Assembly Session Day-3 | ಜಿಬಿಎ ಸೇರಿ ಹಲವು ವಿಧೇಯಕಗಳ ಅಂಗೀಕಾರ; ಸದನದಲ್ಲಿ ಬೀದಿ ನಾಯಿ ಹಾವಳಿ ಪ್ರಸ್ತಾಪ

ಕಳೆದ ಮೂರು ವರ್ಷಗಳಲ್ಲಿ ಬಾಲ ಗರ್ಭಿಣಿಯರ ಪ್ರಕರಣಗಳು ಗಣನೀಯವಾಗಿ ಏರಿಕೆ ಕಂಡಿವೆ. 2022-23 ರಲ್ಲಿ 405 ಪ್ರಕರಣಗಳು, 2023-24 ರಲ್ಲಿ 709 ಮತ್ತು 2024-25 ರಲ್ಲಿ 685 ಪ್ರಕರಣಗಳು ವರದಿಯಾಗಿವೆ.;

Update: 2025-08-13 07:15 GMT

ವಿಧಾನಸಭೆ ಅಧಿವೇಶನದ ಮೂರನೇ ದಿನವಾದ ಬುಧವಾರ ಹಲವು ಮಹತ್ವದ ವಿಧೇಯಕಗಳನ್ನು ಮಂಡಿಸಿ ಅಂಗೀಕಾರ ಪಡೆಯಲಾಯಿತು.

ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ತಿದ್ದುಪಡಿ ವಿಧೇಯಕದಲ್ಲಿ ಬಿಬಿಎಂಪಿಯನ್ನು 5 ಪಾಲಿಕೆಗಳನ್ನಾಗಿ ವಿಭಜಿಸಿ ಅವುಗಳಿಗೆ ಚುನಾವಣೆ ನಡೆಸುವುದು ಹಾಗೂ ರಾಜ್ಯ ಚುನಾವಣಾ ಆಯೋಗಕ್ಕೆ ಮತದಾರರ ಪಟ್ಟಿ ಪರಿಷ್ಕರಣೆ ಮಾಡಲು ಅವಕಾಶ ನೀಡುವ ಕುರಿತು ಪ್ರಸ್ತಾಪಿಸಲಾಗಿದೆ. 

ನಾಡಪ್ರಭು ಕೆಂಪೇಗೌಡ ಪಾರಂಪರಿಕ ತಾಣದ ಅಭಿವೃದ್ಧಿ ಪ್ರಾಧಿಕಾರ ವಿಧೇಯಕ ಮಂಡಿಸಲಾಗಿದೆ. ವಿಧೇಯಕದಲ್ಲಿ ಪ್ರಾಧಿಕಾರಕ್ಕೆ ಅಧ್ಯಕ್ಷರ ಆಯ್ಕೆಗೆ ಅವಕಾಶ ನೀಡಲಾಗಿದೆ. ಸಿಎಂ ಅಥವಾ ಕಂದಾಯ ಸಚಿವರು ಯಾವುದೇ ಮಂತ್ರಿಯನ್ನು ಪ್ರಾಧಿಕಾರಕ್ಕೆ ಅಧ್ಯಕ್ಷರಾಗಿ ಆಯ್ಕೆ ಮಾಡಬಹುದಾಗಿದೆ. 

ಇದಲ್ಲದೇ ಬಸವಕಲ್ಯಾಣ ಅಭಿವೃದ್ಧಿ ಮಂಡಳಿ ತಿದ್ದುಪಡಿ ವಿಧೇಯಕ, ಕಾಗಿನೆಲೆ ಅಭಿವೃದ್ಧಿ ಮಂಡಳಿ ತಿದ್ದುಪಡಿ ವಿಧೇಯಕ, ಬನವಾಸಿ ಅಭಿವೃದ್ಧಿ ಪ್ರಾಧಿಕಾರ, ಕೂಡಲ ಸಂಗಮ ಅಭಿವೃದ್ಧಿ ಪ್ರಾಧಿಕಾರ, ಕಿತ್ತೂರು ಅಭಿವೃದ್ಧಿ ಪ್ರಾಧಿಕಾರ, ಸರ್ವಜ್ಞ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರಗಳ ವಿಧೇಯಕಗಳನ್ನು ಅಂಗೀಕರಿಸಲಾಯಿತು. ಈ ಎಲ್ಲಾ ವಿಧೇಯಕಗಳನ್ನು ಯಾವುದೇ ಚರ್ಚೆಯಿಲ್ಲದೇ ಅಂಗೀಕಾರ ಪಡೆಯಲಾಯಿತು. 

