Honey Trap | ಹನಿಟ್ರ್ಯಾಪ್ ಪ್ರಕರಣದ ತನಿಖೆ ನಡೆಸಲು ಗೃಹಸಚಿವ ಪರಮೇಶ್ವರ್ಗೆ ಮನವಿ ಸಲಿಸಿದ ರಾಜಣ್ಣ
ಪ್ರಕರಣದ ಬಗ್ಗೆ ನಾನು ದೂರು ಸ್ವೀಕರಿಸಲು ಸಾಧ್ಯವಿಲ್ಲ. ಈ ಬಗ್ಗೆ ಪೊಲೀಸ್ ಠಾಣೆಯಲ್ಲೇ ದೂರು ಸಲ್ಲಿಸಬೇಕಾಗುತ್ತದೆ ಎಂದು ಜಿ ಪರಮೇಶ್ವರ್ ಹೇಳಿದರು.;
ತಮ್ಮನ್ನು ಹನಿಟ್ರ್ಯಾಪ್ ಮಾಡಲು ಯತ್ನಿಸಲಾಗಿದ್ದು, ಈ ಬಗ್ಗೆ ಉನ್ನತಮಟ್ಟದ ತನಿಖೆ ನಡೆಸುವಂತೆ ಸಹಕಾರ ಸಚಿವ ಕೆ.ಎನ್. ರಾಜಣ್ಣ ಅವರು ಗೃಹ ಸಚಿವ ಡಾ. ಜಿ. ಪರಮೇಶ್ವರ ಅವರಿಗೆ ಮಂಗಳವಾರ (ಮಾರ್ಚ್ 25ರಂದು) ಮನವಿ ಸಲ್ಲಿಸಿದ್ದಾರೆ.
ಸದಾಶಿವನಗರದ ಗೃಹ ಸಚಿವರ ಮನೆಯಲ್ಲಿ ಸಂಜೆ ಭೇಟಿಯಾಗಿ ಮನವಿ ಸಲ್ಲಿಸಿದರು. ಆ ಬಳಿಕ ಪರಮೇಶ್ವರ ಮತ್ತು ರಾಜಣ್ಣ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ವಿವರಗಳನ್ನು ನೀಡಿದರು.
‘ಪ್ರಕರಣದ ಬಗ್ಗೆ ನಾನು ದೂರು ಸ್ವೀಕರಿಸಲು ಸಾಧ್ಯವಿಲ್ಲ. ಈ ಬಗ್ಗೆ ಪೊಲೀಸ್ ಠಾಣೆಯಲ್ಲೇ ದೂರು ಸಲ್ಲಿಸಬೇಕಾಗುತ್ತದೆ. ಕಾನೂನು ತಜ್ಞರ ಜೊತೆ ಚರ್ಚಿಸಿ ಅವರ ಸಲಹೆ ಆಧರಿಸಿ ತೀರ್ಮಾನ ಮಾಡುತ್ತೇವೆ’ ಎಂದು ಪರಮೇಶ್ವರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
‘ಸದನದಲ್ಲಿ ಪ್ರಸ್ತಾಪವಾದ ವಿಚಾರ ಮತ್ತು ಅದರ ಮುಂದುವರಿದ ಪ್ರಕ್ರಿಯೆಯಂತೆ ನನಗೆ ದೂರು ನೀಡುವುದಾಗಿ ತಿಳಿಸಿದ್ದರು. ಕಾನೂನು ವ್ಯಾಪ್ತಿಯಲ್ಲಿ ಇರುವ ಅವಕಾಶಗಳ ಕುರಿತು ಕಾನೂನು ತಜ್ಞರು ಹಾಗೂ ಮುಖ್ಯಮಂತ್ರಿಯವರ ಜೊತೆ ಚರ್ಚಿಸಿ ನಿರ್ಧಾರ ಕೈಗೊಳ್ಳಲಾಗುವುದು’ ಎಂದು ಮಾಹಿತಿ ನೀಡಿದರು.
‘ಹನಿ ಟ್ರ್ಯಾಪ್ ವಿಚಾರ ಈಗ ಸದನದ ಚರ್ಚೆಯಾಗಿದೆ. ಈ ಕಾರಣಕ್ಕಾಗಿ ದೂರು ಸಲ್ಲಿಕೆಯಾಗುವವರೆಗೂ ನಾವು ಕಾಯುತ್ತಿದ್ದೆವು’ ಎಂದು ಹೇಳಿದರು.
