ಯುಕೆಪಿ 3ನೇ ಹಂತದ ಯೋಜನೆ : 3 ವರ್ಷದೊಳಗೆ ಪರಿಹಾರ ನೀಡಲು ತೀರ್ಮಾನ

ಕಾಲುವೆ ನಿರ್ಮಾಣಕ್ಕಾಗಿ ಸ್ವಾಧೀನಗೊಂಡ ಭೂಮಿಗೆ ಒಣಭೂಮಿಯ ಎಕರೆಯೊಂದಕ್ಕೆ 25 ಲಕ್ಷ ರೂ. ಮತ್ತು ನೀರಾವರಿ ಜಮೀನಿಗೆ ಎಕರೆಯೊಂದಕ್ಕೆ 30 ಲಕ್ಷ ರೂ. ಪರಿಹಾರ ಒದಗಿಸಲು ತೀರ್ಮಾನಿಸಲಾಗಿದೆ.;

Update: 2025-09-16 14:55 GMT

ಕೃಷ್ಣಾ ಮೇಲ್ದಂಡೆ ಯೋಜನೆಯ 3ನೇ ಹಂತದ ಕಾಮಗಾರಿಗಳಿಗಾಗಿ ಅವಶ್ಯ ಇರುವ ಜಮೀನಿಗೆ ಪರಿಹಾರ ದರ ನಿಗದಿಗೊಳಿಸಿ ಮಹತ್ವದ ತೀರ್ಮಾನ ಕೈಗೊಂಡಿರುವ ರಾಜ್ಯ ಸರ್ಕಾರವು ಭೂಸ್ವಾಧೀನಪಡಿಸಿಕೊಂಡ ಜಮೀನುಗಳಿಗೆ ಪರಿಹಾರವನ್ನು ಮೂರು ವರ್ಷದೊಳಗೆ ನೀಡಲು ತೀರ್ಮಾನಿಸಿದೆ. ಈ ಮೂಲಕ ಹಲವು ವರ್ಷಗಳಿಂದ ನನೆಗುದಿಗೆ ಬಿದ್ದಿದ್ದ ಯೋಜನೆ ಮತ್ತೆ ವೇಗ ಪಡೆದುಕೊಳ್ಳುವ ಸಾಧ್ಯತೆ ಇದೆ. 

ಯೋಜನೆಗೆ ರೈತರಿಂದ ಸ್ವಾಧೀನಪಡಿಸಿಕೊಳ್ಳುವ ನೀರಾವರಿ ಜಮೀನಿಗೆ ಎಕರೆಯೊಂದಕ್ಕೆ 40 ಲಕ್ಷ ರೂಪಾಯಿ ಮತ್ತು ಖುಷ್ಕಿ ಒಣಭೂಮಿಯ ಎಕರೆಯೊಂದಕ್ಕೆ 30 ಲಕ್ಷ ರೂ. ಪರಿಹಾರ ನೀಡುವ ಬಗ್ಗೆ ನಿರ್ಣಯಿಸಲಾಯಿತು. ಯೋಜನೆಗೆ ಸಂಬಂಧಿಸಿದಂತೆ ರೈತರು, ರೈತ ಹೋರಾಟ ಸಂಘಗಳು, ಸಂಬಂಧಪಟ್ಟ ಶಾಸಕರು, ಸಚಿವರೊಂದಿಗೆ ಚರ್ಚೆ ನಡೆಸಿ ಪ್ರಮುಖ ತೀರ್ಮಾನಗಳನ್ನು ಕೈಗೊಳ್ಳಲಾಗಿದೆ.

ಇದೇ ವೇಳೆ ಯೋಜನೆ ಸಂಬಂಧ ಕಾಲುವೆ ತೋಡಲು ಸುಮಾರು 51,837 ಎಕರೆ ಬೇಕಾಗಿದ್ದು, ಇದರಲ್ಲಿ 23631 ಎಕರೆ ಭೂಮಿಯ ಸ್ವಾಧೀನ ಪ್ರಕ್ರಿಯೆ ನಡೆಸಿ, ಕಾಮಗಾರಿ ಕೈಗೊಳ್ಳಲಾಗಿದೆ. ಕಾಲುವೆ ನಿರ್ಮಾಣಕ್ಕಾಗಿ ಸ್ವಾಧೀನಪಡಿಸಿಕೊಂಡ ಭೂಮಿಗೆ ಸಂಬಂಧಿಸಿದಂತೆ ಒಣಭೂಮಿಯ ಎಕರೆಯೊಂದಕ್ಕೆ 25 ಲಕ್ಷ  ರೂ. ಮತ್ತು ನೀರಾವರಿ ಜಮೀನಿಗೆ ಎಕರೆಯೊಂದಕ್ಕೆ 30 ಲಕ್ಷ ರೂ. ಪರಿಹಾರ ಒದಗಿಸಲು ತೀರ್ಮಾನಿಸಲಾಗಿದೆ. ಕಾಲುವೆ ನಿರ್ಮಾಣದಲ್ಲಿ ಜಮೀನು ಕಳೆದುಕೊಂಡವರು ಯೋಜನೆಯ ಫಲಾನುಭವಿಗಳಾಗುತ್ತಾರೆ. 

