Mangalore Murder Case: ಮಂಗಳೂರಿನಲ್ಲಿ ಹಿಂದೂಪರ ಸಂಘಟನೆ ಕಾರ್ಯಕರ್ತನ ಕೊಚ್ಚಿ ಕೊಲೆ
2022ರಲ್ಲಿ ಪ್ರವೀಣ ನೆಟ್ಟಾರು ಹತ್ಯೆಗೆ ಪ್ರತೀಕಾರವಾಗಿ ಫಾಜಿಲ್ ಎಂಬಾತನ ಕೊಲೆ ನಡೆಸಲಾಗಿತ್ತು . ಪ್ರತೀಕಾರವಾಗಿ ಫಾಜಿಲ್ ಕೊಲೆ ಅರೋಪಿ ಸುಹಾಸ್ ಹತ್ಯೆ ನಡೆದಿದೆ ಎಂದು ಶಂಕಿಸಲಾಗಿದೆ.;
ಕೊಲೆ ಆರೋಪವೊಂದರ ಪ್ರಮುಖ ಆರೋಪಿ ಹಾಗೂ ರೌಡಿ ಶೀಟರ್ ಮತ್ತು ಹಿಂದೂ ಪರ ಸಂಘಟನೆ ಕಾರ್ಯಕರ್ತನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಲಾಗಿದೆ. ಗುರುವಾರ ರಾತ್ರಿ ಅಪರಿಚಿತರು ಆತನನ್ನು ಅಡ್ಡಗಟ್ಟಿ ಕೊಲೆ ಮಾಡಿದ್ದಾರೆ.
ಸುಹಾಸ್ ಶೆಟ್ಟಿ ಕೊಲೆಯಾದ ರೌಡಿ. ಆತ ಪ್ರವೀಣ್ ನೆಟ್ಟಾರ್ ಕೊಲೆ ಪ್ರಕರಣದಲ್ಲಿ ಭಾಗಿಯಾಗಿದ್ದ ಫಾಜಿಲ್ ಕೊಲೆ ಪ್ರಕರಣದ ಆರೋಪಿಯಾಗಿದ್ದಾನೆ. ಮಂಗಳೂರಿನ ಬಜಪೆ ಕಿನ್ನಿಪದವು ಬಳಿ ಘಟನೆ ನಡೆದಿದ್ದು, ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಕೊಲೆ ಮಾಡಿದ್ದಾರೆ.
2022ರಲ್ಲಿ ನಡೆದಿದ್ದ ಫಾಜಿಲ್ ಕೊಲೆಗೆ ಪ್ರತೀಕಾರವಾಗಿ ಸುಹಾಸ್ ಹತ್ಯೆ ನಡೆದಿದೆ ಎಂದು ಶಂಕಿಸಲಾಗಿದೆ. ಎ.ಜೆ.ಆಸ್ಪತ್ರೆ ಎದುರು ನೂರಾರು ಹಿಂದೂ ಕಾರ್ಯಕರ್ತರು ಜಮಾಯಿಸಿದ್ದು, ನಗರದಲ್ಲಿ ಉದ್ವಿಗ್ನ ಸ್ಥಿತಿ ನಿರ್ಮಾಣವಾಗಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಬೆಳ್ಳಾರೆಯಲ್ಲಿ ಬಿಜೆಪಿ ಯುವಮೋರ್ಚ ಮುಖಂಡ ಪ್ರವೀಣ್ ನೆಟ್ಟಾರು ಅವರನ್ನು 2022ರಲ್ಲಿ ಜುಲೈ 26ರಂದು ರಾತ್ರಿ ಬೈಕಿನಲ್ಲಿ ಬಂದ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೈಗೈದಿದ್ದರು. ಪ್ರವೀಣ್ ಹತ್ಯೆಗೆ ಪ್ರತೀಕಾರವಾಗಿ 2022ರಲ್ಲಿ ಸುರತ್ಕಲ್‌ನ ಫಾಜಿಲ್ ಎಂಬವನ ಹತ್ಯೆ ಮಾಡಲಾಗಿತ್ತು. ಈ ಕೊಲೆಯಲ್ಲಿ ಸುಹಾಸ್ ಶೆಟ್ಟಿ ಹಾಗೂ ಅಭಿಷೇಕ್ ಎಂಬುವರ ಪಾತ್ರವಿದೆ ಎನ್ನಲಾಗಿದೆ.
