Coastal Crime | ಕರಾವಳಿ ಕೋಮು ರೌಡಿಗಳಿಂದ ರೀಲ್ಸ್ ರಂಪಾಟ; ಪೊಲೀಸರ ಜಾಣ ಕುರುಡು?
ಆರೋಪಿ ನೌಶಾದ್ ಮುಲ್ಕಿ ಅಲಿಯಾಸ್ ಮಹಮ್ಮದ್ ನೌಶಾದ್ 2018ರಲ್ಲಿ ಮಂಗಳೂರಿನ ಕಾಟಿಪಳ್ಳದಲ್ಲಿ ಬಿಜೆಪಿ ಕಾರ್ಯಕರ್ತ ದೀಪಕ್ ರಾವ್ ಕೊಲೆ ಪ್ರಕರಣದ ಪ್ರಮುಖ ಆರೋಪಿ. ರೌಡಿಶೀಟರ್ ಸುಹಾಸ್ ಬಜ್ಪೆ ಬಿಜೆಪಿ ಯುವಮೋರ್ಚಾ ಮುಖಂಡ ಪ್ರವೀಣ್ ನೆಟ್ಟಾರು ಹತ್ಯೆಗೆ ಪ್ರತೀಕಾರವಾಗಿ 2022ರಲ್ಲಿ ಸುರತ್ಕಲ್‌ನ ಫಾಜಿಲ್ ಎಂಬವನ ಹತ್ಯೆ ಮಾಡಿದ ಆರೋಪವಿದೆ.
ಇತ್ತೀಚಿನ ದಿನಗಳಲ್ಲಿ ಕರಾವಳಿಯಲ್ಲಿ ರೌಡಿಸಂ, ಭೂಗತಪಾತಕಿಗಳ ಅಟ್ಟಹಾಸ ತಣ್ಣಗಾದಂತಿತ್ತು. ಆದರೆ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ನಡೆಯುತ್ತಿರುವ ಬೆಳವಣಿಗೆಯನ್ನು ಗಮನಿಸಿದಾಗ ಕರಾವಳಿಯಲ್ಲಿ ರೌಡಿಸಂ, ಭೂಗತಪಾತಕಿಗಳ ಅಟಾಟೋಪ ಮತ್ತೆ ಚಿಗುರೊಡೆಯುತ್ತಿದೆಯೇ ಅಥವಾ ಪೊಲೀಸರ ಭಯವೇ ಇಲ್ಲವೇ ಎಂಬ ಅನುಮಾನ ಮೂಡಲಾರಂಭಿಸುತ್ತಿದೆ.
ಕರಾವಳಿಯಲ್ಲಿ ಕೆಲ ವರ್ಷಗಳ ಹಿಂದೆ ಕೋಮು ದಳ್ಳುರಿಗೆ ಕಾರಣರಾದ ಇಬ್ಬರು ಕೊಲೆ ಆರೋಪಿಗಳೀಗ ಸಾಮಾಜಿಕ ಜಾಲತಾಣಗಳಲ್ಲಿ ʼಅಬ್ಬರಿಸುತ್ತಿದ್ದಾರೆʼ.
ರೌಡಿಗಳು ಸಾಮಾಜಿಕ ಜಾಲತಾಣಗಳ ಮೂಲಕ ತಮ್ಮ ಬಗ್ಗೆ ಹೊಗಳಿಕೊಂಡು, ತಮ್ಮ ಸಹಚರರಿಂದ ಬಹುಪರಾಕ್ ಹೇಳಿಸಿಕೊಂಡು ಹವಾ ಸೃಷ್ಟಿಸಲು ಪ್ರಯತ್ನಿಸುತ್ತಿರುವುದು ಪೊಲೀಸರ ಗಮನಕ್ಕೆ ಬಂದಿದೆಯೇ? ಅಷ್ಟು ರಾಜಾರೋಷವಾಗಿ ತಮ್ಮ ಬಗ್ಗೆ ʼಬಾಸ್ʼ ಎಂದೆಲ್ಲಾ ಹೇಳಿಕೊಂಡು ಮಾಡುತ್ತಿರುವ ಸಾಮಾಜಿಕ ಜಾಲತಾಣದಲ್ಲಿ ಎಬ್ಬಿಸಿರುವ ಗೊಂದಲಗಳಿಗೆ ಕಡಿವಾಣ ಹಾಕಲು ಸಾಧ್ಯವಾಗುತ್ತಿಲ್ಲವೆ?
