ಅಕ್ರಮ ಕಬ್ಬಿಣ ಅದಿರು ರಫ್ತು ಪ್ರಕರಣ: 12.84 ಕೋಟಿ ರೂ. ಮುಟ್ಟುಗೋಲು ಹಾಕಿಕೊಂಡ ಇಡಿ
ಬೆಂಗಳೂರು, ಹೊಸಪೇಟೆ, ಗುರುಗ್ರಾಮ ಸೇರಿ 20 ಕಡೆಗಳಲ್ಲಿ ಇಡಿ ಅಧಿಕಾರಿಗಳು ಇತ್ತೀಚೆಗೆ ದಾಳಿ ನಡೆಸಿದ್ದರು. ಈ ವೇಳೆ ಬ್ಯಾಂಕ್ ಖಾತೆ ಪರಿಶೀಲಿಸಿ 12.84 ಕೋಟಿ ರೂ. ಹಣವನ್ನು ಜಪ್ತಿ ಮಾಡಿದ್ದಾರೆ.
ಬೇಲೆಕೇರಿ ಬಂದರಿನಿಂದ ಅಕ್ರಮವಾಗಿ ಕಬ್ಬಿಣದ ಅದಿರನ್ನು ರಫ್ತು ಪ್ರಕರಣದ ತನಿಖೆ ನಡೆಸುತ್ತಿರುವ ಜಾರಿ ನಿರ್ದೇಶನಾಲಯದ (ಇ.ಡಿ) ಅಧಿಕಾರಿಗಳು, ಅದಿರು ರಫ್ತು ಮಾಡಿದ್ದ ಕಂಪೆನಿಗಳ ಮೇಲೆ ದಾಳಿ ನಡೆಸಿ ಬ್ಯಾಂಕ್ ಖಾತೆಯಲ್ಲಿದ್ದ 12.84 ಕೋಟಿ ರೂ. ಮುಟ್ಟುಗೋಲು ಹಾಕಿಕೊಂಡಿದ್ದಾರೆ.
ಬೆಂಗಳೂರು, ಹೊಸಪೇಟೆ, ಗುರುಗ್ರಾಮ ಸೇರಿದಂತೆ 20 ಕಡೆಗಳಲ್ಲಿ ಇಡಿ ಅಧಿಕಾರಿಗಳು ಇತ್ತೀಚೆಗೆ ದಾಳಿ ನಡೆಸಿದ್ದರು. ಶೋಧ ಕಾರ್ಯ ವೇಳೆ ಅಕ್ರಮವಾಗಿ ಸಾಗಾಟ ಮಾಡಿರುವ ಬಗ್ಗೆ ವಿವಿಧ ಮಹತ್ವದ ದಾಖಲಾತಿಗಳನ್ನು ಪತ್ತೆ ಹಚ್ಚಿತ್ತು. ಲಾಭ ಪಡೆದ ಕಂಪೆನಿಗಳ ಬ್ಯಾಂಕ್ ಖಾತೆಗಳನ್ನು ಪರಿಶೀಲಿಸಿ 12.84 ಕೋಟಿ ರೂ. ಹಣವನ್ನು ಜಪ್ತಿ ಮಾಡಿದ್ದಾರೆ. ಈ ನಡುವೆ, 42 ಲಕ್ಷ ರೂ. ನಗದನ್ನು ಸಹ ವಶಕ್ಕೆ ಪಡೆದುಕೊಳ್ಳಲಾಗಿದೆ ಎಂದು ಇಡಿ ಹೇಳಿದೆ.
ಸುಪ್ರೀಂಕೋರ್ಟ್ ಆದೇಶದ ಮೇರೆಗೆ 50 ಟನ್ ಮೆಟ್ರಿಕ್ ಟನ್ಗಿಂತ ಅಕ್ರಮವಾಗಿ ಅದಿರು ಸಾಗಾಟ ಮಾಡಿರುವ ಕಂಪೆನಿಗಳ ವಿರುದ್ಧ ಸಿಬಿಐ ತನಿಖೆ ನಡೆಸಿ ಈಗಾಗಲೇ ಆರೋಪಪಟ್ಟಿ ಸಲ್ಲಿಸಲಾಗಿದೆ. ಕಳ್ಳ ಮಾರ್ಗದ ಮೂಲಕ ಅದಿರು ರಫ್ತು ಜತೆಗೆ ಕೋಟ್ಯಂತರ ರೂಪಾಯಿ ಹಣ ವರ್ಗಾವಣೆಯಾಗಿರುವುದು ಸಿಬಿಐ ತನಿಖೆಯಲ್ಲಿ ಬಹಿರಂಗವಾಗಿತ್ತು. ಈ ಸಂಬಂಧ ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯಡಿ (ಪಿಎಂಎಲ್ಎ) ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿರುವುದಾಗಿ ತಿಳಿಸಿದೆ.
