ಹಿಂದಿ ಹೇರಿಕೆ ಪರಿಣಾಮ | ಸರ್ಕಾರಿ ಶಾಲೆಗಳಲ್ಲಿ ಮಕ್ಕಳಿಗೆ ʼತಿಥಿ ಊಟʼ!

ಹಿಂದಿ ಹೇರಿಕೆ ಎಂಬುದು ಕೇವಲ ಬ್ಯಾಂಕು, ರೈಲ್ವೆಯಂತಹ ಕೇಂದ್ರ ಸರ್ಕಾರಿ ಕಚೇರಿಗಳು ಮತ್ತು ಕಾರ್ಯಕ್ರಮಗಳ ಬ್ಯಾನರು, ಬೋರ್ಡು, ಘೋಷಣೆಗಳಿಗೆ ಮಾತ್ರ ಸೀಮಿತವಾಗಿಲ್ಲ. ರಾಜ್ಯ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ವಿಶೇಷ ಊಟದ ತಟ್ಟೆಯೊಳಗೂ ಈಗ ತೂರಿಕೊಂಡಿದೆ.

Update: 2024-08-04 01:50 GMT

Hindi Imposition | ಹಿಂದಿ ಹೇರಿಕೆ ಎಂಬುದು ಕೇವಲ ಬ್ಯಾಂಕು, ರೈಲ್ವೆಯಂತಹ ಕೇಂದ್ರ ಸರ್ಕಾರಿ ಕಚೇರಿಗಳು ಮತ್ತು ಕೇಂದ್ರದ ಕಾರ್ಯಕ್ರಮಗಳ ಬ್ಯಾನರು, ಬೋರ್ಡು, ಘೋಷಣೆಗಳಿಗೆ ಮಾತ್ರ ಸೀಮಿತವಾಗಿಲ್ಲ. ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ವಿಶೇಷ ಊಟದ ತಟ್ಟೆಯೊಳಗೂ ಈಗ ತೂರಿಕೊಂಡಿದೆ.

ಸರ್ಕಾರಿ ಶಾಲೆಗಳಲ್ಲಿ ಮಕ್ಕಳಿಗೆ ಇಂಗ್ಲಿಷ್ ಭಾಷೆಯ ಕಲಿಕೆಯ ರಾಜ್ಯ ಸರ್ಕಾರದ ನೀತಿಯ ವಿರುದ್ಧ ಜೋರು ಚರ್ಚೆ ನಡೆಯುತ್ತಿರುವಾಗಲೇ ಶಾಲಾ ಶಿಕ್ಷಣ ಪಿಎಂ ಪೋಷಣ್ ಅಭಿಯಾನದ ಭಾಗವಾಗಿ ಹೊಸದಾಗಿ ಜಾರಿಗೊಳಿಸುತ್ತಿರುವ ವಿಶೇಷ ಭೋಜನ ಯೋಜನೆಯಲ್ಲಿ ಹಿಂದಿ ಹೇರಿಕೆಗೆ ಇಲಾಖೆ ತಲೆಬಾಗಿದ್ದು, ಪರಿಣಾಮವಾಗಿ ವಿಶೇಷ ಭೋಜನವನ್ನು ʼತಿಥಿ ಭೋಜನʼವೆಂದು ಹೆಸರಿಸಲಾಗಿದೆ.

ತಿಥಿ ಭೋಜನದ ಸಂಬಂಧ 26.07.2024ರಂದು ಶಾಲಾ ಶಿಕ್ಷಣ ಇಲಾಖೆಯ ಆಯುಕ್ತರ ಕಚೇರಿ ಹೊರಡಿಸಿರುವ ಸುತ್ತೋಲೆಯಲ್ಲಿ 2024-25ನೇ ಸಾಲಿನಿಂದ ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಪಿಎಂ ಪೋಷಣ್ ಯೋಜನೆಯಡಿ ವಿಶೇಷ ಭೋಜನ(ತಿಥಿ ಭೋಜನ) ವ್ಯವಸ್ಥೆ ಮಾಡುವಂತೆ ಇಲಾಖೆಯ ಕೆಳ ಹಂತದ ಅಧಿಕಾರಿಗಳಿಗೆ ಸೂಚಿಸಲಾಗಿದೆ.

