Hampi : ಹಂಪಿಯಲ್ಲಿ ಇಸ್ರೇಲಿ ಮಹಿಳೆ, ಹೋಮ್ ಸ್ಟೇ ಮಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ; ಜತೆಗಾರನ ಕೊಲೆ
ಹಂಪಿಯಿಂದ ಸುಮಾರು 4 ಕಿ.ಮೀ ದೂರದಲ್ಲಿರುವ ಸಣಾಪುರ ಕಾಲುವೆ ಬಳಿ ಗುರುವಾರ ರಾತ್ರಿ 11 ರಿಂದ 11.30 ರ ನಡುವೆ ಈ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.;
ವಿಶ್ವ ವಿಖ್ಯಾತ ಹಂಪಿಯ ಭೇಟಿಗೆ ಬಂದಿದ್ದ 27 ವರ್ಷದ ಇಸ್ರೇಲಿ ಯುವತಿ ಹಾಗೂ ಆಕೆ ತಂಗಿದ್ದ ಹೋಮ್ ಸ್ಟೇಯ 29 ವರ್ಷದ ಮಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆದ ಘಟನೆ ಗುರುವಾರ ರಾತ್ರಿ ನಡೆದಿದೆ. ಮಹಿಳೆಯರೊಂದಿಗಿದ್ದ ಮೂವರು ಪುರುಷರ ಮೇಲೂ ದಾಳಿ ನಡೆದಿದ್ದು ಅವರಲ್ಲಿ ಒಬ್ಬರು ಕೊಲೆಯಾಗಿದ್ದಾರೆ. ಅವರ ಮೃತದೇಹ ತುಂಗಭದ್ರಾ ನದಿಯ ಕಾಲುವೆಯಲ್ಲಿ ಪತ್ತೆಯಾಗಿದೆ. ಇನ್ನಿಬ್ಬರು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಹಂಪಿಯಿಂದ ಸುಮಾರು 4 ಕಿ.ಮೀ ದೂರದಲ್ಲಿರುವ ಸಣಾಪುರ ಹಿನ್ನೀರಿನ ಬಳಿ ಗುರುವಾರ ರಾತ್ರಿ 11 ರಿಂದ 11.30 ರ ನಡುವೆ ಈ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇಸ್ರೇಲಿ ಮಹಿಳೆ ಜತೆ ಅಮೆರಿಕ, ಒಡಿಶಾ ಮತ್ತು ಮಹಾರಾಷ್ಟ್ರದ ಮೂವರು ಪುರುಷರು ಹಾಗೂ ಹೋಮ್ ಸ್ಟೇ ಮಾಲಕಿ ಇದ್ದಳು. ಅವರೆಲ್ಲರೂ ಬಾನಂಗಳವನ್ನು ವೀಕ್ಷಿಸಲು ಹೊರಕ್ಕೆ ಹೋಗಿದ್ದಾಗ ಘಟನೆ ನಡೆದಿದೆ.
ಬೈಕ್ನಲ್ಲಿ ಬಂದಿದ್ದ ಮೂವರು ಗುಂಪು ಅವರ ಬಳಿ ಮೊದಲು ಪೆಟ್ರೋಲ್ ಪಂಪ್ಗೆ ದಾರಿ ಯಾವುದು ಎಂದು ಕೇಳುವ ನಾಟಕವಾಡಿದ್ದರು. ಹೋಮ್ಸ್ಟೇ ಮಾಲಕಿ ಹತ್ತಿರದಲ್ಲಿ ಇಲ್ಲ ಎಂದು ಹೇಳಿದ ತಕ್ಷಣವೇ ದಾಳಿ ಮಾಡಿ ಹಣ ಕೊಡುವಂತೆ ಬೆದರಿಸಲು ಆರಂಭಿಸಿದ್ದರು. ಕನ್ನಡ ಮತ್ತು ತೆಲುಗು ಮಾತನಾಡುತ್ತಿದ್ದ ದುಷ್ಕರ್ಮಿಗಳು ಹಲ್ಲೆ ಮಾಡಲು ಶುರು ಮಾಡಿದರು.
ಮೊದಲಿಗೆ ದುಷ್ಕರ್ಮಿಗಳು ಪುರುಷರನ್ನು ಸಮೀಪದ ಕಾಲುವೆಗೆ ತಳ್ಳಿದ್ದಾರೆ. ಬಳಿಕ ಇಸ್ರೇಲ್ ಯುವತಿ ಹಾಗೂ ಹೋಮ್ ಸ್ಟೇ ಮಾಲಕಿ ಮೇಲೆ ಇಬ್ಬರು ಅತ್ಯಾಚಾರ ಎಸಗಿ ಅಲ್ಲಿಂದ ಪರಾರಿಯಾಗಿದ್ದರು.
ಮಹಾರಾಷ್ಟ್ರದ ಪಂಕಜ್ ಮತ್ತು ಅಮೆರಿಕದ ಡೇನಿಯಲ್ ಎಂಬುವರು ಕಾಲುವೆಯಿಂದ ಈಜಿಕೊಂಡು ಮೇಲೆ ಬಂದಿದ್ದಾರೆ. ಅವರು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಒಡಿಶಾದ ಪ್ರವಾಸಿ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ.
