ಪತ್ರಿಕಾಗೋಷ್ಠಿ ವೇಳೆ ಕುಮಾರಸ್ವಾಮಿ ಮೂಗಿನಿಂದ ರಕ್ತ; ಆಸ್ಪತ್ರೆಯಲ್ಲಿ ಆರೋಗ್ಯ ಸುಧಾರಣೆ, ಬಿಡುಗಡೆ

ಬಿಜೆಪಿ ಜೆಡಿಎಸ್‌ ಘೋಷಿಸಿದ ಮೈಸೂರು ಪಾದಯಾತ್ರೆಯ ಕುರಿತು ಚರ್ಚಿಸಲು ಬಿಜೆಪಿಯ ನಾಯಕರೊಂದಿಗಿನ ಸಭೆಯಲ್ಲಿ ಭಾಗವಹಿಸಿದ್ದರು. ಪತ್ರಿಕಾಗೋಷ್ಠಿ ಸಂದರ್ಭದಲ್ಲಿ ಅವರ ಮೂಗಿನಲ್ಲಿ ರಕ್ತ ಸೋರುತ್ತಿರುವುದು ಗೊತ್ತಾಯಿತು.

Update: 2024-07-28 19:31 GMT

ಬೆಂಗಳೂರಿನಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡುವಾಗ ಮೂಗಿನಿಂದ ರಕ್ತಸ್ರಾವವಾಗುತ್ತಿದ್ದ ಹಿನ್ನೆಲೆಯಲ್ಲಿ ಕೇಂದ್ರ ಭಾರೀ ಕೈಗಾರಿಕೆ ಮತ್ತು ಉಕ್ಕು ಸಚಿವ ಎಚ್ ಡಿ ಕುಮಾರಸ್ವಾಮಿ ಅವರನ್ನು ಭಾನುವಾರ ಸಂಜೆ ಆಸ್ಪತ್ರೆಗೆ ದಾಖಲಿಸಲಾಗಿತ್ತು. 

ಆದರೆ ರಾತ್ರಿ ವೇಳೆಗೆ ಅವರ ಆರೋಗ್ಯ ಸುಧಾರಿಸಿದ್ದು, ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. 

ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ಹಗರಣದ ಕುರಿತು  ಬಿಜೆಪಿ ಜೆಡಿಎಸ್‌  ಘೋಷಿಸಿದ  ಮೈಸೂರು ಪಾದಯಾತ್ರೆಯ ಕುರಿತು ಚರ್ಚಿಸಲು  ಬಿಜೆಪಿಯ ನಾಯಕರೊಂದಿಗಿನ ಸಭೆಯಲ್ಲಿ ಭಾಗವಹಿಸಿದ್ದರು.  ಬಳಿಕ ಪತ್ರಿಕಾಗೋಷ್ಠಿ ಸಂದರ್ಭದಲ್ಲಿ ಅವರ ಮೂಗಿನಲ್ಲಿ ರಕ್ತ ಸೋರುತ್ತಿರುವುದು ಗೊತ್ತಾದ ತಕ್ಷಣ ಅವರನ್ನು ಜಯನಗರನದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತು.

ಜಯನಗರದ ಆಸ್ಪತ್ರೆಯಿಂದ ಬಿಡುಗಡೆ ಬಳಿಕ ಪ್ರತಿಕ್ರಿಯಿಸಿದ ಕುಮಾರಸ್ವಾಮಿ ” ಮೂರು ಬಾರಿ ನನಗೆ ಹೃದಯ ಕವಾಟನ್ನು ಬದಲಾವಣೆ ಮಾಡಲಾಗಿದೆ. ಬ್ಲಡ್ ತಿನ್ನರ್ ಮಾತ್ರೆ ತೆಗೆದುಕೊಳ್ಳುತ್ತೇನೆ. ರಕ್ತ ಗಟ್ಟಿ ಆಗಬಾರದು ಎನ್ನುವ ಕಾರಣಕ್ಕೆ ಈ ಮಾತ್ರೆ ತೆಗೆದುಕೊಳ್ಳುತ್ತೇನೆ. ಒತ್ತಡ ಜಾಸ್ತಿಯಾದಾಗ, ವಿಶ್ರಾಂತಿ ಇಲ್ಲದೆ ಇದ್ದಾಗ ನನಗೆ ಮೂಗಿನಿಂದ ರಕ್ತಸ್ರಾವ ಆಗುವುದು ಸಹಜ. ಕೆಲಸದ ಒತ್ತಡ ಕಡಿಮೆ ಮಾಡಿಕೊಳ್ಳಿ ಎಂದು ವೈದ್ಯರು ಸಲಹೆ ನೀಡಿದ್ದಾರೆ. ನನಗೆ ಸಿಕ್ಕಿರುವ ಸಮಯ ಒಂದೊಂದು ಕ್ಷಣವು ಮುಖ್ಯ. ಜನರಿಗೆ ಎನಾದರೂ ಒಂದು ಸಹಾಯ ಮಾಡಬೇಕು. ಕೇಂದ್ರದಿಂದ ರಾಜ್ಯಕ್ಕೆ ಕೊಡುಗೆ ಕೊಡಬೇಕು ಎಂದರು ಅವರು.

