Heatwave| ಯಾದಗಿರಿಯಲ್ಲಿ ರಣಬಿಸಿಲಿನ ಆರ್ಭಟ: ನವಜಾತ ಶಿಶುಗಳ ಆರೋಗ್ಯದ ಮೇಲೆ ಗಂಭೀರ ಪರಿಣಾಮ
ಯಾದಗಿರಿಯ ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ನವಜಾತ ಶಿಶುಗಳ ದಾಖಲಾಗುವ ಪ್ರಮಾಣ ಕಳೆದ 15 ದಿನಗಳಲ್ಲಿ ಗಣನೀಯವಾಗಿ ಹೆಚ್ಚಾಗಿದೆ. ನಿರ್ಜಲೀಕರಣ ಸಮಸ್ಯೆಯಿಂದಾಗಿ ಈ ಶಿಶುಗಳು ಆಸ್ಪತ್ರೆ ದಾಖಲಾಗುತ್ತಿದ್ದಾರೆ.;
ಯಾದಗಿರಿಯಲ್ಲಿ ಬಿಸಿಲಿನ ಝಳ ಹೆಚ್ಚಾಗಿದೆ.
ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿ ಬೇಸಿಗೆಯ ಝಳ ತೀವ್ರಗೊಂಡಿದ್ದು, ಯಾದಗಿರಿ ಜಿಲ್ಲೆಯಲ್ಲಿ ತಾಪಮಾನವು 41 ಡಿಗ್ರಿ ಸೆಲ್ಸಿಯಸ್‌ಗೆ ತಲುಪಿದೆ. ಈ ಉರಿಯುವ ಬಿಸಿಲಿನಿಂದ ಜನಸಾಮಾನ್ಯರ ಜೀವನ ಕಷ್ಟಕರವಾಗಿದ್ದು, ವೃದ್ಧರು ಮತ್ತು ಮಕ್ಕಳ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ.
ಯಾದಗಿರಿಯ ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಕಳೆದ 15 ದಿನಗಳಲ್ಲಿ ನವಜಾತ ಶಿಶುಗಳ ದಾಖಲಾತಿ ಪ್ರಮಾಣ ಗಮನಾರ್ಹವಾಗಿ ಹೆಚ್ಚಾಗಿದೆ. ನಿರ್ಜಲೀಕರಣ (ಡಿಹೈಡ್ರೇಷನ್) ಸಮಸ್ಯೆಯಿಂದಾಗಿ ಈ ಶಿಶುಗಳು ಆಸ್ಪತ್ರೆಗೆ ದಾಖಲಾಗುತ್ತಿದ್ದಾರೆ. ವೈದ್ಯರ ಪ್ರಕಾರ, ಈ ಶಿಶುಗಳಲ್ಲಿ ಕಿಡ್ನಿಗೆ ಬಾವು, ಮೂತ್ರ ವಿಸರ್ಜನೆಯಲ್ಲಿ ತೊಂದರೆ, ಮತ್ತು ಕೆಲವರಲ್ಲಿ ಮೂತ್ರ ಸೋಂಕಿನ ಲಕ್ಷಣಗಳು ಕಂಡುಬಂದಿವೆ. ಕೇವಲ ಕೆಲವೇ ದಿನಗಳ ಅವಧಿಯಲ್ಲಿ ಸುಮಾರು 10 ಮಕ್ಕಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ, ಇದು ಪರಿಸ್ಥಿತಿಯ ಗಂಭೀರತೆಯನ್ನು ಎತ್ತಿ ತೋರಿಸುತ್ತದೆ.
ತೀವ್ರವಾದ ತಾಪಮಾನದಿಂದ ಉಂಟಾಗಿರುವ ಆರೋಗ್ಯ ಸಮಸ್ಯೆಗಳನ್ನು ಗಂಭೀರವಾಗಿ ಪರಿಗಣಿಸಿರುವ ಯಾದಗಿರಿಯ ತಾಯಿ ಮತ್ತು ಮಕ್ಕಳ ಆಸ್ಪತ್ರೆಯ ವೈದ್ಯರು, ನವಜಾತ ಶಿಶುಗಳಿಗಾಗಿ ವಿಶೇಷ ವಾರ್ಡ್ ರಚಿಸಿದ್ದಾರೆ. ತಾಪಮಾನ ದಿನದಿಂದ ದಿನಕ್ಕೆ ಏರುತ್ತಿರುವ ಹಿನ್ನೆಲೆಯಲ್ಲಿ, ಮಕ್ಕಳಿಗೆ ನಿರ್ಜಲೀಕರಣ, ಶಾಖದಿಂದ ಉಂಟಾಗುವ ಆಯಾಸ (ಹೀಟ್ ಸ್ಟ್ರೋಕ್), ಮತ್ತು ಇತರ ಸಂಬಂಧಿತ ಕಾಯಿಲೆಗಳ ಅಪಾಯವು ಇನ್ನಷ್ಟು ಹೆಚ್ಚಾಗಬಹುದು ಎಂದು ಎಚ್ಚರಿಕೆ ನೀಡಿದ್ದಾರೆ.
ಪರಿಹಾರ ಏನು?
ವಿಶೇಷವಾಗಿ ತಾಯಂದಿರಿಗೆ, ಈ ಬೇಸಿಗೆಯಲ್ಲಿ ಕೆಲವು ಮುಂಜಾಗ್ರತಾ ಕ್ರಮಗಳನ್ನು ಪರಿಣತ ವೈದ್ಯರು ಸಲಹೆಗಳನ್ನು ನೀಡಿದ್ದಾರೆ. ಎದೆಹಾಲು ಕುಡಿಯುವ ಶಿಶುಗಳಿಗೆ ತಾಯಂದಿರು ತಾವು ಸಾಕಷ್ಟು ನೀರನ್ನು ಕುಡಿಯುವುದು ಅಗತ್ಯ. ಇದರಿಂದ ಹಾಲಿನ ಉತ್ಪಾದನೆ ಸರಿಯಾಗಿರುತ್ತದೆ ಮತ್ತು ಶಿಶುವಿಗೆ ನಿರ್ಜಲೀಕರಣದ ಅಪಾಯ ಕಡಿಮೆಯಾಗುತ್ತದೆ ಎಂದು ಹೇಳಿದ್ದಾರೆ.
ಮಕ್ಕಳನ್ನು ತಂಪಾದ ಮತ್ತು ಗಾಳಿಯಾಡುವ ಸ್ಥಳದಲ್ಲಿ ಮಕ್ಕಳನ್ನು ಮಲಗಿಸಬೇಕು. ಶಿಶುಗಳಲ್ಲಿ ದೇಹದ ತಾಪಮಾನ ಆಗಾಗ ಪರೀಕ್ಷೆ ಮಾಡಿ ಜ್ವರ, ಆಯಾಸ, ಅಥವಾ ಮೂತ್ರದ ಕೊರತೆಯ ಲಕ್ಷಣಗಳಿದ್ದರೆ ತಕ್ಷಣ ವೈದ್ಯರನ್ನು ಸಂಪರ್ಕಿಸುವಂತೆ ಹೇಳಿದ್ದಾರೆ. ಮಕ್ಕಳಿಗೆ ತೆಳುವಾದ, ಗಾಳಿಯಾಡುವ ಹತ್ತಿಯ ಬಟ್ಟೆಗಳನ್ನು ತೊಡಿಸುವಂತೆ ಹೇಳಿದ್ದಾರೆ.