ಶಿವಮೊಗ್ಗದಲ್ಲಿ ಮತ್ತೊಂದು ಅಮಾನುಷ ಕೃತ್ಯ: ಗರ್ಭಿಣಿ ಹಸುವಿನ ಕುತ್ತಿಗೆ ಕಡಿದ ದುಷ್ಕರ್ಮಿಗಳು
ದುಷ್ಕರ್ಮಿಗಳು, ಹಸುವಿನ ಕುತ್ತಿಗೆಗೆ ಮಾರಕಾಸ್ತ್ರದಿಂದ ಬಲವಾಗಿ ಹೊಡೆದಿದ್ದಾರೆ. ಕುತ್ತಿಗೆಯ ಮೇಲ್ಭಾಗದಲ್ಲಿ ಸುಮಾರು ಮೂರು ಇಂಚು ಆಳವಾದ ಗಾಯವಾಗಿದ್ದು, ಮಾಂಸ ಕಳಚಿಕೊಂಡು ಮೂಳೆ ಕಾಣುವಂತಾಗಿದೆ.;
ಸಾಂದರ್ಭಿಕ ಚಿತ್ರ
ರಾಜ್ಯದಲ್ಲಿ ಜಾನುವಾರುಗಳ ಮೇಲೆ ನಡೆಯುತ್ತಿರುವ ಸರಣಿ ಹಿಂಸಾಚಾರಕ್ಕೆ ಮತ್ತೊಂದು ಘೋರ ಪ್ರಕರಣ ಸೇರ್ಪಡೆಯಾಗಿದೆ. ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕಿನ ಚಂದವಳ್ಳಿ ಗ್ರಾಮದಲ್ಲಿ ಮೇಯಲು ಬಿಟ್ಟಿದ್ದ ಗರ್ಭಿಣಿ ಹಸುವಿನ ಕುತ್ತಿಗೆಯನ್ನು ಕತ್ತಿಯಿಂದ ಕಡಿದು ಗಾಯಗೊಳಿಸಿರುವ ಆತಂಕಕಾರಿ ಘಟನೆ ಸೋಮವಾರ ಬೆಳಕಿಗೆ ಬಂದಿದೆ. ಈ ಅಮಾನುಷ ಕೃತ್ಯಕ್ಕೆ ಜಾನುವಾರು ಪ್ರಿಯರು ಮತ್ತು ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ.
ಚಂದವಳ್ಳಿ ಗ್ರಾಮದ ನಿವಾಸಿ ಶ್ಯಾಮಣ್ಣ ಎಂಬುವವರಿಗೆ ಸೇರಿದ ಎಂಟು ತಿಂಗಳ ಗರ್ಭಿಣಿ ಹಸು ಇದಾಗಿದ್ದು, ಎಂದಿನಂತೆ ತೋಟದಲ್ಲಿ ಮೇಯಲು ಹೋಗಿತ್ತು. ಈ ಸಂದರ್ಭದಲ್ಲಿ ಹೊಂಚು ಹಾಕಿದ್ದ ದುಷ್ಕರ್ಮಿಗಳು, ಹಸುವಿನ ಕುತ್ತಿಗೆಗೆ ಮಾರಕಾಸ್ತ್ರದಿಂದ ಬಲವಾಗಿ ಹೊಡೆದಿದ್ದಾರೆ. ಕುತ್ತಿಗೆಯ ಮೇಲ್ಭಾಗದಲ್ಲಿ ಸುಮಾರು ಮೂರು ಇಂಚು ಆಳವಾದ ಗಾಯವಾಗಿದ್ದು, ಮಾಂಸ ಕಳಚಿಕೊಂಡು ಮೂಳೆ ಕಾಣುವಂತಾಗಿದೆ. ಸಂಜೆ ಮನೆಗೆ ಹಿಂದಿರುಗುವಾಗ ರಕ್ತದ ಮಡುವಿನಲ್ಲಿ ಬಿದ್ದಿದ್ದ ಹಸುವನ್ನು ಕಂಡ ಸ್ಥಳೀಯರು, ತಕ್ಷಣ ಮಾಲೀಕ ಶ್ಯಾಮಣ್ಣ ಅವರಿಗೆ ವಿಷಯ ತಿಳಿಸಿದ್ದಾರೆ.
ಕೂಡಲೇ ಸ್ಥಳಕ್ಕೆ ಪಶುವೈದ್ಯರನ್ನು ಕರೆಸಿ ಗಾಯಗೊಂಡ ಹಸುವಿಗೆ ಚಿಕಿತ್ಸೆ ನೀಡಲಾಗಿದೆ. ಆದರೆ, ಈ ಅಮಾನುಷ ಕೃತ್ಯ ಎಸಗಿದವರು ಯಾರು ಎಂಬುದು ಇನ್ನೂ ಪತ್ತೆಯಾಗಿಲ್ಲ ಎಂದು ಮಾಲೀಕರ ಪುತ್ರ ಸ್ವರೂಪ್ ತಿಳಿಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಯಾವುದೇ ಪೊಲೀಸ್ ದೂರು ಇನ್ನೂ ದಾಖಲಾಗಿಲ್ಲ.
ರಾಜ್ಯದಲ್ಲಿ ಮುಂದುವರಿದ ಗೋಹಿಂಸೆ
ಬೆಂಗಳೂರು ಹೊರವಲಯದ ನೆಲಮಂಗಲ ಬಳಿ ಎರಡು ಹಳ್ಳಿಕಾರ್ ಹೋರಿಗಳ ರುಂಡ ಕತ್ತರಿಸಿ ಸೇತುವೆಯ ಕೆಳಗೆ ಎಸೆದ ಘಟನೆ ನಡೆದ ಬೆನ್ನಲ್ಲೇ ಈ ದುಷ್ಕೃತ್ಯ ಸಂಭವಿಸಿದೆ. ರಾಜ್ಯದ ವಿವಿಧೆಡೆ ಹಸುಗಳ ಹತ್ಯೆ, ಕುತ್ತಿಗೆ ಸೀಳುವುದು ಮತ್ತು ಕೆಚ್ಚಲು ಕತ್ತರಿಸುವಂತಹ ವಿಕೃತ ಘಟನೆಗಳು ಪದೇ ಪದೇ ವರದಿಯಾಗುತ್ತಿದ್ದು, ಇದು ಹಿಂದೂಪರ ಸಂಘಟನೆಗಳು ಹಾಗೂ ಸಾರ್ವಜನಿಕರ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.