ಪದಚ್ಯುತಿ ವಿರುದ್ಧ ಸಿದ್ದರಾಮಯ್ಯಅವರಿಂದ 'ಹೊಸ ಪಕ್ಷ'ದ ಬ್ರಹ್ಮಾಸ್ತ್ರ?
'ದ ಫೆಡರಲ್ ಕರ್ನಾಟಕ'ಕ್ಕೆ ನೀಡಿದ ವಿಶೇಷ ಸಂದರ್ಶನದಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯನವರ ಮುಂದಿನ ರಾಜಕೀಯ ನಡೆ ಮತ್ತು ಅವರ ಬೆಂಬಲಿಗರ ರಹಸ್ಯ ಸಿದ್ಧತೆಗಳ ಕುರಿತು ಹಲವು ಗಂಭೀರ ವಿಚಾರಗಳನ್ನು ಹಂಚಿಕೊಂಡಿದ್ದಾರೆ
ಮುಖ್ಯಮಂತ್ರಿ ಸಿದ್ದರಾಮಯ್ಯ
ರಾಜ್ಯ ಕಾಂಗ್ರೆಸ್ ಸರ್ಕಾರವು ತನ್ನ ಅಧಿಕಾರದ ಅರ್ಧದ ಅವಧಿ ಪೂರೈಸುತ್ತಿರುವ ಹೊತ್ತಿನಲ್ಲೇ, ಮುಖ್ಯಮಂತ್ರಿ ಕುರ್ಚಿಯ ಬದಲಾವಣೆಯ ಚರ್ಚೆಗಳು ಮತ್ತೆ ಕಾವು ಪಡೆದುಕೊಂಡಿವೆ. ಒಂದು ವೇಳೆ, ಅಧಿಕಾರ ಹಂಚಿಕೆಯ ಸೂತ್ರದಂತೆ ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಿದರೆ, ಅವರ ಬೆಂಬಲಿಗರು 'ಹೊಸ ಪ್ರಾದೇಶಿಕ ಪಕ್ಷ' ಕಟ್ಟಲು ಸಿದ್ಧತೆ ನಡೆಸಿದ್ದಾರೆ ಎಂಬ ಮಾಹಿತಿಯನ್ನು ಒಂದು ಕಾಲದಲ್ಲಿ ಸಿದ್ದರಾಮಯ್ಯನವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದ ಆದರೆ, ಈಗ ಸಿದ್ದರಾಮಯ್ಯ ವಿರೋಧಿ ರಾಜಕಾರಣ ನಡೆಸುತ್ತಿರುವ, ಹಿರಿಯ ರಾಜಕಾರಣಿ ಹಾಗೂ ಮಾಜಿ ಸಚಿವ ಹೆಚ್. ವಿಶ್ವನಾಥ್ ಬಹಿರಂಗಪಡಿಸಿದ್ದಾರೆ.
'ದ ಫೆಡರಲ್ ಕರ್ನಾಟಕ'ಕ್ಕೆ ನೀಡಿದ ವಿಶೇಷ ಸಂದರ್ಶನದಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯನವರ ಮುಂದಿನ ರಾಜಕೀಯ ನಡೆ ಮತ್ತು ಅವರ ಬೆಂಬಲಿಗರ ರಹಸ್ಯ ಸಿದ್ಧತೆಗಳ ಕುರಿತು ಹಲವು ಗಂಭೀರ ವಿಚಾರಗಳನ್ನು ಹಂಚಿಕೊಂಡಿದ್ದಾರೆ.
