ಲೂಟಿ ಮಾಡಲು ದುಡ್ಡಿದೆ, ಕಲಾವಿದರ ಪಿಂಚಣಿಗೆ ಹಣವಿಲ್ಲ: ಸರ್ಕಾರದ ವಿರುದ್ಧ ಆರ್ ಅಶೊಕ್ ವಾಗ್ದಾಳಿ

Update: 2024-07-21 12:32 GMT

ಶಾಸಕರಿಗೆ, ಮಂತ್ರಿಗಳಿಗೆ ಕೋಟಿಗಟ್ಟಲೆ ಬೆಲೆಬಾಳುವ ಐಷಾರಾಮಿ ಕಾರು ಖರೀದಿ ಮಾಡಲು ದುಡ್ಡಿದೆ, ನಿಗಮ ಮಂಡಳಿಗಳಲ್ಲಿ, ಟೆಂಡರ್ ಕಿಕ್ ಬ್ಯಾಕ್ ಗಳಲ್ಲಿ ನೂರಾರು ಕೋಟಿ ಲೂಟಿ ಮಾಡಲು ದುಡ್ಡಿದೆ, ಆದರೆ ಕಲಾವಿದರಿಗೆ ಪಿಂಚಣಿ ನೀಡುವುದಕ್ಕೆ ಹಣವಿಲ್ಲ, ಕಲಾತಂಡಗಳಿಗೆ ಧನ ಸಹಾಯ ನೀಡಲು ಈ ನಾಡದ್ರೋಹಿ ಕಾಂಗ್ರೆಸ್ ಸರ್ಕಾರದ ಬಳಿ ದುಡ್ಡಿಲ್ಲʼʼ ಎಂದು ವಿರೋಧ ಪಕ್ಷದ ನಾಯಕ ಆರ್ ಅಶೋಕ್ ವಾಗ್ದಾಳಿ ನಡೆಸಿದ್ದಾರೆ.

ಈ ಬಗ್ಗೆ ಎಕ್ಸ್‌ನಲ್ಲಿ ಪೋಸ್ಟ್ ಮಾಡಿ ಪತ್ರಿಕೆಯೊಂದರ ವರದಿಯನ್ನು ಹಂಚಿಕೊಂಡಿದ್ದಾರೆ. ಪೋಸ್ಟ್‌ನಲ್ಲಿ, ʻʻನಾಡದ್ರೋಹಿ ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ಕನ್ನಡವೆಂದರೆ ನಿಕೃಷ್ಟ, ಕನ್ನಡ ನಾಡಿನ ಕಲೆ ಸಂಸ್ಕೃತಿ ಅಂದರೆ ಕನಿಷ್ಠʼʼ ಎಂದು ಆರ್ ಅಶೋಕ್ ಕಿಡಿಕಾರಿದ್ದಾರೆ.

‌ʻʻಸಿಎಂ ಸಿದ್ದರಾಮಯ್ಯ ಅವರ ಸರ್ಕಾರದಲ್ಲಿ ಸಿಕ್ಕಸಿಕ್ಕವರಿಗೆ ಕ್ಯಾಬಿನೆಟ್ ದರ್ಜೆ ಸ್ಥಾನಮಾನ ಕೊಟ್ಟು ಮೆರೆಸಲು ದುಡ್ಡಿದೆ, ಶಾಸಕರಿಗೆ, ಮಂತ್ರಿಗಳಿಗೆ ಕೋಟಿಗಟ್ಟಲೆ ಬೆಲೆಬಾಳುವ ಐಷಾರಾಮಿ ಕಾರು ಖರೀದಿ ಮಾಡಲು ದುಡ್ಡಿದೆ, ನಿಗಮ ಮಂಡಳಿಗಳಲ್ಲಿ, ಟೆಂಡರ್ ಕಿಕ್ ಬ್ಯಾಕ್ ಗಳಲ್ಲಿ ನೂರಾರು ಕೋಟಿ ಲೂಟಿ ಮಾಡಲು ದುಡ್ಡಿದೆ, ಆದರೆ ನಾಡಿನ ಹೆಮ್ಮೆಯ ಸಂಗೀತ ಸರಸ್ವತಿ ಪದ್ಮಭೂಷಣ ಡಾ.ಗಂಗೂಬಾಯಿ ಹಾನಗಲ್ ಅವರ ಜ್ಞಾಪಕಾರ್ಥವಾಗಿ ಹುಬ್ಬಳ್ಳಿಯಲ್ಲಿ ಸ್ಥಾಪಿಸಿರುವ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ಗುರುಕುಲಕ್ಕೆ ವಾರ್ಷಿಕ ₹1.25 ಕೋಟಿ ಅನುದಾನ ನೀಡಲು ನಾಡದ್ರೋಹಿ ಕಾಂಗ್ರೆಸ್ ಸರ್ಕಾರದ ಬಳಿ ದುಡ್ಡಿಲ್ಲʼʼ ಎಂದಿದ್ದಾರೆ.