ಕೇಂದ್ರದ ಮಾನವ ಸಂಪನ್ಮೂಲ ಸಚಿವಾಲಯದ ಅಧೀನ ಕಾರ್ಯದರ್ಶಿಯ ಪತ್ರವನ್ನು ಉಲ್ಲೇಖಿಸಿ ಬರೆಯಲಾದ ಈ ಸುತ್ತೋಲೆಯಲ್ಲಿ, “ಕೇಂದ್ರ ಸರ್ಕಾರದ ಸೂಚಿತ ವಿಶೇಷ ಭೋಜನ(ತಿಥಿ ಭೋಜನ) ಪರಿಕಲ್ಪನೆಯು ಒಂದು ಸಮುದಾಯ ಭಾಗವಹಿಸುವಿಕೆಯ ಕಾರ್ಯಕ್ರಮವಾಗಿದ್ದು ಇದರಲ್ಲಿ ಎನ್ಜಿಒಗಳು, ಕೈಗಾರಿಕೆಗಳು, ವಾಣಿಜ್ಯ-ವ್ಯಾಪಾರ ಸಮುದಾಯದ ಸದಸ್ಯರು, ಸರ್ಕಾರಿ- ಅನುದಾನಿತ ಶಾಲೆಗಳಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗೆ ಹಬ್ಬ, ಮದುವೆ, ಮದುವೆ ವಾರ್ಷಿಕೋತ್ಸವ, ವಿದ್ಯಾರ್ಥಿಗಳು ಮತ್ತು ಶಿಕ್ಷಕರ ಜನ್ಮದಿನ, ರಾಜ್ಯ ಸ್ಥಾಪನೆ ದಿನ, ರಾಷ್ಟ್ರೀಯ ಪ್ರಾಮುಖ್ಯತೆಯ ದಿನ ಮತ್ತು ಇತರೆ ಯಾವುದೇ ವಿಶೇಷ ಸಂದರ್ಭಗಳಲ್ಲಿ ಪೌಷ್ಟಿಕ ಮತ್ತು ಆರೋಗ್ಯಕರ ಊಟ/ ಆಹಾರ ಪದಾರ್ಥಗಳನ್ನು ಒದಗಿಸಬಹುದಾಗಿದೆ” ಎಂದು ಹೇಳಿ, ಕಾರ್ಯಕ್ರಮ ಅನುಷ್ಠಾನಕ್ಕೆ ಕೆಲವು ಸೂಚನೆಗಳನ್ನು ನೀಡಲಾಗಿದೆ.

ಪತ್ರದ ಪ್ರಸ್ತಾವನೆಯಲ್ಲಿ ಉಲ್ಲೇಖಿಸಿದಂತೆ ʼತಿಥಿ ಭೋಜನʼ ಎಂಬ ಪದವನ್ನು ಮಾರ್ಗಸೂಚಿ ಪಟ್ಟಿಯಲ್ಲೂ ಎರಡು ಬಾರಿ ಬಳಸಲಾಗಿದೆ.


ಆದರೆ, ಕನ್ನಡದಲ್ಲಿ ʼತಿಥಿ ಭೋಜನʼ ಅಥವಾ ʼತಿಥಿ ಊಟʼ ಎಂಬುದಕ್ಕೆ ಸದಭಿರುಚಿಯ ಅರ್ಥವಿಲ್ಲ. ಆ ಪದಕ್ಕೆ ಕನ್ನಡ ನುಡಿಗಟ್ಟಿನಲ್ಲಿ ನಕಾರಾತ್ಮಕ ಅರ್ಥವೇ ಹೆಚ್ಚಿದೆ. “ನಿನ್ನ ತಿಥಿ ಊಟ ಹಾಕಿಸ್ತೀನಿ..” ಎಂಬುದು ಕನ್ನಡದಲ್ಲಿ ನಿಂದನೆಯ, ಅವಮಾನದ ಪ್ರಯೋಗ. ಹಾಗಾಗಿ ಕನ್ನಡದ ಭಾಷಾ ಪ್ರಯೋಗಕ್ಕೆ ತೀರಾ ಅಸಹಜವಾದ, ನಕಾರಾತ್ಮಕವಾದ ʼತಿಥಿ ಭೋಜನʼ ಅಥವಾ ʼತಿಥಿ ಊಟʼ ಎಂಬ ಪದಪ್ರಯೋಗ ಶಾಲಾ ಮಕ್ಕಳ ವಿಶೇಷ ಊಟದ ಯೋಜನೆಯಲ್ಲಿ ಹಿಂದಿ ಅನುಕರಣೆಯ ಫಲವಾಗಿ ಯಥಾವತ್ತು ಜಾರಿಗೆ ಬಂದಿದೆ.

