ಫೆಂಗಲ್ ಎಫೆಕ್ಟ್ | ಕೊಡಗು ಸೇರಿ ಏಳು ಜಿಲ್ಲೆಗಳಲ್ಲಿ ಶಾಲಾ ಕಾಲೇಜಿಗೆ ರಜೆ ಘೋಷಣೆ
ಮಳೆ ಆರ್ಭಟದ ಹಿನ್ನೆಲೆಯಲ್ಲಿ ಡಿ.3 ರಂದು ರಾಜ್ಯದ ಕೊಡಗು, ಚಾಮರಾಜನಗರ, ಉಡುಪಿ, ಚಿಕ್ಕಮಗಳೂರು, ಕೋಲಾರ, ರಾಮನಗರ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಮುಂಜಾಗ್ರತಾ ಕ್ರಮವಾಗಿ ಅಂಗನವಾಡಿ ಹಾಗೂ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.;
ಫೆಂಗಲ್ ಚಂಡಮಾರುತದ ಪರಿಣಾಮ ರಾಜ್ಯದ ಹಲವು ಜಿಲ್ಲೆಗಳಲ್ಲಿ ಮುಂದಿನ ಮೂರು ದಿನಗಳವರೆಗೆ ಭಾರೀ ಮಳೆಯಾಗಲಿದೆ. ಮಳೆ ಆರ್ಭಟದ ಹಿನ್ನೆಲೆಯಲ್ಲಿ ಡಿ.3 ರಂದು ರಾಜ್ಯದ ಕೊಡಗು, ಚಾಮರಾಜನಗರ, ಉಡುಪಿ, ಚಿಕ್ಕಮಗಳೂರು, ಕೋಲಾರ, ರಾಮನಗರ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಮುಂಜಾಗ್ರತಾ ಕ್ರಮವಾಗಿ ಅಂಗನವಾಡಿ ಹಾಗೂ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.
ಕಳೆದ ಎರಡು ದಿನಗಳಿಂದ ಕೊಡಗು ಜಿಲ್ಲೆಯಲ್ಲಿ ನಿರಂತರ ಮಳೆಯಾಗುತ್ತಿದೆ. ಮಂಗಳವಾರ (ಡಿ.3) ಕೂಡ ಬಿರುಗಾಳಿ ಸಹಿತ ಭಾರೀ ಮಳೆಯ ಮುನ್ಸೂಚನೆ ಹಿನ್ನೆಲೆಯಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದೆ.
ಕರಾವಳಿ ಜಿಲ್ಲೆಯ ದಕ್ಷಿಣ ಕನ್ನಡದಲ್ಲೂ ಫೆಂಗಲ್ ಚಂಡಮಾರುತ ಆರ್ಭಟಿಸುತ್ತಿದೆ. ಇಲ್ಲಿ ಆರೆಂಜ್ ಅಲರ್ಟ್ ಹಿನ್ನೆಲೆಯಲ್ಲಿ ಅಂಗನವಾಡಿ, ಶಾಲೆ ಹಾಗೂ ಪದವಿ ಪೂರ್ವ ಕಾಲೇಜುಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಆದೇಶ ಹೊರಡಿಸಿದ್ದಾರೆ.
ಕೋಲಾರ ಹಾಗೂ ಮೈಸೂರು ಜಿಲ್ಲೆಯಲ್ಲಿ ನಿರಂತರ ಮಳೆ ಹಾಗೂ ಚಳಿ ಹಿನ್ನೆಲೆಯಲ್ಲಿ ಜಿಲ್ಲಾ ಆರೋಗ್ಯ ಇಲಾಖೆ ಅಧಿಕಾರಿಗಳ ಸಲಹೆ ಮೇರೆಗೆ ಶಾಲಾ ಕಾಲೇಜುಗಳಿಗೆ ರಜೆ ನೀಡಲಾಗಿದೆ. ಚಾಮರಾಜನಗರದಲ್ಲಿ ಶಾಲೆ ಹಾಗೂ ಪದವಿ ಪೂರ್ವ ಕಾಲೇಜುಗಳಿಗೆ ಮಾತ್ರ ರಜೆ ನೀಡಲಾಗಿದೆ. ಪರೀಕ್ಷೆ ನಡೆಯುತ್ತಿರುವ ಪದವಿ ಕಾಲೇಜುಗಳಿಗೆ ನಾಳೆ ರಜೆ ನೀಡಲಾಗಿಲ್ಲ.
ಕಾಫಿನಾಡು ಚಿಕ್ಕಮಗಳೂರು ಜಿಲ್ಲೆಯಾದ್ಯಂತ ಮಳೆ ಜೋರಾಗಿದ್ದು, ಮುಂಜಾಗ್ರತಾ ಕ್ರಮವಾಗಿ ಶಾಲೆಗಳಿಗೆ ರಜೆ ನೀಡಲಾಗಿದೆ. ಕಾಲೇಜುಗಳಿಗೆ ರಜೆ ನೀಡಿಲ್ಲ. ಮಳೆ ಅನಾಹುತಗಳಿಗಾಗಿ ಕಂಟ್ರೋಲ್ ರೂಂ ಆರಂಭಿಸಿದ್ದು, 08262_238950 ಸಂಖ್ಯೆಯ ಕರೆ ಮಾಡುವಂತೆ ಜಿಲ್ಲಾಡಳಿತ ತಿಳಿಸಿದೆ.
ಉಡುಪಿ ಜಿಲ್ಲೆಯಲ್ಲಿ ಆರೆಂಜ್ ಅಲರ್ಟ್ ಹಿನ್ನೆಲೆಯಲ್ಲಿ ಶಾಲಾ ಕಾಲೇಜಿಗೆ ರಜೆ ಘೋಷಿಸಲಾಗಿದೆ. ರಾಮನಗರ ಜಿಲ್ಲೆಯಲ್ಲೂ ಮಳೆಯ ಕಾರಣ ಶಾಲಾ ಕಾಲೇಜಿಗೆ ರಜೆ ನೀಡಲಾಗಿದೆ.
ನೈರುತ್ಯ ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ ಹಾಗೂ ಫೆಂಗಲ್ ಚಂಡಮಾರುತದ ಪರಿಣಾಮ ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನಲ್ಲಿ ಭಾರೀ ಮಳೆಯಾಗುತ್ತಿದೆ. ಸೋಮವಾರ (ಡಿ. 2) ಮೈಸೂರು, ಕೋಲಾರ, ಹಾಸನ, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿತ್ತು.