HighCourt Vacation | ಹೈಕೋರ್ಟ್‌ಗೆ ಇಂದಿನಿಂದ ಮೇ 31ರವರೆಗೆ ಬೇಸಿಗೆ ರಜೆ; ರಜೆಯಲ್ಲಿ ಯಾವ್ಯಾವ ದಿನ ನಡೆಯುತ್ತೆ ಕಲಾಪ?

ಬೆಂಗಳೂರಿನ ಪ್ರಧಾನ ಪೀಠ, ಧಾರವಾಡ ಮತ್ತು ಕಲಬುರಗಿಯಲ್ಲಿ ವಿಭಾಗೀಯ ಪೀಠ, ಏಕಸದಸ್ಯ ನ್ಯಾಯಮೂರ್ತಿ ನೇತೃತ್ವದ ರಜಾಕಾಲದ ಪೀಠಗಳು ಮೇ 6, 8, 13, 15, 20, 22, 27 ಹಾಗೂ 29 ರಂದು ಕಾರ್ಯ ನಿರ್ವಹಿಸಲಿವೆ. ಒಟ್ಟು ಎಂಟು ದಿನ ಮಾತ್ರ ರಜೆ ಕಾಲದ ಪೀಠಗಳಲ್ಲಿ ಪ್ರಕರಣಗಳ ವಿಚಾರಣೆ ನಡೆಯಲಿದೆ.;

Update: 2025-05-05 06:04 GMT

ಕರ್ನಾಟಕ ಹೈಕೋರ್ಟ್ ಕಲಾಪಗಳಿಗೆ ಇಂದಿನಿಂದ (ಮೇ 5) ಮೇ 31ರವರೆಗೆ ಬೇಸಿಗೆ ರಜೆ ಇರಲಿದೆ. ರಜಾ ಅವಧಿಯಲ್ಲಿ ತುರ್ತು ಪ್ರಕರಣಗಳ ವಿಚಾರಣೆ ಮಾತ್ರ ನಡೆಯಲಿದೆ. ಪ್ರಕರಣಗಳ ತುರ್ತು ವಿಚಾರಣೆಗಳಿಗೆ ರಜಾಕಾಲದ ಪೀಠಗಳನ್ನು ರಚಿಸಲಾಗಿದೆ. 

ಬೆಂಗಳೂರಿನ ಪ್ರಧಾನ ಪೀಠ, ಧಾರವಾಡ ಮತ್ತು ಕಲಬುರಗಿಯಲ್ಲಿ ವಿಭಾಗೀಯ ಪೀಠ, ಏಕಸದಸ್ಯ ನ್ಯಾಯಮೂರ್ತಿ ನೇತೃತ್ವದ ರಜಾಕಾಲದ ಪೀಠಗಳು ಮೇ 6, 8, 13, 15, 20, 22, 27 ಹಾಗೂ 29 ರಂದು ಕಾರ್ಯ ನಿರ್ವಹಿಸಲಿವೆ. ಒಟ್ಟು ಎಂಟು ದಿನ ಮಾತ್ರ ರಜೆ ಕಾಲದ ಪೀಠಗಳಲ್ಲಿ ಪ್ರಕರಣಗಳ ವಿಚಾರಣೆ ನಡೆಯಲಿದೆ. 

ರಜಾಕಾಲದ ಪೀಠಗಳಿಗೆ ನ್ಯಾಯಮೂರ್ತಿಗಳನ್ನು ನಿಯೋಜಿಸಿ ಮುಖ್ಯ ನ್ಯಾಯಮೂರ್ತಿ ಎನ್‌.ವಿ. ಅಂಜಾರಿಯಾ ಅವರ ಸೂಚನೆ ಮೇರೆಗೆ ಹೈಕೋರ್ಟ್‌ ರಿಜಿಸ್ಟ್ರಾ‌ರ್ ಜನರಲ್ ಆದೇಶ ಹೊರಡಿಸಿದ್ದಾರೆ.

ಪ್ರಧಾನ ಪೀಠದಲ್ಲಿ ಮೇ 6 ಮತ್ತು ಮೇ 8ರಂದು ನ್ಯಾಯಮೂರ್ತಿಗಳಾದ ಆರ್ ದೇವದಾಸ್ ಮತ್ತು ಸಿ.ಎಂ.ಪೂಣಚ್ಚ ನೇತೃತ್ವದ ವಿಭಾಗೀಯ ಪೀಠ ಕಾರ್ಯ ನಿರ್ವಹಿಸಲಿದೆ. ಏಕಸದಸ್ಯ ಪೀಠಗಳಲ್ಲಿ ನ್ಯಾಯಮೂರ್ತಿಗಳಾದ ಎಂ.ಜಿ.ಉಮಾ ಮತ್ತು ವಿ.ಶ್ರೀಶಾನಂದ ಅವರು ಕಾರ್ಯ ನಿರ್ವಹಿಸಲಿದ್ದಾರೆ. 

ಧಾರವಾಡ ಪೀಠದಲ್ಲಿ ನ್ಯಾಯಮೂರ್ತಿಗಳಾದ ಎಸ್.ಜಿ.ಪಂಡಿತ್ ಮತ್ತು ಜಿ.ಬಸವರಾಜ ಮೊದಲಿಗೆ ಅವರು ವಿಭಾಗೀಯ ಪೀಠದ ಪ್ರಕರಣಗಳನ್ನು ನಿಭಾಯಿಸಲಿದ್ದಾರೆ. ಬಳಿಕ ಏಕಸದಸ್ಯ ಪೀಠದಲ್ಲೂ ಅರ್ಜಿಗಳ ವಿಚಾರಣೆ ನಡೆಸಲಿದ್ದಾರೆ.

