ಅತೀವೃಷ್ಟಿಯಿಂದ ಮಂಡ್ಯದಲ್ಲಿ 80 ಸಾವಿರ ಹೆಕ್ಟರ್ ಬೆಳೆ ಹಾನಿ, ಪರಿಹಾರ ನೀಡಲು ಸೂಚನೆ
ಮಳೆಯಿಂದ ಉಂಟಾಗಿರುವ ಸಮಸ್ಯೆಗಳನ್ನು ಪರಿಶೀಲಿಸಿ, ಕಂದಾಯ ಇಲಾಖೆ ಹಾಗೂ ನಗರಸಭೆಯಿಂದ ಪರಿಹಾರ ನೀಡಲು ಅಧಿಕಾರಿಗಳಿಗೆ ಸೂಚನೆ ನೀಡಲಾಗುವುದು ಎಂದು ಸಚಿವ ಸಚಿವ ಎನ್. ಚಲುವರಾಯಸ್ವಾಮಿ ತಿಳಿಸಿದರು.
ಅತೀವೃಷ್ಟಿ ಪ್ರದೇಶಕ್ಕೆ ಸಚಿವ ಚಲುವರಾಯಸ್ವಾಮಿ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ರಾಜ್ಯದಲ್ಲಿ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದ ಉಂಟಾಗಿರುವ ಬೆಳೆ ಹಾನಿ ಕುರಿತು ಸಮೀಕ್ಷೆ ನಡೆಸಿ ಶೀಘ್ರವೇ ಪರಿಹಾರ ನೀಡಲಾಗುವುದು ಎಂದು ಕೃಷಿ ಸಚಿವ ಎನ್. ಚಲುವರಾಯಸ್ವಾಮಿ ತಿಳಿಸಿದ್ದಾರೆ. ರಾಜ್ಯದಲ್ಲಿ ಒಟ್ಟಾರೆ 13 ಲಕ್ಷ ಹೆಕ್ಟೇರ್ ಬೆಳೆ ಹಾನಿಯಾಗಿದ್ದು, ಮಂಡ್ಯ ಜಿಲ್ಲೆಯೊಂದರಲ್ಲೇ ಸುಮಾರು 80 ಹೆಕ್ಟೇರ್ ಬೆಳೆ ನಷ್ಟವಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಮಂಡ್ಯ ನಗರದ ಕೆ.ಎಚ್.ಬಿ ಕಾಲೋನಿಯಲ್ಲಿ ನೀರು ನಿಂತು ಉಂಟಾಗಿದ್ದ ಸಮಸ್ಯೆಗಳನ್ನು ಸಚಿವ ಚಲುವರಾಯಸ್ವಾಮಿ ಪರಿಶೀಲಿಸಿದರು. ಈ ವೇಳೆ ಮಾತನಾಡಿದ ಅವರು, ಕಾಲೋನಿಗೆ ನುಗ್ಗುವ ಹೆಚ್ಚುವರಿ ಮಳೆ ನೀರನ್ನು ತಡೆಯಲು 2.5 ಕಿ.ಮೀ. ಸೇತುವೆ ನಿರ್ಮಾಣಕ್ಕಾಗಿ 15 ಕೋಟಿ ರೂಪಾಯಿ ಟೆಂಡರ್ ನೀಡಲಾಗಿದೆ. ಅಲ್ಲದೆ, ಕಾಲೊನಿಯ 3ನೇ ವಾರ್ಡ್ ಅಭಿವೃದ್ಧಿಗೆ ರಾಜ್ಯ ಸರ್ಕಾರ 41 ಕೋಟಿ ರೂಪಾಯಿ ಅನುದಾನ ಬಿಡುಗಡೆ ಮಾಡಿದೆ ಎಂದು ಹೇಳಿದರು.
