ಇ-ಆಟೋಗಳಿಗೆ ಮಂಗಳೂರಿನಲ್ಲೇಕೆ ವಿರೋಧ? ಪರವಾನಗಿ ಲಾಬಿಯಿಂದ ರಿಕ್ಷಾ ಚಾಲಕರು ಹೈರಾಣು?

ಕೆಲವರು ಸ್ವಯಂ ಉದ್ಯೋಗ ನಡೆಸುವ ಹೆಸರಿನಲ್ಲಿ ಆಟೋ ಖರೀದಿಸುತ್ತಾರೆ. ವಾಸ್ತವವಾಗಿ ಹತ್ತಾರು ಆಟೋರಿಕ್ಷಾಗಳ ಪರವಾನಗಿಗಳು ಒಬ್ಬರೋ ಇಬ್ಬರ ಕೈಯಲ್ಲಿ ಇರುತ್ತದೆ. ಇತ್ತೀಚೆಗೆ ಬಂದ ಎಲೆಕ್ಟ್ರಿಕ್‌ ಆಟೋರಿಕ್ಷಾಗಳನ್ನು ಖರೀದಿಸಿದವರು ಉಳ್ಳವರೇ ಆಗಿದ್ದಾರೆ. ಇದರಲ್ಲಿ ಸರ್ಕಾರಿ ನೌಕರರು, ಅಧಿಕಾರಿಗಳೂ ಇದ್ದಾರೆ!

Update: 2024-09-01 04:48 GMT

ಮಂಗಳೂರಿನಲ್ಲಿ ವಿದ್ಯುತ್‌ ಆಟೋ ರಿಕ್ಷಾಗಳ (electric auto rickshaw) ವಿರುದ್ಧ ಎಲ್‌ಪಿಜಿ/ ಸಿಎನ್‌ಜಿ ಚಾಲಿತ ಆಟೋ ಚಾಲಕರ ಸಮಾನ ಮನಸ್ಕ ಸಂಘಟನೆಗಳ ಪ್ರತಿಭಟನೆ ಜೋರಾಗಿದೆ. ಒಂದೆಡೆ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್‌ ಅವರು ಸೆ. 5ರಂದು ಮತ್ತೊಮ್ಮೆ ಈ ಸಂಘಟನೆಗಳ ಸಭೆ ಕರೆದು ನಿರ್ಣಯ ತೆಗೆದುಕೊಳ್ಳುವುದಾಗಿ ಹೇಳಿದ್ದಾರೆ.

ಹಾಗಿದ್ದರೆ ಎಲ್‌ಪಿಜಿ/ ಸಿಎನ್‌ಜಿ ಚಾಲಿತ ಆಟೋ ರಿಕ್ಷಾದವರು ಎಲೆಕ್ಟ್ರಿಕ್‌ ವಾಹನಗಳ ವಿರುದ್ಧ ತಿರುಗಿ ಬೀಳಲು ಕಾರಣವೇನು?

ಆಟೋ ರಿಕ್ಷಾ ಪರವಾನಗಿ ವ್ಯವಸ್ಥೆ ಮತ್ತು ಅದರಲ್ಲಿರುವ ನಿಯಮಗಳು, ಅದರೊಳಗಿನ ಲಾಬಿ ಇತ್ಯಾದಿಗಳು ಹಾಲಿ ರಿಕ್ಷಾ ಚಾಲಕ- ಮಾಲೀಕರನ್ನು ಹೈರಾಣಾಗಿಸಿವೆ. ಮೇಲ್ನೋಟಕ್ಕೆ ವಿದ್ಯುತ್‌ ಆಟೋರಿಕ್ಷಾಗಳ ವಿರುದ್ಧ ಸಮರದಂತಿದ್ದರೂ ಒಳಹೋದಂತೆಲ್ಲಾ ಆಟೋ ರಿಕ್ಷಾದವರಿಗಿರುವ ನಿಲ್ದಾಣಗಳ ಸಮಸ್ಯೆ, ವಲಯವಾರು ಸಂಚಾರದ ಇತಿಮಿತಿಗಳು, ಪರವಾನಗಿ, ತೆರಿಗೆ, ನಿಯಮಗಳ ಕಿರಿಕಿರಿಗಳು ಆಕ್ರೋಶದ ರೂಪದಲ್ಲಿ ವ್ಯಕ್ತವಾಗಿವೆ.

ವಿದ್ಯುತ್‌ ಆಟೋರಿಕ್ಷಾಗಳಿಗೆ ಪರವಾನಗಿ, ಶುಲ್ಕ ಇತ್ಯಾದಿಗಳ ಹಂಗಿಲ್ಲದಿರುವುದು, ವಲಯವಾರು ನಿರ್ಬಂಧಗಳು ಇಲ್ಲದಿರುವುದು ಐಸಿಇ (ಎಲ್‌ಪಿಜಿ/ ಪೆಟ್ರೋಲ್‌/ ಸಿಎನ್‌ಜಿ) ಚಾಲಿತ ಆಟೋರಿಕ್ಷಾದವರ ಪಾಲಿಗೆ ಒಂದೆಡೆ ತೀವ್ರ ಪೈಪೋಟಿಯನ್ನು ಒಡ್ಡಿದೆ. ವಿದ್ಯುತ್‌ ಚಾಲಿತ ಆಟೋರಿಕ್ಷಾಗಳಿಗೆ ದೇಶದಲ್ಲಿ ಏಕರೂಪದ ನಿಯಮ ತಂದಿರುವುದು, ಕೇಂದ್ರ ಸರ್ಕಾರದ ಉದಾರ ನೀತಿ ಮತ್ತು ವಾಹನ ಕಂಪನಿಗಳು ಕಾನೂನು ಬೆಂಬಲವನ್ನೂ ನೀಡುತ್ತಿರುವುದು, ಅನಿಲ ಚಾಲಿತ ಆಟೋರಿಕ್ಷಾದವರಿಗೆ ಆತಂಕ ತಂದೊಡ್ಡಿದೆ.

ಮಂಗಳೂರಿಗೇಕೆ ಹೊಸ ನಿಯಮ?

ದಕ್ಷಿಣ ಕನ್ನಡದಲ್ಲಿ ಸಾರಿಗೆ ಕ್ಷೇತ್ರದಲ್ಲಿರುವ ನಿಯಮಾವಳಿಗಳ ತಾರತಮ್ಯಗಳು ಇಂದು ನಿನ್ನೆಯದಲ್ಲ. ಮಂಗಳೂರಿನಲ್ಲಿ‌ ಖಾಸಗಿ ನಗರ ಸಾರಿಗೆ ಬಸ್‌ಗಳು ಸಂಚರಿಸಲು ಆರಂಭಿಸಿದವು. ಸುಮಾರು ಒಂದೂವರೆ ದಶಕದ ಹಿಂದೆಯೇ ಆ ಬಸ್‌ಗಳಿಗೆ ಹೊಸ ಪರವಾನಗಿಯನ್ನು ನಿಲ್ಲಿಸಲಾಯಿತು. ಆ ಬಳಿಕ ಸರ್ವೀಸ್‌ ಮತ್ತು ಎಕ್ಸ್‌ಪ್ರೆಸ್‌ ಬಸ್‌ಗಳಿಗೆ ಹೊಸ ಪರ್ಮಿಟ್‌ ನೀಡುವುದನ್ನು ಸ್ಥಗಿತಗೊಳಿಸಲಾಯಿತು. ಖಾಸಗಿಯವರಿಗೆ ಕಡಿವಾಣ ಹಾಕಲು ಮುಂದಾದ ಸಾರಿಗೆ ಇಲಾಖೆ, ಅದೇ ಮಾರ್ಗಗಳಲ್ಲಿ ಕೆಎಸ್‌ಆರ್‌ಟಿಸಿ ಬಸ್‌ಗಳಿಗೆ ಪರವಾನಗಿ ನೀಡಿತು. ಯಥೇಚ್ಛವಾಗಿ ಖಾಸಗಿ ಬಸ್‌ಗಳು ಸಂಚರಿಸುವ ಮಾರ್ಗಗಳಲ್ಲಿ ಕೆಎಸ್‌ಆರ್‌ಟಿಸಿ ಬಸ್‌ಗಳು ಪೈಪೋಟಿ ನೀಡಿದವೇ ವಿನಃ ಬಸ್‌ ಸಂಚಾರ ಇಲ್ಲದ ಹೊಸ ಮಾರ್ಗಗಳಿಗೆ ಪ್ರವೇಶಿಸಲೇ ಇಲ್ಲ. ಮುಂದೆ ಆಟೋರಿಕ್ಷಾಗಳ ಸರದಿ.

