BJP Infighting | ಉಲ್ಬಣಿಸಿದ ಬಿಜೆಪಿ ಆಂತರಿಕ ಕಲಹ; ಯತ್ನಾಳ್‌ ಹಾದಿಯಲ್ಲಿ ಹಲವು ನಾಯಕರು

ಬಿಜೆಪಿ ಕೋರ್ ಕಮಿಟಿ ಸಭೆಯಲ್ಲಿ ಸಂಡೂರು ಉಪ ಚುನಾವಣೆ ಸೋಲಿನ ಹೊಣೆಗಾರಿಕೆ, ಜಿಲ್ಲಾಧ್ಯಕ್ಷರ ನೇಮಕ ವಿಷಯ ಮತ್ತಿರ ವಿಷಯಗಳು ಕೋರ್‌ ಕಮಿಟಿ ಸಭೆಯಲ್ಲಿ ನಾಯಕರ ನಡುವೆ ವಾಗ್ವಾದಕ್ಕೆ ಕಾರಣವಾಗಿವೆ.;

Update: 2025-01-23 10:04 GMT
ಬಿಜೆಪಿ

ಕರ್ನಾಟಕ ಬಿಜೆಪಿಯಲ್ಲಿ ಅಂತಃಕಲಹ ದಿನದಿಂದ ದಿನಕ್ಕೆ ಭುಗಿಲೇಳುತ್ತಿದೆ. ಶಾಸಕ ಬಸನಗೌಡ ಪಾಟೀಲ ಯತ್ನಾಳ ಹಾಗೂ ಬಿಜೆಪಿ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಬಣದ ಬಹಿರಂಗ ಕಚ್ಚಾಟದಿಂದ ಈಗಾಗಲೇ ಪರಿಸ್ಥಿತಿ ಅಯೋಮಯವಾಗಿದೆ. ಹೀಗಿರುವಾಗಲೇ ಕೋರ್ ಕಮಿಟಿ ಸಭೆಯಲ್ಲೇ ಮತ್ತಷ್ಟು ನಾಯಕರ ಮನಸ್ತಾಪಗಳು ಬಹಿರಂಗಗೊಂಡಿರುವುದು ವರಿಷ್ಠರಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ.

ಜ.21 ರಂದು (ಮಂಗಳವಾರ) ರಾತ್ರಿ ನಡೆದ ಬಿಜೆಪಿ ಕೋರ್ ಕಮಿಟಿ ಸಭೆಯಲ್ಲಿ ಸಂಡೂರು ಉಪ ಚುನಾವಣೆ ಸೋಲಿನ ಕುರಿತ ಚರ್ಚೆ, ಜಿಲ್ಲಾಧ್ಯಕ್ಷರ ನೇಮಕ ವಿಷಯದಲ್ಲಿ ಪಕ್ಷದ ಪ್ರಮುಖರ ಆಕ್ಷೇಪ ವಿಷಯದಲ್ಲಿ ಮತ್ತೊಮ್ಮೆ ನಾಯಕರ ನಡುವಿನ ಅಂತಃಕಲಹ ಬಹಿರಂಗಗೊಂಡಿದೆ.