ಬಾಲ ಗರ್ಭಿಣಿಯರ ಸಂಖ್ಯೆ ಹೆಚ್ಚಳಕ್ಕೆ ಕಳವಳ            

ರಾಜ್ಯದಲ್ಲಿ ಬಾಲ ಗರ್ಭಿಣಿಯರ ಸಂಖ್ಯೆ ಹೆಚ್ಚಳವಾಗುತ್ತಿರುವ ಬಗ್ಗೆ ಜೆಡಿಎಸ್ ಶಾಸಕ ಸುರೇಶ್ ಬಾಬು ಪ್ರಸ್ತಾಪಿಸಿ ಆತಂಕ ವ್ಯಕ್ತಪಡಿಸಿದರು. 

ಕಳೆದ ಮೂರು ವರ್ಷಗಳಲ್ಲಿ ಈ ಪ್ರಕರಣಗಳು ಗಣನೀಯವಾಗಿ ಏರಿಕೆ ಕಂಡಿವೆ. 2022-23 ರಲ್ಲಿ 405 ಪ್ರಕರಣಗಳು, 2023-24 ರಲ್ಲಿ 709 ಮತ್ತು 2024-25 ರಲ್ಲಿ 685 ಪ್ರಕರಣಗಳು ವರದಿಯಾಗಿವೆ. ಇದಕ್ಕೆ ಕೂಡಲೇ ಕಡಿವಾಣ ಹಾಕಬೇಕು ಎಂದು  ಸುರೇಶ್ ಬಾಬು ಒತ್ತಾಯಿಸಿದರು.

ಸುರೇಶ್ ಬಾಬು ಪ್ರಶ್ನೆಗೆ ಉತ್ತರ ನೀಡಿದ ಸಚಿವೆ ಹೆಬ್ಬಾಳ್ಕರ್ ಅವರು, ಕೌಟುಂಬಿಕ ಸಮಸ್ಯೆಗಳು, ಸಾಮಾಜಿಕ ಜಾಲತಾಣಗಳ ಅತಿಯಾದ ಬಳಕೆ, ಪೋಕ್ಸೋ ಮತ್ತು ಬಾಲ್ಯವಿವಾಹ ಪ್ರಕರಣಗಳು, ಹದಿಹರೆಯದವರಲ್ಲಿ ಪ್ರೇಮ ಪ್ರಕರಣಗಳ ಹೆಚ್ಚಳ ಮತ್ತು ಕೆಲವು ಅನಿಷ್ಟ ಪದ್ಧತಿಗಳು ಬಾಲಗರ್ಭಿಣಿ ಪ್ರಕರಣಗಳು ಹೆಚ್ಚಾಗಲು ಕಾರಣ. ಈ ವಿಷಯವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿ ಸೂಕ್ತ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಹೇಳಿದರು.

ಬೀದಿ ನಾಯಿಗಳ ವಿಚಾರ ಪ್ರಸ್ತಾಪ

ಬೀದಿ ನಾಯಿಗಳ ಪ್ರಕರಣಕ್ಕೆ ಸಂಬಂಧಿಸಿದಂತೆ ಕೂಡ ಅಧಿವೇಶನದ ಗಮನ ಸೆಳೆದ ಜೆಡಿಎಸ್ ಶಾಸಕ ಸುರೇಶ್ ಬಾಬು,  ಸುಪ್ರೀಂಕೋರ್ಟ್ ಆದೇಶವನ್ನು ಉಲ್ಲೇಖಿಸಿ ಸರ್ಕಾರಕ್ಕೆ ಸೂಚನೆ ನೀಡುವಂತೆ ಒತ್ತಾಯಿಸಿದರು.

