ಕಾಂಗ್ರೆಸ್ ಅಧಿಕಾರಕ್ಕೆ ಬಂದ ಮೇಲೆ ಕರಾವಳಿಯಲ್ಲಿ ಆದ ಕೊಲೆಗಳೆಷ್ಟು? ; ರಾಜ್ಯ ಸರ್ಕಾರದ ವಿರುದ್ಧ ಕುಮಾರಸ್ವಾಮಿ ಕಿಡಿ
ಕೋಟೆ ಕೊಳ್ಳೆ ಹೊಡೆದ ಮೇಲೆ ದಿಡ್ಡಿ ಬಾಗಿಲು ಬಡಿದುಕೊಂಡರು' ಎನ್ನುವಂತೆ ಮಳೆಯಲ್ಲಿ ಬದುಕು ಕೊಚ್ಚಿಹೋದ ಮೇಲೆ ಸಚಿವರಿಗೆ ಹೋಗಿ ಎಂದು ಮುಖ್ಯಮಂತ್ರಿ ಅಪ್ಪಣೆ ಕೊಟ್ಟರೆ ಫಲವೇನು? ಎಂದು ಕೇಂದ್ರ ಸಚಿವ ಕುಮಾರಸ್ವಾಮಿ ಅವರು ಸಿಎಂ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.;
ಕರಾವಳಿ ಸೇರಿ ರಾಜ್ಯದ ಉದ್ದಗಲಕ್ಕೂ ನಿರಂತರ ಸುರಿಯುತ್ತಿರುವ ಧಾರಾಕಾರ ಮಳೆ, ಜನಜೀವನವನ್ನು ಛಿದ್ರಗೊಳಿಸಿದೆ. ಜನರು ಕಣ್ಣೀರಿನಲ್ಲಿ ಕೈ ತೊಳೆಯುತ್ತಿದ್ದಾರೆ. ಆದರೆ, ಜವಾಬ್ದಾರಿಯುತವಾಗಿ ವರ್ತಿಸಬೇಕಿದ್ದ ರಾಜ್ಯ ಸರ್ಕಾರ, ಕರಾವಳಿಗರ ಕಣ್ಣೀರು ಒರೆಸುವ ಬದಲು ಅವರ ಕಣ್ಣಲ್ಲಿ 'ರಕ್ತಕಣ್ಣೀರು' ಸುರಿಯಲಿ ಎಂದು ಹಪಾಹಪಿಸುತ್ತಿದೆ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.
ಸಾಮಾಜಿಕ ಮಾಧ್ಯಮ ಎಕ್ಸ್ ನಲ್ಲಿ ರಾಜ್ಯ ಸರ್ಕಾರದ ಆಡಳಿತ ವೈಖರಿಯನ್ನು ತೀವ್ರ ತರಾಟೆಗೆ ತೆಗೆದುಕೊಂಡು ಪೋಸ್ಟ್ ಹಾಕಿದ್ದಾರೆ.
ಮಳೆಯಿಂದ ಮನೆ, ರಸ್ತೆ, ಸೇತುವೆಗಳು ಕುಸಿಯುತ್ತಿವೆ. ನಗರ, ಪಟ್ಟಣ, ಹಳ್ಳಿಗಳು ಜಲದಿಗ್ಬಂಧನಕ್ಕೆ ಸಿಲುಕಿ ಜನ ಒದ್ದಾಡುತ್ತಿದ್ದಾರೆ.ಮೂರಾಬಟ್ಟೆಯಾದ ಅವರ ಬದುಕಿನ ರಕ್ಷಣೆಗೆ ಸರ್ಕಾರದ ಕ್ರಮವೇನು ಎಂದು ಪ್ರಶ್ನಿಸಿದ್ದಾರೆ.