ಉಸ್ತುವಾರಿ ವಿರುದ್ಧವೇ ವಾಗ್ದಾಳಿ

ಸಂಡೂರು ಚುನಾವಣೆಯಲ್ಲಿ ಶ್ರೀರಾಮುಲು ಸರಿಯಾಗಿ ಕೆಲಸ ಮಾಡಿಲ್ಲ ಎಂಬ ರಾಜ್ಯ ಉಸ್ತುವಾರಿ ರಾಧಾ ಮೋಹನದಾಸ್ ಅಗರವಾಲ್ ಆರೋಪಕ್ಕೆ ಮಾಜಿ ಸಚಿವ ಶ್ರೀರಾಮುಲು ಸಭೆಯಲ್ಲೇ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಉತ್ತರಪ್ರದೇಶದವರಿಗೆ ಇಲ್ಲಿನ ಪರಿಸ್ಥಿತಿ ಅರ್ಥವಾಗುವುದಿಲ್ಲ. ನಾನು ಏನು ಮಾಡಿದ್ದೇನೆ ಎಂಬುದನ್ನು ಕ್ಷೇತ್ರಕ್ಕೆ ಬಂದು ವಿಚಾರಿಸಿ ಎಂದು ತಿರುಗೇಟು ನೀಡಿದ್ದಾರೆ. ಅಲ್ಲದೇ ಬಿಜೆಪಿ ಅಧ್ಯಕ್ಷ ಬಿ.ವೈ. ವಿಜಯೇಂದ್ರ ವಿರುದ್ಧವೂ ಕಿಡಿಕಾರಿದ ಶ್ರೀರಾಮುಲು, ಅಧ್ಯಕ್ಷರಾಗಿರುವ ನೀವು ನನ್ನ ರಕ್ಷಣೆಗೆ ಧಾವಿಸಲಿಲ್ಲ ಏಕೆ ಎಂದು ಪ್ರಶ್ನಿಸಿದ್ದಾರೆ. ನನ್ನ ಅನಿವಾರ್ಯತೆ ಇಲ್ಲವಾದರೆ ಹೇಳಿ, ನಾನು ಪಕ್ಷ ತೊರೆಯುವೆ ಎಂದೂ ಸಭೆಯಲ್ಲಿ ಕಿಡಿಕಾರಿದ್ದಾರೆ. ಉಸ್ತುವಾರಿಯ ಆರೋಪ ಕುರಿತಂತೆ ಪಕ್ಷದ ವರಿಷ್ಠರಿಗೂ ದೂರವಾಣಿ ಕರೆ ಮಾಡಿ ಅಸಮಾಧಾನ ತೋಡಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.

ಜನಾರ್ದನರೆಡ್ಡಿ ಷಡ್ಯಂತ್ರ್ಯ ಆರೋಪ

ಇನ್ನು ರಾಧಾ ಮೋಹನದಾಸ್ ಆರೋಪದ ಹಿಂದೆ ಶಾಸಕ ಜನಾರ್ದನ ರೆಡ್ಡಿ ಷಢ್ಯಂತ್ರ ಅಡಗಿದೆ ಎಂದು ಶ್ರೀರಾಮುಲು ಸಭೆಯಲ್ಲೇ ಆಕ್ರೋಶ ವ್ಯಕ್ತಪಡಿಸಿದ್ದರಿಂದ ರೆಡ್ಡಿ ಹಾಗೂ ಶ್ರೀರಾಮುಲು ನಡುವಿನ ಶೀತಲ ಸಮರ ಬಹಿರಂಗವಾಗಿದೆ.

ನನ್ನನ್ನು ರಾಜಕೀಯವಾಗಿ ಮುಗಿಸಲು ಜನಾರ್ದನ ರೆಡ್ಡಿ ದೆಹಲಿ ವರಿಷ್ಠರಿಗೆ ಇಲ್ಲಸಲ್ಲದ ದೂರು ಹೇಳಿದ್ದಾರೆ. ರೆಡ್ಡಿ ಅವರನ್ನು ಬಿಜೆಪಿಗೆ ಮರಳಿ ಸೇರ್ಪಡೆ ಮಾಡಿಕೊಳ್ಳಲು ನಾನೂ ಕೂಡ ಕಾರಣ. ಈಗ ನನ್ನ ವಿರುದ್ಧವೇ ಸಂಚು ರೂಪಿಸುತ್ತಿದ್ದಾರೆ. ಕೆಲಸ ಮಾಡುವವರಿಗೆ ಇಲ್ಲ ಬೆಲೆ ಇಲ್ಲ ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ.

ಶ್ರೀರಾಮುಲು, ಜನಾರ್ದನ ರೆಡ್ಡಿ, ಅಶ್ವತ್ಥನಾರಾಯಣ ಹಾಗೂ ಆರ್‌.ಅಶೋಕ್‌

ರಾಮುಲು-ರೆಡ್ಡಿ ಮಧ್ಯೆ ವೈಮನಸ್ಸು ಏಕೆ?

