ತೆರಿಗೆ ಪಾಲು ನೀಡಿದ್ದರೆ ರಾಜಕೀಯ ತೊರೆಯುವೆ, ಜೋಶಿ ಬಿಡುತ್ತಾರಾ?; ಸಿಎಂ ಸಿದ್ದರಾಮಯ್ಯ ಸವಾಲು

ರಾಜ್ಯದಿಂದ ವಾರ್ಷಿಕ 4.50 ಲಕ್ಷ ಕೋಟಿ ರೂ.ಗೂ ಹೆಚ್ಚು ಮೊತ್ತವನ್ನು ತೆರಿಗೆ ರೂಪದಲ್ಲಿ ನೀಡುತ್ತಿದ್ದೇವೆ. ನಮಗೆ ವಾಪಸ್ ಬರುವುದು 55 ರಿಂದ 60 ಸಾವಿರ ಕೋಟಿ ರೂ. ಮಾತ್ರ ಎಂದು ಸಿಎಂ ವಿವರಿಸಿದರು.

Update: 2024-11-04 10:37 GMT

ಕೇಂದ್ರ ಹಣಕಾಸು ಆಯೋಗದ ಶಿಫಾರಸಿನಂತೆ ಕರ್ನಾಟಕಕ್ಕೆ ವಿಶೇಷ ಅನುದಾನ ನೀಡಿದ್ದರೆ ನಾನೀಗಲೇ ರಾಜಕೀಯ ಬಿಟ್ಟು ಹೋಗುವೆ. ಒಂದು ವೇಳೆ ಅನುದಾನ ಕೊಟ್ಟಿಲ್ಲ ಎನ್ನುವುದಾದರೆ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ರಾಜೀನಾಮೆ ಕೊಡುತ್ತಾರಾ ಎಂದು ಸಿಎಂ ಸಿದ್ದರಾಮಯ್ಯ ಸವಾಲು ಹಾಕಿದರು.

ಹುಬ್ಬಳ್ಳಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರಾಜ್ಯಕ್ಕೆ 11,495 ಕೋಟಿ ರೂ. ವಿಶೇಷ ಅನುದಾನ ನೀಡಲಾಗಿದೆ ಎಂಬುದು ಸುಳ್ಳು. ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಸುಳ್ಳು ಹೇಳಿಕೊಂಡು ರಾಜಕೀಯ ಮಾಡುತ್ತಿದ್ದಾರೆ. ಕೇಂದ್ರ ಸರ್ಕಾರ 11,495 ಕೋಟಿ. ರೂ. ಕೊಟ್ಟಿದ್ದರೆ ನಾನು ರಾಜಕೀಯ ಬಿಟ್ಟು ಹೋಗುತ್ತೇನೆ. ಪ್ರಹ್ಲಾದ ಜೋಶಿ ಬಿಡುತ್ತಾರೆಯೇ ಕೇಳಿ ಎಂದು ಪ್ರಶ್ನಿಸಿದರು.

ತೆರಿಗೆ ವಿಚಾರದಲ್ಲಿ ಕೇಂದ್ರ ಸರ್ಕಾರದಿಂದ ಆಗುತ್ತಿರುವ ಅನ್ಯಾಯದ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು, 16 ನೇ ಹಣಕಾಸು ಆಯೋಗದವರು ಬೆಂಗಳೂರಿಗೆ ಭೇಟಿ ನೀಡಿದಾಗ 15 ನೇ ಹಣಕಾಸು ಆಯೋಗದಿಂದ ಕರ್ನಾಟಕಕ್ಕೆ ಅನ್ಯಾಯವಾಗಿರುವ ಬಗ್ಗೆ ಗಮನ ಸೆಳೆದಿದ್ದೇವೆ. ಸುಮಾರು 4.50 ಲಕ್ಷ ಕೋಟಿ ರೂ.ಗೂ ಹೆಚ್ಚು ಮೊತ್ತವನ್ನು ವಾರ್ಷಿಕ ತೆರಿಗೆ ರೂಪದಲ್ಲಿ ನೀಡುತ್ತಿದ್ದೇವೆ. ಆದರೆ, ನಮಗೆ ವಾಪಸ್ ಬರುವುದು 55 ರಿಂದ 60 ಸಾವಿರ ಕೋಟಿ ರೂ. ಮಾತ್ರ. ಇದು ನ್ಯಾಯವೇ? ಎಂದು ಪ್ರಶ್ನಿಸಿದರು. ಈ ಬಗ್ಗೆ ಹೋರಾಡುತ್ತಿದ್ದೇವೆ. ಬಿಜೆಪಿಯ ಪ್ರಹ್ಲಾದ್ ಜೋಶಿ, ಬಸವರಾಜ ಬೊಮ್ಮಾಯಿ, ಜಗದೀಶ್ ಶೆಟ್ಟರ್ ಎಂದಾದರೂ ಮಾತನಾಡಿದ್ದಾರೆಯೇ? ಎಂದು ವಾಗ್ದಾಳಿ ನಡೆಸಿದರು.

