Illigal Mining Scam | ಹೆಚ್‌.ಡಿ. ಕುಮಾರಸ್ವಾಮಿ ಅಕ್ರಮ ಗಣಿಗಾರಿಕೆ ಪ್ರಕರಣ ಮುಂದುವರಿಕೆ; ಲೋಕಾಯುಕ್ತಕ್ಕೆ ಹೈಕೋರ್ಟ್ ಅಸ್ತು

ಲೋಕಾಯುಕ್ತ ಪ್ರಕರಣದ ಸಂಬಂಧ ಮಾಡಲಾಗಿರುವ ನಿರ್ಬಂಧ ಆದೇಶವು ಇಂದಿನಿಂದ ಚಾಲ್ತಿಯಲ್ಲಿರುವುದಿಲ್ಲ. ಇನ್ನು ಮುಂದೆ ಲೋಕಾಯುಕ್ತ ಎಸ್‌ಐಟಿಯ ಸಾಯಿ ವೆಂಕಟೇಶ್ವರ ಅಕ್ರಮ ಗಣಿಗಾರಿಕೆ ಪ್ರಕರಣದ ಬಗ್ಗೆ ಪ್ರಸ್ತಾಪಿಸುವುದಿಲ್ಲ ಎಂದು ಹೈಕೋರ್ಟ್‌ ಹೇಳಿದೆ;

Update: 2025-03-29 07:59 GMT

ಕರ್ನಾಟಕ ಲೋಕಾಯುಕ್ತ ಎಸ್‌ಐಟಿ ಮುಖ್ಯಸ್ಥ ಎಂ.ಚಂದ್ರಶೇಖರ್‌ ಅವರಿಗೆ ಬೆದರಿಕೆ ಹಾಕಿದ ಪ್ರಕರಣದಲ್ಲಿ ಹೆಚ್‌.ಡಿ.ಕುಮಾರಸ್ವಾಮಿ ವಿರುದ್ಧ ಬಲವಂತದ ಕ್ರಮ ಜರುಗಿಸಬಾರದು ಎಂದು ನಿರ್ದೇಶಿಸಿರುವ ಆದೇಶವು ಅವರ ಮೇಲೆ 2014ರಲ್ಲಿ ಲೋಕಾಯುಕ್ತ ಎಸ್‌ಐಟಿ ದಾಖಲಿಸಿರುವ ಸಾಯಿ ವೆಂಕಟೇಶ್ವರ ಅಕ್ರಮ ಗಣಿಗಾರಿಕೆ ಪ್ರಕರಣಕ್ಕೆ ಅನ್ವಯಿಸುವುದಿಲ್ಲ ಎಂದು ಹೈಕೋರ್ಟ್‌ ಹೇಳಿದೆ.

ಇದರಿಂದ ಲೋಕಾಯುಕ್ತ ಎಸ್‌ಐಟಿಗೆ ಇದ್ದ ಅಡ್ಡಿ ನಿವಾರಣೆಯಾಗಿದ್ದು, ಜೆಡಿಎಸ್‌ ನಾಯಕನಿಗೆ ಸಂಕಷ್ಟ ಎದುರಾಗುವ ಸಾಧ್ಯತೆ ಇದೆ.

ಲೋಕಾಯುಕ್ತ ಎಸ್‌ಐಟಿ ಮನವಿಯಂತೆ ಹೈಕೋರ್ಟ್‌ ತಾನು ನೀಡಿದ್ದ ಮಧ್ಯಂತರ ಆದೇಶದಲ್ಲಿ ಮಾರ್ಪಾಡು ಮಾಡಿದೆ. ಅಲ್ಲದೇ ಎಸ್‌ಐಟಿ ಮುಖ್ಯಸ್ಥ ಎಂ.ಚಂದ್ರಶೇಖರ್‌ಗೆ ಬೆದರಿಕೆ ಹಾಕಿದ ಪ್ರಕರಣದಲ್ಲಿ ಕೇಂದ್ರ ಸಚಿವ ಎಚ್‌ ಡಿ ಕುಮಾರಸ್ವಾಮಿ ಮತ್ತಿತರರ ವಿರುದ್ಧದ ತಡೆಯಾಜ್ಞೆ ವಿಸ್ತರಿಸಿದೆ.

