ಬೆಂಗಳೂರಲ್ಲಿ ಟೆಕಿ ಆತ್ಮಹತ್ಯೆ: ವರದಕ್ಷಿಣೆ ಕಿರುಕುಳ ಆರೋಪ, ಪತಿ ಅರೆಸ್ಟ್
ಕೊಪ್ಪಳ ಜಿಲ್ಲೆಯ ಗಂಗಾವತಿ ಮೂಲದ ಶಿಲ್ಪಾ (27) ಆತ್ಮಹತ್ಯೆ ಮಾಡಿಕೊಂಡವರು. ಅವರ ಪತಿ ಪ್ರವೀಣ್‌ನನ್ನು ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ.;
ಕೌಟುಂಬಿಕ ಕಲಹ ಮತ್ತು ವರದಕ್ಷಿಣೆ ಕಿರುಕುಳದ ಹಿನ್ನೆಲೆಯಲ್ಲಿ ಮಹಿಳಾ ಟೆಕಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆಗೆ ಸಂಬಂಧಿಸಿದಂತೆ, ಅವರ ಪತಿಯನ್ನು ಸುದ್ದಗುಂಟೆಪಾಳ್ಯ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಕೊಪ್ಪಳ ಜಿಲ್ಲೆಯ ಗಂಗಾವತಿ ಮೂಲದ ಶಿಲ್ಪಾ (27) ಆತ್ಮಹತ್ಯೆ ಮಾಡಿಕೊಂಡವರು. ಅವರ ಪತಿ ಪ್ರವೀಣ್‌ನನ್ನು ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ. ಮೂರು ವರ್ಷಗಳ ಹಿಂದೆ ವಿವಾಹವಾಗಿದ್ದ ಈ ದಂಪತಿಗೆ ಒಂದೂವರೆ ವರ್ಷದ ಗಂಡು ಮಗುವಿದೆ. ನಗರದ ಗಂಗೋತ್ರಿ ಸರ್ಕಲ್ ಬಳಿ ವಾಸವಾಗಿದ್ದ ಇಬ್ಬರೂ ಸಾಫ್ಟ್‌ವೇರ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು.
ಮಗು ಜನಿಸಿದ ನಂತರ ಶಿಲ್ಪಾ ಕೆಲಸ ತೊರೆದು ಗೃಹಿಣಿಯಾಗಿದ್ದರು. ಮದುವೆಯಾದ ಒಂದು ವರ್ಷದ ಬಳಿಕ ಸಾಫ್ಟ್‌ವೇರ್ ಕೆಲಸ ಬಿಟ್ಟಿದ್ದ ಪ್ರವೀಣ್, ಪಾನಿಪುರಿ ವ್ಯಾಪಾರ ಆರಂಭಿಸಿದ್ದ. ತನ್ನ ವ್ಯವಹಾರಕ್ಕೆ ಹಣ ತರುವಂತೆ ಪತ್ನಿಗೆ ನಿರಂತರವಾಗಿ ಹಿಂಸೆ ನೀಡುತ್ತಿದ್ದ ಎಂದು ಶಿಲ್ಪಾ ಅವರ ಕುಟುಂಬಸ್ಥರು ಆರೋಪಿಸಿದ್ದಾರೆ.
ಕಳೆದ ಕೆಲವು ತಿಂಗಳುಗಳಿಂದ ದಂಪತಿ ನಡುವೆ ಕೌಟುಂಬಿಕ ವಿಚಾರವಾಗಿ ಆಗಾಗ ಜಗಳ ನಡೆಯುತ್ತಿತ್ತು. ಮಂಗಳವಾರವೂ ನಡೆದ ಜಗಳದಿಂದ ಮನನೊಂದು ಶಿಲ್ಪಾ ಕೋಣೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮರುದಿನ ಬೆಳಿಗ್ಗೆ ಈ ಘಟನೆ ಬೆಳಕಿಗೆ ಬಂದಿದೆ.
ವರದಕ್ಷಿಣೆ ಕಿರುಕುಳದಿಂದಲೇ ತನ್ನ ಮಗಳು ಸಾವನ್ನಪ್ಪಿದ್ದಾಳೆ ಎಂದು ಆರೋಪಿಸಿ ಮೃತರ ತಾಯಿ ಶಾರದಾ ಅವರು ಅಳಿಯ ಪ್ರವೀಣ್ ಮತ್ತು ಆತನ ತಾಯಿಯ ವಿರುದ್ಧ ದೂರು ನೀಡಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.