ಜನರು ನಂಬಿಕೆ ಇಟ್ಟು ದೆಹಲಿಗೆ ಕಳಿಸಿದ್ದಾರೆ. ಜನತೆ ವಿಶ್ವಾಸಕ್ಕೆ ಧಕ್ಕೆ ತರುವುದಿಲ್ಲ. ಇದೊಂದು ತಾತ್ಕಾಲಿಕ ಸಮಸ್ಯೆ ಅಷ್ಟೇ. ಯಾರು ಆತಂಕಪಡುವುದು ಬೇಡ. ವಿಶ್ರಾಂತಿ ತೆಗೆದುಕೊಳ್ಳಬೇಕು ಎಂದು ಅವರು ಸಲಹೆ ಮಾಡಿದ್ದಾರೆ. 92 ವರ್ಷಗಳ ದೇವೇಗೌಡರು ನಾಳೆಯ ದಿನ ಸಂಸತ್ತಿನಲ್ಲಿ ಕಾವೇರಿ ವಿಚಾರ ಪ್ರಸ್ತಾಪ ಮಾಡಲಿದ್ದಾರೆ. ಡಿಎಂಕೆ ಮತ್ತು ಇತರೆ ಸದಸ್ಯರು ಅಡ್ಡಿಪಡಿಸುವ ಕೆಲಸ ಮಾಡುತ್ತಾರೆ. ಆ ಸಂದರ್ಭದಲ್ಲಿ ನಾನು ಅವರ ಜೊತೆಗೆ‌ ಇರಬೇಕು ಎಂದು ಕೇಂದ್ರ ಸಚಿವರು ಹೇಳಿದರು.

ರಾತ್ರಿ ನನ್ನ ದೇಹದಲ್ಲಿನ ಏರುಪೇರು ನೋಡಿಕೊಂಡು ದೆಹಲಿ ಪ್ರವಾಸ ನಿರ್ಧಾರ ಮಾಡುತ್ತೇನೆ. ವೈದ್ಯರಿಗೂ ಈ ಬಗ್ಗೆ ಮಾಹಿತಿ ನೀಡುತ್ತೇನೆ ಎಂದ ಅವರು; ಪಾದಯಾತ್ರೆ ಮಾಡದೇ ಇರುವುದಕ್ಕೆ ನನ್ನ ಆರೋಗ್ಯ ಸಂಪೂರ್ಣ ಕೆಟ್ಟಿಲ್ಲ. ಅದಕ್ಕೆ ಇನ್ನೂ ಒಂದು ವಾರ ಸಮಯ ಇದೆ. ನಾನು ಇಲ್ಲದಿದ್ದರೆ ನಿಖಿಲ್ ಕುಮಾರಸ್ವಾಮಿ ನಮ್ಮ ಶಾಸಕರ ಜೊತೆ ಪಾದಯಾತ್ರೆ ಮಾಡುತ್ತಾರೆ. ಈ ಬಗ್ಗೆ ಕಾರ್ಯಕರ್ತರಿಗೆ ಆತಂಕ ಬೇಡ ಎಂದು ಕುಮಾರಸ್ವಾಮಿ ಅವರು ಹೇಳಿದರು.

Tags:    

Similar News