ಯಾರವರು?
ಇನ್‌ಸ್ಟಾಗ್ರಾಂ ರೀಲ್ಸ್‌ಗಳ ಮೂಲಕ ಇಬ್ಬರು ರೌಡಿಶೀಟರ್‌ಗಳಿಗೆ ಭಾರೀ ಹೈಪ್ ಕೊಡಲಾಗುತ್ತಿದೆ. ಕೆಜಿಎಫ್ ಯಶ್, ʼಡಿ-ಬಾಸ್ʼ ದರ್ಶನ್ ಮಾದರಿಯಲ್ಲಿ ಇವರಿಗೆ ́"ಹೀರೋ ಇಮೇಜ್" ಸೃಷ್ಟಿಸಿ ರೀಲ್ಸ್ ಮಾಡಲಾಗಿದೆ. ಕೋಮು ಗಲಭೆಗಳಿಗೆ ಕಾರಣನಾದ ಕಾಟಿಪಳ್ಳದ ದೀಪಕ್ ರಾವ್ ಕೊಲೆ ಆರೋಪಿ ಮುಲ್ಕಿ ನೌಶಾದ್ ಹಾಗೂ ಸುರತ್ಕಲ್ ಫಾಝೀಲ್ ಹತ್ಯೆ ಆರೋಪಿ ಸುಹಾಸ್ ಬಜ್ಪೆಯನ್ನು ರೀಲ್ಸ್‌ಗಳಲ್ಲಿ ಹೀರೋಗಳ ರೀತಿ ಹೈಪ್ ಕೊಡಲಾಗುತ್ತಿರುವುದು ಕಂಡು ಬಂದಿದೆ.
ಆರೋಪಿಗಳ ಹಿನ್ನೆಲೆ
ಆರೋಪಿ ನೌಶಾದ್ ಮುಲ್ಕಿ ಅಲಿಯಾಸ್ ಮಹಮ್ಮದ್ ನೌಶಾದ್ 2018ರಲ್ಲಿ ಕಾಟಿಪಳ್ಳದಲ್ಲಿ ಬಿಜೆಪಿ ಕಾರ್ಯಕರ್ತ ದೀಪಕ್ ರಾವ್ ಕೊಲೆ ಪ್ರಕರಣದ ಪ್ರಮುಖ ಆರೋಪಿ. ಈತ ಹಾಗೂ ಐದಾರು ಮಂದಿಯ ತಂಡ ಮಧ್ಯಾಹ್ನ 1.30ಸುಮಾರಿಗೆ ಕಾರಿನಲ್ಲಿ ಬಂದು ಮಾರಕಾಸ್ತ್ರಗಳಿಂದ ದೀಪಕ್ ರಾವ್‌ನನ್ನು ಕೊಚ್ಚಿ ಕೊಲೆ ಮಾಡಿದ್ದರು. ಆ ಸಂದರ್ಭದಲ್ಲಿ ದೀಪಕ್ ರಾವ್ ಹತ್ಯೆ ಪ್ರಕರಣ ದೇಶಾದ್ಯಂತ ಭಾರೀ ಸುದ್ದಿಯಾಗಿತ್ತು. ರಾಜಕೀಯ ಆರೋಪ- ಪ್ರತ್ಯಾರೋಪಕ್ಕೂ ಕಾರಣವಾಗಿತ್ತು.
ದೀಪಕ್ ರಾವ್ ಕೊಲೆ ಆರೋಪಿ ಮೊಹಮ್ಮದ್ ನೌಶಾದ್ ವಿರುದ್ಧ 2017ರಲ್ಲಿ ಮುಲ್ಕಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿತ್ತು. ಆತನ ವಿರುದ್ಧ ಮಾನಭಂಗಕ್ಕೆ ಯತ್ನಿಸಿ ಹಲ್ಲೆ ನಡೆಸಿದ ಪ್ರಕರಣ ಸೇರಿದಂತೆ ಒಂದು ಕೊಲೆ ಹಾಗೂ ಒಂದು ಕೊಲೆಗೆ ಯತ್ನ ಪ್ರಕರಣ ಸೇರಿದಂತೆ ಒಟ್ಟು 3 ಪ್ರಕರಣಗಳಿವೆ.
