ಒಳ ಮೀಸಲಾತಿ | ಯಾರಿಗೂ ಅನ್ಯಾಯವಾಗದಂತೆ ನಿರ್ಧರಿಸಿ; ಸರ್ಕಾರಕ್ಕೆ ಬಿ.ವೈ ವಿಜಯೇಂದ್ರ ಸಲಹೆ
ರಾಜ್ಯದಲ್ಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರವು ಅಧಿಕಾರಕ್ಕೆ ಬಂದಾಗಿನಿಂದ ಒಳ ಮೀಸಲಾತಿ ವಿಷಯದಲ್ಲಿ ಯಾವುದೇ ತೀರ್ಮಾನ ತೆಗೆದುಕೊಳ್ಳಲು ಆಗಿಲ್ಲ. ಈ ವಿಷಯದಲ್ಲಿ ಸರ್ಕಾರ ಸಂಪೂರ್ಣ ಗೊಂದಲದಲ್ಲಿದೆ ಎಂದು ವಿಜಯೇಂದ್ರ ಹೇಳಿದರು.;
ಪರಿಶಿಷ್ಟ ಜಾತಿಯಲ್ಲಿರುವ 101 ಒಳ ಜಾತಿಗಳಲ್ಲಿ ಯಾವ ಜಾತಿಗೆ ಅನ್ಯಾಯವಾಗದಂತೆ ಒಳ ಮೀಸಲಾತಿ ವರದಿ ಜಾರಿಗೆ ನಿರ್ಣಯ ತೆಗೆದುಕೊಳ್ಳಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಆಗ್ರಹಿಸಿದರು.
ವಿಧಾನಸೌಧದಲ್ಲಿ ಮಂಗಳವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸಿಎಂ ಸಿದ್ದರಾಮಯ್ಯ ಅವರು ಒಳ ಮೀಸಲಾತಿ ವಿಚಾರದಲ್ಲಿ ದೃಢ ನಿರ್ಧಾರ ತೆಗೆದುಕೊಳ್ಳಬೇಕು. ಎಸ್‍ಸಿ ಸಮುದಾಯದಲ್ಲಿ 101 ಜಾತಿಗಳಿದ್ದು, ಯಾವುದೇ ಜಾತಿಗೆ ಅನ್ಯಾಯ ಆಗದಂತೆ ನೋಡಿಕೊಳ್ಳಬೇಕು. ಸರ್ಕಾರ ತೆಗೆದುಕೊಳ್ಳುವ ತೀರ್ಮಾನದಿಂದ ನಾಳೆ ಇತರ ಜಾತಿಗಳು, ಪರಿಶಿಷ್ಟರು ಬೀದಿಗಿಳಿಯದಂತೆ ನೋಡಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಒಳ ಮೀಸಲಾತಿ ಕುರಿತಂತೆ ಸೃಷ್ಟಿಯಾಗಿರುವ ಎಲ್ಲಾ ಗೊಂದಲಗಳಿಗೆ ಸಿಎಂ ಅವರೇ ಕಾರಣ. ಇದೀಗ ಅವರೇ ಎಲ್ಲಾ ಸಮಸ್ಯೆಗಳಿಗೆ ಇತಿಶ್ರೀ ಹಾಡಬೇಕು. ಎಲ್ಲವನ್ನು ಸರಿಯಾದ ರೀತಿಯಲ್ಲಿ ನಿಭಾಯಿಸುತ್ತಾರೆ ಎಂಬ ಅಪೇಕ್ಷೆ ಪರಿಶಿಷ್ಟರಲ್ಲಿದೆ. ರಾಜ್ಯದಲ್ಲಿ ಸಿದ್ದರಾಮಯ್ಯನವರ ನೇತೃತ್ವದ ಕಾಂಗ್ರೆಸ್ ಸರ್ಕಾರವು ಅಧಿಕಾರಕ್ಕೆ ಬಂದಾಗಿನಿಂದ ಒಳ ಮೀಸಲಾತಿ ವಿಷಯದಲ್ಲಿ ಯಾವುದೇ ತೀರ್ಮಾನ ತೆಗೆದುಕೊಳ್ಳಲು ಆಗಿಲ್ಲ. ಈ ವಿಷಯದಲ್ಲಿ ಸರ್ಕಾರ ಸಂಪೂರ್ಣ ಗೊಂದಲದಲ್ಲಿದೆ ಎಂದು ಟೀಕಿಸಿದರು.
