HMT Land Dispute | ನಾಲ್ವರು ಐಎಫ್‌ಎಸ್‌ ಅಧಿಕಾರಿಗಳಿಗೆ ನೋಟಿಸ್‌

ಹಿಂದೂಸ್ತಾನ್ ಮೆಷಿನ್ ಟೂಲ್ಸ್ (ಎಚ್‌ಎಂಟಿ) ಲಿಮಿಟೆಡ್ ವಶಪಡಿಸಿಕೊಂಡಿರುವ ಪೀಣ್ಯ ಪ್ಲಾಂಟೇಶನ್ ಭೂಮಿಯನ್ನು ಡಿನೋಟಿಫಿಕೇಶನ್ ಮಾಡುವಂತೆ ಸುಪ್ರೀಂ ಕೋರ್ಟ್‌ಗೆ ಮಧ್ಯಂತರ ಅರ್ಜಿ (ಐಎ) ಸಲ್ಲಿಸಿದ್ದಕ್ಕಾಗಿ ಐಎಫ್‌ಎಸ್ ಅಧಿಕಾರಿಗಳಿಗೆ ರಾಜ್ಯ ಸರ್ಕಾರ ನೋಟಿಸ್ ಜಾರಿ ಮಾಡಿದೆ.;

Update: 2024-11-12 05:26 GMT
ಎಚ್‌ಎಂಟಿ
Click the Play button to listen to article

ಹಿಂದೂಸ್ತಾನ್ ಮೆಷಿನ್ ಟೂಲ್ಸ್ (ಎಚ್‌ಎಂಟಿ) ಲಿಮಿಟೆಡ್ ವಶದಲ್ಲಿರುವ ಪೀಣ್ಯ ಪ್ಲಾಂಟೇಶನ್ ಭೂಮಿಯನ್ನು ಡಿನೋಟಿಫಿಕೇಶನ್ ಮಾಡುವಂತೆ ಸುಪ್ರೀಂ ಕೋರ್ಟ್‌ಗೆ ಮಧ್ಯಂತರ ಅರ್ಜಿ (ಐಎ) ಸಲ್ಲಿಸಿದ್ದಕ್ಕಾಗಿ ಐಎಫ್‌ಎಸ್ ಅಧಿಕಾರಿಗಳಿಗೆ ರಾಜ್ಯ ಸರ್ಕಾರ ನೋಟಿಸ್ ಜಾರಿ ಮಾಡಿದೆ.

ಅರಣ್ಯ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯಾಗಿದ್ದ ಸಂದೀಪ್ ದವೆ, ಪ್ರಧಾನ ಕಾರ್ಯದರ್ಶಿಯಾಗಿದ್ದ ವಿಜಯಕುಮಾರ್ ಗೋಗಿ (ಇಬ್ಬರೂ ಈಗ ನಿವೃತ್ತಿ) ಹಾಗೂ ಐಟಿಸಿ ವಿಭಾಗದ ಈಗಿನ ಹೆಚ್ಚುವರಿ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಸ್ಮಿತಾ ಬಿಜೂರ್, ತಾಂತ್ರಿಕ ಕೋಶದ ಅಧಿಕಾರಿ ಆರ್. ಗೋಕುಲ್ ಅವರಿಗೆ ಕಾರಣ ಕೇಳಿ ಸೋಮವಾರ ನೊಟೀಸ್‌ ಜಾರಿ ಮಾಡಿದೆ. 

ಎಚ್‌ಎಂಟಿ ವಶದಲ್ಲಿರುವ ಪೀಣ್ಯ ಸರ್ವೆ ನಂಬರ್ 1 ಮತ್ತು 2ರ ಬೆಲೆ ಬಾಳುವ ಭೂಮಿ ಅರಣ್ಯ ಸ್ವರೂಪ ಕಳೆದುಕೊಂಡಿದೆ ಎಂದು ಅಧಿಕಾರಿಗಳ ಮಟ್ಟದಲ್ಲೇ ನಿರ್ಧಾರ ಕೈಗೊಳ್ಳಲಾಗಿದೆ. ಕೋರ್ಟ್‌ಗೆ ಮಧ್ಯಂತರ ಅರ್ಜಿ ಸಲ್ಲಿಸುವ ಪೂರ್ವದಲ್ಲಿ ಸರ್ಕಾರದ ಪೂರ್ವಾನುಮತಿ ಪಡೆದಿರಲಿಲ್ಲ. ಹಾಗಾಗಿ, ಅಂದು ನಿರ್ಧಾರ ತೆಗೆದುಕೊಂಡಿದ್ದ ಅಧಿಕಾರಿಗಳಿಗೆ ನೋಟಿಸ್ ನೀಡುವಂತೆ ಅರಣ್ಯ ಸಚಿವ ಈಶ್ವರ ಖಂಡ್ರೆ ಸೂಚನೆ ನೀಡಿದ್ದರು.