ಆಕಾಶ ನೋಡಲು ಬಂದಿದ್ದರು
ಇಬ್ಬರು ಮಹಿಳೆಯರು, ಮೂವರು ಪುರುಷರು ಸೇರಿ ನಾಲ್ವರು ಹಂಪಿ ಹಾಗೂ ಸುತ್ತಮುತ್ತಲ ಸ್ಥಳಗಳಿಗೆ ಭೇಟಿ ನೀಡಿದ್ದರು. ರಾತ್ರಿ 11.30ಕ್ಕೆ ಅವರು ಖಾಸಗಿ ಹೋಂಸ್ಟೇಯಿಂದ ಹೊರಕ್ಕೆ ಬಂದು ಆಕಾಶದಲ್ಲಿನ ನಕ್ಷತ್ರಗಳನ್ನು ನೋಡಲು ಬಂದಿದ್ದರು. ಬೈಕ್ನಲ್ಲಿ ಬಂದ ಮೂವರು ಯುವಕರು ಮೊದಲಿಗೆ ಪೆಟ್ರೋಲ್ ಕೇಳಿದರು. ಬಳಿಕ ಹಣ ಕೇಳಿದರು. ಈ ವೇಳೆ ಅವರಿಗೆ 20 ರೂಪಾಯಿ ಕೊಟ್ಟಿದ್ದರು. ದುಷ್ಕರ್ಮಿಗಳು 100 ರೂ.ಗೆ ಬೇಡಿಕೆ ಇಟ್ಟು ಹಲ್ಲೆ ಮಾಡಲು ಆರಂಭಿಸಿದರು ಎಂದು ಹಿರಿಯ ಪೊಲೀಸ್ ಅಧಿಕಾರಿ ಲೋಕೇಶ್ ಕುಮಾರ್ ಇಂಡಿಯಾ ಟುಡೇಗೆ ತಿಳಿಸಿದ್ದಾರೆ.
"ನಂತರ ಅವರೆಲ್ಲರೂ ವಾಪಸ್ ಹೋಮ್ಸ್ಟೇಗೆ ಬಂದು ಪೊಲೀಸರಿಗೆ ಮಾಹಿತಿ ನೀಡಿದ್ದರು. ಎಲ್ಲರೂ ತಮ್ಮ ಮೇಲೆ ಲೈಂಗಿಕ ದೌರ್ಜನ್ಯ ನಡೆದಿದೆ ಎಂದು ಹೇಳಿಕೊಂಡಿದ್ದಾರೆ. ಅವರ ವೈದ್ಯಕೀಯ ಪರೀಕ್ಷೆ ನಡೆಸಲಾಗಿದೆ. ದುಷ್ಕರ್ಮಿಗಳು ಸ್ಥಳೀಯರು ಎಂದು ನಂಬಲಾಗಿದೆ,'' ಎಂದು ಲೋಕೇಶ್ ಕುಮಾರ್ ಹೇಳಿದ್ದಾರೆ.
ಪೊಲೀಸರಿಂದ ತನಿಖೆ
ಘಟನೆ ನಡೆದಾಗಿನಿಂದ ಪೊಲೀಸರು, ಅಗ್ನಿಶಾಮಕ ಇಲಾಖೆ ಅಧಿಕಾರಿಗಳು ಮತ್ತು ಡಾಕ್ ಸ್ಕ್ವಾಡ್ಗಳೊಂದಿಗೆ ಕಾಣೆಯಾದ ಪ್ರವಾಸಿಗೆ ಶೋಧ ನಡೆಸಿ ಪತ್ತೆ ಹಚ್ಚಿದ್ದಾರೆ, ದುಷ್ಕರ್ಮಿಗಳನ್ನು ಪತ್ತೆಹಚ್ಚಲು ಮತ್ತೊಂದು ವಿಶೇಷ ಪೊಲೀಸ್ ತಂಡ ಕಾರ್ಯಾಚರಣೆ ಆರಂಭಿಸಿದೆ.
ಭಾರತೀಯ ನ್ಯಾಯ ಸಂಹಿತೆ (ಬಿಎನ್ಎಸ್) ನ ಅನೇಕ ವಿಭಾಗಗಳ ಅಡಿಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ. ಇವುಗಳಲ್ಲಿ ಸೆಕ್ಷನ್ 309 (6) (ಸುಲಿಗೆ ಕಳ್ಳತನ), 311 (ಸಾವು ಅಥವಾ ಗಂಭೀರ ಗಾಯವನ್ನು ಉಂಟುಮಾಡುವ ಉದ್ದೇಶದಿಂದ ದರೋಡೆ), 70 (1) (ಸಾಮೂಹಿಕ ಅತ್ಯಾಚಾರ) ಮತ್ತು 109 (ಕೊಲೆ ಯತ್ನ) ಸೇರಿವೆ.