ಕರ್ನಾಟಕಕ್ಕೆ ಅನ್ಯಾಯವಾಗಿದೆ ಎಂದರೆ ಅದು ರಾಜಕೀಯ ಅನ್ನುತ್ತಾರೆ. ಇಂತಹವರಿಗೆ ಏನು ಹೇಳಬೇಕು?. ನ್ಯಾಯಾಲಯಕ್ಕೆ ಹೋದರೆ ನ್ಯಾಯ ಸಿಗುತ್ತದೆ ಎಂದು ಭಾವಿಸಿಲ್ಲ, ಏಕೆಂದರೆ 5 ವರ್ಷಕ್ಕೊಮ್ಮೆ ಸಂವಿಧಾನದ ಪ್ರಕಾರವೇ ಹಣಕಾಸಿನ ಆಯೋಗ ರಚನೆಯಾಗುತ್ತದೆ. ಆಯೋಗದ ಶಿಫಾರಸ್ಸಿನ ಮೇಲೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಗೆ ತೆರಿಗೆ ಪಾಲು ನಿರ್ಧಾರವಾಗುತ್ತದೆ ಎಂದರು.

15 ನೇ ಹಣಕಾಸು ಆಯೋಗವು ರಾಜ್ಯಕ್ಕೆ 5495 ಕೋಟಿ ರೂ. ವಿಶೇಷ ಅನುದಾನ, ಪೆರಿಫೆರಲ್ ರಿಂಗ್ ರೋಡ್ ಹಾಗೂ ಕೆರೆಗಳ ಅಭಿವೃದ್ಧಿಗೆ ತಲಾ 3000 ಕೋಟಿ ರೂ. ನೀಡಲು ಶಿಫಾರಸು ಮಾಡಿತ್ತು. ಆದರೆ, ನಮಗೆ ತೆರಿಗೆ ಪಾಲು ಒಟ್ಟು 11495 ಕೋಟಿ ರೂ. ಕೊಡಬೇಕಾಗಿತ್ತು. ಅವರು ಕೊಡಲಿಲ್ಲ.ಇದನ್ನು ನಾವು ಕೇಳಬೇಕಲ್ಲವೇ, ಪ್ರಹ್ಲಾದ ಜೋಶಿ ಅವರು ಯಾಕೆ ಕೇಳಲಿಲ್ಲ ಎಂದು ಪ್ರಶ್ನಿಸಿದರು.

ಗ್ಯಾರೆಂಟಿಗೆ ಬಿಜೆಪಿಗರ ವಿರೋಧ

ಬಿಜೆಪಿಯವರು ಗ್ಯಾರೆಂಟಿ ಯೋಜನೆಗಳ ವಿರುದ್ದವಾಗಿದ್ದಾರೆ. ನಾವು ಗ್ಯಾರೆಂಟಿ ಯೋಜನೆಗಳ ಮೂಲಕ ಎಲ್ಲಾ ಜಾತಿ, ಧರ್ಮದವರಿಗೆ ಆರ್ಥಿಕ ಹಾಗೂ ಸಾಮಾಜಿಕ ಶಕ್ತಿ ತುಂಬುತ್ತಿದ್ದೇವೆ. ಅವರು ಮುಖ್ಯವಾಹಿನಿಗೆ ಬರಬೇಕೆಂದು ಯೋಜನೆ ನೀಡಿದ್ದೇವೆ. ಆದರೆ, ಬಿಜೆಪಿಯವರಿಗೆ ಸಮಾನತೆ ಬರಬಾರದು. ಅದಕ್ಕೆ ಅವರನ್ನು ಬಡತನ ವಿರೋಧಿಗಳು ಎಂದು ಕರೆಯುವುದು. ಬಡವರಿಗೆ ಆರ್ಥಿಕ, ಸಾಮಾಜಿಕ ಶಕ್ತಿ ಬರಬಾರದೆಂಬ ತತ್ವದಲ್ಲಿ ಬಿಜೆಪಿಗೆ ನಂಬಿಕೆ ಇದೆ. ಬಿಜೆಪಿ ಪಕ್ಷ 600 ಭರವಸೆ ಗಳನ್ನು 2018 ರಲ್ಲಿ ನೀಡಿತ್ತು. ಅವುಗಳಲ್ಲಿ ಎಷ್ಟು ಈಡೇರಿಸಿದೆ ಎಂದು ಪ್ರಶ್ನಿಸಿದರು.

ನಾವು 165 ಭರವಸೆ ಕೊಟ್ಟು 158 ಈಡೇರಿಸಿದ್ದಾಗಿ ಲೆಕ್ಕ ಕೊಡುತ್ತಿದ್ದೇವೆ. ಅವರು ಎಷ್ಟು ಭರವಸೆ ನೀಡಿ ಎಷ್ಟನ್ನು ಈಡೇರಿಸಿದ್ದಾರೆ ಎನ್ನುವ ಲೆಕ್ಕ ಕೊಡುತ್ತಾರೆಯೇ ಎಂದು ಸವಾಲು ಹಾಕಿದರು.