ʻʻಸಿಎಂ ಸಿದ್ದರಾಮಯ್ಯನವರೇ, ಕಲಾವಿದರಿಗೆ ಪಿಂಚಣಿ ನೀಡುವುದಕ್ಕೆ ಹಣವಿಲ್ಲ, ಕಲಾತಂಡಗಳಿಗೆ ಧನ ಸಹಾಯಕ್ಕೆ ದುಡ್ಡಿಲ್ಲ. ರಾಜ್ಯ, ಜಿಲ್ಲಾಮಟ್ಟದ ಸಾಹಿತ್ಯ ಸಮ್ಮೇಳನಕ್ಕೆ ದುಡ್ಡಿಲ್ಲ ರಂಗಮಂದಿರ, ಬಯಲು ಮಂದಿರಗಳಿಗೆ ಹಣ ನೀಡುತ್ತಿಲ್ಲ, ಕನ್ನಡ-ಸಂಸ್ಕೃತಿ ಇಲಾಖೆಗೆ ನಿಗದಿ ಹಣ ನೀಡುತ್ತಿಲ್ಲ. ಕಲೆ ಮತ್ತು ಸಂಸ್ಕೃತಿಗೆ ಮೀಸಲು ಹಣವಿಲ್ಲ, ಕಲಾಸಂಘಗಳಿಗೂ ನೀಡುವುದಕ್ಕೂ ಹಣವಿಲ್ಲ. ಇದೇನಾ ನೀವು ನಮ್ಮ ನಾಡಿನ ಕಲೆ ಸಂಸ್ಕೃತಿಗೆ ಬೆಲೆ ನೀಡುವ ಪರಿ?ʼʼ ಎಂದು ಪ್ರಶ್ನೆ ಮಾಡಿದ್ದಾರೆ.

ʻʻಚುನಾವಣೆ ಬಂದರೆ ಸಾಕು ಭಾಷೆಯ ವಿಷಯದಲ್ಲಿ ಕೀಳು ರಾಜಕಾರಣ ಮಾಡುವ ಸಿದ್ದರಾಮಯ್ಯನವರು ಕನ್ನಡದ ಕೆಲಸಕ್ಕೆ ಕವಡೆ ಕಿಮ್ಮತ್ತು ಕೊಡುತ್ತಿಲ್ಲ. ನಾಡು, ನುಡಿ, ಸಂಸ್ಕೃತಿಯ ಬೆಳವಣಿಗೆಗೆ ನೀಡಬೇಕಿದ್ದ ಅನುದಾನಕ್ಕೆ ಕೊಕ್ಕೆ ಹಾಕುವ ಮೂಲಕ ರಾಜ್ಯ ಕಾಂಗ್ರೆಸ್ ಸರ್ಕಾರ ಮಾತೃಭಾಷೆಗೆ, ನಾಡಿನ ಸಂಸ್ಕೃತಿಗೆ ದ್ರೋಹ ಬಗೆದಿದೆʼʼ ಎಂದು ಆರ್ ಅಶೋಕ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Tags:    

Similar News