Honey Trap | ಹನಿಟ್ರ್ಯಾಪ್ ಪ್ರಕರಣ: ಸಿಎಂಗೆ ಮಾಹಿತಿ ನೀಡಿದ ರಾಜಣ್ಣ ಪುತ್ರ; ಒಂದೆರಡು ದಿನದಲ್ಲಿ ಸ್ಫೋಟಕ ಬೆಳವಣಿಗೆ?
ಹನಿಟ್ರ್ಯಾಪ್ ಪ್ರಕರಣ ಮುಂದಿನ ಒಂದೆರಡು ದಿನಗಳಲ್ಲಿ ಮಹತ್ವದ ತಿರುವು ಪಡೆಯುವ ಸೂಚನೆ ಇದ್ದು, ರಾಜ್ಯ ರಾಜಕಾರಣದಲ್ಲಿ ಸ್ಫೋಟಕ ಬೆಳವಣಿಗೆಗೆ ಕಾರಣವಾದರೂ ಅಚ್ಚರಿ ಇಲ್ಲ.;
ರಾಜ್ಯ ರಾಜಕಾರಣದಲ್ಲಿ ತೀವ್ರ ಸಂಚಲನ ಸೃಷ್ಟಿಸಿರುವ ಹನಿಟ್ರ್ಯಾಪ್ ಪ್ರಕರಣದಲ್ಲಿ ಮಹತ್ವದ ಬೆಳವಣಿಗೆಯಾಗಿದ್ದು, ತಮ್ಮ ತಂದೆ ಸಹಕಾರ ಸಚಿವ ಕೆ ಎನ್ ರಾಜಣ್ಣ ವಿರುದ್ಧ ನಡೆದ ಹನಿಟ್ರ್ಯಾಪ್ ಪ್ರಯತ್ನಕ್ಕೆ ಸಂಬಂಧಿಸಿದಂತೆ ರಾಜಣ್ಣ ಪುತ್ರ ಹಾಗೂ ವಿಧಾನಪರಿಷತ್ ಸದಸ್ಯ ರಾಜೇಂದ್ರ ಅವರು ಮುಖ್ಯಮಂತ್ರಿಗಳಿಗೆ ದಾಖಲೆಸಹಿತ ಮಾಹಿತಿ ನೀಡಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರಕರಣದ ವಿಷಯದಲ್ಲಿ ಯಾವ ನಿಲುವು ತೆಗೆದುಕೊಳ್ಳುತ್ತಾರೆ, ಅದರ ಮೇಲೆ ತಮ್ಮ ಮುಂದಿನ ನಡೆ ನಿರ್ಧಾರವಾಗಲಿದೆ ಎಂದು ಶನಿವಾರ ಬೆಳಿಗ್ಗೆಯಷ್ಟೇ ಹೇಳಿಕೆ ನೀಡಿದ್ದ ರಾಜೇಂದ್ರ ಅವರು ಸಂಜೆಯೇ ಹೋಗಿ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಸಂಪೂರ್ಣ ದಾಖಲೆಗಳೊಂದಿಗೆ ಮಾಹಿತಿ ನೀಡಿದ್ದಾರೆ.
ಸಹಜವಾಗಿಯೇ ಈ ಬೆಳವಣಿಗೆ ಪ್ರಕರಣದ ವಿಷಯದಲ್ಲಿ ಕುತೂಹಲ ಮೂಡಿಸಿದ್ದು, ಪ್ರಮುಖವಾಗಿ ಆಡಳಿತರೂಢ ಕಾಂಗ್ರೆಸ್ನ ಚುಕ್ಕಾಣಿ ಹಿಡಿದವರ ವಿರುದ್ಧವೇ ಹನಿಟ್ರ್ಯಾಪ್ ಷಢ್ಯಂತ್ರದ ಆರೋಪಗಳು ಕೇಳಿಬಂದಿರುವುದರಿಂದ ಈ ಪ್ರಕರಣವನ್ನು ಸಿಎಂ ನಿಜವಾಗಿಯೂ ಗಂಭೀರವಾಗಿ ಪರಿಗಣಿಸಿದರೆ ಮುಂದಿನ ಬೆಳವಣಿಗೆಗಳು ಪಕ್ಷ ಮತ್ತು ಸರ್ಕಾರದ ಮೇಲೆ ಬೀರಬಹುದಾದ ಪರಿಣಾಮಗಳೇನು ಎಂಬ ಕುತೂಹಲಕ್ಕೂ ಕಾರಣವಾಗಿದೆ.