ಜನಾರ್ದನ ರೆಡ್ಡಿ ಹಾಗೂ ಶ್ರೀರಾಮುಲು ಒಂದು ಕಾಲದಲ್ಲಿ ಆಪ್ತ ಸ್ನೇಹಿತರು. ವಾಲ್ಮೀಕಿ ಸಮುದಾಯದ ಶ್ರೀರಾಮುಲು ಅವರನ್ನು ರಾಜಕೀಯವಾಗಿ ಬೆಳೆಸಿದ್ದ ಜನಾರ್ದನಾ ರೆಡ್ಡಿ, ಗಣಿ ಹಗರಣದಲ್ಲಿ ಜೈಲು ಪಾಲಾದ ಬಳಿಕ ಶ್ರೀರಾಮುಲು ಅಷ್ಟಾಗಿ ತಲೆಕೆಡಿಸಿಕೊಂಡಿರಲಿಲ್ಲ. ಜಾಮೀನಿನ ಮೇಲೆ ರೆಡ್ಡಿ ಬಿಡುಗಡೆಯಾದ ಬಳಿಕ ಪಕ್ಷಕ್ಕೆ ಬರ ಮಾಡಿಕೊಂಡಿರಲಿಲ್ಲ. ಆಗ ಜನಾರ್ದನಾ ರೆಡ್ಡಿ ಅವರು ಕರ್ನಾಟಕ ರಾಜ್ಯ ಪ್ರಗತಿ ಪಕ್ಷ(ಕೆಆರ್‌ಪಿಪಿ) ಕಟ್ಟಿ, ರಾಮುಲು ಅವರನ್ನು ಆಹ್ವಾನಿಸಿದ್ದರು. ಆದರೆ, ಶ್ರೀರಾಮುಲು ಬಿಜೆಪಿ ಬಿಟ್ಟು ಬರುವುದಿಲ್ಲ ಎಂದು ಹೇಳಿದ ಬಳಿಕ ಇಬ್ಬರ ನಡುವೆ ವೈಮನಸ್ಸು ಶುರುವಾಗಿತ್ತು. ಇದೇ ಕಾರಣಕ್ಕೆ 2023 ರ ಚುನಾವಣೆಯಲ್ಲಿ ಜನಾರ್ದನ ರೆಡ್ಡಿ ಅವರು ನಾಗೇಂದ್ರ ಅವರನ್ನು ಬೆಂಬಲಿಸಿ, ಶ್ರೀರಾಮುಲು ಸೋಲಿಗೆ ಕಾರಣರಾದರು ಎಂಬ ವದಂತಿಗಳಿಂದ ಇಬ್ಬರು ನಡುವಿನ ಸ್ನೇಹ ಮತ್ತಷ್ಟು ಹಳಸಿತು. ಜೊತೆಗೆ ವ್ಯವಹಾರದ ವಿಷಯವೂ ಒಡಕಿಗೆ ಕಾರಣ ಎಂಬ ಮಾತುಗಳು ಕೇಳಿ ಬರುತ್ತಿವೆ.

ಇನ್ನು ಶ್ರೀರಾಮುಲು ಹಾಗೂ ಜನಾರ್ದನ ರೆಡ್ಡಿ ನಡುವಿನ ಮನಸ್ತಾಪಕ್ಕೆ ಇತಿಶ್ರೀ ಹಾಡಲು ಪಕ್ಷದ ಹಿರಿಯ ನಾಯಕರು ತೀರ್ಮಾನಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ರಾಮುಲು ಹೇಳಿಕೆಗೆ ರೆಡ್ಡಿ ತಿರುಗೇಟು

ಈ ಮಧ್ಯೆ ಶ್ರೀರಾಮುಲು ಟೀಕೆಗೆ ಬೆಂಗಳೂರಿನಲ್ಲಿ ಮಾಧ್ಯಮಗೋಷ್ಠಿ ಉದ್ದೇಶಿಸಿ ಮಾತನಾಡಿದ ಶಾಸಕ ಜನಾರ್ದನ ರೆಡ್ಡಿ, ಅಪರಾಧ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದವನನ್ನು ಒಳ್ಳೆಯ ರಾಜಕಾರಣಿಯಾಗಿ ಮಾಡಿದ್ದು ತಪ್ಪಾ ಎಂದು ತಿರುಗೇಟು ನೀಡಿದ್ದಾರೆ. 

