ಬೆಂಗಳೂರು ರಸ್ತೆ ಬದಿಗಳಲ್ಲಿ ಕಸ ಹಾಕಿದರೆ ಭಾರೀ ದಂಡ
ಬೆಂಗಳೂರಿನಲ್ಲಿ ಉತ್ಪತ್ತಿಯಾಗುವ ಕಸದ ವಿಲೇವಾರಿಗೆ ಕಣ್ಣೂರು ಲ್ಯಾಂಡ್ ಫಿಲ್ಲಿಂಗ್ ಬಳಕೆ ಮಾಡುತ್ತಿರುವ ಜಿಬಿಎ, ಇದೀಗ ಬೀದಿ ಬೀದಿಗಳಲ್ಲಿ ಕಸ ವಿಂಗಡನೆಯಿಂದ ಆಗುತ್ತಿದ್ದ ಸಮಸ್ಯೆಗೂ ಪರಿಹಾರ ಕಂಡುಹಿಡಿಯಲು ಚಿಂತನೆ ನಡೆಸಿದೆ.;
ರಸ್ತೆಯ ಎಲ್ಲೆಂದರಲ್ಲಿ ಕಸ ಹಾಕಿದರೆ ದಂಡ ಬೀಳುತ್ತದೆ.
ರಸ್ತೆ ಬದಿಗಳಲ್ಲಿ ಕಸ ಹಾಕಲು ಕಡಿವಾಣ ಹಾಕಲು ಗ್ರೇಟರ್ ಬೆಂಗಳೂರು ಪ್ರಾಧಿಕಾರ ಮುಂದಾಗಿದೆ. ಇನ್ನು ಮುಂದೆ ಎಲ್ಲೆಂದರಲ್ಲಿ ಕಸ ಎಸೆಯುವರಿಗೆ ಭಾರೀ ಪ್ರಮಾಣದ ದಂಡ ವಿಧಿಸಲು ತೀರ್ಮಾನಿಸಿದೆ ಎಂದು ಘನತ್ಯಾಜ್ಯ ನಿರ್ವಹಣಾ ನಿಯಮಿತದ ಮುಖ್ಯ ಕಾರ್ಯನಿರ್ವಾಹಕ ಕರೀಗೌಡ ತಿಳಿಸಿದ್ದಾರೆ.
ಈ ಬಗ್ಗೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಎಲ್ಲೆಂದರಲ್ಲಿ ಕಸ ಎಸೆಯುವವರಿಗೆ ಮೊದಲ ಬಾರಿಗೆ 500 ರೂ. ದಂಡ ವಿಧಿಸಲಾಗುತ್ತದೆ. ಪದೇ ಪದೇ ಅದೇ ತಪ್ಪು ಮಾಡಿದರೆ 2 ಸಾವಿರ ರೂ. ತನಕ ದಂಡ ವಸೂಲಿ ಮಾಡಲಿದೆ ಎಂದು ಅವರು ತಿಳಿಸಿದ್ದಾರೆ.
ನಗರದಲ್ಲಿ ಹೆಚ್ಚಾಗಿರುವ ಪ್ಲಾಸ್ಟಿಕ್ ಹಾವಳಿಗೆ ಕಡಿವಾಣ ಹಾಕಲು 27 ತಂಡಗಳ ರಚನೆ ಮಾಡಲಾಗುವುದು. ಈ ತಂಡಗಳು ವಾರಕ್ಕೆ ಐದು ವಾರ್ಡ್ ಗಳಲ್ಲಿ ತಪಾಸಣೆ ನಡೆಸುವಂತೆ ಸೂಚನೆ ನೀಡಲಾಗಿದೆ. ಇದುವರೆಗೆ ಪ್ಲಾಸ್ಟಿಕ್ ಬಳಕೆ ಮಾಡುವವರಿಂದ ಬರೋಬ್ಬರಿ 38 ಲಕ್ಷ ರೂ. ದಂಡ ಸಂಗ್ರಹಿಸಲಾಗಿದೆ ಎಂದು ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಉತ್ಪತ್ತಿಯಾಗುವ ಕಸದ ವಿಲೇವಾರಿಗೆ ಕಣ್ಣೂರು ಲ್ಯಾಂಡ್ ಫಿಲ್ಲಿಂಗ್ ಬಳಕೆ ಮಾಡುತ್ತಿರುವ ಜಿಬಿಎ, ಇದೀಗ ಬೀದಿ ಬೀದಿಗಳಲ್ಲಿ ಕಸ ವಿಂಗಡನೆಯಿಂದ ಆಗುತ್ತಿದ್ದ ಸಮಸ್ಯೆಗೂ ಪರಿಹಾರ ಕಂಡುಹಿಡಿಯಲು ಚಿಂತನೆ ನಡೆಸಿದೆ. ಸದ್ಯ ಬೆಂಗಳೂರಿನ 26 ಕಡೆಗಳಲ್ಲಿ ಟ್ರಾನ್ಸ್ ಫಾರ್ಮಮೇಷನ್ ಸೆಂಟರ್ ನಿರ್ಮಾಣಕ್ಕೆ ಟೆಂಡರ್ ಕರೆಯಲು ಮುಂದಾಗಿರುವ ಜಿಬಿಎ, ಸಾರ್ವಜನಿಕ ಸ್ಥಳಗಳಲ್ಲಿ ಕಸದಿಂದ ಆಗುತ್ತಿರುವ ಸಮಸ್ಯೆಗಳನ್ನು ಪತ್ತೆ ಹಚ್ಚುತ್ತಿದೆ.