JDS Protest | ಗ್ರೇಟರ್ ಬೆಂಗಳೂರು ವಿಧೇಯಕ ಖಂಡಿಸಿ ಜೆಡಿಎಸ್ ಪ್ರತಿಭಟನೆ
ಬೆಂಗಳೂರಿಗರ ಭಾವನೆಗಳಿಗೆ ವಿರುದ್ಧವಾಗಿ ಗ್ರೇಟರ್ ಬೆಂಗಳೂರು ವಿಧೇಯಕ ಅಂಗೀಕರಿಸಿದೆ. ರಾಜ್ಯಪಾರು ಯಾವುದೇ ಕಾರಣಕ್ಕೂ ಈ ವಿಧೇಯಕಕ್ಕೆ ಸಹಿ ಹಾಕಬಾರದು. ಈ ಕುರಿತು ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಗುವುದು ಎಂದು ಜೆಡಿಎಸ್ ಹೇಳಿದೆ.;
ರಿಯಲ್ ಎಸ್ಟೇಟ್ ದಂಧೆ ಹಾಗೂ ಬೆಂಗಳೂರಿನಲ್ಲಿ ಕನ್ನಡಿಗರನ್ನು ಒಡೆದು ಆಳುವ ದುರುದ್ದೇಶದಿಂದ ಕಾಂಗ್ರೆಸ್ ಸರ್ಕಾರ ಬಿಬಿಎಂಪಿಯನ್ನು ಗ್ರೇಟರ್ ಬೆಂಗಳೂರು ಹೆಸರಿನಲ್ಲಿ ಏಳು ಭಾಗಗಳನ್ನಾಗಿ ಛಿಧ್ರ ಮಾಡಲು ಹೊರಟಿದೆ ಎಂದು ಜೆಡಿಎಸ್ ಆರೋಪಿಸಿದೆ.
ಗ್ರೇಟರ್ ಬೆಂಗಳೂರು ರಚನೆ ಖಂಡಿಸಿ ಶನಿವಾರ ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದಲ್ಲಿ ಜೆಡಿಎಸ್ ಕಾರ್ಯರ್ತರು ಬೃಹತ್ ಪ್ರತಿಭಟನೆ ನಡೆಸಿ, ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಜೆಡಿಎಸ್ ನಗರ ಘಟಕದ ಅಧ್ಯಕ್ಷ ಹೆಚ್.ಎಂ.ರಮೇಶ್ ಗೌಡ ಮಾತನಾಡಿ, ಭೂ ದಂಧೆ ನಡೆಸುವ ಏಕೈಕ ಉದ್ದೇಶದಿಂದ ರಾಜ್ಯ ಸರ್ಕಾರ ಗ್ರೇಟರ್ ಬೆಂಗಳೂರು ಮಾಡಲು ಹೊರಟಿದೆ ಎಂದು ಆರೋಪಿಸಿದರು.
ವಿಧಾನಮಂಡಲದಲ್ಲಿ ಕಾಂಗ್ರೆಸ್ ಸರ್ಕಾರ ಬೆಂಗಳೂರಿಗರ ಭಾವನೆಗಳಿಗೆ ವಿರುದ್ಧವಾಗಿ ಗ್ರೇಟರ್ ಬೆಂಗಳೂರು ವಿಧೇಯಕ ಅಂಗೀಕರಿಸಿದೆ. ರಾಜ್ಯಪಾರು ಯಾವುದೇ ಕಾರಣಕ್ಕೂ ಈ ವಿಧೇಯಕಕ್ಕೆ ಸಹಿ ಹಾಕಬಾರದು. ಈ ಕುರಿತು ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಗುವುದು ಎಂದು ಹೇಳಿದರು.
