ಸಿದ್ದರಾಮಯ್ಯ ಬೆಂಬಲಕ್ಕೆ ನಿಂತ ಲಿಂಗಾಯತ ಸಮುದಾಯ: ಸಿಎಂ ಬದಲಾವಣೆಗೆ ಬಿತ್ತಾ ಬ್ರೇಕ್‌?

ಲಿಂಗಾಯತ ಸಮುದಾಯದ ಕೆಲವು ಪ್ರಮುಖ ಮುಖಂಡರು ಹಾಗೂ ಸಂಘಟನೆಗಳು ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರಕ್ಕೆ ಬೆಂಬಲ ವ್ಯಕ್ತಪಡಿಸಿರುವುದು ರಾಜಕೀಯ ವಲಯದಲ್ಲಿ ಕುತೂಹಲ ಮೂಡಿಸಿದೆ.

Update: 2025-10-11 05:30 GMT

ರಾಜ್ಯದ ರಾಜಕೀಯ ವಲಯದಲ್ಲಿ ಹೊಸ ತಿರುವು ಕಂಡುಬಂದಿದ್ದು, ಸಾಂಪ್ರದಾಯಿಕವಾಗಿ ಬಿಜೆಪಿ ಪರವೆಂದು ಪರಿಗಣಿಸಲ್ಪಟ್ಟ ಲಿಂಗಾಯತ ಸಮುದಾಯದ ಕೆಲವು ಪ್ರಮುಖ ಮುಖಂಡರು ಹಾಗೂ ಸಂಘಟನೆಗಳು ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರಕ್ಕೆ ಬೆಂಬಲ ವ್ಯಕ್ತಪಡಿಸಿರುವುದು ರಾಜಕೀಯ ವಲಯದಲ್ಲಿ ಕುತೂಹಲ ಮೂಡಿಸಿದೆ.

ಕ್ರಾಂತಿಯೋಗಿ ಬಸವಣ್ಣ ಅವರನ್ನು ಸಾಂಸ್ಕೃತಿಕ ನಾಯಕ ಎಂದು ಘೋಷಣೆ ಮಾಡಿ ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಇತ್ತೀಚೆಗೆ ಸಿದ್ದರಾಮಯ್ಯ ಅವರಿಗೆ ಸನ್ಮಾನ ಮಾಡಲಾಗಿತ್ತು. ಇದು ಅಹಿಂದ ಮಾತ್ರ ಬೆಂಬಲಕ್ಕಿಲ್ಲ, ಲಿಂಗಾಯತ ಸಮುದಾಯ ಸಹ ಬೆಂಬಲಕ್ಕೆ ನಿಂತಿದೆ ಎಂಬ ಸಂದೇಶ ರವಾನಿಸಿದೆ. ತೀವ್ರ ವಿವಾದ ಸೃಷ್ಟಿಸಿದ್ದ ಪ್ರತ್ಯೇಕ ಲಿಂಗಾಯತ ಧರ್ಮ ಮಾಡುವಂತೆ ಕೇಂದ್ರ ಸರ್ಕಾರಕ್ಕೆ ಈ ಹಿಂದೆ ಸಿದ್ದರಾಮಯ್ಯ ಶಿಫಾರಸ್ಸು ಮಾಡಿದ್ದರು. ಈ ಕಾರಣವು ಸಹ ಸಿದ್ದರಾಮಯ್ಯ ಬೆನ್ನಿಗೆ ಲಿಂಗಾಯತ ಸಮುದಾಯ ನಿಂತಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಪ್ರಬಲ ಜಾತಿಗಳ ವಿರೋಧಿ ಎಂದು ಬಿಂಬಿಸುವ ಪ್ರಯತ್ನ ಮತ್ತು ಮುಖ್ಯಮಂತ್ರಿ ಬದಲಾವಣೆ ಚರ್ಚೆ ನಡುವೆಯೇ ಪ್ರತ್ಯೇಕ ಲಿಂಗಾಯತ ಧರ್ಮ ಪರ ನಿಲುವಿನ ಸ್ವಾಮೀಜಿಗಳು ನಗರದಲ್ಲಿ ನಡೆದ ಬಸವ ಸಂಸ್ಕೃತಿ ಅಭಿಯಾನ ಸಮಾರೋಪದಲ್ಲಿ ಸಿದ್ದರಾಮಯ್ಯ ಅವರನ್ನು ಹಾಡಿ ಹೊಗಳುವ ಮೂಲಕ ಪರೋಕ್ಷ ಬೆಂಬಲ ವ್ಯಕ್ತಪಡಿಸಿದರು. ಇದೇ ವೇಳೆ ಸಿದ್ದರಾಮಯ್ಯನವರಿಗೆ ವಿಭೂತಿ ಹಚ್ಚಿ ಹೂಮಳೆ ಸುರಿಸಿದ ಶರಣ ಸಂಸ್ಕೃತಿಯ 150ಕ್ಕೂ ಹೆಚ್ಚು ಸ್ವಾಮೀಜಿಗಳು, ಅವರನ್ನು ಸನ್ಮಾನಿಸಿ ಗೌರವಿಸಿದರು. ಇದು ಪ್ರಬಲ ಲಿಂಗಾಯತ ಸಮುದಾಯ ನಿಮ್ಮೊಂದಿಗಿದೆ ಎಂಬ ಸಂದೇಶ ರವಾನೆಗೆ ಕಾರಣವಾಗಿದೆ.  ಈ ಮೂಲಕ ರಾಜ್ಯದಲ್ಲಿ ಸಿದ್ದರಾಮಯ್ಯ ಬೆಂಬಲಕ್ಕೆ ಅಹಿಂದ ಜತೆಗೆ ಲಿಂಗಾಯತ ಸಮುದಾಯವು ನಿಂತಿರುವುದು  ಅವರಿಗೆ ಮತ್ತಷ್ಟು ಬಲಬಂದಂತಾಗಿದೆ.