ಲೋಕಾಯುಕ್ತ ಎಸ್‌ಐಟಿ ಸಲ್ಲಿಸಿದ್ದ ಅರ್ಜಿಗಳನ್ನು ಶುಕ್ರವಾರ ನ್ಯಾಯಮೂರ್ತಿ ಪ್ರದೀಪ್‌ ಸಿಂಗ್‌ ಯೆರೂರ್‌ ನೇತೃತ್ವದ ಏಕಸದಸ್ಯ ಪೀಠ ಇತ್ಯರ್ಥಪಡಿಸಿತು.

ಸಂಜಯನಗರ ಠಾಣೆಯಲ್ಲಿ ದಾಖಲಾಗಿರುವ ಆಕ್ಷೇಪಾರ್ಹ ಪ್ರಕರಣ ಆಧರಿಸಿ ದಶಕದ ಹಿಂದೆ ಕುಮಾರಸ್ವಾಮಿ ಅವರಿಗೆ ಸಾಯಿ ವೆಂಕಟೇಶ್ವರ ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಮಂಜೂರು ಮಾಡಿರುವ ನಿರೀಕ್ಷಣಾ ಜಾಮೀನು ರದ್ದತಿ ಕೋರಬಾರದು. ಒಂದೊಮ್ಮೆ ಈಗಾಗಲೇ ನಿರೀಕ್ಷಣಾ ಜಾಮೀನು ರದ್ದತಿ ಕೋರಿದ್ದರೆ ಅದರಲ್ಲಿ ಮುಂದುವರಿಯದಂತೆ ಪ್ರಾಸಿಕ್ಯೂಷನ್‌ ನಿರ್ಬಂಧಿಸಲಾಗಿದೆ ಎಂದು ಮಾಡಿರುವ ಮಧ್ಯಂತರ ಆದೇಶದಲ್ಲಿ ಮಾರ್ಪಾಡು ಮಾಡುವಂತೆ ಲೋಕಾಯುಕ್ತ ಎಸ್‌ಐಟಿ ಕೋರಿತ್ತು.

ಲೋಕಾಯುಕ್ತ ಪ್ರಕರಣದ ಸಂಬಂಧ ಮಾಡಲಾಗಿರುವ ನಿರ್ಬಂಧ ಆದೇಶವು ಇಂದಿನಿಂದ ಚಾಲ್ತಿಯಲ್ಲಿರುವುದಿಲ್ಲ. ಇನ್ನು ಮುಂದೆ ಲೋಕಾಯುಕ್ತ ಎಸ್‌ಐಟಿಯ ಸಾಯಿ ವೆಂಕಟೇಶ್ವರ ಅಕ್ರಮ ಗಣಿಗಾರಿಕೆ ಪ್ರಕರಣದ ಬಗ್ಗೆ ಮಾತನಾಡುವುದಿಲ್ಲ. ಸಂಜಯನಗರ ಠಾಣೆಯಲ್ಲಿ ದಾಖಲಾಗಿರುವ ಬೆದರಿಕೆ ಪ್ರಕರಣಕ್ಕೆ ಮಾತ್ರ ಸೀಮಿತವಾಗಿ ಮಾತನಾಡಲಾಗುವುದು” ಎಂದು ಆದೇಶ ಮಾಡಿದೆ.