ಇಲಾಖೆಯ ಸಮರ್ಥನೆ

ಈ ಬಗ್ಗೆ ಶಾಲಾ ಶಿಕ್ಷಣ ಇಲಾಖೆಯ ಮಧ್ಯಾಹ್ನದ ಬಿಸಿಯೂಟ ಯೋಜನೆಯ ಜಂಟಿ ನಿರ್ದೇಶಕರಾದ ಅನಿತಾ ನಜಾರೆ ಅವರನ್ನು ʼದ ಫೆಡರಲ್ ಕರ್ನಾಟಕʼ ಸಂಪರ್ಕಿಸಿ, ಈ ನುಡಿ ಪ್ರಯೋಗದ ಕುರಿತು ಗಮನ ಸೆಳೆದಾಗ ಅವರು, “ಕನ್ನಡ ಭಾಷೆಯಲ್ಲಿ ನಾವು ಆ ಪದವನ್ನು ತಪ್ಪಾಗಿ ಬಳಸುತ್ತಿದ್ದೇವೆ. ಆದರೆ, ಹಿಂದಿಯಲ್ಲಿ ಅದಕ್ಕೆ ಬಹಳ ಗೌರವಯುತ ಅರ್ಥವಿದೆ. ಹಬ್ಬದೂಟ, ವಿಶೇಷ ಊಟ ಎಂಬ ಅರ್ಥವಿದೆ. ಆ ಕಾರಣಕ್ಕಾಗಿಯೇ ನಾವು ʼತಿಥಿ ಭೋಜನʼ ಎಂಬ ಪದವನು ಕಂಸ(ಬ್ರಾಕೆಟ್)ದೊಳಗೆ ನೀಡಿದ್ದೇವೆ. ಇದು ಕೇಂದ್ರದ ಕಾರ್ಯಕ್ರಮವಾದ್ದರಿಂದ ನಮಗೆ ಕಾರ್ಯಕ್ರಮದ ಮೂಲ ಹೆಸರನ್ನು ಯಥಾವತ್ತು ಬಳಸುವುದು ದಾಖಲೆ ನಿರ್ವಹಣೆ ಕಾರಣಕ್ಕೆ ಅನಿವಾರ್ಯ” ಎಂದರು.

ಆ ಮೂಲಕ ʼತಿಥಿ ಭೋಜನ್ʼ ಅಥವಾ ʼತಿಥಿ ಭೋಜನʼ ಹಿಂದಿ ಪದಕ್ಕೆ ಸಮಾನಾರ್ಥಕವಾಗಿ ʼಹಬ್ಬದೂಟʼ ಅರ್ಥಪೂರ್ಣ ಮತ್ತು ಆಪ್ತ ಪದ ಕನ್ನಡದಲ್ಲಿದ್ದರೂ ಇಲಾಖೆ ಹಿಂದಿ ಪದವನ್ನೇ ಬಳಸಬೇಕಾದ ಅನಿವಾರ್ಯತೆ ಇದೆ ಎಂಬುದನ್ನು ಅವರು ಒಪ್ಪಿಕೊಂಡರು.

