Assembly Session Day-3 | ಅಸಂಸದೀಯ ಪದ ಬಳಕೆ | ಶಾಸಕರಿಗೆ ಸಿಎಂ ನೀತಿ ಪಾಠ
x

Assembly Session Day-3 | ಅಸಂಸದೀಯ ಪದ ಬಳಕೆ | ಶಾಸಕರಿಗೆ ಸಿಎಂ ನೀತಿ ಪಾಠ

ಟೀಕೆ ಮಾಡುವುದು ಪ್ರತಿಪಕ್ಷಗಳ ಕರ್ತವ್ಯ. ಆದರೆ, ಯಾರೂ ಕೂಡ ತಪ್ಪು ಪದ ಬಳಕೆ ಮಾಡಬೇಡಿ, ರಚನಾತ್ಮಕ ಟೀಕೆ ಮಾಡಿ ಎಂದು ಸದಸ್ಯರಿಗೆ ಸಿಎಂ ಸಿದ್ದರಾಮಯ್ಯ ಅವರು ಎಲ್ಲ ಸದಸ್ಯರಲ್ಲಿ ಮನವಿ ಮಾಡಿದರು.


ವಿಧಾನಸಭೆ ಅಧಿವೇಶನದಲ್ಲಿ ರಸಗೊಬ್ಬರ ಚರ್ಚೆಯ ಮಧ್ಯೆ ವಿಪಕ್ಷ ಹಾಗೂ ಆಡಳಿತ ಪಕ್ಷದ ಸದಸ್ಯರು ಪರಸ್ಪರ ಬೈದಾಡಿಕೊಂಡು ಪ್ರಸಂಗ ಬುಧವಾರ ನಡೆಯಿತು.

ರಸಗೊಬ್ಬರ ವಿಷಯದ ಕುರಿತು ಕೃಷಿ ಸಚಿವ ಚಲುವನಾರಾಯಣ ಸ್ವಾಮಿ ಹಾಗೂ ಬಿಜೆಪಿ ಸದಸ್ಯ ಅಶ್ವತ್ಥ ನಾರಾಯಣ ಮಧ್ಯೆ ಚರ್ಚೆ ನಡೆಯುತ್ತಿದ್ದಾಗ ಕೆ.ಜೆ. ಜಾರ್ಜ್‌ ಮಧ್ಯೆ ಪ್ರವೇಶಿಸಿದರು. ಆಗ ಅಶ್ವತ್ಥನಾರಾಯಣ ಅವರು ಸ್ಮಾರ್ಟ್‌ ಮೀಟರ್‌ ಪ್ರಕರಣ ಪ್ರಸ್ತಾಪಿಸಿ ನೀವು ಹಿಟ್‌ ಅಂಡ್‌ ರನ್‌ ಮಾಡಿದ್ದೀರಿ ಎಂದು ಛೇಡಿಸಿದರು. ಮಾತಿಗೆ ಮಾತು ಬೆಳೆದು ಗದ್ದಲ ಏರ್ಪಟ್ಟಾಗ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಮಧ್ಯಪ್ರವೇಶಿಸಿ, ಭ್ರಷ್ಟಾಚಾರ ಪಿತಾಮಹ ಎಂದು ಜರಿದರು. ಇದಕ್ಕೆ ತಿರುಗೇಟು ನೀಡಿದ ಅಶ್ವತ್ಥನಾರಾಯಣ ಅವರು, ಭ್ರಷ್ಟಾಚಾರದ ಪಿತಾಮಹ ಯಾರೆಂಬುದು ಇಡೀ ರಾಜ್ಯಕ್ಕೆ ಗೊತ್ತಿದೆ ಎಂದು ತಿವಿದರು.

ಈ ಸಂದರ್ಭದಲ್ಲಿ ಡಿ.ಕೆ. ಶಿವಕುಮಾರ್‌ ಸಂಯಮ ಕಳೆದುಕೊಂಡು ಅಶ್ವತ್ಥನಾರಾಯಣ ವಿರುದ್ಧ ಮುಗಿಬಿದ್ದರು. ಇಡೀ ಸದನ ಗದ್ದಲದಲ್ಲಿ ಮುಳುಗಿತು. ಕೂಡಲೇ ಸ್ಪೀಕರ್‌ ಯು.ಟಿ.ಖಾದರ್‌ ಅವರು ಸದನವನ್ನು ಮುಂದೂಡಿಕೆ ಮಾಡಿದರು. ಆದರೂ, ಹತ್ತು ನಿಮಿಷಗಳ ಕಾಲ ಡಿ.ಕೆ. ಶಿವಕುಮಾರ್‌ ಹಾಗೂ ಡಾ.ಸಿ.ಎನ್‌.ಅಶ್ವತ್ಥನಾರಾಯಣ ಅವರು ಏಕವಚನದಲ್ಲೇ ಪರಸ್ಪರ ಬೈದಾಡಿಕೊಂಡರು. ನಂತರ ಸ್ಪೀಕರ್‌ ಅವರು ಎರಡೂ ಕಡೆಯವರನ್ನು ಸಮಾಧಾನಪಡಿಸಿ ಸಂಧಾನ ಮಾಡಿದರು.

ಶಾಸಕರಿಗೆ ಸಿಎಂ ನೀತಿಪಾಠ

ಅಧಿವೇಶನ ಮರು ಆರಂಭವಾದಾಗ ಸಿಎಂ ಸಿದ್ದರಾಮಯ್ಯ ಮಾತನಾಡಿ, ನಾನು ಒಂಬತ್ತು ಚುನಾವಣೆಯಲ್ಲಿ ಗೆದ್ದಿದ್ದೇನೆ. ಲೋಕಸಭಾ ಚುನಾವಣೆಗೆ ನಿಲ್ಲಬಾರದು ಎಂದು ತೀರ್ಮಾನಿಸಿದ್ದೇನೆ ಎಂದು ವಿಧಾನಸಭೆ ಅಧಿವೇಶನದಲ್ಲಿ ಸಿಎಂ ಸಿದ್ದರಾಮಯ್ಯ ತಿಳಿಸಿದರು.