ಹಣೆಗೆ ವಿಭೂತಿ ಹಚ್ಚಿ ಸಿಎಂ ಅಬ್ಬರದ ಭಾಷಣ 

ಮುಖ್ಯಮಂತ್ರಿ ಸಿದ್ದರಾಮಯ್ಯ ಹಣೆಗೆ ವಿಭೂತಿ ಹಚ್ಚಿಸಿಕೊಂಡು ಮತ್ತೆ ಸುದ್ದಿಯಲ್ಲಿದ್ದಾರೆ. ಈ ಹಿಂದೆ ಕುಂಕುಮ ಧರಿಸಿದ್ದಕ್ಕೂ, ಮತ್ತೊಂದೆಡೆ ಕಾರ್ಯಕ್ರಮದಲ್ಲಿ ಕುಂಕುಮ ಒರೆಸಿಯೂ ಭಾರಿ ಸುದ್ದಿಯಾಗಿದ್ದರು. ಇದೀಗ ಸ್ವಾಮೀಜಿಗಳು ವಿಭೂತಿ ಹಚ್ಚಿದ ವಿಡಿಯೋ ವೈರಲ್ ಆಗಿದ್ದು ನಾನಾ ಚರ್ಚೆಗೆ ಕಾರಣವಾಗುತ್ತಿದೆ. ಬಸವಣ್ಣ ಅವರನ್ನು ಕರ್ನಾಟಕದ ಸಾಂಸ್ಕೃತಿಕ ನಾಯಕ ಎಂದು ಘೋಷಿಸಿ ವರ್ಷಾಚರಣೆಯ ವೇಳೆ ಆಯೋಜಿಸಿದ ಬಸವ ಸಂಸ್ಕೃತಿ ಅಭಿಯಾನದಲ್ಲಿ ಸಿದ್ದರಾಮಯ್ಯ ಅವರನ್ನು ಸನ್ಮಾನಿಸಲಾಯಿತು. ಈ ವೇಳೆ ಸ್ವಾಮೀಜಿಗಳು ಸಿದ್ದರಾಮಯ್ಯ ಹಣೆಗೆ ವಿಭೂತಿ ಹಚ್ಚಿದ್ದರು. ಈ ವಿಡಿಯೋ ಮತ್ತು ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ. ಅಲ್ಲದೇ, ನಾನಾ ರೀತಿಯ ಚರ್ಚೆಗಳಿಗೆ ಕಾರಣವಾಗುತ್ತಿದೆ. 