ನಗೆಪಾಟಲಿನ ವಿಷಯ

ಈ ಬಗ್ಗೆ ʼದ ಫೆಡರಲ್ ಕರ್ನಾಟಕʼಕ್ಕೆ ಪ್ರತಿಕ್ರಿಯಿಸಿದ ಹೆಸರು ಹೇಳಲಿಚ್ಛಿಸದ ತಾಲೂಕು ಅಕ್ಷರ ದಾಸೋಹ ಶಿಕ್ಷಣಾಧಿಕಾರಿಗಳೊಬ್ಬರು, “ಮಕ್ಕಳಿಗೆ ಅವರ ಪೌಷ್ಟಿಕತೆ ಹೆಚ್ಚಿಸಲು ಜಾರಿಗೆ ತಂದಿರುವ ಈ ಕಾರ್ಯಕ್ರಮದ ಉದ್ದೇಶವೇನೋ ಒಳ್ಳೆಯದೆ. ಆದರೆ, ಇದಕ್ಕೆ ತಿಥಿ ಭೋಜನ ಎಂದು ಕರೆಯುವುದು ಸರಿಯಲ್ಲ. ಮಕ್ಕಳಿಗೆ ಶಾಲೆಯಲ್ಲಿ ತಿಥಿ ಊಟ ಹಾಕುತ್ತಿದ್ದಾರೆ ಎಂದು ನಗೆಪಾಟಲಿಗೀಡಾಗಬೇಕಾಗುತ್ತದೆ. ಇಲಾಖೆಯ ಅಧಿಕಾರಿಗಳು ಕೇಂದ್ರ ಸರ್ಕಾರದ ಜೊತೆ ವ್ಯವಹರಿಸುವಾಗ ಯಾವುದಾದರೂ ಪದ ಬಳಸಲಿ. ಆದರೆ, ಮಕ್ಕಳು, ಪೋಷಕರ ಮಾನಸಿಕ ಭಾವನೆಗಳಿಗೆ ಬೆಲೆ ಕೊಟ್ಟು ನಾವು ಕಾರ್ಯಕ್ರಮಗಳಿಗೆ ಹೆಸರು ಸೂಚಿಸಬೇಕಾಗುತ್ತದೆ” ಎಂದು ʼತಿಥಿ ಊಟʼದ ಸಂಕಷ್ಟ ವಿವರಿಸಿದರು.

ಈ ʼತಿಥಿ ಭೋಜನʼವನ್ನು ದಾನಿಗಳಿಂದ ಪಡೆದು, ಮಕ್ಕಳಿಗೆ ನೀಡುವಾಗ ಅದು ಆರೋಗ್ಯ ಮತ್ತು ಶುಚಿತ್ವದ ದೃಷ್ಟಿಯಿಂದ ಎಷ್ಟು ಸುರಕ್ಷಿತ ಎಂಬುದನ್ನು ಖಾತರಿ ಮಾಡಿಕೊಳ್ಳುವ ಹೊಣೆಗಾರಿಕೆ ಶಾಲಾ ಶಿಕ್ಷಕರಿಗೆ ವಹಿಸಲಾಗಿದೆ. ಆದರೆ, ಸಿದ್ಧವಾದ ಆಹಾರ ಪದಾರ್ಥಗಳ ವಿಷಯದಲ್ಲಿ ಅದರ ಗುಣಮಟ್ಟ ಮತ್ತು ಶುಚಿತ್ವ ಖಾತರಿಪಡಿಸುವುದು ಹೇಗೆ? ಒಂದು ವೇಳೆ ಹೀಗೆ ಸರಬರಾಜು ಮಾಡಿದ ಆಹಾರ ಪದಾರ್ಥ ತಿಂದು ಮಕ್ಕಳಿಗೆ ಹೆಚ್ಚುಕಡಿಮೆ ಆದರೆ ಹೊಣೆ ಯಾರು? ಎಂಬ ಆತಂಕವನ್ನೂ ಅವರು ವ್ಯಕ್ತಪಡಿಸಿದರು.

ಒಟ್ಟಾರೆ, ಶಾಲಾ ಶಿಕ್ಷಣ ಇಲಾಖೆ ಕೇಂದ್ರದ ಸೂಚನೆಯನ್ನು ಕಣ್ಣುಮುಚ್ಚಿಕೊಂಡು ಮಕ್ಕಳಿಗೆ ʼತಿಥಿ ಭೋಜನʼ ಮಾಡಿಸಲು ಸಜ್ಜಾಗಿದೆ. ಆದರೆ, ಆ ಕಾರ್ಯಕ್ರಮದ ಹೆಸರಿನ ಜೊತೆಗೆ ಅನುಷ್ಠಾನದ ಸವಾಲು ಮತ್ತು ಅಪಾಯ ಶಿಕ್ಷಕರಿಗೆ ತಲೆನೋವು ತಂದಿದೆ.

Tags:    

Similar News