ಇದಕ್ಕೂ ಮುನ್ನ, ಲೋಕಾಯುಕ್ತ ಪ್ರತಿನಿಧಿಸಿದ್ದ ವಿಶೇಷ ಸರ್ಕಾರಿ ಅಭಿಯೋಜಕರು “ಸಂಜಯನಗರದಲ್ಲಿ ದಾಖಲಾಗಿರುವ ಬೆದರಿಕೆ ಪ್ರಕರಣಕ್ಕೂ ಸಾಯಿ ವೆಂಕಟೇಶ್ವರ ಪ್ರಕರಣಕ್ಕೂ ಯಾವುದೇ ಸಂಬಂಧವಿಲ್ಲ. 6.11.2024 ರಂದು ಮಾಡಿರುವ ಆದೇಶ ಲೋಕಾಯುಕ್ತವು ನಿರೀಕ್ಷಣಾ ಜಾಮೀನು ರದ್ದತಿ ಕೋರಿರುವುದಕ್ಕೆ ಅಡ್ಡಿಯಾಗಿದೆ. ವಿಶೇಷ ನ್ಯಾಯಾಲಯದ ಮುಂದೆ ನಿರೀಕ್ಷಣಾ ಜಾಮೀನು ರದ್ದತಿ ಕೋರಿರುವ ಅರ್ಜಿಯಲ್ಲಿ ಆಧಾರಗಳನ್ನು ಉಲ್ಲೇಖಿಸಲಾಗಿದೆ. ಇದಕ್ಕೆ ಸಂಜಯನಗರ ಠಾಣೆಯಲ್ಲಿ ದಾಖಲಾಗಿರುವ ಕಾರಣ ಮಾತ್ರವಲ್ಲ. ನಿರೀಕ್ಷಣಾ ಜಾಮೀನು ರದ್ದತಿಗೆ ಆರು ಬೇರೆ ಆಧಾರಗಳಿವೆ. ಇದರಿಂದ ಲೋಕಾಯುಕ್ತದ ಪ್ರಕ್ರಿಯೆಗೆ ನೇರವಾಗಿ ಅಡ್ಡಿಯಾಗಿದ್ದು, ಮುಂದಿನ ಪ್ರಕ್ರಿಯೆ ನಡೆಸಲಾಗುತ್ತಿಲ್ಲ. ಇದರಿಂದ ಮಧ್ಯಂತರ ಆದೇಶದಲ್ಲಿ ʼಪ್ರಾಸಿಕ್ಯೂಷನ್‌ʼ ಪದವನ್ನು ಸರಿಯಾದ ರೀತಿಯಲ್ಲಿ ವ್ಯಾಖ್ಯಾನಿಸಿ, ಆದೇಶ ಮಾರ್ಪಾಡಬೇಕು” ಎಂದು ಕೋರಿದರು.

ಕುಮಾರಸ್ವಾಮಿ ಪರ ವಕೀಲರು “ಈ ಪ್ರಕ್ರಿಯೆಗೆ ಲೋಕಾಯುಕ್ತ ಎಸ್‌ಐಟಿ ಅಗತ್ಯ ಪಕ್ಷಕಾರರಲ್ಲ ಮತ್ತು ಅವರು ಆದೇಶದಲ್ಲಿ ಮಾರ್ಪಾಡು ಕೋರಲು ಸೂಕ್ತವಾದವರಲ್ಲ. ಈ ಕಾರಣಕ್ಕಾಗಿ ಎರಡೂ ಅರ್ಜಿಗಳನ್ನು ವಜಾ ಮಾಡಬೇಕು” ಎಂದು ಕೋರಿದರು.

ರಾಜ್ಯ ಸರ್ಕಾರದ ಪರ ವಕೀಲರು “ಕುಮಾರಸ್ವಾಮಿ ಅವರ ವಿರುದ್ಧ ಆತುರದ ನಿರ್ಧಾರ ಕೈಗೊಳ್ಳುವುದಿಲ್ಲ ಎಂದು ಅಂದು ನ್ಯಾಯಾಲಯಕ್ಕೆ ಭರವಸೆ ನೀಡಲಾಗಿತ್ತು. ಆದರೆ, ಅಂದು ಲೋಕಾಯುಕ್ತ ಎಸ್‌ಐಟಿ ನ್ಯಾಯಾಲಯದ ಮುಂದೆ ಇರಲಿಲ್ಲ. ಲೋಕಾಯುಕ್ತದ ವಿಚಾರದಲ್ಲಿ ನಾವು ಮುಚ್ಚಳಿಕೆ ನೀಡಲಾಗದು. ಅದಾಗ್ಯೂ, ಬೆದರಿಕೆ ಪ್ರಕರಣ ರದ್ದತಿ ಕೋರಿರುವ ಸಂಬಂಧ ಈಗಲೇ ವಾದ ಮಂಡಿಸಲು ಸಿದ್ಧವಾಗಿದ್ದೇನೆ” ಎಂದರು.

Tags:    

Similar News