ಪಾಕಿಸ್ತಾನದ ವಿರುದ್ಧ ಆಪರೇಷನ್ ಸಿಂಧೂರ ಸಂದರ್ಭದಲ್ಲಿ ಪತ್ರಿಕಾಗೋಷ್ಠಿಯನ್ನು ನಡೆಸಿದ್ದ ಸಿದ್ದರಾಮಯ್ಯ ಅವರ ಹಣೆಯಲ್ಲಿ ಕುಂಕುಮದೊಂದಿಗೆ ಕಾಣಿಸಿಕೊಂಡಿದ್ದರು. ಪತ್ರಿಕಾಗೋಷ್ಠಿಗಿಂತ ಮೊದಲು ದೇವಸ್ಥಾನಕ್ಕೆ ದರ್ಶನಕ್ಕೆ ತೆರಳಿದ್ದರು. ಅಲ್ಲಿ ಹಾಕಲಾಗಿದ್ದ ಕುಂಕುಮವನ್ನು ಅಳಿಸದೆ ಪತ್ರಿಕಾಗೋಷ್ಠಿಯಲ್ಲಿ ಭಾಗಿಯಾಗಿದ್ದರು. ಇನ್ನು, ಎರಡು ವರ್ಷಗಳ ಹಿಂದೆ ಗದಗ ಜಿಲ್ಲೆಯ ರೋಣದಲ್ಲಿ ನಡೆದ ಪ್ರಜಾಧ್ವನಿ ಸಮಾವೇಶದಲ್ಲಿ ಸಿಎಂ ಸಿದ್ದರಾಮಯ್ಯ ಅವರು ಕುಂಕುಮ ಒರೆಸಿಕೊಂಡಿದ್ದು ಸುದ್ದಿಯಾಗಿತ್ತು. ಹೆಗಲ ಮೇಲಿನ ಶಾಲಿನಿಂದ ಅವರು ಕುಂಕುಮವನ್ನು ಅಳಿಸಿದ್ದರು. ಮುಖ ಒರೆಸಿಕೊಳ್ಳುವ ಸಂದರ್ಭದಲ್ಲಿ ಹಣೆಯಲ್ಲಿದ್ದ ಕುಂಕುಮ ಅಳಿಸಿಕೊಂಡಿದ್ದರು. ಇದು ಭಾರೀ ಚರ್ಚೆಗೆ ಗ್ರಾಸವಾಗಿತ್ತು. 

ನಮ್ಮ ಮೆಟ್ರೋಗೆ ಬಸವ ಮೆಟ್ರೋ

ನಮ್ಮ ಮೆಟ್ರೊಗೆ 'ಬಸವ ಮೆಟ್ರೊ' ಎಂದು ನಾಮಕರಣ ಮಾಡುವ ಬಗ್ಗೆ ಕೇಂದ್ರಕ್ಕೆ ಶಿಫಾರಸ್ಸು ಮಾಡುತ್ತೇವೆ. ಇದು ಪೂರ್ಣವಾಗಿ ರಾಜ್ಯ ಸರ್ಕಾರದ ಯೋಜನೆ ಆಗಿದ್ದರೆ ಇವತ್ತೇ 'ಬಸವ ಮೆಟ್ರೊ' ಎಂದು ಘೋಷಿಸಿ ಬಿಡುತ್ತಿದ್ದೆ ಎಂದು ಸಿದ್ದರಾಮಯ್ಯ ಹೇಳಿದ್ದರು. ಇದು ಲಿಂಗಾಯತ ಸಮುದಾಯದ ಪರವಾಗಿ ತಾವು ಇರುವುದಾಗಿ ಎಂಬ ಸಂದೇಶವನ್ನು ರವಾನಿಸಿದ್ದರು. ತಾವು ಕೇವಲ ಅಹಿಂದ ನಾಯಕರಲ್ಲ, ಬದಲಿಗೆ ಲಿಂಗಾಯತ ಸಮುದಾಯದ ಹಿತೈಷಿಯೂ ಸಹ ಹೌದು ಎಂಬುದನ್ನು ಕಾರ್ಯಕ್ರಮದಲ್ಲಿ ತಮ್ಮ ಮಾತುಗಳ ಮೂಲಕ ತಿಳಿಸಿದರು. 