ನಾನು ಕಳೆದ ಲೋಕಸಭಾ ಚುನಾವಣೆಗೂ ಮುಂಚಿತವಾಗಿ ಪಕ್ಷ ಸೇರಿದ್ದೇನೆ. ಯಾರದ್ದೋ ಶಿಫಾರಸಿನ ಮೇಲೆ ಪಕ್ಷಕ್ಕೆ ಬಂದವನಲ್ಲ. ಸಂಡೂರು ಉಪ ಚುನಾವಣೆ ಸಂದರ್ಭದಲ್ಲಿ ರಾಜ್ಯ ಅಧ್ಯಕ್ಷರು ಹಾಗೂ ವರಿಷ್ಠರಿಗೆ ʼನೀವು ಯಾರಿಗೆ ಟಿಕೆಟ್ ಕೊಟ್ಟರೂ ಕೆಲಸ ಮಾಡುತ್ತೇನೆʼ ಎಂದಿದ್ದೆ. ಹಾಗಂತ ನಾನು ಬಂಗಾರು ಹನುಮಂತುಗೆ ಟಿಕೆಟ್ ಕೊಡಿ ಎಂದು ಹೇಳಿರಲಿಲ್ಲ. ಅಲ್ಲಿ ಯಾರು ಹೇಗೆ ಕೆಲಸ ಮಾಡಿದರು ಎಂಬುದು ಜನರಿಗೆ ಗೊತ್ತಿದೆ. ನನ್ನ ಜೊತೆಗೆ ಶ್ರೀರಾಮುಲು ಕೂಡ ಮೂರು ದಿನಗಳ ತಡವಾಗಿ ಬಂದು ಪ್ರಚಾರ ಮಾಡಿದರು. ಆದರೆ, ಈಗ ರಾಮುಲು ನನ್ನ ಹಾಗೂ ಕುಟುಂಬದ ಮೇಲೆ ಏಕೆ ಆರೋಪ ಮಾಡುತ್ತಿದ್ದಾರೆ ಎಂಬುದು ತಿಳಿಯುತ್ತಿಲ್ಲ ಎಂದು ಹೇಳಿದ್ದಾರೆ. 

 ಸಿ.ಟಿ. ರವಿ ವಿರುದ್ಧ ಉಸ್ತುವಾರಿ ಆಕ್ರೋಶ

ಮುಂದಿನ ಪ್ರಧಾನಿ ಯೋಗಿ ಆದಿತ್ಯನಾಥ್‌ ಎಂಬ ಸಿ.ಟಿ. ರವಿ ಹೇಳಿಕೆಗೆ ಉಸ್ತುವಾರಿ ರಾಧಾ ಮೋಹನ ದಾಸ್‌ ಅಗರವಾಲ್‌ ಅವರು ಸಭೆಯಲ್ಲೇ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನೀವು ಚುನಾವಣೆಯಲ್ಲಿ ಸೋತರೂ ವಿಧಾನ ಪರಿಷತ್‌ ಸದಸ್ಯ ಸ್ಥಾನಕ್ಕೆ ಆಯ್ಕೆ ಮಾಡಿದ್ದೇವೆ. ಪ್ರಧಾನಿ ನರೇಂದ್ರ ಮೋದಿ ಅವರು ಅಧಿಕಾರದಲ್ಲಿರುವಾಗಲೇ ಮುಂದಿನ ಪ್ರಧಾನಿ ಯೋಗಿ ಆದಿತ್ಯನಾಥ ಎಂದು ಹೇಳಿರುವುದು ಸರಿಯಲ್ಲ ಎಂದು ಟೀಕಿಸಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿದ ಸಿ.ಟಿ. ರವಿ ನಾನು ಅಂತಹ ಹೇಳಿಕೆ ನೀಡಿಲ್ಲ ಎಂದು ಸಮಜಾಯಿಷಿ ನೀಡಲು ಮುಂದಾದರು. ಆಗ ಇಲ್ಲಿ ಯಾರು ಏನು ಮಾಡುತ್ತಿದ್ದಾರೆ ಎಂಬುದು ನನಗೆ ಗೊತ್ತಿದೆ. ನಿಮ್ಮ ಹೇಳಿಕೆಯ ಮಾಹಿತಿ ಇದ್ದೇ ಮಾತನಾಡುತ್ತಿದ್ದೇನೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ ಎಂದು ತಿಳಿದುಬಂದಿದೆ.

ಪರಿಸ್ಥಿತಿ ಶಮಗೊಳಿಸಲು ಹಿರಿಯರ ಆಗ್ರಹ

ಇನ್ನು ಬಿಜೆಪಿಯಲ್ಲಿ ಒಬ್ಬರಿಂದ ಒಬ್ಬರು ಬಹಿರಂಗ ಹೇಳಿಕೆ ನೀಡುವ ಮೂಲಕ ಪರಿಸ್ಥಿತಿ ಕೈ ಮೀರಿದೆ. ವರಿಷ್ಠರು ಕೂಡಲೇ ಬಂಡಾಯ ಶಮನಗೊಳಿಸಬೇಕು. ಇಲ್ಲವಾದಲ್ಲಿ ಪಕ್ಷಕ್ಕೆ ತೀವ್ರ ಹಾನಿಯಾಗಲಿದೆ ಎಂದು ಪಕ್ಷದ ತಟಸ್ಥ ಬಣದ ಹಿರಿಯ ನಾಯಕರು ರಾಜ್ಯ ಉಸ್ತುವಾರಿಯನ್ನು ಒತ್ತಾಯಿಸಿದ್ದಾರೆ ಎನ್ನಲಾಗಿದೆ.

