ಸಾರ್ವಜನಿಕ ಸ್ಥಳದಲ್ಲಿ ಧೂಮಪಾನ ಮಾಡಿದರೆ ಬೀಳಲಿದೆ ದುಬಾರಿ ದಂಡ

18 ವರ್ಷದೊಳಗಿನವರಿಗೆ ತಂಬಾಕು ಉತ್ಪನ್ನಗಳನ್ನು ಮಾರುವಂತಿಲ್ಲ ಎಂಬ ನಿಯಮವಿತ್ತು. ಇದೀಗ ಈ ನಿಯಮವನ್ನು ತಿದ್ದುಪಡಿ ಮಾಡಿದ್ದು, 21 ವರ್ಷಕ್ಕಿಂತ ಕಡಿಮೆ ವಯಸ್ಸಿನವರೆಗೆ ಬೀಡಿ, ಸಿಗರೇಟ್, ತಂಬಾಕು ಉತ್ಪನ್ನಗಳ ಮಾರಾಟ ನಿಷೇಧಿಸಲಾಗಿದೆ.;

Update: 2025-05-31 08:01 GMT

ಸಾಂದರ್ಭಿಕ ಚಿತ್ರ.

ಸಾರ್ವಜನಿಕ ಸ್ಥಳಗಳಲ್ಲಿ ಸಿಗರೇಟ್‌ ಸೇವನೆ ಅಥವಾ ತಂಬಾಕು, ಗುಟ್ಕಾ ಉಗುಳುವುದನ್ನು ನಿಷೇಧಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

ಸಿಗರೇಟ್ ಮತ್ತು ಇತರೆ ತಂಬಾಕು ಉತ್ಪನ್ನಗಳ ಜಾಹೀರಾತು ನಿಷೇಧ, ವ್ಯಾಪಾರ ಮತ್ತು ವಾಣಿಜ್ಯ ಉತ್ಪಾದನೆ ಸರಬರಾಜು ವಿತರಣೆ ವಿನಿಮಯ ಕರ್ನಾಟಕ(ತಿದ್ದುಪಡಿ) ಮಸೂದೆ 2024ಕ್ಕೆ ರಾಷ್ಟ್ರಪತಿಗಳು ಅಂಕಿತ ಹಾಕಿದ್ದು, ಹೊಸ ನಿಯಮದ ಪ್ರಕಾರ ಸಾರ್ವಜನಿಕ ಸ್ಥಳದಲ್ಲಿ ಧೂಮಪಾನ ಹಾಗೂ ಗುಟ್ಕಾ ಉಗುಳಿದರೆ ಒಂದು ಸಾವಿರ ರೂ.ಗಳ ವರೆಗೆ ದಂಡ ವಿಧಿಸಲು ತೀರ್ಮಾನಿಸಿದೆ. 

ತಿದ್ದುಪಡಿ ಮಸೂದೆಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಮೇ 23ರಂದು ಅಂಕಿತ ಹಾಕಿದ್ದು,ಈ ಸಂಬಂಧ ರಾಜ್ಯ ಸರ್ಕಾರ ರಾಜ್ಯಪತ್ರದಲ್ಲಿ ಪ್ರಕಟಿಸಿ, ಕಾಯ್ದೆ ಜಾರಿಗೊಳಿಸಿದೆ.  

ವಯೋಮಿತಿ ಮಿತಿ ಏರಿಕೆ

21ವರ್ಷದೊಳಗಿನವರು ಸಾರ್ವಜನಿಕ ಸ್ಥಳಗಳಲ್ಲಿ ತಂಬಾಕು ಉತ್ಪನ್ನ ಸೇವಿಸಿದರೆ ದಂಡ ಪಾವತಿಸಬೇಕಾಗುತ್ತದೆ. ಈ ಹಿಂದೆ 18 ವರ್ಷದೊಳಗಿನವರು ಧೂಮಪಾನ ಮಾಡಿದರೆ ದಂಡ ಪಾವತಿಸಬೇಕಾಗಿತ್ತು. ಈಗ ನಿಯಮಗಳಿಗೆ ತಿದ್ದುಪಡಿ ತರಲಾಗಿದೆ. 21 ವರ್ಷಕ್ಕಿಂತ ಕಡಿಮೆ ವಯಸ್ಸಿನವರೆಗೆ ಬೀಡಿ, ಸಿಗರೇಟ್, ತಂಬಾಕು ಉತ್ಪನ್ನಗಳ ಮಾರಾಟ ನಿಷೇಧಿಸಲಾಗಿದೆ.

ಶಿಕ್ಷಣ ಸಂಸ್ಥೆಯಿಂದ ನೂರು ಮೀಟರ್‌ ಸುತ್ತಳತೆಯಲ್ಲಿ ತಂಬಾಕು ಉತ್ಪನ್ನ ಮಾರಾಟ ಹಾಗೂ ಬಳಕೆ ಮಾಡುವಂತಿಲ್ಲ ಎಂದು ಆದೇಶದಲ್ಲಿ ತಿಳಿಸಿದೆ.

ದಂಡ ಎಷ್ಟು?