ಸದನದಲ್ಲಿ ಅಸಂಸದೀಯ ಪದಗಳ ಬಳಕೆಗೆ ಬೇಸರ ವ್ಯಕ್ತಪಡಿಸಿದ ಅವರು, ಇನ್ನೊಬ್ಬರಿಗೆ ನೋವುಂಟು ಮಾಡದೇ ಮಾತಾಡುವುದನ್ನು ಎಲ್ಲರೂ ರೂಢಿಸಿಕೊಳ್ಳಬೇಕು. ಅಧಿವೇಶನದ ಗ್ಯಾಲರಿಯಲ್ಲಿ ವಿದ್ಯಾರ್ಥಿಗಳು ಬಂದು ಕೂತಿರುತ್ತಾರೆ. ನಮ್ಮ ನಡವಳಿಕೆ ಗಮನಿಸುತ್ತಾರೆ. ರಾಜ್ಯ ಸರ್ಕಾರದ ಆಡಳಿತವನ್ನು ಟೀಕಿಸಿ, ಅದಕ್ಕೆ ಉತ್ತರ ಕೊಡಲು ನಾನು ಸೇರಿ ಎಲ್ಲ ಸಚಿವರು ಸಿದ್ಧರಿರುತ್ತೇವೆ. ಆದರೆ, ಪದಪ್ರಯೋಗ ವೇಳೆ ಎಚ್ಚರ ವಹಿಸಬೇಕು ಎಂದು ಮನವಿ ಮಾಡಿದರು.

ಟೀಕೆ ಮಾಡುವುದು ಪ್ರತಿಪಕ್ಷಗಳ ಕರ್ತವ್ಯ. ಆದರೆ, ಯಾರೂ ಕೂಡ ತಪ್ಪು ಪದ ಬಳಕೆ ಮಾಡಬೇಡಿ, ರಚನಾತ್ಮಕ ಟೀಕೆ ಮಾಡಿ ಎಂದು ಸದಸ್ಯರಿಗೆ ಸಿಎಂ ನೀತಿ ಪಾಠ ಹೇಳಿದರು.

ಡಿ.ಕೆ.ಶಿವಕುಮಾರ್‌ ಮಾತನಾಡಿ, ಸ್ವಾಭಿಮಾನ, ಆತ್ಮಗೌರವಕ್ಕೆ ಧಕ್ಕೆ ಆದಾಗ ಯಾರೂ ಸಹಿಸಲ್ಲ. ಜಾರ್ಜ್ ಅವರ ಕೈ ಕೆಳಗೆ ನಾನು ಕೆಲಸ ಮಾಡಿದ್ದೇವೆ. ನನಗೆ ಅವರು ನಾಯಕರಿದ್ದಂತೆ, ಅವರಿಗೆ ಅವಮಾನವಾದರೆ ನಾನು ಸಹಿಸಲ್ಲ, ಅವಮಾನ ನೋಡಿಕೊಂಡು ಇದ್ದರೆ ನನ್ನಂತಹ ನಾಲಾಯಕ್ ಯಾರೂ ಇರಲ್ಲ. ನನ್ನ ಭಾಷೆ, ನನ್ನ ವರ್ತನೆ ತಪ್ಪಿರಬಹುದು. ನಾವು ತಪ್ಪು ಮಾಡಿದರೆ ನಮ್ಮನ್ನು ಅಮಾನತು ಮಾಡಿ, ಆತ್ಮಗೌರವಕ್ಕೆ ಧಕ್ಕೆಯಾಗದಂತೆ ನೋಡಿಕೊಳ್ಳಿ ಎಂದು ಸ್ಪೀಕರ್ ಅವರಲ್ಲಿ ಮನವಿ ಮಾಡಿದರು.

ಪ್ರತಿಪಕ್ಷ ನಾಯಕ ಅಶೋಕ್‌ ಮಾತನಾಡಿ, ಕರ್ನಾಟಕದ ವಿಧಾನಸಭೆಗೆ ತನ್ನದೇ ಆದ ಸ್ಥಾನಮಾನವಿದೆ. ಬೇರೆ ರಾಜ್ಯಗಳಿಗೆ ಹೋಲಿಕೆ ಮಾಡಲು ಆಗುವುದೇ ಇಲ್ಲ. ಇಲ್ಲಿ ವೈಯಕ್ತಿಕವಾಗಿ ಟೀಕೆ ಮಾಡುವುದು ಬೇಡ, ನಾವು ವಿರೋಧ ಪಕ್ಷದವರು, ಟೀಕೆ ಮಾಡಲು ನಮ್ಮನ್ನು ಕೂರಿಸಿದ್ದಾರೆ. ಸರ್ಕಾರದ ತಪ್ಪುಗಳನ್ನು ಹೇಳಲೇಬೇಕು. ಹೇಳುವ ರೀತಿ ನೀತಿ, ಭಾಷೆಯ ತಿಳಿದು ಮಾತನಾಡಬೇಕು. ಜತೆಗೆ ಸರ್ಕಾರವೂ ಸಂಯಮದಿಂದ ವರ್ತಿಸಬೇಕು ಎಂದು ಸಲಹೆ ನೀಡಿದರು.

NO MORE UPDATES
Read More
Next Story