ಈ ಸಂದರ್ಭದಲ್ಲಿ, ಬಿಜೆಪಿ ಶಾಸಕರಾದ ಸುರೇಶ್ ಕುಮಾರ್ ಮತ್ತು ಅಶ್ವಥ್ ನಾರಾಯಣ ಅವರು ಸಹ ಈ ವಿಚಾರದಲ್ಲಿ ಸರ್ಕಾರದ ಕ್ರಮಕ್ಕೆ ಒತ್ತಾಯಿಸಿದರು.

ಬೀದಿ ನಾಯಿಗಳ ಕಡಿತದಿಂದ ರೇಬೀಸ್ ಹರಡುತ್ತಿದೆ. ಸಾಕಷ್ಟು ಜನರಿಗೆ ತೊಂದರೆಯಾಗುತ್ತಿದೆ. ಸರ್ಕಾರ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಮನವಿ ಮಾಡಿದರು. ಶಾಸಕರ ಭವನದಲ್ಲೂ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದೆ. ಬೆಳಗ್ಗೆ ಬಾಗಿಲು ತೆರೆದ ಕೂಡಲೇ ಒಳಗೆ ಬರುತ್ತವೆ. ಇದಕ್ಕೆ ಕಡಿವಾಣ ಹಾಕಿಸಬೇಕು ಎಂದು ಶಾಸಕರು ಮನವಿ ಮಾಡಿದರು.

Live Updates
2025-08-13 08:09 GMT

ರಾಜ್ಯದ ವಿವಿದೆಡೆ ದಾನ ಪಡೆದ ಜಮೀನು ಹಾಗೂ ಸರ್ಕಾರಿ ಜಮೀನಿನಲ್ಲಿರುವ ಶಾಲೆಗಳಿಗೆ ಶೀಘ್ರವೇ ಖಾತೆ ಮಾಡಿಸಿಕೊಳ್ಳಲು ಕ್ಷೇತ್ರ ಶಿಕ್ಷಣಾಧಿಕಾರಿ ಹಾಗೂ ಮುಖ್ಯೋಪಾಧ್ಯಾಯರಿಗೆ ಸೂಚನೆ ನೀಡಲಾಗುವುದು ಎಂದು ಸದನದಲ್ಲಿ ಕಂದಾಯ ಸಚಿವ ಕೃಷ್ಣಬೈರೇಗೌಡ ತಿಳಿಸಿದರು.

 

2025-08-13 07:36 GMT

ನಕಲಿ ದಾಖಲೆಗಳನ್ನು ನೀಡಿ ಆಸ್ತಿಯನ್ನು ನೋಂದಣಿ ಮಾಡಿಕೊಳ್ಳಲಾಗುತ್ತಿದೆ ಎಂಬ ದೂರುಗಳು ಬಂದಿವೆ. ಆದ್ದರಿಂದ ಮುಂದಿನ ದಿನಗಳಲ್ಲಿ ಆಸ್ತಿ ನೋಂದಣಿಗೆ ಆಧಾರ್‌ ಕಡ್ಡಾಯಗೊಳಿಸಲಾಗಿದೆ ಎಂದು ಕಂದಾಯ ಸಚಿವ ಕೃಷ್ಣಬೈರೇಗೌಡ ಅಧಿವೇಶನದಲ್ಲಿ ತಿಳಿಸಿದರು.

 

 

 

2025-08-13 07:25 GMT

ಬೆಂಗಳೂರು ನಗರದಲ್ಲಿನ ಕೆರೆ, ರಾಜಕಾಲುವೆ, ಉದ್ಯಾನವನ ಹಾಗೂ ಖರಾಬು ಜಮೀನುಗಳು ಸೇರಿದಂತೆ ಸರ್ಕಾರಿ ಜಮೀನನ್ನು ಸಂರಕ್ಷಣೆ ಮಾಡಬೇಕು ಎಂದು ರಾಜರಾಜೇಶ್ವರಿ ನಗರ ಶಾಸಕ ಮುನಿರತ್ನ ಆಗ್ರಹಿಸಿದರು.

 

Tags:    

Similar News