ಭೂಸ್ವಾಧೀನ ಹಿಂಪಡೆದ ಮರುದಿನವೇ ಏರೋಸ್ಪೇಸ್ ಕಂಪನಿ ರೋಲ್ಸ್ ರಾಯ್ಸ್ ಜತೆ ಎಂಬಿ ಪಾಟೀಲ್ ಮಾತುಕತೆ
ರೋಲ್ಸ್ ರಾಯ್ಸ್ ಕಂಪನಿಯ ಜಾಗತಿಕ ಮಟ್ಟದ ನಿರ್ದೇಶಕ ಫಿಲ್ ಪ್ರೀಸ್ಟ್, ಭಾರತದಲ್ಲಿನ ಬಿಸಿನೆಸ್ ಸರ್ವೀಸ್ ವಿಭಾಗದ ಮುಖ್ಯಸ್ಥ ಟಾಮ್ ಕ್ಯಾಂಡ್ರಿಕಾಲ್, ಮತ್ತು ಡಿಫೆನ್ಸ್ ವಿಭಾಗದ ಭಾರತದ ಮುಖ್ಯಸ್ಥೆ ಗಾಯತ್ರಿ ಶರ್ಮ ಸಚಿವರನ್ನು ಭೇಟಿಯಾದ ನಿಯೋಗದಲ್ಲಿ ಇದ್ದರು.;
ರಕ್ಷಣೆ ಮತ್ತು ವೈಮಾಂತರಿಕ್ಷ (ಏರೋಸ್ಪೇಸ್) ವಲಯದಲ್ಲಿ ಜಾಗತಿಕವಾಗಿ ಹೆಸರು ಮಾಡಿರುವ ರೋಲ್ಸ್ ರಾಯ್ಸ್ ಕಂಪನಿ, ಕರ್ನಾಟಕದಲ್ಲಿ ಬಂಡವಾಳ ಹೂಡಿಕೆ ವಿಸ್ತರಣೆ, ಭವಿಷ್ಯದ ಯೋಜನೆಗಳು ಮತ್ತು ತಂತ್ರಜ್ಞಾನ ಸೌಲಭ್ಯಗಳ ಕುರಿತು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ ಅವರೊಂದಿಗೆ ಮಹತ್ವದ ಮಾತುಕತೆ ನಡೆಸಿದೆ. ದೇವನಹಳ್ಳಿಯಲ್ಲಿ ಉದ್ದೇಶಿತ ಹೈಟೆಕ್ ರಕ್ಷಣಾ ಮತ್ತು ವೈಮಾಂತರಿಕ್ಷ ಪಾರ್ಕ್ ಸ್ಥಾಪನೆಗೆ ಪ್ರಸ್ತಾವಿತ ಭೂಸ್ವಾಧೀನವನ್ನು ಸರ್ಕಾರ ಕೈಬಿಟ್ಟ ಮರುದಿನವೇ ಈ ಮಾತುಕತೆ ನಡೆದಿರುವುದು ಗಮನಾರ್ಹ.
ರೋಲ್ಸ್ ರಾಯ್ಸ್ ಕಂಪನಿಯ ಜಾಗತಿಕ ಮಟ್ಟದ ನಿರ್ದೇಶಕ ಫಿಲ್ ಪ್ರೀಸ್ಟ್, ಭಾರತದಲ್ಲಿನ ಬಿಸಿನೆಸ್ ಸರ್ವೀಸ್ ವಿಭಾಗದ ಮುಖ್ಯಸ್ಥ ಟಾಮ್ ಕ್ಯಾಂಡ್ರಿಕಾಲ್, ಮತ್ತು ಡಿಫೆನ್ಸ್ ವಿಭಾಗದ ಭಾರತದ ಮುಖ್ಯಸ್ಥೆ ಗಾಯತ್ರಿ ಶರ್ಮ ಸಚಿವರನ್ನು ಭೇಟಿಯಾದ ನಿಯೋಗದಲ್ಲಿ ಇದ್ದರು.