ಪ್ರವೀಣ್ ನೆಟ್ಟಾರು ಹತ್ಯೆಗೆ ಪ್ರತೀಕಾರ
ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಬೆಳ್ಳಾರೆಯಲ್ಲಿ ಬಿಜೆಪಿ ಯುವಮೋರ್ಚ ಮುಖಂಡ ಪ್ರವೀಣ್ ನೆಟ್ಟಾರು ಅವರನ್ನು 2022ರಲ್ಲಿ ಜುಲೈ 26ರಂದು ರಾತ್ರಿ ಬೈಕಿನಲ್ಲಿ ಬಂದ ಇನ್ನೊಂದು ಕೋಮಿಗೆ ಸೇರಿದ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೈಗೈದಿದ್ದರು. ಪ್ರವೀಣ್ ಹತ್ಯೆಗೆ ಪ್ರತೀಕಾರವಾಗಿ 2022ರಲ್ಲಿ ಸುರತ್ಕಲ್‌ನ ಫಾಜಿಲ್ ಎಂಬವನ ಹತ್ಯೆ ಮಾಡಲಾಗಿತ್ತು. ಬಜ್ಪೆ ಠಾಣೆಯಲ್ಲಿ ರೌಡಿಶೀಟರ್‌ಗಳಾಗಿದ್ದ ಸುಹಾಸ್ ಬಜ್ಪೆ ಹಾಗೂ ಅಭಿಷೇಕ್ ಈ ಹತ್ಯೆಯ ಸೂತ್ರಧಾರಿಗಳಾಗಿದ್ದರು.
ಯಾರನ್ನು ಹತ್ಯೆ ಮಾಡಬೇಕೆಂದು ಮೊದಲು ಐದಾರು ಮಂದಿಯ ಹೆಸರನ್ನು ಲಿಸ್ಟ್ ಮಾಡಿದ್ದರು. ಕೊನೆಗೆ ಫಾಜಿಲ್ ಹೆಸರನ್ನು ಅಂತಿಮಗೊಳಿಸಿ ಆತನ ಹತ್ಯೆಗೆ ಸುರತ್ಕಲ್‌ನಲ್ಲಿಯೇ ಕುಳಿತು ಪ್ಲ್ಯಾನ್ ಮಾಡಿದ್ದರು. ಈತನ ಮೇಲೆ ಮಹಮ್ಮದ್ ಫಾಝಿಲ್ ಸೇರಿದಂತೆ ಬಜ್ಪೆ ಸೇರಿದಂತೆ ಎರಡು ಕಡೆ ನಡೆದ ಕೊಲೆ ಪ್ರಕರಣಗಳಲ್ಲಿ ಭಾಗಿಯಾದ ಆರೋಪವಿದೆ. ಈತನ ಮೇಲೆ ಬಜ್ಪೆ ಠಾಣೆಯಲ್ಲಿ ನಾಲ್ಕು ಪ್ರಕರಣ ದಾಖಲಾಗಿದ್ದು, ರೌಡಿಶೀಟರ್ ಕೂಡಾ ತೆರೆಯಾಗಿದೆ.
ರೀಲ್ಸ್‌ಗಳಲ್ಲಿ ಬಿಯರ್ಡ್ ಕಿಂಗ್ ಎನಿಸಿದ ದೀಪಕ್ ರಾವ್ ಕೊಲೆ ಆರೋಪಿ
ಕೊಲೆ, ಗಲಭೆ ಸೇರಿದಂತೆ ಪೊಕ್ಸೊ ಪ್ರಕರಣದ ಆರೋಪಿ ಮುಲ್ಕಿ ನೌಶಾದ್ ಸದ್ಯ ದೀಪಕ್ ರಾವ್ ಕೊಲೆ ಪ್ರಕರಣದಲ್ಲಿ ಜಾಮೀನು ಮೇಲೆ ಹೊರಗಿದ್ದಾನೆ. ಈತನ ರೌಡಿಸಂನ ಫೋಟೊ, ಜೈಲಿನಲ್ಲಿ ಸಿಗರೇಟ್ ಸೇದುತ್ತಿರುವ ಫೋಟೋ, ಬಂಧನಕ್ಕೆ ಒಳಗಾದ ಸುದ್ದಿಗಳನ್ನೇ ಬಳಸಿ ರೀಲ್ಸ್ ಮಾಡಲಾಗಿದೆ. ಆತನ ಬಗ್ಗೆ ಸರ್ಚ್ ಮಾಡಲು ಅದೇ ರೀತಿ ನೌಶಾದ್‌ನನ್ನು 'ಬಿಯರ್ಡ್ ಕಿಂಗ್' ಎಂದು ವಿಜೃಂಭಿಸಲಾಗಿದೆ. ಟೀಮ್ ಟಾರ್ಗೆಟ್, ದಿ ರಾಂಗ್ ಪರ್ಸನ್, ಕಿಂಗ್ ಆಫ್ ಮಂಗಳೂರು ಎಂಬ ಹೆಸರಿನಲ್ಲಿ ರೀಲ್ಸ್ ಮಾಡಲಾಗಿದೆ.
