ಬೆಂಗಳೂರಿನಲ್ಲಿ ವಿಡಿಯೊ ಶೂಟ್‌ ಮಾಡುತ್ತಿದ್ದ ಯುವತಿಗೆ 10 ವರ್ಷದ ಬಾಲಕನಿಂದ ಲೈಂಗಿಕ ಕಿರುಕುಳ

4 ಲಕ್ಷಕ್ಕೂ ಹೆಚ್ಚು ಇನ್ಸ್ಟಾಗ್ರಾಮ್ ಅನುಯಾಯಿಗಳನ್ನು ಹೊಂದಿರುವ ನೇಹಾ ಬಿಸ್ವಾಲ್, ಬಿಟಿಎಂ ಲೇಔಟ್‌ನ ಬೀದಿಯಲ್ಲಿ ನಡೆದ ಇಡೀ ಘಟನೆಯನ್ನು ಎಕ್ಸ್‌ನಲ್ಲಿ ಹಂಚಿಕೊಂಡಿದ್ದಾರೆ. ನಾನು ಸುರಕ್ಷಿತವಾಗಿಲ್ಲ ಎಂದಿದ್ದಾರೆ.;

Update: 2024-11-07 10:38 GMT
ಸೋಶಿಯಲ್‌ ಮೀಡಿಯಾ ಇನ್‌ಫ್ಲುಯೆನ್ಸರ್‌ ನೇಹಾ ಬಿಸ್ವಾಲ್‌.

ಬೆಂಗಳೂರಿನ ಬೀದಿಯೊಂದರಲ್ಲಿ ವಿಡಿಯೊ ಮಾಡುತ್ತಿದ್ದ ಸೋಶಿಯಲ್‌ ಮೀಡಿಯಾ ಇನ್‌ಫ್ಲುಯೆನ್ಸರ್‌ ನೇಹಾ ಬಿಸ್ವಾಲ್‌ ಎಂಬುವರ ಮೇಲೆ ಲೈಂಗಿಕ ದೌರ್ಜನ್ಯ ನಡೆದಿದೆ. ಘಟನೆಯನ್ನು ಅವರು ತಮ್ಮ ಸೋಶಿಯಲ್‌ ಮೀಡಿಯಾ ವೇದಿಕೆಗಳ ಮೂಲಕ ವಿವರಿಸಿದ್ದಾರೆ. ಮಂಗಳವಾರ (ನವೆಂಬರ್ 5) ರಂದು ಅವರಿಗೆ ಈ ಆಘಾತ ಎದುರಾಗಿದೆ. 10 ವರ್ಷದ ಬಾಲಕ ತನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

4 ಲಕ್ಷಕ್ಕೂ ಹೆಚ್ಚು ಇನ್ಸ್ಟಾಗ್ರಾಮ್ ಫಾಲೋಯರ್ಸ್‌ಗಳನ್ನು ಹೊಂದಿರುವ ನೇಹಾ ಬಿಸ್ವಾಲ್‌ ಅವರಿಗೆ ಬಿಟಿಎಂ ಲೇಔಟ್‌ನಲ್ಲಿಈ ಆಘಾತ ಎದುರಾಗಿದೆ. ಇಡೀ ಘಟನೆಯನ್ನು ಎಕ್ಸ್ (ಹಿಂದಿನ ಟ್ವಿಟರ್) ಬಳಕೆದಾರರೊಬ್ಬರು ಹಂಚಿಕೊಂಡಿದ್ದಾರೆ.

ಇದುವರೆಗೆ ನನಗೆ ಈ ರೀತಿ ಆಗಿಲ್ಲ. ನಾನು ನಿಜವಾಗಿಯೂ ಇದನ್ನು ಅತ್ಯಂತ ಕೆಟ್ಟ ಗಳಿಗೆ ಎಂದು ಭಾವಿಸುತ್ತೇನೆ. ನಾನು ನಡೆದುಕೊಂಡು ಹೋಗುತ್ತಾ ವೀಡಿಯೊ ಮಾಡುತ್ತಿದ್ದೆ, ಆ ಹುಡುಗ ಆರಂಭದಲ್ಲಿ ನಾನು ಹೋಗುತ್ತಿದ್ದ ದಿಕ್ಕಿನಲ್ಲಿ ಸಾಗುತ್ತಿದ್ದ. ನಂತರ ಅವನು ನನ್ನನ್ನು ನೋಡಿ, ಯೂ-ಟರ್ನ್ ಮಾಡಿ ನನ್ನ ಕಡೆಗೆ ಬರಲು ಪ್ರಾರಂಭಿಸಿದ" ಎಂದು ಬಿಸ್ವಾಲ್ ವಿಡಿಯೊ ಕ್ಲಿಪ್‌ನಲ್ಲಿ ತನ್ನ ಕಷ್ಟಗಳನ್ನು ಹೇಳಿಕೊಂಡಿದ್ದಾರೆ.