'ಹೊಸ ಪಕ್ಷ'ದ ತೆರೆಮರೆಯ ಚಟುವಟಿಕೆ
"ಮುಖ್ಯಮಂತ್ರಿ ಸ್ಥಾನ ಬದಲಾವಣೆ ಬಗ್ಗೆ ಕಾಂಗ್ರೆಸ್ ಹೈಕಮಾಂಡ್ ಮಟ್ಟದಲ್ಲಿ ಒಪ್ಪಂದವಾಗಿದೆ, ಇದು ಎಲ್ಲರಿಗೂ ತಿಳಿದಿರುವ ಸತ್ಯ. ಸಿದ್ದರಾಮಯ್ಯ ಅವರು ಸಿಎಂ ಸ್ಥಾನವನ್ನು ಬಿಟ್ಟುಕೊಡಲೇಬೇಕಾಗುತ್ತದೆ. ಆದರೆ, ಅವರ ಬೆಂಬಲಿಗರಿಗೆ ಸಿದ್ದರಾಮಯ್ಯನವರ ನೆರಳು ಮತ್ತು ನಾಯಕತ್ವ ಬೇಕೇಬೇಕು. ಹೀಗಾಗಿ, ಒಂದು ವೇಳೆ ಸಿಎಂ ಸ್ಥಾನದಿಂದ ಕೆಳಗಿಳಿಯುವ ಪರಿಸ್ಥಿತಿ ಬಂದರೆ, ಹೊಸ ಪಕ್ಷ ಕಟ್ಟುವ ಬಗ್ಗೆ ಅವರ ಬೆಂಬಲಿಗರು ಗಂಭೀರವಾಗಿ ಯೋಚಿಸಿದ್ದಾರೆ," ಎಂದು ವಿಶ್ವನಾಥ್ ಹೇಳಿದ್ದಾರೆ.
"ಈ ಕುರಿತು ಈಗಾಗಲೇ ಹಲವು ಸುತ್ತಿನ ಚರ್ಚೆಗಳು ನಡೆದಿವೆ. ಸ್ವತಃ ಸಿದ್ದರಾಮಯ್ಯ ಅವರೊಂದಿಗೂ ಅವರ ಬೆಂಬಲಿಗರು ಸಮಾಲೋಚನೆ ನಡೆಸಿದ್ದಾರೆ. ನನಗೂ ರಾಜಕೀಯದಲ್ಲಿ ಎಲ್ಲಾ ಕಡೆ ಸ್ನೇಹಿತರಿದ್ದಾರೆ, ಅವರಿಂದ ನನಗೆ ಈ ಬಗ್ಗೆ ಖಚಿತ ಮಾಹಿತಿ ಬಂದಿದೆ. ಹೊಸ ಪಕ್ಷ ಕಟ್ಟುವುದು ಸುಲಭದ ಮಾತಲ್ಲ, ಆದರೆ ಅದಕ್ಕೆ ಬೇಕಾದ ಸಂಪನ್ಮೂಲ ಮತ್ತು ಶಕ್ತಿ ಅವರ ಬಳಿ ಇದೆ," ಎಂದು ವಿಶ್ವನಾಥ್ ಸ್ಪಷ್ಟಪಡಿಸಿದ್ದಾರೆ.
ಕಾಂಗ್ರೆಸ್‌ಗೆ ಬಾಗಿಲು ಹಾಕಿ ಹೋಗುತ್ತಾರೆ
ಸಿದ್ದರಾಮಯ್ಯನವರ ಕಾರ್ಯವೈಖರಿಯನ್ನು ಟೀಕಿಸಿದ ವಿಶ್ವನಾಥ್, "ಸಿದ್ದರಾಮಯ್ಯ ಅವರು ಈಗ ಮೊದಲಿನ ಸಮಾಜವಾದಿಯಾಗಿ ಉಳಿದಿಲ್ಲ. ಕಾಂಗ್ರೆಸ್ ಹೈಕಮಾಂಡ್ ಕೂಡ ಈಗ ಮೊದಲಿನಷ್ಟು ಗಟ್ಟಿಯಾಗಿಲ್ಲ, ಅದು ವೀಕ್ ಆಗಿದೆ. ಈ ಅವಕಾಶವನ್ನು ಬಳಸಿಕೊಂಡು, ಸಿದ್ದರಾಮಯ್ಯನವರು ಕಾಂಗ್ರೆಸ್‌ಗೆ ಬಾಗಿಲು ಹಾಕಿ ಹೊರನಡೆಯುವ ಸಾಧ್ಯತೆ ಇದೆ," ಎಂದು ಭವಿಷ್ಯ ನುಡಿದರು. "ನಮ್ಮಂತಹವರು ಅವರನ್ನು ಕಷ್ಟಪಟ್ಟು ಕಾಂಗ್ರೆಸ್‌ಗೆ ಸೇರಿಸಿದೆವು. ಕಾಂಗ್ರೆಸ್ ಪಕ್ಷ ಅವರನ್ನು ಎರಡು ಬಾರಿ ಮುಖ್ಯಮಂತ್ರಿ, ವಿರೋಧ ಪಕ್ಷದ ನಾಯಕನನ್ನಾಗಿ ಮಾಡಿದೆ. ಇನ್ನೇನು ಬೇಕು? ಒಪ್ಪಂದದ ಪ್ರಕಾರ ಅವರು ಡಿ.ಕೆ. ಶಿವಕುಮಾರ್‌ಗೆ ಮುಖ್ಯಮಂತ್ರಿ ಸ್ಥಾನ ಬಿಟ್ಟುಕೊಡಬೇಕು. ಆದರೆ, ಮುಂದೇನು ಮಾಡುತ್ತಾರೆ ಎಂಬುದನ್ನು ಕಾದು ನೋಡಬೇಕು," ಎಂದು ಅವರು ಹೇಳಿದರು.
ಕುಟುಂಬ ರಾಜಕಾರಣದ ಆರೋಪ
"ದೇವೇಗೌಡರ ಕುಟುಂಬ ರಾಜಕಾರಣದ ಬಗ್ಗೆ ಸದಾ ಟೀಕಿಸುತ್ತಿದ್ದ ಸಿದ್ದರಾಮಯ್ಯ, ಈಗ ತಾವೇನು ಮಾಡುತ್ತಿದ್ದಾರೆ? ತಮ್ಮ ಮೊಮ್ಮಗನಿಗೂ ರಾಜಕೀಯ ಭವಿಷ್ಯ ರೂಪಿಸಲು ಕ್ಷೇತ್ರವನ್ನು ನಿಗದಿ ಮಾಡುತ್ತಿದ್ದಾರೆ. ಇದು ಯಾವ ಸೀಮೆಯ ಸಮಾಜವಾದ?" ಎಂದು ವಿಶ್ವನಾಥ್ ತೀಕ್ಷ್ಣವಾಗಿ ಪ್ರಶ್ನಿಸಿದ್ದಾರೆ.
ಹೆಚ್. ವಿಶ್ವನಾಥ್ ಅವರ ಈ ಹೇಳಿಕೆಗಳು, ಕರ್ನಾಟಕ ಕಾಂಗ್ರೆಸ್‌ನೊಳಗಿನ ಅಧಿಕಾರಕ್ಕಾಗಿ ನಡೆಯುತ್ತಿರುವ ಮುಸುಕಿನ ಗುದ್ದಾಟಕ್ಕೆ ಹೊಸ ಆಯಾಮವನ್ನು ನೀಡಿದೆ. ಮುಖ್ಯಮಂತ್ರಿ ಬದಲಾವಣೆಯ ಮಾತುಗಳು ಕೇಳಿಬರುತ್ತಿರುವ ಈ ಸಂದರ್ಭದಲ್ಲಿ, 'ಹೊಸ ಪಕ್ಷ'ದ ಬಾಂಬ್ ಸಿಡಿಸಿರುವ ವಿಶ್ವನಾಥ್, ರಾಜ್ಯ ರಾಜಕಾರಣದಲ್ಲಿ ಹೊಸ ಬಿರುಗಾಳಿ ಎಬ್ಬಿಸಿದ್ದಾರೆ.
ವಿಶ್ವನಾಥ್ ಅವರ ಜತೆ ನಡೆಸಿದ ಸಂದರ್ಶನವನ್ನ ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ ವೀಕ್ಷಿಸಬಹುದು