ಕರ್ನಾಟಕ ರಕ್ಷಣಾ ವೇದಿಕೆಯ ಆಟೋರಿಕ್ಷಾ ಘಟಕದ ಮುಖಂಡರಾದ ಅರುಣ್‌ ಕುಮಾರ್‌ ಆಟೋ ರಿಕ್ಷಾ ಕ್ಷೇತ್ರದವರ ಆಕ್ರೋಶದ ಹಿಂದಿನ ಕಾರಣ ತೆರೆದಿಟ್ಟರು.

ʼಮಂಗಳೂರು ನಗರದಲ್ಲಿ ಸುಮಾರು ೮ ಸಾವಿರ ಅನಿಲ/ ಪೆಟ್ರೋಲ್‌ ಚಾಲಿತ ಆಟೋರಿಕ್ಷಾಗಳಿವೆ. ಆದರೆ, ಇವರಿಗೂ ಹೊಸ ಪರವಾನಗಿ ಸಿಗುತ್ತಿಲ್ಲ. ಏಕೆಂದರೆ ವಲಯ 1ಕ್ಕೆ (ಮಂಗಳೂರು ತಾಲೂಕು ವ್ಯಾಪ್ತಿ) ನೀಡುವ ಪರವಾನಗಿಯನ್ನು ಸ್ಥಗಿತಗೊಳಿಸಿದ್ದಾರೆ. ಹಾಗಾಗಿ ಯಾರಾದರೂ ಹೊಸತಾಗಿ ಆಟೋರಿಕ್ಷಾ ಹಾಕಬೇಕೆಂದರೆ ಹಾಲಿ ಇರುವ ಪರವಾನಗಿಯವರಿಂದಲೇ ಪರವಾನಗಿ ʼಕೊಂಡುʼ ತಮ್ಮ ರಿಕ್ಷಾವನ್ನು ಅದರ ಅಡಿ ಓಡಿಸಬೇಕಾಗುತ್ತದೆ. ಇದು ವ್ಯಾಪಕವಾಗಿ ಪರವಾನಗಿ ಕಾಳಸಂತೆ ವ್ಯವಹಾರಕ್ಕೆ ಕಾರಣವಾಗಿದೆ. ಲಕ್ಷಾಂತರ ರೂಪಾಯಿ ಕೊಟ್ಟು ಪರವಾನಗಿ ಪಡೆಯಬೇಕಾದ ಪರಿಸ್ಥಿತಿ ಇದೆ. ಇಷ್ಟೆಲ್ಲಾ ಕಷ್ಟಪಟ್ಟು ದುಡಿಯುವ ನಮಗೆ ಹತ್ತಾರು ನಿಯಮಗಳು ಅನ್ವಯವಾಗುತ್ತದೆ. ಆದರೆ, ಸ್ವಯಂ ಉದ್ಯೋಗದ ಹೆಸರಿನಲ್ಲಿ ವಿದ್ಯುತ್‌ ಆಟೋರಿಕ್ಷಾ ಓಡಿಸುವವರಿಗೆ ಪರವಾನಗಿ, ಇತರ ಶುಲ್ಕಗಳ ಹಂಗು ಇಲ್ಲ. ಹಾಗೆ ಮಾಡದೇ ಎಲ್ಲರಿಗೂ ಏಕರೂಪದ ನಿಯಮ ಅನ್ವಯವಾಗಲಿ. ಅದಕ್ಕಾಗಿ ನಮ್ಮ ಹೋರಾಟವೇ ವಿನಃ ನಾವೇನೂ ವಿದ್ಯತ್‌ ಆಟೋರಿಕ್ಷಾಗಳ ವಿರೋಧಿಗಳಲ್ಲʼ ಎಂದರು.