'ಎಸ್ ಭಾಯ್' ಎಂದು ಹೈಪ್ ಆಗುತ್ತಿರುವ ಫಾಝೀಲ್ ಕೊಲೆ ಆರೋಪಿ ಸುಹಾಸ್
ಇನ್ನು ಫಾಝೀಲ್ ಕೊಲೆ ಆರೋಪಿ ಸುಹಾಸ್ ಬಜ್ಪೆಯನ್ನೂ 'ಎಸ್ ಭಾಯ್' ಎಂದು ರೀಲ್ಸ್‌ಗಳಲ್ಲಿ ಹವಾ ಸೃಷ್ಟಿಸಲಾಗುತ್ತಿದೆ. ಆತನ ವೇದಿಕೆಯಲ್ಲಿರುವ ಫೋಟೋಗಳು, ಆತ ತನ್ನ ಸಹಚರರೊಂದಿಗೆ ಇರುವ ಫೋಟೋಗಳನ್ನು ಸೇರಿಸಿ ರೀಲ್ಸ್ ಮಾಡಲಾಗಿದೆ. ಜೊತೆಗೆ ಚೋನಿ ಸೋಮೇಶ್ವರ, ಕಲೀಲ್ ಕಲ್ಲಡ್ಕ, ತನ್ನು ಸೇರಿದಂತೆ ಹಲವಾರು ರೌಡಿಶೀಟರ್ ಗಳ, ಕೊಲೆ ಪಾತಕಿಗಳ ಫೋಟೋಗಳನ್ನು ಇಟ್ಟು ರೀಲ್ಸ್ ಮಾಡಿ ರೌಡಿಗಳಿಗೆ ಹೀರೋಗಳ ಮಾದರಿಯಲ್ಲಿ ಇಮೇಜ್ ಸೃಷ್ಟಿಸಲಾಗುತ್ತಿದೆ.
ಇವರೆಲ್ಲರೂ ಅಪರಾಧ ಪ್ರಕರಣಗಳ ಆರೋಪಗಳಿಂದಲೇ ಕುಖ್ಯಾತರಾದವರು. ಇವರೆಲ್ಲರ ಮೇಲೆ ಕೊಲೆ, ಕೊಲೆಯತ್ನ, ದೊಂಬಿ, ಗಲಭೆ ಮುಂತಾದ ಕೇಸುಗಳಿವೆ. ಕೆಲವೊಂದು ಪ್ರಕರಣಗಳು ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿದೆ. ದೀಪಕ್ ರಾವ್ ಕೊಲೆ ಆರೋಪಿ ನೌಶಾದ್‌ನನ್ನು ಕೆಲವು ಮುಸ್ಲಿಂ ಗುಂಪುಗಳು ರೀಲ್ಸ್ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹೈಪ್ ಕೊಟ್ಟರೆ, ಫಾಝಿಲ್ ಹತ್ಯೆ ಆರೋಪಿ ಸುಹಾಸ್ ಬಜ್ಪೆಯನ್ನು ಹಿಂದುತ್ವ ಪರ ಗುಂಪುಗಳು ರೀಲ್ಸ್ ಮಾಡಿ ವಿಜೃಂಭಿಸುತ್ತಿವೆ. ಸದ್ಯ ಈ ರೀಲ್ಸ್ ಗಳನ್ನು ಗಮನಿಸಿದಾಗ ರೌಡಿಸಂ ಮಾತ್ರವಲ್ಲ ಕೋಮುಗಲಭೆಯ ಮುನ್ಸೂಚನೆಯೂ ಕಂಡುಬರುತ್ತಿದೆ. ಈ ಬೆಳವಣಿಗೆ ಕರಾವಳಿಯಲ್ಲಿ ಮತ್ತೆ ರೌಡಿಸಂ ಬೆಳೆಯುವ ಸೂಚನೆ ಕೊಡುತ್ತಿದೆ ಎನ್ನುತ್ತಾರೆ ಹೆಸರು ಹೆಸರು ಹೇಳಲಿಚ್ಛಿಸದ ಪೊಲೀಸ್ ಅಧಿಕಾರಿಯೊಬ್ಬರು.
