ಪಿಒಪಿ ಗಣೇಶ ಮೂರ್ತಿಗಳ ನಿಯಂತ್ರಣಕ್ಕೆ ಹೊರಡಿಸಿರುವ ಅಧಿಸೂಚನೆ ಜಾರಿಗೆ ಹೈಕೋರ್ಟ್ ಸೂಚನೆ
2023ರ ಸೆ.15ರಂದು ಸರ್ಕಾರ ಅಧಿಸೂಚನೆ ಹೊರಡಿಸಿದೆ. ಇದನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು. ಅರ್ಜಿಗೆ ಸಂಬಂಧಿಸಿದಂತೆ ಯಾವುದೇ ಆದೇಶ ಹೊರಡಿಸುವ ಅಗತ್ಯವಿಲ್ಲ ಎಂದು ಹೈಕೋರ್ಟ್ ಹೇಳಿದೆ.;
ಪ್ಲಾಸ್ಟರ್ ಆಫ್ ಫ್ಯಾರಿಸ್(ಪಿಒಪಿ) ಗಣೇಶ್ ಮೂರ್ತಿಗಳ ನಿಯಂತ್ರಣ ಸಂಬಂಧ ರಾಜ್ಯ ಸರ್ಕಾರ ಹೊರಡಿಸಿರುವ ಅಧಿಸೂಚನೆಯನ್ನು ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸಬೇಕು ಎಂದು ಹೈಕೋರ್ಟ್ ಸೂಚನೆ ನೀಡಿದೆ.
ರಾಜ್ಯ ಪರಿಸರ ನಿಯಂತ್ರಣಾ ಮಂಡಳಿಯು (ಕೆಎಸ್‌ಪಿಸಿಬಿ)ಸರ್ಕಾರ ಹೊರಡಿಸಿರುವ ಅಧಿಸೂಚನೆ ಜಾರಿಗೆ ನಿರ್ದೇಶನ ನೀಡಬೇಕು ಎಂದು ಕೋರಿ ಸಲ್ಲಿಸಿದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯ, 2023ರ ಸೆ.15ರಂದು ರಾಜ್ಯ ಸರ್ಕಾರ ಅಧಿಸೂಚನೆ ಹೊರಡಿಸಿದೆ. ಇದನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು. ವಿಷಯ ಅತ್ಯಂತ ಗಂಭೀರವಾಗಿದೆ. ಪಿಒಪಿ ನಿಷೇಧ ಕುರಿತು ಸರ್ಕಾರದ ಅಧಿಸೂಚನೆ ಈಗಾಗಲೇ ಜಾರಿಯಲ್ಲಿದೆ. ಅರ್ಜಿಗೆ ಸಂಬಂಧಿಸಿದಂತೆ ಯಾವುದೇ ಆದೇಶ ಹೊರಡಿಸುವ ಅಗತ್ಯವಿಲ್ಲ ಎಂದು ಹೇಳಿ, ಅರ್ಜಿಯನ್ನು ಇತ್ಯರ್ಥಪಡಿಸಿತು.
ಕೆಎಸ್‌ಪಿಸಿಬಿ ಪರ ವಕೀಲರು, ಪಿಒಪಿ ಮೂರ್ತಿಗಳನ್ನು ನೀರಿನಲ್ಲಿ ಮುಳುಗಿಸಿದಾಗ ನೀರಿನಲ್ಲಿರುವ ಆಮ್ಲಜನಕವನ್ನು ಕಡಿಮೆ ಮಾಡುತ್ತದೆ. ಪಿಒಪಿ ಗಣೇಶ ಮೂರ್ತಿಗಳನ್ನು ನೀರಿನಲ್ಲಿ ಬಿಡುವುದರಿಂದ ಜಲಮೂಲಗಳು ಮತ್ತು ಪರಿಸರದ ಮೇಲೆ ಗಂಭೀರ ಪರಿಣಾಮ ಬೀರಲಿದೆ. ಇದು ಸಂವಿಧಾನ 21ನೇ ವಿಧಿಯ (ಜೀವಿಸುವ ಮತ್ತು ವೈಯಕ್ತಿಕ ಸ್ವಾತಂತ್ರ್ಯದ ಹಕ್ಕು) ಉಲ್ಲಂಘಿಸಿದಂತಾಗಲಿದೆ. ನಿಷೇಧದ ನಡುವೆಯೂ ಗಣೇಶ ಹಬ್ಬ ಸಮೀಪಿಸುತ್ತಿರುವುದರಿಂದ ಮಾರುಕಟ್ಟೆಯಲ್ಲಿ ಪಿಒಪಿಯಿಂದ ಮಾಡಿರುವ ಗಣೇಶ ಮತ್ತು ಗೌರಿ ಮೂರ್ತಿಗಳು ಹೆಚ್ಚಾಗಿ ಕಾಣಿಸಿಕೊಳ್ಳುತ್ತಿವೆ. 2023ರ ಸರ್ಕಾರಿ ಅಧಿಸೂಚನೆಯನ್ನು ಪಾಲಿಸಲಾಗುತ್ತಿಲ್ಲ ಎಂದು ವಾದಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಸರ್ಕಾರ ಪರ ವಕೀಲರು, ಪಿಒಪಿ ವಿಗ್ರಹಗಳ ತಯಾರಿಕೆ ಮತ್ತು ಮಾರಾಟಕ್ಕೆ ಸಂಬಂಧಿಸಿದಂತೆ ಕೆಲವು ಎಫ್‌ಐಆರ್‌ಗಳನ್ನು ದಾಖಲಿಸಲಾಗಿದೆ. ಕಾನೂನಿನ ಪ್ರಕಾರ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಪಿಒಪಿಯಿಂದ ಸಿದ್ದಪಡಿಸಿದ ಮೂರ್ತಿಗಳಿಂದ ಪರಿಸರದ ಮೇಲೆ ಆಗುತ್ತಿರುವ ಪರಿಣಾಮವನ್ನು ಗಂಭೀರವಾಗಿ ಪರಿಗಣಿಸಲಾಗಿದೆ. ರಾಜ್ಯ ಸರ್ಕಾರ ಪರಿಸರ ಸಂರಕ್ಷಣಾ ಕಾಯ್ದೆಯಡಿ ಕಠಿಣ ನಿಯಮಗಳೊಂದಿಗೆ ಅಧಿಸೂಚನೆ ಹೊರಡಿಸಿತ್ತು. ಈ ಅಧಿಸೂಚನೆಯಂತೆ ರಾಜ್ಯದಲ್ಲಿ ಪಿಒಪಿ ಮೂರ್ತಿಗಳ ತಯಾರಿಕೆಗೆ ಸಂಪೂರ್ಣ ನಿಯಂತ್ರಣ ಹೇರಲಾಗಿತ್ತು ಎಂದು ತಿಳಿಸಿದರು.