ಇದೇ ವೇಳೆ ವಚನ ವಿಶ್ವ ವಿದ್ಯಾಲಯ ಸ್ಥಾಪಿಸುವ ಬೇಡಿಕೆ ಬಗ್ಗೆ ಸರ್ಕಾರದ ಒಪ್ಪಿಗೆ ಇದ್ದು, ಮುಂದಿನ ವರ್ಷ ವಚನ ವಿವಿ ಸ್ಥಾಪನೆಗೆ ಕ್ರಮ ಕೈಗೊಳ್ಳಲಾಗುವುದು ಎಂದು ಅಶ್ವಾಸನೆ ನೀಡುವ ಮೂಲಕ ಲಿಂಗಾಯತ ಸಮುದಾಯದ ಅಗತ್ಯ ಬೇಡಿಕೆಗಳನ್ನು ಈಡೇರಿಸುವಲ್ಲಿ ಕಾಂಗ್ರೆಸ್‌ ಸರ್ಕಾರ ಬದ್ಧವಾಗಿದೆ ಎಂದು ಹೇಳಿದರು. ಈ ಮೂಲಕ ಲಿಂಗಾಯತ ಸಮುದಾಯ ಜತೆ ಇರುವುದರ ಜತೆಗೆ ಸಮುದಾಯವು ತಮ್ಮ ಬೆಂಬಲಕ್ಕಿರಬೇಕು ಎಂಬ ಮನವಿಯನ್ನು ಪರೋಕ್ಷವಾಗಿ ಮಾಡಿದರು. 

ಬಸವಣ್ಣನನ್ನು ಸಾಂಸ್ಕೃತಿಕ ನಾಯಕ ಎಂದು ಘೋಷಿಸಿದ್ದರು

12ನೇ ಶತಮಾನದ ಪ್ರಮುಖ ಸಾಮಾಜಿಕ ಹಾಗೂ ಸಾಂಸ್ಕೃತಿಕ ಪರಿವರ್ತನೆಯ ನಾಯಕರಾದ ಬಸವಣ್ಣರು ತಮ್ಮ ಚಿಂತನೆ ಮತ್ತು ಕಾರ್ಯಗಳಿಂದ ಭಾರತೀಯ ಇತಿಹಾಸದಲ್ಲಿ ಅನನ್ಯ ಸ್ಥಾನ ಪಡೆದಿದ್ದಾರೆ. ಸಾಮಾಜಿಕ ಅಸಮಾನತೆ, ವರ್ಣಭೇದ ಹಾಗೂ ಲಿಂಗಭೇದದ ವಿರುದ್ಧ ಧ್ವನಿಯೆತ್ತಿದ ಬಸವಣ್ಣರು ಸಮಾನತೆ, ಶ್ರದ್ಧೆ ಮತ್ತು ಮಾನವೀಯತೆಯ ತತ್ವವನ್ನು ಸಾರಿದರು. ಕಲ್ಯಾಣದಲ್ಲಿ ಅವರು ಸ್ಥಾಪಿಸಿದ ಅನುಭವ ಮಂಟಪ ವಿಶ್ವದ ಪ್ರಥಮ ಧಾರ್ಮಿಕ ಸಂವಾದ ವೇದಿಕೆಯೆಂದು ಪರಿಗಣಿಸಲಾಗಿದೆ. ಈ ವೇದಿಕೆಯ ಮೂಲಕ ಬಸವಣ್ಣರು ವರ್ಣಭೇದವಿಲ್ಲದೆ ಎಲ್ಲ ವರ್ಗದ ಜನರನ್ನು ಒಟ್ಟುಗೂಡಿಸಿ ಚಿಂತನೆಗೆ ಪ್ರೇರಿಸಿದರು. ಸಮಾಜದ ಸುಧಾರಣೆಗೆ ವಚನ ಸಾಹಿತ್ಯವನ್ನು ಶಸ್ತ್ರವನ್ನಾಗಿ ಬಳಸಿದ ಅವರು, ಶ್ರಮದ ಮಹತ್ವ, ಸತ್ಯನಿಷ್ಠೆ ಮತ್ತು ಸಮಾನತೆಯ ಮೌಲ್ಯಗಳನ್ನು ತಮ್ಮ ವಚನಗಳ ಮೂಲಕ ಜನಮನದಲ್ಲಿ ಬಿತ್ತಿದರು.

