ಕುಮಾರಸ್ವಾಮಿಗೆ ರಿಲೀಫ್: ಮಹಿಳಾ ಆಯೋಗದ ನೋಟಿಸ್‌ಗೆ ಹೈಕೋರ್ಟ್ ತಡೆ
ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರಿಗೆ ರಾಜ್ಯ ಮಹಿಳಾ ಆಯೋಗ ನೀಡಿದ್ದ ನೋಟಿಸ್‌ಗೆ ಹೈಕೋರ್ಟ್ ತಡೆ ನೀಡಿದೆ.
ಬೆಂಗಳೂರು: "ಗ್ಯಾರಂಟಿ ಯೋಜನೆಗಳಿಂದ ಹಳ್ಳಿಯ ತಾಯಂದಿರು ದಾರಿ ತಪ್ಪಿದ್ದಾರೆ" ಎಂದು ಚುನಾವಣಾ ಪ್ರಚಾರ ವೇಳೆ ಹೇಳಿಕೆ ನೀಡಿದ್ದ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರಿಗೆ ರಾಜ್ಯ ಮಹಿಳಾ ಆಯೋಗ ನೀಡಿದ್ದ ನೋಟಿಸ್‌ಗೆ ಹೈಕೋರ್ಟ್ ತಡೆ ನೀಡಿದೆ.
ಇದನ್ನು ಪ್ರಶ್ನಿಸಿ ಎಚ್.ಡಿ. ಕುಮಾರಸ್ವಾಮಿ ಸಲ್ಲಿಸಿದ್ದ ರಿಟ್ ಅರ್ಜಿಯನ್ನು ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಶುಕ್ರವಾರ (ಏಪ್ರಿಲ್ 19) ವಿಚಾರಣೆ ನಡೆಸಿತು.
ವಿಚಾರಣೆ ವೇಳೆ ಕುಮಾರಸ್ವಾಮಿ ಪರ ವಾದ ಮಂಡಿಸಿದ ಹೈಕೋರ್ಟ್ ವಕೀಲ ಎ.ವಿ.ನಿಶಾಂತ್, "ಆರೋಪಕ್ಕೆ ಸಂಬಂಧಿಸಿದಂತೆ ಆಯೋಗವು ಕುಮಾರಸ್ವಾಮಿ ಅವರಿಗೆ ನೋಟಿಸ್ ನೀಡಿ ಖುದ್ದು ಹಾಜರಾಗಲು ಸೂಚಿಸಿದೆ. ಆದರೆ, ಈ ನೋಟಿಸ್ ಪೂರ್ವಗ್ರಹ ಪೀಡಿತ ಭಾವನೆಯಿಂದ ಕೂಡಿದ್ದು ಸ್ವಾಭಾವಿಕ ನ್ಯಾಯತತ್ವಗಳಿಗೆ ವಿರುದ್ಧವಾಗಿದ್ದು, ಇದನ್ನು ರದ್ದುಗೊಳಿಸಬೇಕು'' ಎಂದು ಕೋರಿದರು.
ಇದನ್ನು ಮಾನ್ಯ ಮಾಡಿದ ನ್ಯಾಯಪೀಠ ನೋಟಿಸ್ ಗೆ ತಡೆ ನೀಡಿ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮಿ ಚೌಧರಿಗೆ ತುರ್ತು ನೋಟಿಸ್ ಜಾರಿಗೊಳಿಸಲು ಆದೇಶಿಸಿತು.
''ಮಹಿಳಾ ಆಯೋಗದ ಅಧ್ಯಕ್ಷರು ಜಾರಿ ಮಾಡಿರುವ ನೋಟಿಸ್ ಗೆ ಅರ್ಜಿ ಇತ್ಯರ್ಥವಾಗುವರೆಗೂ ತಡೆ ವಿಧಿಸಲಾಗಿದೆ" ಎಂದು ಆದೇಶಿಸಿ ವಿಚಾರಣೆ ಮುಂದೂಡಿತು.
ಏನಿದು ಪ್ರಕರಣ
ತುಮಕೂರು ಲೋಕಸಭಾ ಕ್ಷೇತ್ರದ ಎನ್ ಡಿ ಎ ಅಭ್ಯರ್ಥಿ ವಿ.ಸೋಮಣ್ಣ ಪರ ಎಚ್.ಡಿ. ಕುಮಾರ ಸ್ವಾಮಿ ಅವರು ಇದೇ 13ರಂದು ತುರುವೇಕೆರೆಯಲ್ಲಿ ಬಹಿರಂಗ ಪ್ರಚಾರ ಸಭೆ ನಡೆಸಿದ್ದರು.
ಈ ವೇಳೆ ಭಾಷಣ ಮಾಡಿದ್ದ ಅವರು, "ಕಾಂಗ್ರೆಸ್ ಸರ್ಕಾರ ಕೊಟ್ಟಿರುವ ಗ್ಯಾರಂಟಿ ಯೋಜನೆಯಿಂದ ಹಳ್ಳಿಯ ತಾಯಂದಿರು ಸ್ವಲ್ಪ ದಾರಿ ತಪ್ಪಿದ್ದು, ಹಳ್ಳಿಯ ಹೆಣ್ಣು ಮಕ್ಕಳ ಬದುಕು ಏನಾಗಬೇಕು ಎಂಬುದರ ಬಗ್ಗೆ ಯೋಚನೆ ಮಾಡಬೇಕಾಗಿದೆ'' ಎಂದು ಹೇಳಿದ್ದು ಮಾಧ್ಯಮಗಳಲ್ಲಿ ವರದಿಯಾಗಿತ್ತು.
"ಈ ಹೇಳಿಕೆ ಮಹಿಳೆಯರನ್ನು ಅವಮಾನಿಸುವಂತಿದ್ದು ಗಂಭೀರವಾಗಿದೆ" ಎಂದು ರಾಜ್ಯ ಮಹಿಳಾ ಆಯೋಗವು, 'ರಾಜ್ಯ ಮಹಿಳಾ ಆಯೋಗ ಅಧಿನಿಯಮ-1995ರ ಪರಿಚ್ಛೇದ 10 ರ ಮೇರೆಗೆ ಕುಮಾರಸ್ವಾಮಿ ಅವರಿಗೆ ನೋಟಿಸ್ ನೀಡಿತ್ತು.
"ಈ ನೋಟಿಸ್ ತಲುಪಿದ ಏಳು ದಿನಗಳ ಒಳಗಾಗಿ ಆಯೋಗದ ಎದುರು ಖುದ್ದು ಹಾಜರಾಗಬೇಕು. ನಿಮ್ಮ ಹೇಳಿಕೆಗೆ ಸ್ಪಷ್ಟಿಕರಣ ನೀಡಬೇಕು" ಎಂದು ಅಧ್ಯಕ್ಷೆ ಡಾ.ನಾಗಲಕ್ಷ್ಮಿ ಚೌಧರಿ ಇದೇ 15 ರಂದು ನೋಟಿಸ್ ನಲ್ಲಿ ಸೂಚಿಸಿದ್ದರು.