ರೈತರ ಜೀವನಮಟ್ಟ ಸುಧಾರಣೆ

ಕೃಷ್ಣಾ ಮೇಲ್ದಂಡೆ ಯೋಜನೆ ಹಂತ-3 ಮತ್ತು ನ್ಯಾಯಾಧೀಕರಣದ ತೀರ್ಪಿನಂತೆ ಆಲಮಟ್ಟಿ ಜಲಾಶಯದ ಎತ್ತರವನ್ನು 519.6 ಮೀ. ನಿಂದ 524.256 ಮೀ.  ಹೆಚ್ಚಿಸಲು ಅನುಮತಿ ನೀಡಲಾಗಿದೆ. ಜಲಾಶಯದ ಎತ್ತರವನ್ನು ಹೆಚ್ಚಿಸುವುದರಿಂದ ಆಲಮಟ್ಟಿಯ ಹಿನ್ನೀರಿನಿಂದ ಸುಮಾರು 75 ಸಾವಿರ ಎಕರೆಗೂ ಹೆಚ್ಚು ಜಮೀನು ಮುಳುಗಡೆಯಾಗುವ ಸಂಭವವಿದೆ. ಈ ಜಮೀನಿಗೆ 5.94 ಲಕ್ಷ ಹೆಕ್ಟೇರ್‌ಗಿಂತ ಹೆಚ್ಚು (ಸುಮಾರು 14 ರಿಂದ 15 ಲಕ್ಷ ಎಕರೆ) ಭೂಮಿಯ ನೀರಾವರಿ ಕಲ್ಪಿಸಬಹುದಾಗಿದೆ. ಯುಕೆಪಿ ಹಂತ 3 ಬೃಹತ್ ನೀರಾವರಿ ಯೋಜನೆಯಾಗಿದ್ದು, ಈ ಭಾಗದ ರೈತರ ಜಮೀನಿಗೆ ನೀರೊದಗಿಸಿ, ಅವರ ಜೀವನ ಮಟ್ಟದ ಸುಧಾರಣೆಯಾಗಲಿದೆ. 

ಯೋಜನೆಗೆ ಸುಮಾರು 70 ಸಾವಿರ ಕೋಟಿ ವೆಚ್ಚವಾಗಲಿದೆ

1,33,867 ಎಕರೆ ಜಮೀನು ಯೋಜನೆಗೆ ಬೇಕಾಗಿದ್ದು, 75,563 ಎಕರೆ ಮುಳುಗಡೆಯಾಗಲಿದೆ 51,837 ಎಕರೆ ಕಾಲುವೆ ನಿರ್ಮಾಣಕ್ಕೆ ಬೇಕಾಗಿದೆ. ರೈತರ ಪುನರ್ವಸತಿ ಹಾಗೂ ಪುನರ್ವವ್ಯಸ್ಥೆ ಕಾರ್ಯಗಳಿಗೆ 6469 ಎಕರೆಗಳ ಅವಶ್ಯಕತೆಯಿದೆ. ಇದರಿಂದ ಸುಮಾರು 20 ಗ್ರಾಮಗಳು , ಕೆಲವು ಪಟ್ಟಣ ವಾರ್ಡ್ ಗಳು ಮುಳುಗಡೆಯಾಗುತ್ತಿದ್ದು, ಒಟ್ಟು 1,33,867 ಎಕರೆಗೆ ಭೂಸ್ವಾಧೀನ ಪರಿಹಾರ ನೀಡುವ ಐತಿಹಾಸಿಕ ತೀರ್ಮಾನವನ್ನು ಕೈಗೊಳ್ಳಲಾಗಿದೆ. ಈ ಉದ್ದೇಶಕ್ಕಾಗಿ ಪ್ರತಿವರ್ಷ ಸುಮಾರು 15 ರಿಂದ 20 ಸಾವಿರ ಕೋಟಿ ರೂಗಳ ವೆಚ್ಚ ಬರಲಿದೆ. ಒಟ್ಟಾರೆ ಈ ಯೋಜನೆಗೆ ಸುಮಾರು 70 ಸಾವಿರ ಕೋಟಿ ರೂ. ಗಳು ವೆಚ್ಚವಾಗುವ ಅಂದಾಜು ಇದೆ ಎಂದು ಸರ್ಕಾರ ತಿಳಿಸಿದೆ. 