ಪರವಾನಗಿ ವ್ಯವಸ್ಥೆಯಲ್ಲಿರುವ ಕಳ್ಳದಾರಿ

ಇನ್ನೊಬ್ಬ ಆಟೋ ಚಾಲಕರು ಪ್ರತಿಕ್ರಿಯಿಸಿ, ʼಕೆಲವರು ಸ್ವಯಂ ಉದ್ಯೋಗ ನಡೆಸುವ ಹೆಸರಿನಲ್ಲಿ ಆಟೋ ಖರೀದಿಸುತ್ತಾರೆ. ವಾಸ್ತವವಾಗಿ ಹತ್ತಾರು ಆಟೋರಿಕ್ಷಾಗಳ ಪರವಾನಗಿಗಳು ಒಬ್ಬರೋ ಇಬ್ಬರ ಕೈಯಲ್ಲಿ ಇರುತ್ತದೆ. ಇತ್ತೀಚೆಗೆ ಬಂದ ಎಲೆಕ್ಟ್ರಿಕ್‌ ಆಟೋರಿಕ್ಷಾಗಳನ್ನು ಖರೀದಿಸಿದವರು ಉಳ್ಳವರೇ ಆಗಿದ್ದಾರೆ. ಇದರಲ್ಲಿ ಸರ್ಕಾರಿ ನೌಕರರು, ಅಧಿಕಾರಿಗಳೂ ಇದ್ದಾರೆ. ಯಾರದೋ ಹೆಸರಿನಲ್ಲಿ ಪರವಾನಗಿ, ಇನ್ಯಾರದೋ ಹೆಸರಿನಲ್ಲಿ ವಾಹನ, ಮತ್ಯಾರೋ ಲಾಭ ಪಡೆಯುವುದು ನಡೆದಿದೆʼ ಎಂದು ಬೇಸರಿಸಿದರು.

ಪರವಾನಗಿ ಮಿತಿಯಿಂದಾದದ್ದೇನು?

ʼಪರವಾನಗಿ ಶುಲ್ಕ ಇರುವುದು 750  ರೂಪಾಯಿ. ಈಗ ಹೊಸ ಪರವಾನಗಿ ಇಲ್ಲದ ಕಾರಣಕ್ಕಾಗಿ ಹಳೇಯ ಪರವಾನಗಿಯನ್ನು ಲಕ್ಷಾಂತರ ರೂಪಾಯಿಗೆ ಮಾರಾಟ ಮಾಡಿದವರೂ ಇದ್ದಾರೆ. ಬೆಂಗಳೂರಿನಲ್ಲಿ 2028ನೇ ಇಸವಿಯವರೆಗೆ ಪರವಾನಗಿ ನೀಡಿಕೆ ಮುಂದುವರಿಸಲಾಗಿದೆ. ಅದೇ ನಿಯಮ ಮಂಗಳೂರು ನಗರಕ್ಕೆ ಬರಬೇಕು. ಪರವಾನಗಿಗೆ ಮುಕ್ತ ವ್ಯವಸ್ಥೆ ಮಾಡಿದರೆ ಕಳ್ಳದಾರಿಗಳನ್ನು ಮುಚ್ಚಬಹುದು ಮತ್ತು ಭ್ರಷ್ಟಾಚಾರವನ್ನು ತಡೆಗಟ್ಟಬಹುದುʼ ಎಂದರು ಆಟೋ ಚಾಲಕ ಸಂತೋಷ್‌.

ʼಸದ್ಯ ನಗರದಲ್ಲಿ ಸುಮಾರು 1500 ವಿದ್ಯುತ್‌ ಆಟೋರಿಕ್ಷಾಗಳಿವೆ. ಒಟ್ಟಾರೆ ಲೆಕ್ಕ ಹಿಡಿದರೂ 9,500 ಆಟೋರಿಕ್ಷಾಗಳು ನಗರದಲ್ಲಿವೆ. ನಗರದ ವ್ಯಾಪ್ತಿಯೂ ಕೇವಲ ಐದಾರು ಕಿಲೋಮೀಟರ್‌ ಒಳಗೇ ಇದೆ. ಇಲ್ಲಿ ಇಷ್ಟೊಂದು ಪ್ರಮಾಣದ ಆಟೋರಿಕ್ಷಾಗಳಿಗೆ ಬೇಕಾದಷ್ಟು ನಿಲ್ದಾಣಗಳು ಇಲ್ಲ. ಸುಮಾರು 500ರಷ್ಟಿದ್ದ ರಿಕ್ಷಾಸ್ಟ್ಯಾಂಡ್‌ಗಳು ಈಗ 170ಕ್ಕೆ ಇಳಿದಿವೆ. ಸ್ಮಾರ್ಟ್‌ಸಿಟಿ, ರಸ್ತೆ ವಿಸ್ತರಣೆ ಮತ್ತಿತರ ಕಾಮಗಾರಿಗಳಿಗಾಗಿ ರಿಕ್ಷಾ ನಿಲ್ದಾಣಗಳನ್ನೆಲ್ಲಾ ಕೆಡವಲಾಗಿದೆ. ಈಗ ಇ- ಆಟೋಗಳಿಗೂ ಅವಕಾಶ ನೀಡಿದರೆ ಸಂಚಾರ ವ್ಯವಸ್ಥೆಯ ಪಾಡೇನುʼ ಎಂಬುದು ರಿಕ್ಷಾ ಚಾಲಕರ ಪ್ರಶ್ನೆ.