ಇಂದಿಗೂ ಬಸವಣ್ಣರ ತತ್ವಗಳು ಸಾಮಾಜಿಕ ನ್ಯಾಯ, ಶಾಂತಿ ಮತ್ತು ಸಮಾನತೆಯ ಸಮಾಜ ನಿರ್ಮಾಣಕ್ಕೆ ಮಾರ್ಗದರ್ಶನ ನೀಡುತ್ತಿವೆ. ಅವರ ಚಿಂತನೆಗಳು ಸಾಂಸ್ಕೃತಿಕ ಚೇತನೆಯ ಪ್ರತೀಕವಾಗಿ ಜನಜೀವನದಲ್ಲಿ ಜೀವಂತವಾಗಿವೆ. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕಳೆದ ವರ್ಷ ವಿಶ್ವಗುರು ಬಸವಣ್ಣನವರನ್ನು “ರಾಜ್ಯದ ಸಾಂಸ್ಕೃತಿಕ ನಾಯಕ”ಎಂದು ಘೋಷಿಸಿದ್ದರು. ಇದರ ಜತೆಗೆ ಸರ್ಕಾರಿ ಕಚೇರಿಗಳ ಗೋಡೆಗಳ ಮೇಲೆ ತೂಗು ಹಾಕಲಾಗಿರುವ ಬಸವಣ್ಣನವರ ಫೋಟೋ ಕೆಳಗೆ ಬಸವಣ್ಣ ಸಾಂಸ್ಕೃತಿಕ ನಾಯಕ ಎನ್ನುವ ಘೋಷ ವಾಕ್ಯವನ್ನು ಬರೆಯುವಂತೆ ಸೂಚನೆ ನೀಡಿದ್ದರು. ಬಸವಣ್ಣನ ತತ್ವಾದರ್ಶಗಳನ್ನು ನಮ್ಮ ಜೀವನದಲ್ಲಿ ಸ್ವಲ್ಪವಾದರೂ ಅಳವಡಿಸಿಕೊಳ್ಳಬೇಕು ಎನ್ನುವ ಘನ ಉದ್ದೇಶದೊಂದಿಗೆ ಅವರು ಈ ಮಹತ್ವದ ನಿರ್ಣಯವನ್ನು ಕೈಗೊಳ್ಳಲಾಗಿದೆ ಎಂದು ಹೇಳಿದ್ದರು. ಅಂತೆಯೇ ಸರ್ಕಾರಿ ಕಚೇರಿಗಳಲ್ಲಿ ಬಸವಣ್ಣನವರ ಫೋಟೋಗಳನ್ನು ಹಾಕಿ ರಾಜ್ಯದ ಸಾಂಸ್ಕೃತಿಕ ನಾಯಕ  ಎಂದು ಘೋಷವಾಕ್ಯ ಬರೆಯಲಾಗಿದೆ. 