ಪ್ರತಾಪ್ ಸಿಂಹ ಮಹಾನ್ ಕೋಮುವಾದಿ

ಮಾಜಿ ಸಂಸದ ಪ್ರತಾಪ್ ಸಿಂಹ ಹೇಳಿಕೆ ಕುರಿತು ಪ್ರತಿಕ್ರಿಯೆ ನೀಡಿದ ಮುಖ್ಯಮಂತ್ರಿಗಳು ಅವರೊಬ್ಬ ಮಹಾನ್ ಕೋಮುವಾದಿ. ಕೋಮುವಾದಿಗಳಿಂದ ಇನ್ನೇನು ನಿರೀಕ್ಷೆ ಮಾಡಲಾಗುತ್ತದೆ. ಅವರಿಗೆ ಸಂವಿಧಾನ, ಪ್ರಜಾಪ್ರಭುತ್ವದ ಬಗ್ಗೆ ಗೌರವವಿಲ್ಲ ಎಂದು ಟೀಕಿಸಿದರು.

ಸಮಾಜವನ್ನು ಜಾತಿ, ಧರ್ಮದ ಹೆಸರಿನಲ್ಲಿ ಒಡೆಯುವುದೇ ಅವರ ರಾಜಕಾರಣ. ಕೋಮುವಾದದಲ್ಲಿ ತೊಡಗಿ ರಾಜಕೀಯದಲ್ಲಿ ಬದುಕಲು ಹಾಗು ಮತ ಪಡೆಯಲು ಪ್ರಯತ್ನ ಮಾಡುತ್ತಾರೆ ಎಂದರು.

ಗ್ಯಾರಂಟಿ ಯೋಜನೆ ಅಭಿವೃದ್ಧಿಯಲ್ಲವೇ?

ಅಭಿವೃದ್ಧಿ ಬಗ್ಗೆ ಚರ್ಚೆ ಯಾರೊಬ್ಬರೂ ಮಾಡುತ್ತಿಲ್ಲ ಎಂಬ ವಿಪಕ್ಷಗಳ ಹೇಳಿಕೆ ಬಗ್ಗೆ ಪ್ರತಿಕ್ರಿಯೆ ನೀಡಿದ ಸಿಎಂ ಅವರು, ಗ್ಯಾರಂಟಿ ಯೋಜನೆಗಳು ಅಭಿವೃದ್ಧಿಯಲ್ಲವೇ? ಹಿಂದೆ ಸಿಎಂ ಆಗಿದ್ದಾಗ 165 ಭರವಸೆ ಕೊಟ್ಟು 158 ಭರವಸೆಗಳನ್ನು ಈಡೇರಿಸಿದೆವು. ಅವು ಅಭಿವೃದ್ಧಿಯಲ್ಲವೆ ಎಂದು ಪ್ರಶ್ನಿಸಿದರು.

3 ಲಕ್ಷದ 71 ಸಾವಿರ ಕೋಟಿ ರೂಪಾಯಿಗಳಲ್ಲಿ 52 ಸಾವಿರ ಕೋಟಿ ಗ್ಯಾರಂಟಿಗಳಿಗೆ ವೆಚ್ಚ ಮಾಡುತ್ತಿದ್ದೇವೆ. ಸುಮಾರು 60 ಸಾವಿರ ಕೋಟಿ ಅಭಿವೃದ್ಧಿಗೆ ವೆಚ್ಚ ಮಾಡುತ್ತಿದ್ದೇವೆ. ನೀರಾವರಿ, ಲೋಕೋಪಯೋಗಿ, ಗ್ರಾಮೀಣಾಭಿವೃದ್ಧಿ ರಸ್ತೆ, ಸೇತುವೆ, ನಿರ್ಮಾಣಕ್ಕಾಗಿ ವೆಚ್ಚವಾಗುತ್ತಿದೆ. ಇವೆಲ್ಲ ಅಭಿವೃದ್ದಿಯಲ್ಲವೇ ಎಂದರು.

ಶಿಗ್ಗಾವಿಯಲ್ಲಿ ಗೆಲುವಿನ ವಿಶ್ವಾಸ

ಇಂದು(ನ.4) ಮತ್ತು ನಾಳೆ ಎರಡು ದಿನ ಶಿಗ್ಗಾವಿ ಕ್ಷೇತ್ರದಲ್ಲಿ ಪ್ರಚಾರ ಮಾಡಲಾಗುವುದು. ಶಿಗ್ಗಾವಿ ಯಲ್ಲಿ ನೂರಕ್ಕೇ ನೂರು ಕಾಂಗ್ರೆಸ್ ಅಭ್ಯರ್ಥಿ ಗೆಲ್ಲಲಿದ್ದಾರೆ ಎಂದು ಸಿಎಂ ವಿಶ್ವಾಸ ವ್ಯಕ್ತಪಡಿಸಿದರು. ಕಳೆದ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗೆ ಲೀಡ್ ಬಂದಿತ್ತು. ಈ ಬಾರಿಯೂ ಕೂಡ ನಮಗೆ ಮುನ್ನಡೆ ದೊರೆಯಲಿದೆ ಎಂದು ತಿಳಿಸಿದರು.

Tags:    

Similar News