Internal Reservation | ಮೀಸಲಾತಿ ನೀಡಿ, ಇಲ್ಲವೇ ವಿಷ ಕೊಟ್ಟು ಬಿಡಿ: ಅಲೆಮಾರಿ ಸಮುದಾಯಗಳ ಆರ್ತನಾದ

ಅಲೆಮಾರಿ ಸಮುದಾಯವನ್ನು ಪ್ರತ್ಯೇಕ ಗುಂಪಾಗಿ ವರ್ಗೀಕರಿಸಿ ಮೀಸಲಾತಿ ನೀಡಬೇಕು. ಇಲ್ಲದಿದ್ದರೆ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಳ್ಳುವುದೊಂದೆ ನಮಗೆ ಉಳಿದಿರುವ ದಾರಿ ಎಂದು ಹೋರಾಟಗಾರರು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.;

Update: 2025-08-21 10:11 GMT
ಅಲೆಮಾರಿ ಸಮುದಾಯದಿಂದ ಸ್ವಾತಂತ್ರ್ಯ ಉದ್ಯಾನವನದಲ್ಲಿ ಪ್ರತಿಭಟನೆ ನಡೆಸಲಾಯಿತು.

ರಾಜ್ಯ ಸರ್ಕಾರ ಪರಿಶಿಷ್ಟ ಜಾತಿಗಳನ್ನು ಮೂರು ಗುಂಪುಗಳಾಗಿ ವಿಂಗಡಿಸಿ ಒಳ ಮೀಸಲಾತಿ ನೀಡಿದೆ.

ಸರ್ಕಾರದ ಈ ನಿರ್ಧಾರದಿಂದ ಲಂಬಾಣಿ ಹಾಗೂ ಭೋವಿ ಸಮುದಾಯಗಳಿರುವ ಬಲಾಢ್ಯರ ಗುಂಪಿಗೆ ಅಲೆಮಾರಿ ಸಮುದಾಯವನ್ನು ಸೇರಿಸುವ ಮೂಲಕ ಅನ್ಯಾಯ ಮಾಡಿದೆ ಎಂದು ಆರೋಪಿಸಿ ಅಲೆಮಾರಿ ಸಮುದಾಯಗಳು ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದಲ್ಲಿ ಪ್ರತಿಭಟನೆ ನಡೆಸಿದರು. 

ಸರ್ಕಾರವು ಅಲೆಮಾರಿ ಸಮುದಾಯವನ್ನು ಪ್ರತ್ಯೇಕ ಗುಂಪಾಗಿ ವಿಂಗಡಿಸಿ ಒಳ ಮೀಸಲಾತಿ ನೀಡಿದರೆ ಸಮುದಾಯಕ್ಕೆ ಅನುಕೂಲವಾಗಲಿದೆ. ಇಲ್ಲದಿದ್ದರೆ ಬಲಾಢ್ಯ ಸಮುದಾಯದೊಂದಿಗೆ ಸ್ಪರ್ಧಿಸಲಾಗದೆ ಮತ್ತಷ್ಟು ಹಿಂದುಳಿಯುವಂತಾಗುತ್ತದೆ ಎಂದು ಮುಖಂಡರು ಆರೋಪಿಸಿದ್ದಾರೆ. 

ನಿವೃತ್ತ ನ್ಯಾಯಮೂರ್ತಿ ಹೆಚ್‌. ಎನ್‌. ನಾಗಮೋಹನ್‌ ದಾಸ್‌ ಆಯೋಗದಂತೆ ವರ್ಗೀಕರಣದಂತೆ ಅಲೆಮಾರಿ ಸಮುದಾಯವನ್ನು ಪ್ರತ್ಯೇಕ ಗುಂಪಾಗಿ ವರ್ಗೀಕರಿಸಿ ಮೀಸಲಾತಿ ನೀಡಬೇಕು. ಇಲ್ಲದಿದ್ದರೆ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಳ್ಳುವುದೊಂದೇ ನಮಗೆ ಉಳಿದಿರುವ ದಾರಿ ಎಂದು ಹೋರಾಟಗಾರರು ಎಂದು ಆಕ್ರೋಶ ವ್ಯಕ್ತಪಡಿಸಿದರು. 

ಬುಡಕಟ್ಟು ಮಹಾಸಭಾದ ರಾಜ್ಯ ಉಪಾಧ್ಯಕ್ಷ ರಾಜು ದೊಡ್ಮನೆ ʼದ ಫೆಡರಲ್‌ ಕರ್ನಾಟಕʼದ ಜತೆ ಮಾತನಾಡಿ, " ಅಲೆಮಾರಿ ಸಮುದಾಯ ಹಿಂದಿನಿಂದಲೂ ಬಹಳ ಕಷ್ಟ ಅನುಭವಿಸಿದೆ. ನ್ಯಾ. ಸದಾಶಿವ ಆಯೋಗದ ವರದಿ ಸಮುದಾಯಕ್ಕೆ ಶೇ.2 ರಷ್ಟು ಮೀಸಲಾತಿ ನೀಡಿತ್ತು. ಆದರೆ, ಇದೀಗ ರಾಜ್ಯ ಸರ್ಕಾರ ಭೋವಿ, ಲಂಬಾಣಿಯಂತಹ ಬಲಾಢ್ಯ ಸಮುದಾಯಕ್ಕೆ ನಮ್ಮನ್ನು ಸೇರಿಸಿ ಮೀಸಲಾತಿ ಕಿತ್ತುಕೊಂಡಿದೆ. ಇದು ಬಹಳ ಅನ್ಯಾಯ. ನಾವು ವೇಷಗಳನ್ನು ತೊಟ್ಟು, ಭಿಕ್ಷೆ ಬೇಡಿ ಜೀವನ ಸಾಗಿಸುತ್ತಿದ್ದೇವೆ. ನಮಗೆ ಶೇ.2 ಮೀಸಲಾತಿ ನೀಡಿ ಅನ್ಯಾಯ ಸರಿಪಡಿಸಬೇಕು ಎಂದು ಆಗ್ರಹಿಸಿದರು. 