ಪ್ರತ್ಯೇಕ ಲಿಂಗಾಯತ ಧರ್ಮಕ್ಕಾಗಿ ಕೇಂದ್ರಕ್ಕೆ ಶಿಫಾರಸ್ಸು

2013ರಿಂದ 18ರ ನಡುವೆ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಪ್ರತ್ಯೇಕ ಲಿಂಗಾಯತ ಧರ್ಮದ ಹೋರಾಟ ನಡೆದಿತ್ತು. ಬಳಿಕ ಪ್ರತ್ಯೇಕ ಲಿಂಗಾಯಿತ ಧರ್ಮ ಸಂಬಂಧ ನಿವೃತ್ತ ನ್ಯಾಯಮೂರ್ತಿ ಎಚ್‌.ಎನ್‌.ನಾಗಮೋಹನ್‌ದಾಸ್‌ ನೇತೃತ್ವದ ತಜ್ಞರ ಸಮಿತಿ ರಚನೆ ಮಾಡಲಾಯಿತು. ಸಮಿತಿ ನೀಡಿರುವ ವರದಿಯನ್ನು ಸಿದ್ದರಾಮಯ್ಯ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಿದ್ದರು. ಆದರೆ ಅದೇ ಕಾಂಗ್ರೆಸ್‌‍ ಪಕ್ಷಕ್ಕೆ ಚುನಾವಣೆಯಲ್ಲಿ ಮುಳುವಾಗಿತ್ತು.  ಪ್ರತ್ಯೇಕ ಲಿಂಗಾಯತ ಧರ್ಮದ ಹೋರಾಟವೇ ಕಾರಣ ಎಂಬ ಆಕ್ಷೇಪಗಳು ವ್ಯಕ್ತವಾಗಿತ್ತು. 

ದೇಶಕ್ಕೆ ಸ್ವಾತಂತ್ರ್ಯ ಬಂದ ನಂತರ 1963ರಲ್ಲಿ ಸಿಖ್ ಧರ್ಮಕ್ಕೆ, 1993ರಲ್ಲಿ ಬೌದ್ಧ, 2014ರಲ್ಲಿ ಜೈನ ಧರ್ಮಕ್ಕೆ ಸ್ವತಂತ್ರ ಧರ್ಮದ ಮಾನ್ಯತೆಯನ್ನು ಕೇಂದ್ರ ನೀಡಿತ್ತು. ಅಂತೆಯೇ ಲಿಂಗಾಯತಕ್ಕೂ ಸ್ವತಂತ್ರ ಮಾನ್ಯತೆ ನೀಡಬೇಕು ಎಂಬುದು ಆಗ್ರಹವಾಗಿತ್ತು. 12ನೇ ಶತಮಾನದಲ್ಲಿ ಬಸವಾದಿ ಶರಣರ ಸಾಮಾಜಿಕ ಚಳವಳಿಯಿಂದ, ವಿವಿಧ ವೃತ್ತಿಗಳಲ್ಲಿದ್ದ ನೂರಾರು ಶರಣರ ಆಶಯದಿಂದ ಅಸ್ತಿತ್ವಕ್ಕೆ ಬಂದ ಲಿಂಗಾಯತ ಧರ್ಮ 1871ರವರೆಗೆ ಸ್ವತಂತ್ರ ಧರ್ಮವಾಗಿತ್ತು. 1881ರ ಜನಗಣತಿಯಲ್ಲಿ ಹಿಂದೂ ಧರ್ಮದಲ್ಲಿ ಸೇರಿಸಲಾಯಿತು. ಅಲ್ಲಿಂದ ಆರಂಭವಾಗಿದ್ದು, ಇಂದಿಗೂ ಮುಂದುವರೆದಿದೆ ಎಂಬುದು ಲಿಂಗಾಯಿತ ಸಮುದಾಯದ ನಾಯಕರ ಅಭಿಪ್ರಾಯವಾಗಿದೆ. 