'ಕೋಟೆ ಕೊಳ್ಳೆ ಹೊಡೆದ ಮೇಲೆ ದಿಡ್ಡಿ ಬಾಗಿಲು ಬಡಿದುಕೊಂಡರು' ಎನ್ನುವಂತೆ ಮಳೆಯಲ್ಲಿ ಬದುಕು ಕೊಚ್ಚಿಹೋದ ಮೇಲೆ ಸಚಿವರಿಗೆ ಹೋಗಿ ಎಂದು ಮುಖ್ಯಮಂತ್ರಿ ಅಪ್ಪಣೆ ಕೊಟ್ಟರೆ ಫಲವೇನು?, ಮಳೆ ಬರುವ ಮೊದಲು ಏನು ಮಾಡಿದ್ದೀರಿ? ಇದೇನಾ ಜನಪರ ಆಡಳಿತ? ನುಡಿದಂತೆ ನಡೆಯುವುದು ಎಂದರೆ ಹೀಗೆನಾ? ಎಂದು ಕಿಡಿಕಾರಿದ್ದಾರೆ.
ಕಾಂಗ್ರೆಸ್ ಸರ್ಕಾರಕ್ಕೆ ಕರಾವಳಿ ಮಳೆ ಬಗ್ಗೆ ಚಿಂತೆ ಇಲ್ಲ. ಆದರೆ, ಕರಾವಳಿ ಕೊಲೆಗಳ ಬಗ್ಗೆ ಎಲ್ಲಿಲ್ಲದ ಕಾಳಜಿ. ಆ ಕಾಳಜಿ ಕೊಲೆಗಳನ್ನು ಹತ್ತಿಕ್ಕಲಿಕ್ಕಲ್ಲ, ಕೊಲೆಗಳಲ್ಲೂ 'ರಾಜಕೀಯ ಕೂಳು' ಬೇಯಿಸಿಕೊಳ್ಳಲು ಎಂದು ಆರೋಪಿಸಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ , ಎರಡು ವರ್ಷದಿಂದ ಅಧಿಕಾರದಲ್ಲಿದ್ದೀರಿ. ಅನ್ಯಪಕ್ಷಗಳನ್ನು ದೂರುತ್ತಾ ಕಾಲಹರಣ ಮಾಡುತ್ತಿದ್ದೀರಿ. ನೀವು ಅಧಿಕಾರಕ್ಕೆ ಬಂದ ಮೇಲೆ ಕರಾವಳಿ ಭಾಗದಲ್ಲಿ ಎಷ್ಟು ಹತ್ಯೆಗಳಾದವು? ಅವನ್ನು ಹತ್ತಿಕ್ಕಲಿಲ್ಲ ಯಾಕೆ? ಒಂದು ಸಮುದಾಯ ನಿಮ್ಮ ಪಕ್ಷಕ್ಕೆ ನೂರಕ್ಕೆ ನೂರರಷ್ಟು ವೋಟು ಕೊಟ್ಟಿದೆಯಲ್ಲವೇ? ಅವರನ್ನು ರಕ್ಷಿಸಲು ವಿಫಲರಾಗಿರುವ ನೀವು, ಇತರೆ ಕೋಮುಗಳ ಮೇಲೆ ವಿಷ ಕಕ್ಕುತ್ತಿದ್ದೀರಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸರ್ವ ಜನಾಂಗದ ಶಾಂತಿಯ ತೋಟವನ್ನು ವಿಷ ಸರ್ಪಗಳ ತೋಟವನ್ನಾಗಿ ಪರಿವರ್ತಿಸಿದ್ದೀರಿ. ನೀವೂ ಮತ್ತು ನಿಮ್ಮ ಸಂಗಡಿಗರ ಸದಾರಮೆ ಸಾಕು. ಕೂಡಲೇ ಕರಾವಳಿಗೆ ಭೇಟಿ ನೀಡಿ. ಮಳೆ, ಕೊಲೆಗಳಿಂದ ತತ್ತರಿಸಿರುವ ಅಲ್ಲಿನ ಜನತೆಗೆ ಧೈರ್ಯ ತುಂಬಿ. ಪ್ರಕೃತಿ ಪ್ರೇರಿತ ಮಳೆ ವಿಕೋಪ, ನಿಮ್ಮ ಪಕ್ಷ ಪ್ರೇರಿತ 'ಕೊಲೆ ವಿಕೋಪ'ಕ್ಕೆ ಪರಿಹಾರ ಕಂಡುಕೊಳ್ಳಿ. ಇದು ನಿಮ್ಮ ತಕ್ಷಣದ ಕರ್ತವ್ಯ ಎಂದು ಸಿಎಂ ವಿರುದ್ಧ ಕುಟುಕಿದ್ದಾರೆ.