ಪ್ರಧಾನಿ ಮಾಡ್ತೀನಿ ಎಂದರೂ ಬಿಜೆಪಿ ಕಡೆ ತಲೆ ಹಾಕುವುದಿಲ್ಲ: ಸಿಎಂ ಸಿದ್ದರಾಮಯ್ಯ

ನಿಮ್ಮನ್ನು ಭಾವನಾತ್ಮಕವಾಗಿ ಕೆರಳಿಸಿ, ನಿಮ್ಮ ಬದುಕಿಗೆ ಕೊಳ್ಳಿ ಇಡುವವರೊಂದಿಗೆ ಸೇರದೆ, ಕಾಂಗ್ರೆಸ್ ಅಭ್ಯರ್ಥಿ ಎಂ.ಲಕ್ಷ್ಮಣ್ ಅವರನ್ನು ಗೆಲ್ಲಿಸಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮನವಿ ಮಾಡಿದರು.;

Update: 2024-04-03 14:39 GMT
ಚುನಾವಣಾ ಪ್ರಚಾರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ

ನನ್ನನ್ನು ರಾಷ್ಟ್ರಪತಿ, ಪ್ರಧಾನ ಮಂತ್ರಿ ಮಾಡ್ತೀನಿ ಎಂದು ಹೇಳಿದರೂ ನಾನು ಬಿಜೆಪಿ ಕಡೆ ತಲೆಹಾಕುವುದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ಮೈಸೂರಿನ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಪರಿಶಿಷ್ಟ ಜಾತಿ, ವರ್ಗಗಳ ಕಾರ್ಯಕರ್ತರು ಮತ್ತು ಮುಖಂಡರ ಸಭೆಯಲ್ಲಿ ಮೈಸೂರು - ಕೊಡಗು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಎಂ.ಲಕ್ಷ್ಮಣ್ ಪರ ಮತಯಾಚಿಸಿ ಮಾತನಾಡಿದರು.

ನಮಗೆ ಸೈದ್ಧಾಂತಿಕ ಸ್ಪಷ್ಟತೆ ಇದ್ದರಷ್ಟೇ ರಾಜಕೀಯ ಶಕ್ತಿ ಬರುತ್ತದೆ. ಹೀಗಾಗಿ ಬಿಜೆಪಿ – ಆರ್‌ಎಸ್ಎಸ್ ಕಡೆ ಹೋಗಬೇಡಿ, ಮೋದಿ ಪ್ರಧಾನಿಯಾದರೆ ದೇಶ ತೊರೆಯುತ್ತೇನೆ ಎಂದು ದೇವೇಗೌಡ ಅವರು ಹೇಳಿದ್ದರು. ಇದೀಗ ಮೋದಿಗೂ ತಮಗೂ ಅವಿನಾಭಾವ ಸಂಬಂಧ ಇದೆ ಎನ್ನುತ್ತಿದ್ದಾರೆ. ರಾಜಕಾರಣಿಯಾದವರಿಗೆ ಸೈದ್ಧಾಂತಿಕ ಸ್ಪಷ್ಟತೆ ಇರಬೇಕು ಎಂದರು.

ಶೂದ್ರರು, ದಲಿತರು ಹಾಗೂ ಮಹಿಳೆಯರಿಗೆ ಆರ್‌ಎಸ್‌ಎಸ್ ಗರ್ಭಗುಡಿಯೊಳಗೆ ಪ್ರವೇಶ ಕೊಡುವುದಿಲ್ಲ. ಬಿಜೆಪಿ ಹಾಗೂ ಆರ್‌ಎಸ್‌ಎಸ್ ಸಾಮಾಜಿಕ ನ್ಯಾಯದ ವಿರೋಧಿ. ಹೀಗಾಗಿ ಮೀಸಲಾತಿಯನ್ನು ಅವರು ಇಷ್ಟ ಪಡುವುದಿಲ್ಲ. ಮೀಸಲಾತಿ ಶೋಷಿತ ಜನ ಸಮುದಾಯಗಳ ಹಕ್ಕು. ಎಲ್ಲಿಯವರೆಗೆ ಜಾತಿ ವ್ಯವಸ್ಥೆ ಇರುತ್ತದೆಯೋ ಅಲ್ಲಿಯವರೆಗೂ ಮೀಸಲಾತಿ ಇದ್ದೇ ಇರಬೇಕು ಎಂದರು.

ಆರ್‌ಎಸ್‌ಎಸ್‌ನೊಂದಿಗೆ ಜೆಡಿಎಸ್ ಸೇರಿಕೊಂಡಿದೆ. ಅದನ್ನು ನಾವು ಟೀಕೆ ಮಾಡಬಾರದೇ ಎಂದು ಪ್ರಶ್ನಿಸಿದ ಅವರು, ದಲಿತರ ಜನಸಂಖ್ಯೆಗೆ ಅನುಗುಣವಾಗಿ ಬಜೆಟ್‌ನಲ್ಲಿ ಹಣ ಮೀಸಲಿಡುವ ಕಾನೂನನ್ನು ಜಾರಿಗೆ ತಂದಿದ್ದು ಕಾಂಗ್ರೆಸ್. ಅಭಿವೃದ್ಧಿ ಹಣದಲ್ಲಿ ಶೇ 24.1% ಹಣ ಮೀಸಲಿಡಬೇಕು ಎನ್ನುವ ಕಾನೂನನ್ನು ಜಾರಿ ಮಾಡಿದ್ದು ನಮ್ಮ ಸರ್ಕಾರ. ಈ ಪ್ರಗತಿಪರ ಕಾನೂನನ್ನು ದೇಶದಲ್ಲಿ ಬಿಜೆಪಿಯ ಯಾವ ಸರ್ಕಾರವೂ ಜಾರಿ ಮಾಡಿಲ್ಲ. ಮಾಡಿರುವುದು ನಮ್ಮ ಕಾಂಗ್ರೆಸ್ ಸರ್ಕಾರ ಮಾತ್ರ.  ಇದನ್ನೆಲ್ಲಾ ಜನ ಸಮುದಾಯ ತಿಳಿದುಕೊಳ್ಳಬೇಕು. ನಿಮ್ಮನ್ನು ಭಾವನಾತ್ಮಕವಾಗಿ ಕೆರಳಿಸಿ, ನಿಮ್ಮ ಬದುಕಿಗೆ ಕೊಳ್ಳಿ ಇಡುವವರೊಂದಿಗೆ ಸೇರದೆ, ಕಾಂಗ್ರೆಸ್ ಅಭ್ಯರ್ಥಿ ಎಂ.ಲಕ್ಷ್ಮಣ್ ಅವರನ್ನು ಗೆಲ್ಲಿಸಿ ಎಂದು ಮನವಿ ಮಾಡಿದರು.

ಸಮಾಜಕಲ್ಯಾಣ ಸಚಿವ ಎಚ್.ಸಿ. ಮಹದೇವಪ್ಪ, ಕೆಪಿಸಿಸಿ ಕಾರ್ಯಾಧ್ಯಕ್ಷ ತನ್ವೀರ್ ಸೇಠ್, ಲೋಕಸಭಾ ಅಭ್ಯರ್ಥಿ ಲಕ್ಷ್ಮಣ್ ಸೇರಿದಂತೆ ಹಲವರು ಇದ್ದರು.

Tags:    

Similar News