ಪ್ರಾಧಿಕಾರ ರಚನೆಗೆ ತೀರ್ಮಾನ 

ಯೋಜನೆಯ ಬಗ್ಗೆ ಮಾತನಾಡಿದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌, ಪುನಶ್ಚೇತನ ಕಾರ್ಯಕ್ಕೆ ಸಂಬಂಧಿಸಿದಂತೆ ಪ್ರಮುಖ ಪ್ರಕರಣಗಳಿರುವ ಕಾರಣ, ಈ ವಿಚಾರದಲ್ಲಿ ಹೊಸ ನೀತಿ ರೂಪಿಸಲು ತೀರ್ಮಾನಿಸಲಾಗಿದೆ. ಈ ವಿಚಾರವಾಗಿ ಸ್ಥಳೀಯ ನಾಯಕರು, ರೈತರ ಅಭಿಪ್ರಾಯ ಪಡೆಯಲಾಗುವುದು. ನ್ಯಾಯಯುತ ಪರಿಹಾರ, ಭೂಸ್ವಾಧೀನ ಪಾರದರ್ಶಕತೆ ಹಕ್ಕು ಕಾಯ್ದೆಯ ಸೆಕ್ಷನ್ 51ರ ಅಡಿಯಲ್ಲಿ ಭೂಸ್ವಾಧೀನ, ಪುನಶ್ಚೇತನ ಹಾಗೂ ಪರಿಹಾರ ಪ್ರಾಧಿಕಾರ ರಚಿಸಲು ಅವಕಾಶವಿದೆ. ಹೀಗಾಗಿ ರಾಜ್ಯ ಸರ್ಕಾರ ಮೊದಲ ಬಾರಿಗೆ ಈ ಪ್ರಾಧಿಕಾರವನ್ನು ರಚಿಸಲಿದೆ. ಮುಖ್ಯನ್ಯಾಯಮೂರ್ತಿಗಳು ನೇಮಕ ಮಾಡುವ ನ್ಯಾಯಾಧೀಶರ ನೇತೃತ್ವದಲ್ಲಿ ಈ ಪ್ರಾಧಿಕಾರವನ್ನು ರಚಿಸಲಾಗುವುದು ಎಂದು ತಿಳಿಸಿದರು.

ರಾಜಕೀಯ ಒತ್ತಡಗಳಿಂದ 2 ಬಾರಿ ಸಭೆ ಮುಂದೂಡಿಕೆ

ಕರ್ನಾಟಕ ರಾಜ್ಯ ತನ್ನ ಪಾಲಿನ ನೀರನ್ನು ಪಡೆಯಲು ಹಲವು ಬಾರಿ ಕೇಂದ್ರ ಜಲಶಕ್ತಿ ಸಚಿವರನ್ನು ಭೇಟಿ ಮಾಡಿ ಮನವಿ ಮಾಡಿದ್ದೇವೆ. ನಮ್ಮ ಮನವಿಗೆ ಸ್ಪಂದಿಸಿರುವ ಕೇಂದ್ರ ಸಚಿವರು ಅಧಿಸೂಚನೆ ಹೊರಡಿಸಲು ತಾತ್ವಿಕ ಒಪ್ಪಿಗೆ ನೀಡಿದ್ದಾರೆ. ಕೇಂದ್ರ ಸಚಿವರು ಈ ವಿಚಾರವಾಗಿ ಎರಡು ಬಾರಿ ಸಭೆ ನಿಗದಿ ಮಾಡಿದ್ದರಾದರೂ ರಾಜಕೀಯ ಒತ್ತಡಗಳಿಂದಾಗಿ ಈ ಸಭೆ ಮುಂದೂಡಲಾಗಿತ್ತು. ಒಂದು ಬಾರಿ ಮಹಾರಾಷ್ಟ್ರ ಹಾಗೂ ಮತ್ತೊಂದು ಬಾರಿ ಆಂಧ್ರ ಪ್ರದೇಶದ ಒತ್ತಡದಿಂದ ಸಭೆ ಮುಂದೂಡಲಾಗಿದೆ. ಈ ವಿಚಾರದಲ್ಲಿ ಆತಂಕ ಪಡುವ ಅಗತ್ಯವಿಲ್ಲ. ಮತ್ತೊಂದು ದಿನಾಂಕ ನಿಗದಿ ಮಾಡಿ ಸಭೆ ಮಾಡೋಣ ಎಂಬುದಾಗಿ ಕೇಂದ್ರ ಸಚಿವರು ಪತ್ರ ಬರೆದಿದ್ದಾರೆ. ಹೀಗಾಗಿ ನಾವು ಯೋಜನೆ ಜಾರಿಗಾಗಿ ಸಿದ್ಧತೆ ಮಾಡಿಕೊಳ್ಳುತ್ತಿದ್ದೇವೆ ಎಂದು ಹೇಳಿದರು.