ಕಳೆದ ಎರಡು ದಶಕಗಳಿಂದ ಇಲ್ಲಿನ ನಿವಾಸಿಗಳು ಮಳೆಗಾಲದಲ್ಲಿ ತೊಂದರೆ ಅನುಭವಿಸುತ್ತಿದ್ದರು. ಇತ್ತೀಚೆಗೆ 20 ಕೋಟಿ ರೂಪಾಯಿ ವೆಚ್ಚದಲ್ಲಿ ತಡೆಗೋಡೆ ನಿರ್ಮಿಸಿದ್ದರಿಂದ ಈ ಬಾರಿ ದೊಡ್ಡ ಸಮಸ್ಯೆ ಎದುರಾಗಿಲ್ಲ. ಮುಂದಿನ ದಿನಗಳಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ಶಾಶ್ವತ ಪರಿಹಾರ ಕಲ್ಪಿಸಲಾಗುವುದು ಎಂದು ಅವರು ಭರವಸೆ ನೀಡಿದರು. ಮಳೆಯಿಂದಾದ ಸಮಸ್ಯೆಗಳಿಗೆ ಕಂದಾಯ ಇಲಾಖೆ ಹಾಗೂ ನಗರಸಭೆಯಿಂದ ಪರಿಹಾರ ಒದಗಿಸಲು ಅಧಿಕಾರಿಗಳಿಗೆ ಸೂಚನೆ ನೀಡುವುದಾಗಿ ತಿಳಿಸಿದರು.
ಕಂದಾಯ ಇಲಾಖೆಯಿಂದ ಜಂಟಿ ಸಮೀಕ್ಷೆ
ರಾಜ್ಯದಲ್ಲಿ 2025ರ ನೈಋತ್ಯ ಮುಂಗಾರಿನಲ್ಲಿ ಉಂಟಾದ ಬೆಳೆ ನಷ್ಟದ ಕುರಿತು ಕಂದಾಯ ಇಲಾಖೆಯು ಎರಡನೇ ಬಾರಿಗೆ ಜಂಟಿ ಸಮೀಕ್ಷೆ ಆರಂಭಿಸಿದೆ. ಸೆಪ್ಟೆಂಬರ್ ಮೊದಲ ವಾರದವರೆಗೆ ಸುರಿದ ಮಳೆಯಿಂದ ಸುಮಾರು 5.29 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಕೃಷಿ ಮತ್ತು ತೋಟಗಾರಿಕಾ ಬೆಳೆಗಳು ಹಾನಿಗೊಳಗಾಗಿದ್ದವು.
ಆದರೆ, ಸೆಪ್ಟೆಂಬರ್ ಅಂತ್ಯದಲ್ಲಿ ಸುರಿದ ಭಾರೀ ಮಳೆ ಹಾಗೂ ಮಹಾರಾಷ್ಟ್ರದ ಜಲಾಶಯಗಳಿಂದ ನೀರು ಬಿಟ್ಟಿದ್ದರಿಂದ ಕಲಬುರಗಿ, ಯಾದಗಿರಿ, ಬೀದರ್ ಮತ್ತು ವಿಜಯಪುರ ಜಿಲ್ಲೆಗಳಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿತ್ತು. ಇದರಿಂದಾಗಿ ಹೆಚ್ಚುವರಿಯಾಗಿ 7.24 ಲಕ್ಷ ಹೆಕ್ಟೇರ್ ಬೆಳೆ ಹಾನಿಯಾಗಿದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಇತ್ತೀಚೆಗೆ ತಿಳಿಸಿದ್ದರು. ಕಲ್ಯಾಣ ಕರ್ನಾಟಕದ ಜಿಲ್ಲೆಗಳಲ್ಲಿ ಎರಡನೇ ಹಂತದ ಜಂಟಿ ಸಮೀಕ್ಷೆ ನಡೆಯುತ್ತಿದ್ದು, ಪರಿಷ್ಕೃತ ವರದಿ ಮುಂದಿನ 10 ದಿನಗಳಲ್ಲಿ ಲಭ್ಯವಾಗಲಿದೆ. ಮೊದಲ ಹಂತದಲ್ಲಿ ಸಮೀಕ್ಷೆ ಪೂರ್ಣಗೊಂಡ 9 ಜಿಲ್ಲೆಗಳ 5.29 ಲಕ್ಷ ಹೆಕ್ಟೇರ್ ಪ್ರದೇಶದ ರೈತರಿಗೆ ಪರಿಹಾರ ವಿತರಣೆ ಪ್ರಕ್ರಿಯೆ ಈಗಾಗಲೇ ಆರಂಭವಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.