ಅಲ್ಲದೆ, ಸಿಎಂ ಭೇಟಿಯ ಬಳಿಕ ಮಾಧ್ಯಮಗಳಿಗೆ ಮಾಹಿತಿ ನೀಡಿರುವ ರಾಜೇಂದ್ರ ಅವರು ಪ್ರಕರಣದ ಸಂಬಂಧ ಎಲ್ಲಾ ದಾಖಲೆಗಳನ್ನು ಮುಖ್ಯಮಂತ್ರಿಗಳಿಗೆ ನೀಡಿದ್ದು, ಅವರ ಸಲಹೆ ಮೇರೆಗೆ ಸೋಮವಾರ ಅಥವಾ ಮಂಗಳವಾರ ರಾಜ್ಯ ಪೊಲೀಸ್ ಮಹಾನಿರ್ದೇಶಕರರಿಗೆ(ಡಿಜಿ&ಐಜಿಪಿ) ದೂರು ಸಲ್ಲಿಸುವುದಾಗಿಯೂ ಹೇಳಿದ್ದಾರೆ.
ತನಿಖೆಯಾಗಲಿ ಹೊರಬರುತ್ತದೆ!
ಇನ್ನು ಹನಿಟ್ರ್ಯಾಪ್ ಹಿಂದೆ ಯಾರು ಇದ್ದಾರೆ? ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿರುವ ಅವರು, ಯಾರು ಹೀಗೆ ಮಾಡಿದ್ದಾರೆ ಮತ್ತು ಯಾಕೆ ಮಾಡಿದ್ದಾರೆ ಎಂಬುದನ್ನು ಹೇಗೆ ಹೇಳೋದು? ತನಿಖೆಯಾಗಲಿ, ಆಗ ಎಲ್ಲವೂ ಹೊರಬರುತ್ತದೆ ಎಂದು ಹೇಳಿದ್ದಾರೆ. ಅಲ್ಲದೆ, ತಮ್ಮನ್ನೂ ಹನಿಟ್ರ್ಯಾಪ್ ಜಾಲದಲ್ಲಿ ಸಿಲುಕಿಸಲು ಕಳೆದ ಮೂರು ತಿಂಗಳುಗಳಿಂದ ನಿರಂತರ ಪ್ರಯತ್ನ ನಡೆದಿದೆ. ತಮ್ಮ ಮಧುಗಿರಿಯ ನಿವಾಸ ಹಾಗೂ ಬೆಂಗಳೂರಿನ ಸರ್ಕಾರಿ ನಿವಾಸಕ್ಕೂ ಬಂದು ಹನಿಟ್ರ್ಯಾಪ್ ಪ್ರಯತ್ನ ನಡೆಸಿದ್ದಾರೆ. ಆ ಎಲ್ಲಾ ಮಾಹಿತಿಯನ್ನೂ ಸಿಎಂ ಅವರಿಗೆ ನೀಡಿದ್ದೇನೆ ಎಂದೂ ಹೇಳಿದ್ದಾರೆ.