ಕಾಯ್ದೆಯಡಿ ನಿಯಮ ಉಲ್ಲಂಘಿಸಿ ಧೂಮಪಾನ ಮಾಡಿದರೆ ಒಂದು ಸಾವಿರ ರೂ. ದಂಡ ವಿಧಿಸಬಹುದಾಗಿದೆ. ಬಾರ್, ರೆಸ್ಟೋರೆಂಟ್, ಪಬ್, ಉಪಹಾರ ಗೃಹಗಳಲ್ಲಿ ಹುಕ್ಕಾ ಸೇವನೆ ನಿಷೇಧಿಸಿದ್ದು ಇದನ್ನು ಉಲ್ಲಂಘಿಸಿದವರಿಗೆ 50 ಸಾವಿರದಿಂದ ಒಂದು ಲಕ್ಷ ರೂ.ವರೆಗೆ ದಂಡ ವಿಧಿಸಲಾಗುತ್ತದೆ. ಇಲ್ಲವೇ ಒಂದು ವರ್ಷದಿಂದ ಮೂರು ವರ್ಷದವರೆಗೆ ಜೈಲು ಶಿಕ್ಷೆ ವಿಧಿಸಲು ಅವಕಾಶವಿದೆ.

ಮೂಲ ಅಧಿನಿಯಮದ 21ನೇ ಪ್ರಕರಣಕ್ಕೆ ತಿದ್ದುಪಡಿ ಮಾಡಿದ್ದು, ನಿಯಮ ಉಲ್ಲಂಘಿಸುವ ವ್ಯಕ್ತಿಗಳಿಗೆ ಒಂದು ವರ್ಷಕ್ಕೆ ಕಡಿಮೆ ಇಲ್ಲದಂತೆ ಮೂರು ವರ್ಷಗಳಿಗೆ ವಿಸ್ತರಿಸಬಹುದಾದ ಜೈಲು ಶಿಕ್ಷೆ ವಿಧಿಸಬಹುದಾಗಿದೆ. 24ನೇ ಪ್ರಕರಣದಲ್ಲಿ  ಈ ಮೊದಲು ಚಾಲ್ತಿಯಲ್ಲಿದ್ದ ದಂಡದ ಮೊತ್ತ 200 ರೂ. ಗೆ ಬದಲಾಗಿ 1,000 ರೂ. ದಂಡ ವಿಧಿಸಬಹುದು ಎಂದು ತಿಳಿಸಲಾಗಿದೆ.

ಪ್ರತ್ಯೇಕ ಧೂಮಪಾನ ಪ್ರದೇಶಕ್ಕೆ ಅವಕಾಶ

ಮೂವತ್ತು ಕೊಠಡಿಗಳಿರುವ ಹೋಟೆಲ್‌, ಮೂವತ್ತು ಅಥವಾ ಅದಕ್ಕಿಂತ ಹೆಚ್ಚಿನ ಸಾಮರ್ಥ್ಯವಿರುವ ರೆಸ್ಟೋರೆಂಟ್‌ ಹಾಗೂ ವಿಮಾನ ನಿಲ್ದಾಣದಲ್ಲಿ ಪ್ರತ್ಯೇಕ ಧೂಮಪಾನ ಪ್ರದೇಶಕ್ಕೆ ಸ್ಥಳಾವಕಾಶ ಮೀಸಲಿಡಬೇಕು ಎಂದು ಸೂಚಿಸಲಾಗಿದೆ.  

ಪೊಲೀಸ್‌ ಆಯುಕ್ತರ ಎಚ್ಚರಿಕೆ

ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ಮಾಡುವುದು ಹಾಗೂ ಶಿಕ್ಷಣ ಸಂಸ್ಥೆಗಳ ಬಳಿ ತಂಬಾಕು ಮಾರಾಟ ಮಾಡುವುದು ಶಿಕ್ಷಾರ್ಹ ಅಪರಾಧ ಎಂದು ಬೆಂಗಳೂರು ನಗರ ಪೊಲೀಸ್‌ ಆಯುಕ್ತ ಬಿ. ದಯಾನಂದ ಎಚ್ಚರಿಕೆ ನೀಡಿದ್ದಾರೆ.

ನಗರಾದ್ಯಂತ ಆಯಾ ಠಾಣಾ ಪೊಲೀಸರು, ಬಿಬಿಎಂಪಿ ಮಾರ್ಷಲ್‌ಗಳು ಹಾಗೂ ಎನ್‌ಜಿಒಗಳ ಸಹಭಾಗಿತ್ವದಲ್ಲಿ ವಿಶೇಷ ಕಾರ್ಯಾಚರಣೆ ನಡೆಯಲಿದೆ. ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ಮಾಡುವವರು, ಬಾಲಕರಿಗೆ ತಂಬಾಕು ಮಾರಾಟ ಮಾಡುವುದು ಹಾಗೂ ಶಿಕ್ಷಣ ಸಂಸ್ಥೆಗಳ ಬಳಿ ತಂಬಾಕು ಮಾರಾಟ ಮಾಡುವವರ ವಿರುದ್ಧ ಕ್ರಮ ಜರುಗಿಸಲಾಗುತ್ತದೆ ಎಂದು ತಿಳಿಸಿದ್ದಾರೆ.

80.8 ಲಕ್ಷ ದಂಡ ಸಂಗ್ರಹ

2024 ರಿಂದ 2025 ಏಪ್ರಿಲ್‌ವರೆಗೆ ಬೆಂಗಳೂರು ನಗರದಲ್ಲಿ ಕೋಟ್ಪಾ(ಸಿಗರೇಟ್‌ ಮತ್ತಿತರ ತಂಬಾಕು ಉತ್ಪನ್ನಗಳ ಕಾಯ್ದೆ) ಅಡಿ 57,130 ಪ್ರಕರಣಗಳನ್ನು ದಾಖಲಿಸಲಾಗಿದ್ದು 80.8 ಲಕ್ಷ ರೂ. ದಂಡ ಸಂಗ್ರಹಿಸಲಾಗಿದೆ ಎಂದು ಪೊಲೀಸ್‌ ಆಯುಕ್ತರು ಮಾಹಿತಿ ನೀಡಿದ್ದಾರೆ.

Tags:    

Similar News