ವಿಜಯೇಂದ್ರ ವಿರುದ್ಧ ನಾಯಕರ ಕಿಡಿ

ಜಿಲ್ಲಾ ಬಿಜೆಪಿ ಅಧ್ಯಕ್ಷ ಬದಲಾವಣೆ ಕುರಿತಂತೆ ಬಿಜೆಪಿ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ಏಕಪಕ್ಷಿಯ ತೀರ್ಮಾನ ಕೈಗೊಳ್ಳುತ್ತಿದ್ದಾರೆ ಎಂದು ಮಾಜಿ ಸಚಿವ ಸಿ.ಎನ್.ಅಶ್ವತ್ಥನಾರಾಯಣ ಹಾಗೂ ಪ್ರತಿಪಕ್ಷ ನಾಯಕ ಆರ್. ಅಶೋಕ್ ಉಸ್ತುವಾರಿ ಎದುರಲ್ಲೇ ರಾಜ್ಯಾಧ್ಯಕ್ಷ ವಿಜಯೇಂದ್ರ ವಿರುದ್ಧ ಆರೋಪ ಮಾಡಿದ್ದಾರೆ. ಈ ವೇಳೆ ಅಶ್ವತ್ಥನಾರಾಯಣ ಹಾಗೂ ವಿಜಯೇಂದ್ರ ಮಧ್ಯೆ ವಾಗ್ವಾದವೂ ನಡೆಯಿತು ಎಂದು ಮೂಲಗಳು ತಿಳಿಸಿವೆ.

ಬೆಂಗಳೂರು ಉತ್ತರ ಕ್ಷೇತ್ರದ ಅಧ್ಯಕ್ಷರ ಬದಲಾವಣೆಗೆ ಅಶ್ವತ್ಥ ನಾರಾಯಣ ಪಟ್ಟು ಹಿಡಿದರೆ, ವಿಜಯೇಂದ್ರ ಅವರನ್ನೇ ಮುಂದುವರಿಸಲು ಹಠ ಹಿಡಿದಿದ್ದರು. ಈ ವಿಚಾರ ಸಭೆಯಲ್ಲಿ ವಾಗ್ವಾದಕ್ಕೆ ಕಾರಣವಾಗಿದೆ ಎನ್ನಲಾಗಿದೆ.

ಸದಾನಂದಗೌಡ ನೇತೃತ್ವದಲ್ಲಿ ಒಕ್ಕಲಿಗರ ಸಭೆ

ಬಿಜೆಪಿಯಲ್ಲಿ ಸಾಂಸ್ಥಿಕ ಚುನಾವಣೆಗಳು ಆರಂಭವಾಗಿದ್ದು, ಪಕ್ಷದಲ್ಲಿರುವವರ ಸ್ಥಾನಮಾನಗಳು ಬದಲಾವಣೆಯಾಗುವ ಆತಂಕ ಎದುರಾಗಿದೆ. ಈ ಹಿನ್ನೆಲೆಯಲ್ಲಿ ಬುಧವಾರ ರಾತ್ರಿ ಮಾಜಿ ಸಿಎಂ ಡಿ.ಬಿ. ಸದಾನಂದಗೌಡ ನೇತೃತ್ವದಲ್ಲಿ ಬಿಜೆಪಿ ಒಕ್ಕಲಿಗ ಶಾಸಕರ ಸಭೆ ನಡೆದಿದ್ದು, ಮಹತ್ವ ಪಡೆದುಕೊಂಡಿದೆ.

ಪಕ್ಷದ ಅಧ್ಯಕ್ಷ ಸ್ಥಾನ ಹಾಗೂ ವಿರೋಧ ಪಕ್ಷದ ನಾಯಕನ ಸ್ಥಾನದಲ್ಲಿ ಯಾವುದಾದರೂ ಒಂದನ್ನು ಸಮುದಾಯದವರಲ್ಲೇ ಉಳಿಸಿಕೊಳ್ಳುವ ಕುರಿತು ಚರ್ಚೆಯಾಗಿದೆ ಎಂದು ತಿಳಿದು ಬಂದಿದೆ.

Tags:    

Similar News