ಬಿಜೆಪಿ ಸೇರಲು ಪಕ್ಷದ ವರಿಷ್ಠರಿಂದ ಆಹ್ವಾನ ಬಂದಿದೆ: ಕೆ ಎಸ್ ಈಶ್ವರಪ್ಪ
ಬಿಜೆಪಿ ಸೇರಲು ತಮಗೆ ಪಕ್ಷದ ವರಿಷ್ಠರಿಂದ ಆಹ್ವಾನ ಬಂದಿದೆ. ಆದರೆ, ಈ ಬಗ್ಗೆ ಇನ್ನೂ ಯಾವುದೇ ತೀರ್ಮಾನ ಕೈಗೊಂಡಿಲ್ಲ ಎಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ತಿಳಿಸಿದ್ದಾರೆ.
ಕಳೆದ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಪಕ್ಷದ ವಿರುದ್ಧ ಬಂಡಾಯ ಎದ್ದಿದ್ದ ಅವರನ್ನು ಪಕ್ಷದಿಂದ ಉಚ್ಛಾಟಿಸಲಾಗಿತ್ತು.
ಸೋಮವಾರ ಶಿವಮೊಗ್ಗದಲ್ಲಿ ನಡೆದ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ʻʻಬಿಜೆಪಿ ಸೇರಲು ನನಗೆ ಪಕ್ಷದ ವರಿಷ್ಟರಿಂದ ಆಹ್ವಾನ ಬಂದಿದೆ. ಆದರೆ, ಈ ಬಗ್ಗೆ ಇನ್ನೂ ಯಾವುದೇ ತೀರ್ಮಾನ ಕೈಗೊಂಡಿಲ್ಲ. ಈ ಬಗ್ಗೆ ಇನ್ನಷ್ಟೇ ಮಾತುಕತೆ ನಡೆಯಬೇಕಿದೆ. ಆದರೆ, ಬಿಜೆಪಿ ಸೇರುವುದಂತೂ ಖಚಿತ. ಆದರೆ, ಯಾವಾಗ ಎಂಬುದು ಇನ್ನಷ್ಟೇ ನಿರ್ಧಾರವಾಗಬೇಕಿದೆʼʼ ಎಂದು ತಿಳಿಸಿದ್ದಾರೆ.
ಕಳೆದ ಲೋಕಸಭಾ ಚುನಾವಣೆಯಲ್ಲಿ ಹಾವೇರಿಯಿಂದ ತಮ್ಮ ಪುತ್ರನಿಗೆ ಟಿಕೆಟ್ ಸಿಗದಿದ್ದಕ್ಕೆ ಆಕ್ರೋಶಗೊಂಡು ಅವರು ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು. ಈ ಹಿನ್ನೆಲೆಯಲ್ಲಿ ಬಿಜೆಪಿ ಅವರನ್ನು 6 ವರ್ಷಗಳ ಕಾಲ ಪಕ್ಷದಿಂದ ಉಚ್ಚಾಟಿಸಿತ್ತು. ಚುನಾವಣೆಯಲ್ಲಿ ಅವರು ಬಿಜೆಪಿಯ ಬಿ. ವೈ.ರಾಘವೇಂದ್ರ ವಿರುದ್ಧ ಠೇವಣಿ ಕಳೆದುಕೊಂಡಿದ್ದರು.
ಈಶ್ವರಪ್ಪ ಅವರು, ಉಪಮುಖ್ಯಮಂತ್ರಿ, ಕರ್ನಾಟಕ ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕ, ಬಿಜೆಪಿ ರಾಜ್ಯಾಧ್ಯಕ್ಷ ಸೇರಿದಂತೆ ಹಲವು ಪ್ರಮುಖ ಹುದ್ದೆಗಳನ್ನು ನಿಭಾಯಿಸಿದ್ದರು. ಆದರೆ, ಲೋಕಸಭೆ ಚುನಾವಣೆಯಲ್ಲಿ ಹಾವೇರಿ ಲೋಕಸಭಾ ಕ್ಷೇತ್ರದಿಂದ ತಮ್ಮ ಪುತ್ರ ಕೆ.ಇ.ಕಾಂತೇಶ್‌ಗೆ ಪಕ್ಷದಿಂದ ಸ್ಪರ್ಧಿಸಲು ಟಿಕೆಟ್ ನಿರಾಕರಿಸಿದ್ದರಿಂದ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಹಾಗೂ ಅವರ ಪುತ್ರ, ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಮೇಲೆ ಅಸಮಾಧಾನಗೊಂಡಿದ್ದರು.
ಬಿ ಎಸ್ ಯಡಿಯೂರಪ್ಪ ಮತ್ತು ಅವರ ಇಬ್ಬರು ಮಕ್ಕಳಾದ ರಾಘವೇಂದ್ರ ಮತ್ತು ವಿಜಯೇಂದ್ರ ಅವರು ಬಿಜೆಪಿಯನ್ನು 'ವಂಶಪಾರಂಪರ್ಯ ಪಕ್ಷ'ವನ್ನಾಗಿ ಮಾಡಿದ್ದಾರೆ ಎಂದು ಈಶ್ವರಪ್ಪ ವಾಗ್ದಾಳಿ ನಡೆಸಿದ್ದರು.