Sowjanya Case | ಶಾಂತಿಯುತ ಪ್ರತಿಭಟನೆ ನಡೆಸಲು ಹೈಕೋರ್ಟ್ ಅನುಮತಿ
“ಅರ್ಜಿದಾರರು ಕಡ್ಡಾಯವಾಗಿ ಕಾನೂನಿನ ಅನ್ವಯ ಶಾಂತಿಯುತವಾಗಿ ಪ್ರತಿಭಟನೆ ನಡೆಸಲು ಅನುಮತಿಸಲಾಗಿದೆ. ಹೈಕೋರ್ಟ್‌ನ ಎರಡು ಪೀಠಗಳು ಮಾಡಿರುವ ಆದೇಶಕ್ಕೆ ವಿರುದ್ಧವಾಗಿ ನಡೆದುಕೊಂಡರೆ ರಾಜ್ಯ ಸರ್ಕಾರವು ಕಾನೂನಿನ ಅನ್ವಯ ಅರ್ಜಿದಾರರ ವಿರುದ್ಧ ಕ್ರಮ ಕೈಗೊಳ್ಳಬಹುದು” ಎಂದು ಆದೇಶಿಸಿ, ನ್ಯಾಯಾಲಯ ಅರ್ಜಿ ಇತ್ಯರ್ಥಪಡಿಸಿದೆ.;
ಕಾಲೇಜು ಮುಗಿಸಿ ಮನೆಗೆ ಮರಳುವಾಗ ಅತ್ಯಾಚಾರಕ್ಕೀಡಾಗಿ ಕೊಲೆಯಾಗಿರುವ ಸೌಜನ್ಯ ಪ್ರಕರಣದ ಸಂಬಂಧ ಶಾಂತಿಯುತ ಪ್ರತಿಭಟನೆ ನಡೆಸಲು ಅರ್ಜಿದಾರರಿಗೆ ಹೈಕೋರ್ಟ್ ಅನುಮತಿ ನೀಡಿದೆ.
ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದಲ್ಲಿ ಸೌಜನ್ಯ ಸಾವಿಗೆ ನ್ಯಾಯ ಕೋರಿ ಶಾಂತಿಯುತವಾಗಿ ಪ್ರತಿಭಟನೆ ನಡೆಸಲು ಹಾಗೂ ಕಡಬಾ ತಹಶೀಲ್ದಾರ್ ಅನುಮತಿ ನೀಡಿ ಬಳಿಕ ಹಿಂಪಡೆದ ಆದೇಶವನ್ನು ವಜಾಗೊಳಿಸಿ, ಪ್ರತಿಭಟನೆ ನಡೆಸಲು ಅನುಮತಿ ಕೋರಿ ಸಲ್ಲಿಸಿದ್ದ ಎರಡು ಪ್ರತ್ಯೇಕ ಅರ್ಜಿಗಳ ವಿಚಾರಣೆಯನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಏಕಸದಸ್ಯ ಪೀಠ ವಿಚಾರಣೆ ನಡೆಸಿತು.
“ಅರ್ಜಿದಾರರು ಕಡ್ಡಾಯವಾಗಿ ಕಾನೂನಿನ ಅನ್ವಯ ಶಾಂತಿಯುತವಾಗಿ ಪ್ರತಿಭಟನೆ ನಡೆಸಲು ಅನುಮತಿಸಲಾಗಿದೆ. ಇದೇ ಹೈಕೋರ್ಟ್‌ನ ಎರಡು ಪೀಠಗಳು ಮಾಡಿರುವ ಆದೇಶಕ್ಕೆ ವಿರುದ್ಧವಾಗಿ ನಡೆದುಕೊಂಡರೆ ರಾಜ್ಯ ಸರ್ಕಾರವು ಕಾನೂನಿನ ಅನ್ವಯ ಅರ್ಜಿದಾರರ ವಿರುದ್ಧ ಕ್ರಮ ಕೈಗೊಳ್ಳಬಹುದು” ಎಂದು ಪೀಠ ಆದೇಶಿಸಿ, ಅರ್ಜಿ ಇತ್ಯರ್ಥಪಡಿಸಿದೆ.
ಅರ್ಜಿದಾರರ ಪರ ವಕೀಲರು “ಪ್ರತಿಭಟಿಸುವ ಹಕ್ಕನ್ನು ರಾಜ್ಯ ಸರ್ಕಾರ ಕಿತ್ತುಕೊಳ್ಳುವ ಕೆಲಸ ಮಾಡಿದೆ. ಸೌಜನ್ಯ ಕೊಲೆ ಪ್ರಕರಣದ ಸಂಬಂಧ ಯಾರೂ ಪ್ರತಿಭಟಿಸಬಾರದು ಎಂದು ಸರ್ಕಾರ ಆದೇಶ ಮಾಡಿದೆ. ವೀರೇಂದ್ರ ಹೆಗ್ಗಡೆ ಕುಟುಂಬ ಪ್ರತಿನಿಧಿಸುವ ವಕೀಲರೊಬ್ಬರು ಆಕ್ಷೇಪಿಸಿದ್ದರಿಂದ ಕಡಬಾ ತಹಶೀಲ್ದಾರ್ ಅನುಮತಿ ಹಿಂಪಡೆದಿದ್ದಾರೆ. ಸಮನ್ವಯ ಪೀಠದ ಆದೇಶ ಉಲ್ಲೇಖಿಸಿ ಪೊಲೀಸರು ಅನುಮತಿ ನಿರಾಕರಿಸಿದ್ದಾರೆ. ಪ್ರತಿಭಟನೆಯು ಶಾಂತಿಯುತವಾಗಿ ನಡೆಯಲಿದ್ದು, ಕಾನೂನು ಉಲ್ಲಂಘನೆಯಾದರೆ ಪೊಲೀಸರು ಕ್ರಮ ಕೈಗೊಳ್ಳುವ ಸ್ವಾತಂತ್ರ್ಯ ಹೊಂದಿದ್ದಾರೆ” ಎಂದರು.