ಅಲೆಮಾರಿ ಸಮುದಾಯದ ಮುತ್ತುಸ್ವಾಮಿ ಮಾತನಾಡಿ, "ಸರ್ಕಾರ ನಮ್ಮ ಅನ್ನವನ್ನು ಕಸಿದು ಬೇರೆಯವರಿಗೆ ನೀಡಿದೆ. ನಾವು ಭಿಕ್ಷಾಟನೆ ಮಾಡಿ ಜೀವನ ನಡೆಸುತ್ತಿದ್ದೇವೆ. ನಾಮ್ಮ ಜೀವನ ಹಾಳಾದರೂ ನಮ್ಮ ಮಕ್ಕಳು ನಮ್ಮಂತೆ ಆಗಬಾರದು ಎಂದು ಶಿಕ್ಷಣ ಕೊಡಿಸಿದ್ದೇವೆ. ಇದೀಗ ಸರ್ಕಾರ ನಮ್ಮನ್ನು ಬಲಾಢ್ಯರ ಗುಂಪಿಗೆ ಸೇರಿಸಿ ನಮ್ಮನ್ನು ಮತ್ತಷ್ಟು ಕೆಳಗೆ ತುಳಿಯಲಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.    

 "ಹೊಲೆಯ ಹಾಗೂ ಮಾದಿಗ ಸಮುದಾಯಗಳೇ ಲಂಬಾಣಿ ಹಾಗೂ ಭೋವಿ ಸಮುದಾಯಗಳೊಂದಿಗೆ ಸ್ಪರ್ಧೆ ಮಾಡಲು ಸಾಧ್ಯವಿಲ್ಲ. ಒಳ ಮೀಸಲಾತಿ ನೀಡಿ ಎಂದು ಮೂರು ದಶಕಗಳಿಂದ ಅವರೇ ಹೋರಾಟ ಮಾಡಿದ್ದಾರೆ. ನಮ್ಮ ಸಮುದಾಯದಲ್ಲಿ ಯಾವುದೇ ಶಾಸಕರು, ಸಚಿವರಿಲ್ಲ, ನಾವೆಲ್ಲರೂ ಕಾಂಗ್ರೆಸ್‌ಗೆ ಮತ ಹಾಕಿ ಬೆಂಬಲ ಸೂಚಿಸಿದ್ದೆವು. ದಮನಿತರ ಧ್ವನಿ ಹಿಸುಕುವ ಕೆಲಸವಾಗುತ್ತಿದೆ. ಆದ್ದರಿಂದ ಸಿಎಂ ಸಿದ್ದರಾಮಯ್ಯನವರು ಶೇ. 2 ಮೀಸಲಾತಿ ನೀಡಬೇಕು. ಇಲ್ಲದಿದ್ದರೆ ನಾವು ಉಪವಾಸ ಸತ್ಯಾಗ್ರಹ ಮಾಡುತ್ತೇವೆ" ಎಂದು ʼದ ಫೆಡರಲ್‌ ಕರ್ನಾಟಕʼಕ್ಕೆ ತಿಳಿಸಿದರು.

"ಸಿಎಂ ಸಿದ್ದರಾಮಯ್ಯನವರು ಬುದ್ಧ, ಬಸವ, ಅಂಬೆಡ್ಕರ್‌ ಅವರ ತತ್ವಗಳ ಮೇಲೆ ಆಡಳಿತ ನಡೆಸುತ್ತಿದ್ದು, ದಮನಿತರ ಪರವಾಗಿದ್ದೇನೆ ಎಂದು ಹೇಳುತ್ತಾರೆ. ಆದರೆ ಬಲಾಢ್ಯರ ಗುಂಪಿಗೆ ನಮ್ಮನ್ನು ಸೇರಿಸಿರುವುದು ಅನ್ಯಾಯ. ಆದ್ದರಿಂದ ಸರ್ಕಾರ ಕೂಡಲೇ ನಮಗೆ ಪ್ರತ್ಯೇಕ ವರ್ಗ ಸೃಷ್ಟಿಸಿ ಮೀಸಲಾತಿ ನೀಡಬೇಕು" ಎಂದು ಆಗ್ರಹಿಸಿದರು.

ಸರ್ಕಾರ ಅಲೆಮಾರಿ ಸಮುದಾಯಕ್ಕೆ ಪ್ರತ್ಯೇಕ ಮೀಸಲಾತಿ ನೀಡಬೇಕು. ನಮ್ಮ ಸಮಾಜ ಈಗಾಗಲೇ ದರ್ಬಲವಾಗಿದ್ದು ಮತ್ತಷ್ಟು ದುರ್ಬಲವಾಗಲು ಸರ್ಕಾರ ಬಿಡಬಾರದು. ಆದ್ದರಿಂದ ಸಿಎಂ ಸಿದ್ದರಾಮಯ್ಯ ಶೀಘ್ರವೇ ಮೀಸಲಾತಿ ನೀಡಬೇಕು. ಇಲ್ಲದಿದ್ದರೆ ಪ್ರತಿಭಟನೆ ನಿಲ್ಲಿಸುವುದಿಲ್ಲ ಎಂದು ಹೋರಾಟಗಾರರು ಎಚ್ಚರಿಸಿದರು.  

Tags:    

Similar News