ಬೇಲೆಕೇರಿ ಬಂದರಿನ ಮೂಲಕ ಅಕ್ರಮವಾಗಿ ಅದಿರು ಸಾಗಾಟ ಮಾಡಿದ್ದ ಎಂಎಸ್ಪಿಎಲ್ ಲಿಮಿಟೆಡ್ (ನರೇಂದ್ರ ಕುಮಾರ್), ಗ್ರೀನ್ ಟೆಕ್ಸ್ ಮೈನಿಂಗ್ ಇಂಡಸ್ಟ್ರೀಸ್ ಲಿಮಿಟೆಡ್ (ಅಜಯ್ ಖರ್ವಾಂಡ), ಶ್ರೀನಿವಾಸ್ ಮಿನರಲ್ಸ್ ಟ್ರೇಡಿಂಗ್ (ವೈ.ಶ್ರೀನಿವಾಸ್ ರಾವ್ ), ಅರ್ಷದ್ ಎಕ್ಸ್ಪರ್ಟ್ (ಎಂ.ಡಿ.ಆಸ್ಗರ್ ಖಾನ್) ಎಸ್ವಿಎಂ ನೆಟ್ ಪ್ರಾಜೆಕ್ಟ್ ಸೆಲ್ಯೂಷನ್ಸ್ ಲಿ. (ಬಸವರಾಜ್ ಬಿ) ಹಾಗೂ ಅಲ್ಫೇನ್ಸ್ ಮಿನಿಮೆಟಲ್ಸ್ ಇಂಡಿಯಾ ಪ್ರೈವೇಟ್ ಲಿ. (ಗಗನ್ ಶುಕ್ಲಾ) ಕಂಪೆನಿಗಳು ಸರ್ಕಾರಕ್ಕೆ ತೆರಿಗೆ ಪಾವತಿಸದೆ ಅಕ್ರಮ ಹಣ ಸಂಪಾದಿಸಿದ ಕಂಪೆನಿಗಳಾಗಿವೆ. ಈ ಬಗ್ಗೆ ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ. ಬೇಲೆಕೇರಿ ಬಂದರಿನ ಮೂಲಕ ಕಾಂಗ್ರೆಸ್ ಶಾಸಕ ಸತೀಶ್ ಸೈಲ್ಗೆ ಸೇರಿದ ಕಂಪೆನಿ ಮೂಲಕ ಅಕ್ರಮ ಅದಿರು ಸಾಗಾಟ ಪ್ರಕರಣದಲ್ಲಿ ಶಾಸಕರನ್ನು ಕಳೆದ ಸೆಪ್ಟೆಂಬರ್ನಲ್ಲಿ ಇಡಿ ಬಂಧಿಸಿತ್ತು.
50 ಸಾವಿರ ಮೆಟ್ರಿಕ್ ಟನ್ಗಿಂತ ಹೆಚ್ಚು ಅದಿರು ರಫ್ತು ಮಾಡಿದ ಆರು ಕಂಪೆನಿಗಳು ಅವ್ಯವಹಾರ ನಡೆಸಿರುವುದು ಕಂಡುಬಂದಿದೆ. ವ್ಯಾಪಾರಿಗಳು, ಸಾಗಾಣೆದಾರರು ಹಾಗೂ ರಫ್ತು ಮಾಡಿದ ಕಂಪೆನಿಗಳು ಒಟ್ಟುಗೂಡಿ ವ್ಯವಸ್ಥಿತವಾಗಿ ರಾಜ್ಯ ಸರ್ಕಾರಕ್ಕೆ ತೆರಿಗೆ ಹಾಗೂ ರಾಯಧನ ಪಾವತಿಸದೆ ವಂಚಿಸಿವೆ. ತಪ್ಪು ಲೆಕ್ಕ ತೋರಿಸಿ ಹೆಚ್ಚು ಪ್ರಮಾಣದಲ್ಲಿ ಕೋಟ್ಯಂತರ ಮೌಲ್ಯದ ಅದಿರು ಸಾಗಿಸಿ ಆರು ಕಂಪೆನಿಗಳು ಲಾಭಪಡೆದುಕೊಂಡಿವೆ. ಅಕ್ರಮವಾಗಿ ಅದಿರು ಅಗೆದು ಸಾಗಿಸಿ ಮಾರಾಟ ಮಾಡಿಕೊಂಡಿರುವುದು ತಿಳಿದುಬಂದಿದೆ. ಈ ಬಗ್ಗೆ ರಫ್ತು ಮಾಡಿರುವ ಬಗ್ಗೆ ಸರಿಯಾದ ದಾಖಲೆ ನೀಡುವಲ್ಲಿ ಕಂಪೆನಿಗಳು ವಿಫಲವಾಗಿವೆ ಎಂದು ಇಡಿ ಹೇಳಿದೆ.