ಸುಹಾಸ್ ಶೆಟ್ಟಿ ಈ ಹಿಂದೆ ಬಜರಂಗದಳದ ಗೋರಕ್ಷಾ ವಿಭಾಗದ ಸದಸ್ಯನಾಗಿದ್ದ. ಹತ್ಯೆ ಪ್ರಕರಣದಲ್ಲಿ ಭಾಗಿಯಾದ ನಂತರ ಯಾವುದೇ ಜವಾಬ್ದಾರಿ ಇರಲಿಲ್ಲ. ಹಲವು ಕೊಲೆ, ಕೊಲೆಯತ್ನ ಪ್ರಕರಣದ ಆರೋಪಿಯಾಗಿದ್ದ ಈತ, ಫಾಜಿಲ್ ಹತ್ಯೆ ಕೇಸ್‌ನಲ್ಲಿ ಜಾಮೀನಿನ ಮೇರೆಗೆ ಜೈಲಿನಿಂದ ಹೊರಗೆ ಬಂದಿದ್ದ. ಆದರೆ, ಗುರುವಾರ ರಾತ್ರಿ ಹಲ್ಲೆ ಬಳಿಕ ಗಂಭೀರ ಸ್ಥಿತಿಯಲ್ಲಿದ್ದ ಸುಹಾಸ್‌ನನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಾಗಿತ್ತು. ತಲ್ವಾರ್ ದಾಳಿಗೆ ತುತ್ತಾಗಿ ತೀವ್ರ ರಕ್ತಸ್ರಾವ ಉಂಟಾಗಿದ್ದರಿಂದ ಚಿಕಿತ್ಸೆಗೆ ಸ್ಪಂದಿಸದೇ ಸುಹಾಸ್ ಸಾವಿಗೀಡಾಗಿದ್ದಾನೆ.
ಪೊಲೀಸರು ಹೇಳಿದ್ದೇನು?
ಗುರುವಾರ( ಮೇ 1 ) ರಾತ್ರಿ 8:27 ರ ಸುಮಾರಿಗೆ, ಮಂಗಳೂರು ನಗರ ಪೊಲೀಸ್ ವ್ಯಾಪ್ತಿಯ ಕಿನ್ನಿಪದವು ಕ್ರಾಸ್ ಬಳಿ ಹಲ್ಲೆ ಮತ್ತು ಕೊಲೆ ಘಟನೆ ವರದಿಯಾಗಿದೆ. ಸಂಜಯ್, ಪ್ರಜ್ವಲ್, ಅನ್ವಿತ್, ಲತೀಶ್ ಮತ್ತು ಶಶಾಂಕ್ ಅವರೊಂದಿಗೆ KA-12-MB-3731 ವಾಹನದಲ್ಲಿ ಪ್ರಯಾಣಿಸುತ್ತಿದ್ದ ಸುಹಾಶ್ ಶೆಟ್ಟಿ ಎಂಬಾತನನ್ನು ಸ್ವಿಫ್ಟ್ ಕಾರು ಮತ್ತು ಪಿಕಪ್ ವಾಹನದಲ್ಲಿ ಪ್ರಯಾಣಿಸುತ್ತಿದ್ದ ದುಷ್ಕರ್ಮಿಗಳ ಗುಂಪು ತಡೆದಿದೆ.
