ದಲಿತ ಸಚಿವರು, ಶಾಸಕರೊಂದಿಗೆ ಗೃಹ ಸಚಿವ ಪರಮೇಶ್ವರ್ ಸಭೆ: ರಾಜಕೀಯ ವಲಯದಲ್ಲಿ ತೀವ್ರ ಚರ್ಚೆ

ನವೆಂಬರ್‌ನಲ್ಲಿ ರಾಜ್ಯ ರಾಜಕೀಯದಲ್ಲಿ ಬದಲಾವಣೆಗಳಾಗಬಹುದು ಎಂಬ ವದಂತಿಗಳ ಹಿನ್ನೆಲೆಯಲ್ಲಿ, ಈ ಸಭೆಯು ಕಾಂಗ್ರೆಸ್ ಪಕ್ಷದ ಆಂತರಿಕ ಶಕ್ತಿ ಪ್ರದರ್ಶನದ ವೇದಿಕೆಯಾಗಬಹುದು ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.;

Update: 2025-08-02 04:34 GMT

ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಮತ್ತು ಮುಖ್ಯಮಂತ್ರಿ ಹುದ್ದೆ ಕುರಿತು ಚರ್ಚೆಗಳು ತೀವ್ರಗೊಳ್ಳುತ್ತಿರುವ ಸಂದರ್ಭದಲ್ಲೇ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರು ಇಂದು (ಆಗಸ್ಟ್ 2) ದಲಿತ ಸಚಿವರು ಮತ್ತು ಶಾಸಕರ ಸಭೆ ಕರೆದಿರುವುದು ರಾಜಕೀಯ ವಲಯದಲ್ಲಿ ತೀವ್ರ ಕುತೂಹಲಕ್ಕೆ ಕಾರಣವಾಗಿದೆ.

ಈ ಸಭೆಯನ್ನು ಅಧಿಕೃತವಾಗಿ ಪರಿಶಿಷ್ಟ ಜಾತಿಗಳ ಒಳ ಮೀಸಲಾತಿ ಕುರಿತು ನಿವೃತ್ತ ನ್ಯಾಯಮೂರ್ತಿ ಎ.ಜೆ. ಸದಾಶಿವ ಆಯೋಗದ ವರದಿಯ ಬಗ್ಗೆ ಚರ್ಚಿಸಲು ಆಯೋಜಿಸಲಾಗಿದೆ ಎಂದು ಹೇಳಲಾಗಿದೆಯಾದರೂ, ಈ ಸಭೆಯ ಹಿಂದಿನ ಉದ್ದೇಶ ಬೇರೆಯೇ ಇದೆ ಎಂಬ ಮಾತುಗಳು ಕೇಳಿಬರುತ್ತಿವೆ. ಇದು ರಾಜ್ಯದಲ್ಲಿ ದಲಿತ ಮುಖ್ಯಮಂತ್ರಿ ಹುದ್ದೆಯ ಬೇಡಿಕೆಗೆ ಮತ್ತಷ್ಟು ಬಲ ನೀಡಲಿದೆ ಎಂದು ಕಾಂಗ್ರೆಸ್ ವಲಯದಲ್ಲಿ ವಿಶ್ಲೇಷಿಸಲಾಗುತ್ತಿದೆ.

ಆಂತರಿಕ ಶಕ್ತಿ ಪ್ರದರ್ಶನ

ಇತ್ತೀಚೆಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ತಮಗೆ ಹಿಂದೆ ಮುಖ್ಯಮಂತ್ರಿ ಸ್ಥಾನ ತಪ್ಪಿದ್ದರ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದರು. ಈ ಹೇಳಿಕೆಯ ಬೆನ್ನಲ್ಲೇ, ಪರಮೇಶ್ವರ್ ಅವರು ದಲಿತ ನಾಯಕರ ಸಭೆ ಆಯೋಜಿಸಿರುವುದು ಮಹತ್ವ ಪಡೆದುಕೊಂಡಿದೆ.

ನವೆಂಬರ್‌ನಲ್ಲಿ ರಾಜ್ಯ ರಾಜಕೀಯದಲ್ಲಿ ಬದಲಾವಣೆಗಳಾಗಬಹುದು ಎಂಬ ವದಂತಿಗಳ ಹಿನ್ನೆಲೆಯಲ್ಲಿ, ಈ ಸಭೆಯು ಕಾಂಗ್ರೆಸ್ ಪಕ್ಷದ ಆಂತರಿಕ ಶಕ್ತಿ ಪ್ರದರ್ಶನದ ವೇದಿಕೆಯಾಗಬಹುದು ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.

ಪರಮೇಶ್ವರ್ ಅವರ ನಿವಾಸದಲ್ಲಿ ನಡೆಯಲಿರುವ ಈ 'ಡಿನ್ನರ್ ಮೀಟಿಂಗ್'ಗೆ ದಲಿತ ಸಚಿವರ ಜೊತೆಗೆ ಶಾಸಕರಿಗೂ ಆಹ್ವಾನ ನೀಡಲಾಗಿದೆ. ಒಂದು ವೇಳೆ ಕಾಂಗ್ರೆಸ್ ಪಕ್ಷದಲ್ಲಿ ಮುಖ್ಯಮಂತ್ರಿ ಬದಲಾವಣೆಯ ನಿರ್ಧಾರವಾದರೆ, ದಲಿತ ನಾಯಕರನ್ನು ಮುಖ್ಯಮಂತ್ರಿ ಮಾಡುವಂತೆ ಪಕ್ಷದ ಹೈಕಮಾಂಡ್ ಮೇಲೆ ಒತ್ತಡ ಹೇರುವುದು ಈ ಸಭೆಯ ಪ್ರಮುಖ ಉದ್ದೇಶಗಳಲ್ಲಿ ಒಂದಾಗಿರಬಹುದು ಎನ್ನಲಾಗಿದೆ. ಈ ಬೆಳವಣಿಗೆಗಳು ರಾಜ್ಯ ರಾಜಕೀಯದಲ್ಲಿ ಹೊಸ ಸಂಚಲನವನ್ನು ಸೃಷ್ಟಿಸಿವೆ.

Tags:    

Similar News