1881ರಲ್ಲಿ ಲಿಂಗಾಯತ ಪ್ರತ್ಯೇಕ ಧರ್ಮ ಸ್ಥಾನ-ಮಾನ ಕಸಿದುಕೊಂಡ ನಂತರ ಸ್ವಾತಂತ್ರ್ಯ ಪೂರ್ವದಲ್ಲಿಯೇ ಸಮುದಾಯದ ಹಲವು ಹಿರಿಯರು ಈ ಕುರಿತಂತೆ ಧ್ವನಿ ಎತ್ತಿದ್ದಾರೆ. 1928, 1938, 1942ರಲ್ಲಿ ಈ ಕುರಿತು ವಿವಿಧ ಸರ್ಕಾರಗಳ ಮುಖ್ಯಸ್ಥರಿಗೆ ಲಿಖಿತ ಮನವಿ ಸಲ್ಲಿಸಲಾಗಿದೆ. 1942ರಲ್ಲಿ ಮಹಾರಾಷ್ಟ್ರ, ಆಂಧ್ರಪ್ರದೇಶ, ಕರ್ನಾಟಕ, ತಮಿಳುನಾಡಿನ 52 ಗಣ್ಯರು ಮನವಿಯನ್ನು ಸಲ್ಲಿಸಿ, ದೇಶದ ಸಂವಿಧಾನ ರಚನೆಯಲ್ಲಿ ಲಿಂಗಾಯತರಿಗೆ ಸ್ಥಾನ ಕೊಡಬೇಕು.  ಪ್ರತ್ಯೇಕ ಧರ್ಮದ ಮಾನ್ಯತೆ ನೀಡಬೇಕು ಎಂಬ ಆಗ್ರಹಗಳು ಸಮುದಾಯದ ನಾಯಕರಿಂದ ಕೇಳಿಬಂದಿವೆ. 

ನಾಯಕತ್ವ ಬದಲಾವಣೆ ವದಂತಿ?

ರಾಜ್ಯ ಸರ್ಕಾರದಲ್ಲಿ ಈಗ ಸಂಪುಟ ಪುನಾರಚನೆ ಸದ್ದು ಮಾಡುತ್ತಿದೆ. ನವೆಂಬರ್‌ಗೆ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಎರಡೂವರೆ ವರ್ಷವಾಗುತ್ತಿದೆ. ಕಾಂಗ್ರೆಸ್ ಸರ್ಕಾರ ತನ್ನ ಅರ್ಧ ಅವಧಿಯನ್ನು ಪೂರ್ಣಗೊಳಿಸುವತ್ತ ಸಾಗುತ್ತಿರುವಾಗ, ಇದೇ ಸೋಮವಾರ (ಅ.13 ರಂದು) ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಸಂಪುಟ ಸಹೋದ್ಯೋಗಿಗಳಿಗೆ ಔತಣ ಕೂಟ ಏರ್ಪಡಿಸಿರುವುದು ಕುತೂಹಲ ಮೂಡಿಸಿದೆ. ಸಿದ್ದರಾಮಯ್ಯನವರು ಔತಣ ಕೂಟಕ್ಕೆ ಸಹೋದ್ಯೋಗಿಗಳನ್ನು ಆಹ್ವಾನಿಸಿರುವುದು ರಾಜಕೀಯ ವಲಯದಲ್ಲಿ ಭಾರಿ ಸಂಚಲನ ಮೂಡಿಸಿದೆ. ನವೆಂಬರ್ ಮಧ್ಯಭಾಗದಲ್ಲಿ ಬಿಹಾರ ವಿಧಾನಸಭಾ ಚುನಾವಣೆಯ ನಂತರ ಸಂಪುಟ ಪುನಾರಚನೆಗೆ ಹೈಕಮಾಂಡ್ ಒಪ್ಪಿಗೆ ನೀಡುವ ನಿರೀಕ್ಷೆಯಲ್ಲಿದ್ದು ಕಾಂಗ್ರೆಸ್ ವಲಯದಲ್ಲಿ ಬಿಸಿಬಿಸಿ ಚರ್ಚೆಯಾಗುತ್ತಿದೆ.