ʼದೇಶದಾದ್ಯಂತ ಇರುವ ನಿಯಮದ ಪ್ರಕಾರವೇ ನಾನೂ ಇಲ್ಲಿ ಆಟೋ ಓಡಿಸುತ್ತಿದ್ದೇನೆ. ದೇಶದಲ್ಲಿ ವಿದ್ಯುತ್‌ ವಾಹನಗಳಿಗೆ ಸರ್ಕಾರವೇ ಉತ್ತೇಜನ ನೀಡುತ್ತಿದೆ. ಪರಿಸರ ಸಂರಕ್ಷಣೆ, ಪ್ರಯಾಣಿಕರ ಅನುಕೂಲದ ದೃಷ್ಟಿಯಿಂದ ವಿದ್ಯುತ್‌ ವಾಹನಗಳು ಒಳ್ಳೆಯದೇ. ನಾವೂ ಹೊಟ್ಟೆಪಾಡಿಗೇ ಆಟೋರಿಕ್ಷಾ ಓಡಿಸುತ್ತಿದ್ದೇವೆ. ಹಾಗೆಂದು ನಾವು ಯಾರಿಗೂ ಪೈಪೋಟಿ ನೀಡುತ್ತಿಲ್ಲ. ಆದರೂ ಆಕ್ಷೇಪವೇಕೆʼ ಎಂದು ಪ್ರಶ್ನಿಸಿದರು ವಿದ್ಯುತ್‌ ಆಟೋರಿಕ್ಷಾ ಚಾಲಕ ರಾಜೇಶ್‌.

ʼಒಂದು ವೇಳೆ ಪರವಾನಗಿ ವ್ಯವಸ್ಥೆ ಜಾರಿಗೆ ತಂದರೆ ಅದನ್ನೂ ಮುಕ್ತವಾಗಿ ಜಾರಿ ಮಾಡಲಿ. ಕಾಳಸಂತೆಗೆ ಕಡಿವಾಣ ಹಾಕಲಿ. ಸರ್ಕಾರದ ನಿಯಮ ಪಾಲಿಸಲು ನಾವೂ ಬದ್ಧರಿದ್ದೇವೆ. ಹಾಗೆಂದು ನಮ್ಮ ಸಂಚಾರಕ್ಕೆ ತಡೆಯೊಡ್ಡುವುದು ಯಾವ ನ್ಯಾಯ? ನಮಗೆ ದುಡಿಮೆಯ ಹಕ್ಕಿಲ್ಲವೇʼ ಎಂದು ಪ್ರಶ್ನಿಸಿದರು ರಾಜೇಶ್‌.

ಜಿಲ್ಲಾಧಿಕಾರಿ ಹೇಳುವುದೇನು?

ವಿದ್ಯುತ್‌ ಆಟೋಗಳ ಸಂಚಾರ ಸಂಬಂಧಿಸಿ ಯಾರು ಕೂಡಾ ಗೊಂದಲ ಸೃಷ್ಟಿಸಬಾರದು. ಅವುಗಳ ಸಂಚಾರಕ್ಕೆ ತಡೆಯೊಡ್ಡಬಾರದು. ದೇಶಾದ್ಯಂತ ಇ ಆಟೋಗಳಿಗೆ ಇರುವ ನಿಯಮಗಳನ್ನೇ ದಕ್ಷಿಣ ಕನ್ನಡದಲ್ಲಿ ಜಾರಿಗೆ ತರಲಾಗಿದೆಯೇ ವಿನಃ ಜಿಲ್ಲೆಯಲ್ಲಿ ಯಾವುದೇ ಹೊಸ ಆದೇಶ ಹೊರಡಿಸಿಲ್ಲ ಎಂದು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್‌ ಸ್ಪಷ್ಟಪಡಿಸಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಲು ಮಂಗಳೂರು ಪ್ರಾದೇಶಿಕ ಸಾರಿಗೆ ಅಧಿಕಾರಿ ಶ್ರೀಧರ್‌ ಕೆ. ಮಲ್ಲದ್‌ ಅವರನ್ನು ದಿ ಫೆಡರಲ್‌ ಕರ್ನಾಟಕ ಸಂಪರ್ಕಿಸಿದರೂ ಅವರು ಕರೆ ಸ್ವೀಕರಿಸಲಿಲ್ಲ.

Tags:    

Similar News