ಸಚಿವರ ವಿಶ್ವಾಸ ಮತ್ತು ಸರ್ಕಾರದ ಭರವಸೆ
ರೋಲ್ಸ್ ರಾಯ್ಸ್ ಕಂಪನಿ ಜತೆಗಿನ ಮಾತುಕತೆ ಬಳಿಕ ಮಾತನಾಡಿದ ಸಚಿವ ಎಂ.ಬಿ. ಪಾಟೀಲ್, "ರಾಜ್ಯದಲ್ಲಿರುವ ಕೈಗಾರಿಕಾ ಬೆಳವಣಿಗೆಯ ಅವಕಾಶಗಳು ಮತ್ತು ಇಲ್ಲಿನ ರಕ್ಷಣಾ ಕಾರ್ಯ ಪರಿಸರದ ಬಗ್ಗೆ ಅವರಿಗೆ ಮನದಟ್ಟು ಮಾಡಿಕೊಡಲಾಗಿದೆ. ನಮ್ಮಲ್ಲಿರುವ ಆಧುನಿಕ ತಾಂತ್ರಿಕ ಪರಿಸರ, ದೀರ್ಘಕಾಲೀನ ದೂರದೃಷ್ಟಿ ಮತ್ತು ಪ್ರಗತಿಪರವಾಗಿರುವ ಕೈಗಾರಿಕಾ ನೀತಿಗಳನ್ನು ಅವರು ಮೆಚ್ಚಿಕೊಂಡಿದ್ದಾರೆ. ಜೊತೆಗೆ ಸಹಭಾಗಿತ್ವ ಹೆಚ್ಚಿಸಿಕೊಳ್ಳಲು ಕಂಪನಿಯ ಅಧಿಕಾರಿಗಳು ಒಲವು ವ್ಯಕ್ತಪಡಿಸಿದ್ದಾರೆ. ಈ ನಿಟ್ಟಿನಲ್ಲಿ ಕಂಪನಿಯ ಬೆಂಗಳೂರು ಘಟಕದ ವಿಸ್ತರಣೆ ಕೂಡ ನಡೆಯುತ್ತಿದ್ದು, ಆ ಬಗ್ಗೆ ಚರ್ಚಿಸಲಾಯಿತು. ಸಂಸ್ಥೆಗೆ ಭೇಟಿ ನೀಡುವಂತೆ ಅವರು ಆಹ್ವಾನ ನೀಡಿದ್ದಾರೆ" ಎಂದರು.
ದೇವನಹಳ್ಳಿಯಲ್ಲಿ ರೈತರ ಕೃಷಿ ಚಟುವಟಿಕೆಗಳನ್ನು ಪರಿಗಣಿಸಿ ಭೂಸ್ವಾಧೀನ ಕೈಬಿಡಲಾಗಿದೆ. ಆದರೆ, "ರಾಜ್ಯದ ಎಲ್ಲ ಕಡೆಗಳಲ್ಲೂ ಕೈಗಾರಿಕೆಗಳಿಗೆ ಭೂಮಿ ಇದೆ. ಈ ಬಗ್ಗೆ ಹೂಡಿಕೆದಾರರು ಆತಂಕಕ್ಕೆ ಒಳಗಾಗಬೇಕಿಲ್ಲ. ಅವರು ಕೇಳಿದ ಕಡೆಗಳಲ್ಲಿ ಅವರಿಗೆ ಅಗತ್ಯವಿರುವಷ್ಟು ಭೂಮಿ ಕೊಡಲಾಗುವುದು. ರಾಜ್ಯದ ಕೈಗಾರಿಕಾ ಬೆಳವಣಿಗೆಯು ಅಬಾಧಿತವಾಗಿ ಮುಂದುವರಿಯಲಿದೆ. ನಾವೀಗ ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಂಡಿರುವ ರಾಜ್ಯವಾಗಿದ್ದು, ಅದಕ್ಕೆ ತಕ್ಕಂತೆ ನಮ್ಮ ಉಪಕ್ರಮಗಳು ಇರಲಿವೆ" ಎಂದು ಸಚಿವರು ಭರವಸೆ ನೀಡಿದ್ದಾರೆ.
ಈ ಸಂದರ್ಭದಲ್ಲಿ ಕೈಗಾರಿಕಾ ಇಲಾಖೆ ಪ್ರಧಾನ ಕಾರ್ಯದರ್ಶಿ ಸೆಲ್ವಕುಮಾರ್ ಮತ್ತು ಆಯುಕ್ತೆ ಗುಂಜನ್ ಕೃಷ್ಣ ಉಪಸ್ಥಿತರಿದ್ದರು.