ರಾಜ್ಯ ಕಾಂಗ್ರೆಸ್ ನಲ್ಲಿ ನಾಯಕತ್ವ ಬದಲಾವಣೆ ಇಲ್ಲ ಎಂಬ ಸಂದೇಶವನ್ನು ಈ ಹಿಂದೆ ಅಹಿಂದ ಸಂಘಟನೆ ಬೃಹತ್‌ ಸಮಾವೇಶದ ಮೂಲಕ ರವಾನಿಸಿತ್ತು. ಅಲ್ಲದೇ, ಇತ್ತೀಚೆಗೆ ಲಿಂಗಾಯತ ಸಮುದಾಯವು ಸಹ ಬೆಂಬಲ ನೀಡಿದೆ. ಈ ನಡುವೆ, ಸಿದ್ದರಾಮಯ್ಯ ಅವರಿಗೆ ಬೆಂಬಲ ನೀಡುವುದರ ಜೊತೆಗೆ, ಶಕ್ತಿ ಪ್ರದರ್ಶನವಾಗಿ ಎಸ್‌ಸಿ/ಎಸ್‌ಟಿ ಸಮುದಾಯವು ರಾಲಿಯನ್ನು ಆಯೋಜಿಸಲು ಚಿಂತನೆ ನಡೆಸಿದೆ. ಈ ಮೂಲಕ ಸಿದ್ದರಾಮಯ್ಯ ಬೆಂಬಲಕ್ಕೆ ನಿಂತಿರುವ ಸಂದೇಶ ರವಾನಿಸಲು ಮುಂದಾಗಿದೆ. ಇದು ಎರಡೂವರೆ ವರ್ಷದ ಬಳಿಕ ಮುಖ್ಯಮಂತ್ರಿ ಬದಲಾವಣೆಯಾಗಲಿದ್ದಾರೆ ಎಂಬ ವದಂತಿಗಳಿಗೆ ಬ್ರೇಕ್‌ ಹಾಕುವ ಸಾಧ್ಯತೆ ಎಂದು ರಾಜಕೀಯ ವಲಯದಲ್ಲಿ ಕೇಳಿಬಂದಿವೆ. 

ರಾಮಕೃಷ್ಣ ಹೆಗಡೆ ಅವರಿಗೂ ಬೆಂಬಲ ನೀಡಿದ್ದ ಲಿಂಗಾಯತ ಸಮುದಾಯ

ಪ್ರಸ್ತುತ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಲಿಂಗಾಯತ ಸಮುದಾಯ ಬೆಂಬಲ ನೀಡಿದಂತೆ ಈ ಹಿಂದೆ ಮಾಜಿ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ಅವರಿಗೂ ಬೆಂಬಲ ವ್ಯಕ್ತಪಡಿಸಿತ್ತು. ರಾಮಕೃಷ್ಣ ಹೆಗಡೆ ಬ್ರಾಹ್ಮಣ ಸಮುದಾಯವಾಗಿದ್ದರೂ ಲಿಂಗಾಯತ ಸಮುದಾಯದಿಂದ ಭಾರೀ ಪ್ರಮಾಣದಲ್ಲಿ ಬೆಂಬಲ ವ್ಯಕ್ತವಾಗಿತ್ತು. ರೈತರ ಕಲ್ಯಾಣ, ಮಹಿಳಾ ಸಬಲೀಕರಣ, ಲಿಂಗಾಯತ ಸಮುದಾಯದ ಶ್ರೇಯೋಭಿವೃದ್ಧಿ ಯೋಜನೆಗಳಲ್ಲಿ ಹಿತಚಿಂತನೆ ತೋರಿಸಿದ್ದರು. ಈ ಕಾರ್ಯಗಳು ಸಮುದಾಯದಲ್ಲಿ ಮೆಚ್ಚುಗೆಗೆ ಪಾತ್ರವಾದವು. ಸಾಮಾಜಿಕ ಯೋಜನೆಗಳಲ್ಲಿ  ರಾಮಕೃಷ್ಣ ಹೆಗಡೆ ಅವರು ತೋರಿದ ನಿಷ್ಠೆ, ಪಾರದರ್ಶಕತೆ ಮತ್ತು ಸಮುದಾಯದ ಹಿತಚಿಂತನೆ ಅವರನ್ನು ಲಿಂಗಾಯತ ಸಮುದಾಯದ ನಾಯಕನನ್ನಾಗಿಸಿತು ಎಂದು ಹೇಳಲಾಗಿದೆ. 

Tags:    

Similar News