಕಳೆದುಕೊಂಡು ಜೈಲು ಸೇರಿದ ಉದಾಹರಣೆಗಳು ರಾಜ್ಯದಲ್ಲಿವೆ.

2010-11ರಲ್ಲಿ ಅಂದಿನ ಮುಖ್ಯಮಂತ್ರಿಯಾಗಿದ್ದ ಬಿಜೆಪಿಯ ಹಿರಿಯ ನಾಯಕ ಬಿ ಎಸ್ ಯಡಿಯೂರತಪ್ಪ ಅವರು ಗಣಿ ಅಕ್ರಮ ಪ್ರಕರಣದಲ್ಲಿ ಅಧಿಕಾರ ಕಳೆದುಕೊಂಡು ಜೈಲು ಸೇರಲು ಜಿಂದಾಲ್ ಕಂಪನಿಯೊಂದಿಗಿನ ವ್ಯವಹಾರದ ವಿಷಯದಲ್ಲಿ ಕೇಳಿಬಂದಿದ್ದ ಆರೋಪ ಕಾರಣವಾಗಿತ್ತು. ಜಿಂದಾಲ್ ಕಂಪನಿಗೆ ಗಣಿ ಗುತ್ತಿಗೆ ವಿಷಯದಲ್ಲಿ ಚೆಕ್‌ನಲ್ಲಿ ಲಂಚ ಸ್ವೀಕರಿಸಿದ ಅಂಶವನ್ನು ಲೋಕಾಯುಕ್ತ ವರದಿಯಲ್ಲಿ ಉಲ್ಲೇಖಿಸಿದ ಹಿನ್ನೆಲೆಯಲ್ಲಿ ಬಿ ಎಸ್ ಯಡಿಯೂರಪ್ಪ ರಾಜೀನಾಮೆ ನೀಡಿದ್ದರು.

ಬಳಿಕ 2018-19ರ ಜೆಡಿಎಸ್- ಕಾಂಗ್ರೆಸ್ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಕೂಡ ಇದೇ ಭೂಮಿಯ ಪರಭಾರೆ ವಿಷಯದಲ್ಲಿ ಸಚಿವ ಸಂಪುಟ ತೆಗೆದುಕೊಂಡ ನಿರ್ಧಾರದ ವಿರುದ್ಧ ಎಚ್ ಕೆ ಪಾಟೀಲ್ ಸೇರಿದಂತೆ ಕಾಂಗ್ರೆಸ್ಸಿನ ಹಿರಿಯ ಮುಖಂಡರು ಪ್ರಬಲ ವಿರೋಧ ವ್ಯಕ್ತಪಡಿಸಿದ್ದರು. ಸಮ್ಮಿಶ್ರ ಸರ್ಕಾರದ ಮಿತ್ರಪಕ್ಷಗಳ ಹೊಂದಾಣಿಕೆಯ ಬೆಸುಗೆಗೆ ಈ ಭೂಮಿ ಪರಭಾರೆ ವಿಷಯ ಕೂಡ ಸಾಕಷ್ಟು ಘಾಸಿ ಮಾಡಿತ್ತು. ಅಲ್ಲಿಂದಲೇ ಬಹುತೇಕ ಆರಂಭವಾಗಿದ್ದ ಕಾಂಗ್ರೆಸ್ ಮತ್ತು ಜೆಡಿಎಸ್ ನಾಯಕರ ನಡುವಿನ ಹಗ್ಗಜಗ್ಗಾಟ ಅಂತಿಮವಾಗಿ ಬೆಳಗಾವಿ ರಾಜಕಾರಣದ ಅಂಶವೂ ಸೇರಿ ಸಿಎಂ ಎಚ್ ಡಿ ಕುಮಾರಸ್ವಾಮಿ ಅಧಿಕಾರ ಕಳೆದುಕೊಳ್ಳುವ ಮೂಲಕ ಪರ್ಯಾವಸಾನ ಕಂಡಿತ್ತು.

ಆ ಹಿನ್ನೆಲೆಯಲ್ಲಿ; ಮೈಸೂರು ಮುಡಾ ಹಗರಣದ ವಿಷಯದಲ್ಲಿ ಈಗಾಗಲೇ ಕಾನೂನಿನ ತೂಗುಗತ್ತಿಯ ಕೆಳಗೆ ನಿಂತಿರುವ ಸಿಎಂ ಸಿದ್ದರಾಮಯ್ಯ ಪಾಲಿಗೆ ಜಿಂದಾಲ್ ಲ್ಯಾಂಡ್‌ ಡೀಲ್ ಮತ್ತೊಂದು ಉರುಳಾಗುವ ಸಾಧ್ಯತೆ ಇದೆ.

Tags:    

Similar News