ಬಿಜೆಪಿ ಸರ್ಕಾರದಲ್ಲಿ ಮೀಸಲಾತಿ ಏರಿಕೆ
ರಾಜ್ಯದಲ್ಲಿ ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದಾಗ ಪರಿಶಿಷ್ಟರ ಮೀಸಲಾತಿಯನ್ನು ಶೇ. 17ಕ್ಕೆ ಏರಿಸಿದ್ದರು. ಪರಿಶಿಷ್ಟ ಪಂಗಡದ ಮೀಸಲಾತಿಯನ್ನು ಶೇ. 7ಕ್ಕೆ ಏರಿಕೆ ಮಾಡಿದ್ದರು. ಆಗ ವಿಪಕ್ಷ ನಾಯಕರಾಗಿದ್ದ ಸಿದ್ದರಾಮಯ್ಯನವರು ಟೀಕೆ ಮಾಡಿದ್ದರು. ಬಿಜೆಪಿಯವರು ಕೇವಲ ಭಾಷಣ ಮಾಡುತ್ತಾರೆ ಎಂದು ಅಪಪ್ರಚಾರ ಮಾಡಿದ್ದರು. ಈಗ ಅವರದ್ದೇ ಸರ್ಕಾರವಿದೆ. ಯಾರಿಗೂ ಅನ್ಯಾಯವಾಗದಂತೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ನಿವೃತ್ತ ನ್ಯಾಯಮೂರ್ತಿ ನಾಗಮೋಹನ್‍ದಾಸ್ ವರದಿಯ ಅಂಶಗಳು ಏನಿದೆಯೋ ಅದನ್ನೇ ಬಿಜೆಪಿ ಈ ಹಿಂದೆ ಜಾರಿ ಮಾಡಿತ್ತು. ಸಿಎಂ ಸಿದ್ದರಾಮಯ್ಯನವರು ಇಂದು ವಿಶೇಷ ಸಚಿವ ಸಂಪುಟ ಸಭೆ ಕರೆದಿದ್ದಾರೆ. ಹಿಂದೆ ಬಿಜೆಪಿ ಸರ್ಕಾರ ಮಾಡಿದ್ದನ್ನೇ ಕಾಂಗ್ರೆಸ್ ಸರ್ಕಾರ ಮಾಡಲು ಹೊರಟಿದೆ ಎಂದು ವ್ಯಂಗ್ಯವಾಡಿದರು.
ಷಡ್ಯಂತ್ರ ಗುಟ್ಟಾಗಿ ಉಳಿಯಲು ಸಾಧ್ಯವಿಲ್ಲ
ಶ್ರೀಕ್ಷೇತ್ರ ಧರ್ಮಸ್ಥಳದ ಕುರಿತು ನಿರಂತರ ಅಪಪ್ರಚಾರ ಹಾಗೂ ಷಡ್ಯಂತ್ರ ನಡೆಯುತ್ತಿದೆ. ಇದರ ಹಿಂದೆ ಯಾರಿದ್ದಾರೆ ಎಂಬುದು ಬಹಳ ದಿನ ಗುಟ್ಟಾಗಿ ಉಳಿಯಲ್ಲ. ಈ ವಿಷಯದಲ್ಲಿ ಅಪಪ್ರಚಾರ, ಧಾರ್ಮಿಕ ಭಾವನೆಗೆ ಧಕ್ಕೆ ತರುವ ಕೆಲಸವಾಗಿದ್ದು, ಧರ್ಮಸ್ಥಳದ ಬಗ್ಗೆ ರಾಜ್ಯ ಸರ್ಕಾರಕ್ಕೆ ಕಿಂಚಿತ್ತಾದರೂ ನಂಬಿಕೆ ಇದ್ದರೆ ಅಪಪ್ರಚಾರ ಮಾಡುತ್ತಿರುವವರ ಕುರಿತು ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು.
ಮೈಸೂರಿನಲ್ಲಿ ಹಿಂದೂ ಕಾರ್ಯಕರ್ತರೊಬ್ಬರು ಅನ್ಯ ಧರ್ಮದ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿದ್ದಾರೆಂಬ ಕಾರಣಕ್ಕೆ 24 ಗಂಟೆಯಲ್ಲೇ ಬಂಧಿಸಿದ್ದರು. ಒಂದು ಕೋಮಿನ ಜನ ಪೊಲೀಸ್ ಠಾಣೆಗೆ ನುಗ್ಗಿ ಅಲ್ಲಿ ಬೆಂಕಿ ಹಚ್ಚುವ ಕೆಲಸ ಮಾಡಿದ್ದರು. ತುಮಕೂರಿನಲ್ಲಿ ಹಿಂದೂಪರ ಮಹಿಳಾ ಕಾರ್ಯಕರ್ತೆಯೊಬ್ಬರು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿದ್ದಾರೆಂದು ಬಂಧಿಸಿದ್ದರು. ಇಷ್ಟೆಲ್ಲಾ ಆದರೂ ಧರ್ಮಸ್ಥಳದ ವಿಷಯದಲ್ಲಿ ನಂಬಿಕೆ ಇಟ್ಟುಕೊಂಡಿರುವ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಯಾವುದೇ ಕ್ರಮ ಕೈಗೊಂಡಿಲ್ಲ. ಅಪಪ್ರಚಾರ ನಿರಂತರವಾಗಿದ್ದರೂ ಮುಖ್ಯಮಂತ್ರಿ, ಡಿಸಿಎಂ ಮತ್ತು ಗೃಹ ಸಚಿವರು ಏಕೆ ಸುಮ್ಮನಿದ್ದಾರೆ ಎಂದು ಪ್ರಶ್ನಿಸಿದರು.