5 ರಿಂದ 6 ರವರೆಗಿನ ದುಷ್ಕರ್ಮಿಗಳು ಸುಹಾಶ್ ಶೆಟ್ಟಿ ಮೇಲೆ ಮಾರಕ ಆಯುಧಗಳಿಂದ ಹಲ್ಲೆ ನಡೆಸಿ ಗಂಭೀರ ಗಾಯಗಳನ್ನುಂಟುಮಾಡಿದರು. ಆತನನ್ನು ತಕ್ಷಣ ಎಜೆ ಆಸ್ಪತ್ರೆಗೆ ಸಾಗಿಸಲಾಯಿತು, ಅಲ್ಲಿ ಆತ ಸಾವನ್ನಪ್ಪಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಬಜ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳನ್ನು ಆದಷ್ಟು ಬೇಗ ಬಂಧಿಸಲು ಹಲವಾರು ತಂಡಗಳನ್ನು ರಚಿಸಲಾಗಿದೆ.
ಅಶ್ರಫ್ ಕೊಲೆಗೆ ಪ್ರತೀಕಾರವೇ?
ಮಂಗಳೂರು ಸಮೀಪದ ಕುಡುಪಿನಲ್ಲಿ ಮೂರು ದಿನಗಳ ಹಿಂದೆ ಕೇರಳ ಮೂಲದ ಅಶ್ರಫ್ ಎಂಬ ಯುವಕನನ್ನು ಕೊಲೆ ಮಾಡಲಾಗಿತ್ತು. ಕ್ರಿಕೆಟ್ ಆಡುತ್ತಿದ್ದ ಹಿಂದೂ ಯುವಕರ ತಂಡವೊಂದು ಆತನನ್ನು ಹಲ್ಲೆ ಮಾಡಿ ಹತ್ಯೆ ಮಾಡಿ ಕೊಲೆ ಮಾಡಿದ್ದರು. ಇದು ಮಂಗಳೂರಿನಲ್ಲಿ ಕೋಮು ವೈಷಮ್ಯದ ಬೆಂಕಿಗೆ ಮತ್ತೆ ತುಪ್ಪ ಸುರಿದಂತಾಗಿತ್ತು. ಈ ಕೊಲೆಯೂ ಅದರ ಹಿನ್ನೆಲೆ ಹೊಂದಿರಬಹುದೇ ಎಂಬ ಬಗ್ಗೆಯೂ ತನಿಖೆ ನಡೆಯುತ್ತಿದೆ.
ದ ಫೆಡರಲ್ ಕರ್ನಾಟಕ ವರದಿ
ರೀಲ್ಸ್ ಮಾಡಿ ಕೋಮು ಸಂಘರ್ಷಕ್ಕೆ ಕಾರಣವಾಗಿರುವ ರೌಡಿಗಳ ಬಗ್ಗೆ ದ ಫೆಡರಲ್ ಕರ್ನಾಟಕ ಫೆ.2 ರಂದು ವರದಿ ಮಾಡಿತ್ತು. ಅದರಲ್ಲಿ ಫಾಜಿಲ್ ಕೊಲೆ ಆರೋಪಿ ಸುಹಾಸ್ ಶೆಟ್ಟಿ ಬಜ್ಪೆ ಹಾಗೂ ದೀಪಕ್ ರಾವ್ ಕೊಲೆ ಅರೋಪಿ ನೌಶಾದ್ ವಿಡಿಯೋ ರೀಲ್ಸ್‌ಗಳಲ್ಲಿ ವಿಜ್ರಂಭಿಸುವ ಬಗ್ಗೆ ಮತ್ತು ಕೋಮು ಗಲಭೆ ಸೃಷ್ಟಿಸಲು ನಡೆಸುತ್ತಿರುವ ಯತ್ನದ ಬಗ್ಗೆ ವಿವರ ವರದಿ ಪ್ರಕಟಿಸಲಾಗಿತ್ತು.
ಆ ವರದಿಯ ವಿವರಕ್ಕೆ ಈ ಲಿಂಕ್ ಕ್ಲಿಕ್ ಮಾಡಿ.