ಬೆಂಗಳೂರು ಹಾಗೂ ಧಾರವಾಡ ಪೀಠದಲ್ಲಿ ವಿಚಾರಣೆಯು ಯಥಾಪ್ರಕಾರ ಬೆಳಿಗ್ಗೆ10.30ಕ್ಕೆ ಆರಂಭವಾದರೆ, ತಾಪಮಾನ ಹೆಚ್ಚಾಗಿರುವುದರಿಂದ ಕಲಬುರಗಿ ಪೀಠದಲ್ಲಿ ಬೆಳಿಗ್ಗೆ 8ಕ್ಕೆ ವಿಚಾರಣೆ ಆರಂಭವಾಗಲಿದೆ. ಕಲಬುರಗಿ ಪೀಠದಲ್ಲಿ ನ್ಯಾಯಮೂರ್ತಿಗಳಾದ ಅಶೋಕ್‌ ಎಸ್. ಕಿಣಗಿ ಮತ್ತು ಎಸ್. ವಿಶ್ವಜಿತ್ ಶೆಟ್ಟಿ ಮೊದಲಿಗೆ ಅವರು ವಿಭಾಗೀಯ ಪೀಠದ ಪ್ರಕರಣಗಳ ವಿಚಾರಣೆ ಮುಗಿಸಿ, ಆನಂತರ ಏಕಸದಸ್ಯ ಪೀಠದಲ್ಲಿ ಕುಳಿತುಕೊಳ್ಳಲಿದ್ದಾರೆ.

ಬೆಂಗಳೂರಿನ ಪ್ರಧಾನ ಪೀಠದಲ್ಲಿ ಮೇ 13 ಮತ್ತು 15ರಂದು ನ್ಯಾಯಮೂರ್ತಿಗಳಾದ ಎಚ್. ಪಿ.ಸಂದೇಶ್ ಮತ್ತು ರಾಮಚಂದ್ರ ಡಿ. ಹುದ್ದಾರ್ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಲಿದೆ. ನ್ಯಾಯಮೂರ್ತಿಗಳಾದ ಶಿವಶಂಕರ್ ಅಮರಣ್ಣವ‌ರ್ ಮತ್ತು ಎಂ.ಜಿ.ಎಸ್.ಕಮಲ್ ನೇತೃತ್ವದ ಏಕಸದಸ್ಯ ಪೀಠಗಳು ಅರ್ಜಿಗಳ ವಿಚಾರಣೆ ನಡೆಸಲಿವೆ.

ಧಾರವಾಡ ಪೀಠದಲ್ಲಿ ನ್ಯಾಯಮೂರ್ತಿಗಳಾದ ಎಚ್.ಟಿ.ನರೇಂದ್ರ ಪ್ರಸಾದ್ ಮತ್ತು ಕೆ. ಎಸ್‌.ಹೇಮಲೇಖಾ ನೇತೃತ್ವದ ವಿಭಾಗೀಯ ಪೀಠವು ಪ್ರಕರಣಗಳನ್ನು ಆಲಿಸಲಿದೆ. ನಂತರ ನ್ಯಾಯಮೂರ್ತಿಗಳು ಪ್ರತ್ಯೇಕವಾಗಿ ಏಕಸದಸ್ಯ ಪೀಠದಲ್ಲಿ ಕುಳಿತು ಪ್ರಕರಣಗಳ ವಿಚಾರಣೆ ನಡೆಸಲಿದ್ದಾರೆ.

ಕಲಬುರಗಿ ಪೀಠದಲ್ಲಿ ಮೇ 13 ಮತ್ತು 15ರಂದು ನ್ಯಾಯಮೂರ್ತಿಗಳಾದ ಇ.ಎಸ್. ಇಂದಿರೇಶ್ ಮತ್ತು ಕೆ.ರಾಜೇಶ್ ರೈ ನೇತೃತ್ವದ ವಿಭಾಗೀಯ ಪೀಠ ಪ್ರಕರಣಗಳ ವಿಚಾರಣೆ ನಡೆಸಲಿದೆ. ಆನಂತರ ನ್ಯಾಯಮೂರ್ತಿಗಳು ಏಕಸದಸ್ಯ ಪೀಠದಲ್ಲಿ ವಿಚಾರಣೆ ನಡೆಸಲಿದ್ದಾರೆ.

ಕಲಬುರಗಿ ಪೀಠದಲ್ಲಿ ನ್ಯಾಯಮೂರ್ತಿಗಳಾದ ಆ‌ರ್.ನಟರಾಜ್ ಮತ್ತು ಉಮೇಶ್ ಎಂ. ಅಡಿಗ ಅವರು ವಿಭಾಗೀಯ ಪೀಠದ ಪ್ರಕರಣಗಳ ಬಳಿಕ ಏಕಸದಸ್ಯ ಪೀಠದಲ್ಲಿ ಕುಳಿತು ಅರ್ಜಿಗಳ ವಿಚಾರಣೆ ನಡೆಸಲಿದ್ದಾರೆ.

ರಜೆ ಅವಧಿಯಲ್ಲಿ ಯಾವುದೇ ಮೇಲ್ಮನವಿ ಹಾಗೂ ಹಳೆಯ ಅರ್ಜಿಗಳ ವಿಚಾರಣೆ ನಡೆಯುವುದಿಲ್ಲ. ತುರ್ತು ಅರ್ಜಿಗಳನ್ನು ಮಾತ್ರ ವಿಚಾರಣೆಗೆ ಪರಿಗಣಿಸಲಾಗುವುದು ಎಂದು ರಿಜಿಸ್ಟ್ರಾರ್ (ನ್ಯಾಯಾಂಗ) ಅಧಿಸೂಚನೆಯಲ್ಲಿ ತಿಳಿಸಿದ್ದಾರೆ.

Tags:    

Similar News