ಕೆಟ್ಟ ಚಾಳಿ ಮುಂದವರಿಯಬಾರದು
"ಹನಿಟ್ರ್ಯಾಪ್ ಸಂಬಂಧ ನನ್ನ ಹೆಸರನ್ನು ಸದನದಲ್ಲಿ ಪ್ರಸ್ತಾಪಿಸಲಾಗಿತ್ತು. ಆ ಕಾರಣದಿಂದ ನಾನು ದೂರು ಸಲ್ಲಿಸಿದ್ದೇನೆ. ಈ ರೀತಿಯ ಕೆಟ್ಟ ಚಾಳಿ ಸಾರ್ವಜನಿಕ ಜೀವನದಲ್ಲಿ ಮುಂದುವರಿಯಬಾರದು ಎಂಬ ಉದ್ದೇಶದಿಂದ ಈ ಕ್ರಮ ಕೈಗೊಂಡಿದ್ದೇನೆ," ಎಂದು ಕೆ.ಎನ್. ರಾಜಣ್ಣ ತಿಳಿಸಿದರು.
"ಮಾಧ್ಯಮಗಳಲ್ಲಿ ತುಮಕೂರಿನ ಸಚಿವರು ಹನಿಟ್ರ್ಯಾಪ್‌ಗೆ ಸಿಲುಕಿದ್ದಾರೆ ಎಂಬ ಸುದ್ದಿ ಪ್ರಸಾರವಾಗಿತ್ತು. ಈ ಬಗ್ಗೆ ಸದನದಲ್ಲಿ ಪ್ರಸ್ತಾಪ ಆಗಿತ್ತು. ಆಗ, ನಾನು ಪ್ರತಿಕ್ರಿಯಿಸಿದ್ದೆ. ದೂರು ನೀಡಿದರೆ ತನಿಖೆ ನಡೆಸುವುದಾಗಿ ಗೃಹ ಸಚಿವರು ಭರವಸೆ ನೀಡಿದ್ದರು. ಆ ಕಾರಣದಿಂದ ದೂರು ಸಲ್ಲಿಸಿದ್ದೇನೆ," ಎಂದು ರಾಜಣ್ಣ ಹೇಳಿದ್ದಾರೆ.
ಪ್ರಕರಣದ ಹಿನ್ನೆಲೆ
ಕಳೆದ ವಾರ ವಿಧಾನಸಭೆಯಲ್ಲಿ ರಾಜಣ್ಣ ಅವರು, ತಮ್ಮನ್ನು ಹನಿಟ್ರ್ಯಾಪ್‌ಗೆ ಒಳಪಡಿಸಲು ಯತ್ನಿಸಲಾಗಿದೆ ಎಂದು ಆರೋಪಿಸಿದ್ದರು. ಈ ಆರೋಪವು ರಾಜ್ಯ ರಾಜಕೀಯದಲ್ಲಿ ದೊಡ್ಡ ಚರ್ಚೆಗೆ ಕಾರಣವಾಗಿತ್ತು. ರಾಜಣ್ಣ ಅವರು ತಮ್ಮ ಜೊತೆಗೆ ಒಟ್ಟು 48 ಶಾಸಕರು ಮತ್ತು ರಾಜಕೀಯ ನಾಯಕರು ಈ ರೀತಿಯ ಯತ್ನಕ್ಕೆ ಒಳಗಾಗಿದ್ದಾರೆ ಎಂದು ಆರೋಪಿಸಿದ್ದರು. ಈ ಹಿನ್ನೆಲೆಯಲ್ಲಿ, ಗೃಹ ಸಚಿವ ಪರಮೇಶ್ವರ್ ಅವರು ಉನ್ನತ ಮಟ್ಟದ ತನಿಖೆಗೆ ಆದೇಶಿಸುವ ಭರವಸೆ ನೀಡಿದ್ದರು. ಆದರೆ, ದೂರು ಸಲ್ಲಿಕೆಯಾಗದ ಕಾರಣ ತನಿಖೆ ಆರಂಭವಾಗಿರಲಿಲ್ಲ. ಈಗ ರಾಜಣ್ಣ ಅವರು ಔಪಚಾರಿಕವಾಗಿ ಮನವಿ ಸಲ್ಲಿಸಿದ್ದು, ಪ್ರಕರಣದ ತನಿಖೆಗೆ ದಾರಿ ಮಾಡಿಕೊಡಲಿದೆ ಎಂದು ನಿರೀಕ್ಷಿಸಲಾಗಿದೆ.