ಮಹಾರಾಷ್ಟ್ರ ವಿರುದ್ಧ ಪ್ರತ್ಯೇಕ ಹೋರಾಟ

ಯೋಜನೆ ಸಂಬಂಧ  ನ್ಯಾಯಾಧೀಕರಣದ ತೀರ್ಪು ಹೊರಬಂದಿದೆ. ಈ ವಿಚಾರದಲ್ಲಿ ಮಹಾರಾಷ್ಟ್ರ ಮುಖ್ಯಮಂತ್ರಿಗೆ ಬೇರೆ ಆಯ್ಕೆ ಇಲ್ಲ. ಈ ಹಿಂದೆ ಮಹಾರಾಷ್ಟ್ರ ಈ ಯೋಜನೆಗೆ ಒಪ್ಪಿಗೆ ನೀಡಿತ್ತು. ಸಮುದ್ರಕ್ಕೆ ಸೇರುತ್ತಿರುವ ಹೆಚ್ಚುವರಿ ನೀರನ್ನು ಬಳಸಿಕೊಳ್ಳಲು ನಾವು ಮುಂದಾಗಿದ್ದೇವೆ. ಇನ್ನು ತೆಲಂಗಾಣ ಹಾಗೂ ಆಂಧ್ರಪ್ರದೇಶ ಈ ವಿಚಾರದಲ್ಲಿ ಒಪ್ಪಿಗೆ ನೀಡುವ ವಿಶ್ವಾಸವಿದೆ. ಈ ಯೋಜನೆಯಿಂದ ಎಲ್ಲಾ ರಾಜ್ಯಗಳ ರೈತರಿಗೂ ಪ್ರಯೋಜನವಾಗಲಿದೆ. ಈ ವಿಚಾರದಲ್ಲಿ ಕೇಂದ್ರ ಸರ್ಕಾರ ಅಧಿಸೂಚನೆ ಹೊರಡಿಸುವುದೊಂದೇ ಬಾಕಿ ಇದೆ ಎಂದು ತಿಳಿಸಿದರು.

ಈ ಮಧ್ಯೆ ಮಹಾರಾಷ್ಟ್ರ ಮುಖ್ಯಮಂತ್ರಿಗಳು ಆಲಮಟ್ಟಿ ಅಣೆಕಟ್ಟಿನ ಎತ್ತರ ಹೆಚ್ಚಳವನ್ನು ವಿರೋಧಿಸಿ ಸುಪ್ರೀಂ ಕೋರ್ಟ್ ಮೆಟ್ಟಿಲೇರುವುದಾಗಿ ಹೇಳಿದ್ದಾರೆ. ಈ ವಿಚಾರವಾಗಿ ನಾವು ಪ್ರತ್ಯೇಕವಾಗಿ ಹೋರಾಟ ಮಾಡುತ್ತೇವೆ. ಅದರ ಬಗ್ಗೆ ಸದ್ಯಕ್ಕೆ ಚರ್ಚೆ ಮಾಡುವುದಿಲ್ಲ. ಈಗ ಬಂದಿರುವ ತೀರ್ಪಿನ ಪ್ರಕಾರ ನಮ್ಮ ಪಾಲಿನ ನೀರನ್ನು ಪಡೆಯುವುದು ನಮ್ಮ ಹಕ್ಕು. ನಮ್ಮ ರಾಜ್ಯದ ರೈತರ ಹಿತರಕ್ಷಣೆ ಮಾಡುವುದು ನಮ್ಮ ಕರ್ತವ್ಯವಾಗಿದ್ದು, ಈ ಯೋಜನೆಯಲ್ಲಿ ಭೂಮಿ ಕಳೆದುಕೊಳ್ಳುವ ಸಂತ್ರಸ್ತ ರೈತರನ್ನು ರಕ್ಷಣೆ ಮಾಡಲಾಗುವುದು ಎಂದು ತಿಳಿಸಿದರು.

Tags:    

Similar News