ರಾಜ್ಯ ಸರ್ಕಾರದ ವಕೀಲರು “ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆಯ ಉದ್ಯೋಗಿ ಶೀನಪ್ಪ ಮತ್ತು ವೀರೇಂದ್ರ ಹೆಗ್ಗಡೆ ಕುಟುಂಬದ ನಂದೀಶ್ ಕುಮಾರ್ ಜೈನ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸದ್ದ ನ್ಯಾ. ಆರ್ ದೇವದಾಸ್ ಅವರ ಏಕಸದಸ್ಯ ಪೀಠವು ಮಹೇಶ್ ತಿಮ್ಮರೋಡಿ ಮತ್ತು ಅವರ ಬೆಂಬಲಿಗರು ಸಾರ್ವಜನಿಕವಾಗಿ ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಕುಟುಂಬದ ವಿರುದ್ಧ ಯಾವುದೇ ತೆರನಾದ ಮಾನಹಾನಿ/ನಿಂದನಾತ್ಮಕ ಹೇಳಿಕೆ ನೀಡಬಾರದು. ಇಂಥ ಮಾಹಿತಿಯನ್ನು ಪೊಲೀಸರ ಮುಂದೆ ಇಟ್ಟರೆ ತಕ್ಷಣ ಕ್ರಮಕೈಗೊಳ್ಳುವುದು ಪೊಲೀಸರ ಆದ್ಯ ಕರ್ತವ್ಯವಾಗಿದೆ ಎಂದು ನ್ಯಾಯಾಲಯ ಆದೇಶಿಸಿದೆ. ಈ ನಿಟ್ಟಿನಲ್ಲಿ ಸಮನ್ವಯ ಪೀಠದ ಆದೇಶ ಉಲ್ಲಂಘಿಸಿದರೆ ಕ್ರಮಕೈಗೊಳ್ಳುವ ಸ್ವಾತಂತ್ರ್ಯವನ್ನು ಸರ್ಕಾರಕ್ಕೆ ನೀಡಬೇಕು” ಎಂದು ಕೋರಿದರು.
ಪ್ರಕರಣದ ಹಿನ್ನೆಲೆ: ಅರ್ಜಿದಾರ ಸಂಸ್ಥೆಗಳು 11.3.2025ರಂದು ಖುಲಾಸೆ ಮರುಪರಿಶೀಲನಾ ಸಮಿತಿಯು (ಅಕ್ವಿಟಲ್ ರಿವ್ಯು ಕಮಿಟಿಯು) 2012ರಲ್ಲಿ ನಡೆದಿರುವ ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ತನಿಖೆಯಲ್ಲಿ ಭಾಗಿಯಾಗಿರುವ ಪೊಲೀಸ್ ಅಧಿಕಾರಿಗಳ ವಿರುದ್ಧ ಕ್ರಮಕೈಗೊಳ್ಳಬೇಕು ಮತ್ತು ಸೌಜನ್ಯ ಪ್ರಕರಣ ಪುನರ್ ತನಿಖೆಯಾಗಬೇಕು ಎಂದು ಆಗ್ರಹಿಸಲು ವ್ಯಾಪ್ತಿ ಹೊಂದಿರುವ ಪೊಲೀಸರಿಂದ ಅನುಮತಿ ಕೋರಿದ್ದವು.
ಈ ಸಂಬಂಧ ದಕ್ಷಿಣ ಕನ್ನಡದ ಕಡಬಾ ತಾಲ್ಲೂಕಿನ ಪೊಲೀಸರಿಗೆ ಮನವಿ ನೀಡಲಾಗಿತ್ತು. 14.3.2025ರಂದು ಕಡಬಾ ತಹಶೀಲ್ದಾರ್ ಮೊದಲಿಗೆ ಶಾಂತಿಯುತವಾಗಿ ಪ್ರತಿಭಟನೆ ನಡೆಸಲು ಅನುಮತಿ ನೀಡಿದ್ದರು. ಇದಕ್ಕೆ ವಕೀಲರೊಬ್ಬರು ಆಕ್ಷೇಪಿಸಿದ್ದರಿಂದ 15.3.2025ರಂದು ಅನುಮತಿಯನ್ನು ಹಿಂಬರಹ ನೀಡುವ ಮೂಲಕ ತಹಶೀಲ್ದಾರ್ ಹಿಂಪಡೆದಿದ್ದರು. ಇದನ್ನು ಪ್ರಶ್ನಿಸಿ ಅರ್ಜಿದಾರರು ಹೈಕೋರ್ಟ್ ಕದತಟ್ಟಿದ್ದರು.ಸೌಜನ್ಯ ಪ್ರಕರಣದ ಕುರಿತಯ ಶಾಂತಿಯುತ ಪ್ರತಿಭಟನೆ ನಡೆಸಲು ಅನುಮತಿಸಿ ಅರ್ಜಿ ಇತ್ಯರ್ಥಪಡಿಸಿದ ಹೈಕೋರ್ಟ್