ಪೊಲೀಸರ ಭಯವೇ ಇಲ್ಲ!
ಪೊಲೀಸ್, ಕಾನೂನು ಭಯವಿಲ್ಲದೆ ರೀಲ್ಸ್‌ಗಳಲ್ಲಿ ರೌಡಿಗಳ ಬೆಂಬಲಿಗರು ಹವಾ ಎಬ್ಬಿಸುತ್ತಿರುವುದು ಮಂಗಳೂರಿನಲ್ಲಿ ಮತ್ತೆ ಪಾತಕಲೋಕ ಚಿಗುರೊಡೆಯುತ್ತಿರುವ ಲಕ್ಷಣ ಗೋಚರಿಸುತ್ತಿದೆ. ಈ ಬೆಳವಣಿಗೆ ಕೋಮುಸಂಘರ್ಷಕ್ಕೆ ಎಡೆ ಮಾಡುವ ಸಾಧ್ಯತೆಯಿದೆ. ಆದ್ದರಿಂದ ಪೊಲೀಸ್ ಇಲಾಖೆ ಇತ್ತ ದೃಷ್ಟಿ ಹಾಯಿಸಬೇಕಾಗಿದೆ.
ಈ ಬಗ್ಗೆ ಮಂಗಳೂರು ನಗರ ಪೊಲೀಸ್ ಕಮಿಷನರ್ ಅನುಪಮ್ ಅಗರ್ವಾಲ್ ಪ್ರತಿಕ್ರಿಯಿಸಿದ್ದಾರೆ. "ರೀಲ್ಸ್ ಮಾಡಿ ಕೊಲೆ ಆರೋಪಿಗಳಿಗೆ, ರೌಡಿಶೀಟರ್ ಗಳಿಗೆ ಹೀರೋ ಇಮೇಜ್ ಕೊಡುತ್ತಿರುವುದು ನಮ್ಮ ಗಮನಕ್ಕೆ ಬಂದಿದೆ. ಈ ಬಗ್ಗೆ ನಮ್ಮ ಪೊಲೀಸ್ ತಂಡ ಕಣ್ಣು ಇಟ್ಟಿದ್ದು, ತನಿಖೆ ನಡೆಸುತ್ತಿದೆ," ಎಂದು ದ ಫೆಡರಲ್ ಕರ್ನಾಟಕಕ್ಕೆ ತಿಳಿಸಿದ್ದಾರೆ.
ಸಾಮಾಜಿಕ ಕಾರ್ಯಕರ್ತ ಜೆರಾರ್ಡ್ ಟವರ್ಸ್ ಮಾತನಾಡಿ, ಇದು ಉತ್ತಮ ಬೆಳವಣಿಗೆಯಲ್ಲ. ರೌಡಿಗಳು ಈ ರೀತಿ ಮೆರೆಯುತ್ತಿರುವುದು ಅವರಿಗೆ ಕಾನೂನಿನ ಭಯವಿಲ್ಲ ಎಂಬುದನ್ನು ಸ್ಪಷ್ಟಪಡಿಸುತ್ತಿದೆ. ಆದ್ದರಿಂದ ಪೊಲೀಸ್ ಇಲಾಖೆ ಈ ಬಗ್ಗೆ ಗಮನಹರಿಸಿ ಕಾನೂನು ಕ್ರಮ ಕೈಗೊಳ್ಳುವ ಅಗತ್ಯವಿದೆ ಎಂದು ದ ಫೆಡರಲ್ ಕರ್ನಾಟಕಕ್ಕೆ ತಿಳಿಸಿದರು.