"ಆರಂಭದಲ್ಲಿ ಆತ ನನ್ನನ್ನು ಗೇಲಿ ಮಾಡಿದ. ನಾನು ಕ್ಯಾಮೆರಾದಲ್ಲಿ ಮಾತನಾಡುವ ರೀತಿಯನ್ನೇ ಅನುಕರಿಸಲು ಆರಂಭಿಸಿದ. ನಂತರ ನನಗೆ ಕಿರುಕುಳ ನೀಡಿದ" ಎಂದು ಬಿಸ್ವಾಲ್‌ ಹೇಳಿದ್ದಾರೆ.

ಬಾಲಕನನ್ನು ಸ್ಥಳೀಯರು ಹಿಡಿದು ಬುದ್ಧಿ ಹೇಳಿದ್ದಾರೆ. ಆದರೆ ಅಲ್ಲಿದ್ದ ಅನೇಕರು ಆತನನ್ನು ಬಿಟ್ಟುಬಿಡುವಂತೆ ಕೋರಿಕೊಂಡರು ಎಂದು ಅವರು ಹೇಳಿದ್ದಾರೆ.

ಆತ ಏನು ಮಾಡಿದ್ದಾನೆಂದು ಸ್ಪಷ್ಟವಾಗಿ ತೋರಿಸುವ ವೀಡಿಯೊವನ್ನು ನಾನು ಪ್ಲೇ ಮಾಡಿದ ನಂತರವೇ ಅವರು ನನ್ನನ್ನು ನಂಬಿದರು. ಆತ ಚಿಕ್ಕ ಹುಡುಗನಾಗಿದ್ದ ಕಾರಣ ಬಿಟ್ಟುಬಿಡಲು ಅನೇಕರು ನನ್ನನ್ನು ವಿನಂತಿಸಿದರು. ಆದರೆ ನಾನು ಒಪ್ಪಲಿಲ್ಲ. ನಾನು ಹುಡುಗನಿಗೆ ಹೊಡೆದೆ. ಕೆಲವು ಜನರು ನನಗೆ ಬೆಂಬಲ ಕೊಟ್ಟರು. ಒಟ್ಟಾರೆಯಾಗಿ ನಾನು ಇಲ್ಲಿ ಸುರಕ್ಷಿತವಾಗಿಲ್ಲ" ಎಂದು ಬಿಸ್ವಾಲ್‌ ಹೇಳಿಕೊಂಡಿದ್ದಾರೆ.

ಬಿಸ್ವಾಲ್ ಅವರು ಪೊಲೀಸ್ ದೂರು ನೀಡುವುದಿಲ್ಲ ಎಂದು ಹೇಳಿದ್ದಾರೆ. ಯಾಕೆಂದರೆ ಆತ ಬಾಲಕ. ಆತನ ಭವಿಷ್ಯ ಹಾಳುಮಾಡಲು ಬಯಸುವುದಿಲ್ಲ" ಎಂದು ಹೇಳಿಕೊಂಡಿದ್ದಾರೆ.

ಬೆಂಗಳೂರು ಪೊಲೀಸರು ನನಗೆ ಸಹಾಯ ಮಾಡಿದ್ದಾರೆ. ಅವರು ಹೊರಗಿನವರಂತೆ ನೋಡಿಕೊಳ್ಳಲಿಲ್ಲ ಎಂದು ಅವರು ಹೇಳಿದರು. "ಆದಾಗ್ಯೂ ನಾನು ಇನ್ನೂ ಮಾನಸಿಕವಾಗಿ ತೊಂದರೆಗೀಡಾಗಿದ್ದೇನೆ,ʼʼ ಎಂದು ಅವರು ಹೇಳಿದ್ದಾರೆ.

ವರದಿಗಳ ಪ್ರಕಾರ, ಬಾಲಕನನ್ನು ಬೆಂಗಳೂರು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದು, ತನಿಖೆ ನಡೆಯುತ್ತಿದೆ. 

Tags:    

Similar News