ಬೆಂಗಳೂರಿನಲ್ಲಿ ಒಂದೂವರೆ ಕೋಟಿ ಜನರು ವಾಸ ಮಾಡುತ್ತಿದ್ದಾರೆ. ಜನರಿಗೆ ಕುಡಿಯುವ ನೀರಿಲ್ಲ, ಸರಿಯಾದ ಮೂಲಸೌಕರ್ಯ ಇಲ್ಲ. ರಸ್ತೆಗುಂಡಿಗಳನ್ನು ಮುಚ್ಚಲು ಈ ಸರ್ಕಾರದಲ್ಲಿ ನಯಾಪೈಸೆ ಹಣವಿಲ್ಲ. ಈಗ ಗ್ರೇಟರ್ ಬೆಂಗಳೂರು ಹೆಸರಿನಲ್ಲಿ ಜನರನ್ನು ಯಾಮಾರಿಸಲು ಹೊರಟಿದೆ ಎಂದು ಟೀಕಿಸಿದರು.
ಬೇಸಿಗೆ ಇನ್ನೂ ಪೂರ್ಣ ಪ್ರಮಾಣದಲ್ಲಿ ಶುರುವಾಗಿಲ್ಲ. ಅದಾಗಲೇ ಬೆಂಗಳೂರಿನಲ್ಲಿ ನೀರಿಗೆ ಹಾಹಾಕಾರ ತಲೆದೋರಿದೆ. ಒಂದು ನೀರಿನ ಟ್ಯಾಂಕರ್ ಗೆ ಐದು ಸಾವಿರ, ಆರು ಸಾವಿರ ಕೊಡಬೇಕಾದ ಪರಿಸ್ಥಿತಿ ಸೃಷ್ಟಿಯಾಗಿದೆ. ಬೆಂಗಳೂರಿನ ಜನ ನಿಜಕ್ಕೂ ಸತ್ತು ಬದುಕುತ್ತಿದ್ದಾರೆ. ಇದಕ್ಕೆ ಕಾಂಗ್ರೆಸ್ ಸರ್ಕಾರದ ದುರಾಡಳಿತವೇ ಕಾರಣ ಎಂದು ವಾಗ್ದಾಳಿ ನಡೆಸಿದರು.
ಗ್ರೇಟರ್ ಬೆಂಗಳೂರು ವಿಧೇಯಕವನ್ನು ರಾಜ್ಯ ಸರ್ಕಾರ ವಾಪಸ್ ಪಡೆಯಬೇಕು. ಇಲ್ಲವಾದರೆ ನಗರದಲ್ಲಿ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಹಾಗೂ ಕಾಂಗ್ರೆಸ್ ಶಾಸಕರ ಕಾರ್ಯಕ್ರಮಗಳನ್ನು ನಡೆಯಲು ಬಿಡುವುದಿಲ್ಲ. ಅಲ್ಲೆಲ್ಲ ನಾವು ಪಕ್ಷದ ವತಿಯಿಂದ ಕಪ್ಪುಪಟ್ಟಿ ಧರಿಸಿ ಪ್ರತಿಭಟನೆ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.
ವಿಧಾನ ಪರಿಷತ್ ಸದಸ್ಯ ಟಿ.ಎ.ಜವರಾಯಿ ಗೌಡ, ಮಾಜಿ ಎಂಎಲ್ ಸಿ ಕೆ.ಎ. ತಿಪಪೇಸ್ವಾಮಿ. ಬೆಂಗಳೂರು ಜೆಡಿಎಸ್ ಮಹಿಳಾ ಘಟಕದ ಅಧ್ಯಕ್ಷೆ ಶೈಲಜಾ ರಾವ್, ಮುಖಂಡರಾದ ನಾಗೇಶ್ ರಾವ್, ವೆಂಕಟಸ್ವಾಮಿ, ವೇಣುಗೋಪಾಲ್, ಮಂಗಳಮ್ಮ ಪ್ರವೀಣ್ ಕುಮಾರ್, ಸ್ಯಾಮುಯಲ್, ಅಪ್ರೋಜ್ ಬೇಗ್ ಸೇರಿದಂತೆ ನಗರದ ಎಲ್ಲಾ ವಿಧಾನಸಭೆ ಕ್ಷೇತ್ರಗಳ ಪಕ್ಷದ ಅಧ್ಯಕ್ಷರು, ಮುಖಂಡರು ಪಾಲ್ಗೊಂಡಿದ್ದರು.