ದೆಹಲಿಗೂ ಹೋಗಿ ದೂರು ಕೊಡುವೆ
ತಮ್ಮ ತಂದೆ ಮತ್ತು ತಮ್ಮ ಮೇಲೆ ನಡೆದಿರುವ ಹನಿಟ್ರ್ಯಾಪ್ ಯತ್ನ ಪ್ರಕರಣದ ವಿಷಯದಲ್ಲಿ ರಾಜ್ಯ ಪೊಲೀಸ್ ಮುಖ್ಯಸ್ಥರಿಗೆ ದೂರು ನೀಡಿದ ಬಳಿಕ ದೆಹಲಿಗೂ ಹೋಗಿ ಪಕ್ಷದ ಹೈಕಮಾಂಡ್ ನಾಯಕರಿಗೂ ಮಾಹಿತಿ ನೀಡಿ ಕ್ರಮಕ್ಕೆ ಕೋರಲಾಗುವುದು ಎಂದು ಹೇಳಿರುವ ರಾಜೇಂದ್ರ ಅವರು, ಹಿರಿಯ ಐಪಿಎಸ್ ಅಧಿಕಾರಿಗಳ ನೇತೃತ್ವದಲ್ಲೇ ತನಿಖೆಯಾಗಬೇಕು. ಆದರೆ, ಅಂತಿಮವಾಗಿ ತನಿಖೆ ಹೇಗೆ ನಡೆಸಬೇಕು ಎಂಬುದು ಮುಖ್ಯಮಂತ್ರಿಗಳು ಹಾಗೂ ಗೃಹ ಸಚಿವರಿಗೆ ನಿರ್ಧಾರಕ್ಕೆ ಬಿಟ್ಟದ್ದು ಎಂದೂ ಹೇಳಿದ್ದಾರೆ.
ಈ ನಡುವೆ ಹನಿಟ್ರ್ಯಾಪ್ ಪ್ರಕರಣದಲ್ಲಿ ತಮ್ಮದೇ ಪಕ್ಷದ ಹಿರಿಯ ಸಚಿವರು, ಮುಖಂಡರ ವಿರುದ್ಧ ತಮ್ಮದೇ ಪಕ್ಷದ ಪ್ರಮುಖರೇ ಖೆಡ್ಡಾ ತೋಡಲು ಯತ್ನಿಸಿರುವ ವಿಷಯ ರಾಜ್ಯ ಕಾಂಗ್ರೆಸ್ನಲ್ಲಿ ಮಡುಗಟ್ಟಿದ್ದ ಅಸಮಾಧಾನ, ಆಕ್ರೋಶ ಸ್ಫೋಟಗೊಳ್ಳಲು ಕಾರಣವಾಗಿದ್ದು ಹಲವು ಹಿರಿಯ ಸಚಿವರು ಪ್ರಕರಣದ ಕುರಿತು ಗಂಭೀರ ಕ್ರಮ ಕೈಗೊಳ್ಳುವಂತೆ ಹೈಕಮಾಂಡ್ ಮೊರೆಹೋಗಲು ಸಿದ್ಧತೆ ನಡೆಸಿದ್ದಾರೆ ಎನ್ನಲಾಗಿದೆ.
ಈಗಾಗಲೇ ಪಕ್ಷದ ಹಿರಿಯ ಸಚಿವರಾದ ಡಾ ಜಿ ಪರಮೇಶ್ವರ್, ಸತೀಶ್ ಜಾರಕಿಹೊಳಿ, ಡಾ ಎಂ ಬಿ ಪಾಟೀಲ್, ಆರ್ ವಿ ದೇಶಪಾಂಡೆ ಸೇರಿದಂತೆ ಹಲವು ಹಿರಿಯ ಮುಖಂಡರು ಪ್ರಕರಣದ ವಿಷಯದಲ್ಲಿ ನಿರ್ದಾಕ್ಷಿಣ್ಯ ಕ್ರಮ ಜರುಗಿಸುವ ಮೂಲಕ ಮತ್ತೆ ಇಂತಹ ಪ್ರಯತ್ನಗಳು ನಡೆಯಂತೆ ನೋಡಿಕೊಳ್ಳಬೇಕು ಎಂದು ಮುಖ್ಯಮಂತ್ರಿಗಳಿಗೆ ಕೋರಿದ್ದಾರೆ.
ಆ ಹಿನ್ನೆಲೆಯಲ್ಲಿ ಹನಿಟ್ರ್ಯಾಪ್ ಪ್ರಕರಣ ಮುಂದಿನ ಒಂದೆರಡು ದಿನಗಳಲ್ಲಿ ಮಹತ್ವದ ತಿರುವು ಪಡೆಯುವ ಸೂಚನೆ ಇದ್ದು, ರಾಜ್ಯ ರಾಜಕಾರಣದಲ್ಲಿ ಸ್ಫೋಟಕ ಬೆಳವಣಿಗೆಗೆ ಕಾರಣವಾದರೂ ಅಚ್ಚರಿ ಇಲ್ಲ.