'ಸುಪ್ರೀಂಕೋರ್ಟ್ ನಿರ್ದೇಶನದಂತೆ ಅನ್ಯ ಉದ್ದೇಶಕ್ಕೆ ಭೂ ಪರಿವರ್ತನೆ ಆಗದ ಹೊರತು ಒಮ್ಮೆ ಅರಣ್ಯ ಎಂದು ನಮೂದಾದ ಭೂಮಿ ಅರಣ್ಯವೇ ಆಗಿರುತ್ತದೆ. ಅರಣ್ಯ ಸಂರಕ್ಷಣಾ ಕಾಯ್ದೆ 1980ರಡಿ ಅರಣ್ಯ ಭೂಮಿಯನ್ನು ಅರಣ್ಯೇತರ ಬಳಕೆಗೆ ಪರಿಹಾರ ಭೂಮಿ ಒದಗಿಸುವಾಗ ಮೊತ್ತ ಪಾವತಿಸಿ ಕಡ್ಡಾಯವಾಗಿ ಅನುಮತಿ ಪಡೆಯಬೇಕಾಗುತ್ತದೆ. ಅನುಮತಿ ನೀಡಿದರೂ, ಅರಣ್ಯ ಭೂಮಿಯನ್ನು ಗುತ್ತಿಗೆ ಮಾತ್ರ ನೀಡಬೇಕು. ಗುತ್ತಿಗೆ ಅವಧಿ ಮುಗಿದ ಬಳಿಕ ಅರಣ್ಯ ಇಲಾಖೆಗೆ ಮರಳಿ ಪಡೆಯಬೇಕಾಗುತ್ತದೆ. ಆದರೂ, ನಾಲ್ವರು ಅಧಿಕಾರಿಗಳು ನಿಯಮವನ್ನು ಅಂದು ಏಕೆ ಪಾಲಿಸಲಿಲ್ಲ' ಎಂದು ನೋಟಿಸ್ ಮೂಲಕ ಪ್ರಶ್ನಿಸಲಾಗಿದೆ.

“ಮುಖ್ಯಕಾರ್ಯದರ್ಶಿ ಅಧ್ಯಕ್ಷತೆಯಲ್ಲಿ 2020ರಲ್ಲಿ ನಡೆದ ಸಭೆಯಲ್ಲಿ 1980ರ ಪೂರ್ವದಲ್ಲಿ ವಿವಿಧ ಸರ್ಕಾರಿ ಸಂಸ್ಥೆಗಳಿಗೆ ನೀಡಿದ್ದ ಜಮೀನು ಮಂಜೂರಾತಿಗಳ ಬಗ್ಗೆ ಅಡ್ವೋಕೇಟ್ ಜನರಲ್ ಅವರ ಅಭಿಪ್ರಾಯಪಡೆದು, ಅಂತಹ ಅರಣ್ಯಪ್ರದೇಶಗಳ ಡಿನೋಟಿಫಿಕೇಶನ್ ಪ್ರಸ್ತಾವವನ್ನು ಸಚಿವ ಸಂಪುಟದ ನಿರ್ಧಾರಕ್ಕಾಗಿ ಸಲ್ಲಿಸಲು ಅರಣ್ಯ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗೆ ಸೂಚಿಸಲಾಗಿತ್ತು. ಆದರೆ, ಸಂಪುಟದ ಗಮನಕ್ಕೆ ತಾರದೇ ಡಿನೋಟಿಫಿಕೇಷನ್‌ಗೆ ಅನುಮತಿ ಕೋರಿ ಸುಪ್ರೀಂಕೋರ್ಟ್‌ಗೆ ಮಧ್ಯಂತರ ಅರ್ಜಿ ಸಲ್ಲಿಸಲಾಗಿದೆ. ಇದು ಕರ್ನಾಟಕ ಸರ್ಕಾರದ ಕಾರ್ಯ ಕಲಾಪಗಳ ನಿರ್ವಹಣಾ ನಿಯಮಾವಳಿ 1977ರ ಉಲ್ಲಂಘನೆಯೂ ಅಲ್ಲವೇ' ಎಂದು ನೋಟಿಸ್‌ನಲ್ಲಿ ಪ್ರಶ್ನಿಸಲಾಗಿದೆ.

Tags:    

Similar News