ಜಿ.ಟಿ.ದೇವೇಗೌಡ ವಿರುದ್ಧ ಎಚ್‌.ವಿಶ್ವನಾಥ್‌ ಆಕ್ರೋಶ; ಚಮಚಾಗಿರಿ ಭಾಷಣ ಎಂದು ಟೀಕೆ

ಚಮಚಾಗಿರಿಯ ಭಾಷಣದಿಂದ ಜಿ.ಟಿ.ದೇವೇಗೌಡರು ಮೈಸೂರು ದಸರಾ ಪಾವಿತ್ರ್ಯತೆ ಹಾಳು ಮಾಡಿದ್ದಾರೆ. ಮುಡಾ ಅಕ್ರಮದಲ್ಲಿ ಅವರೂ ಫಲಾನುಭವಿಯಾಗಿದ್ದಾರೆ ಎಂದು ವಿಶ್ವನಾಥ್‌ ಕಿಡಿ ಕಾರಿದ್ದಾರೆ;

Update: 2024-10-04 11:32 GMT

ಜಿ ಟಿ ದೇವೇಗೌಡ ವಿರುದ್ಧ ಕಿಡಿಕಾರಿದ ಎಚ್‌ ವಿಶ್ವನಾಥ್‌

ಮುಡಾ ಹಗರಣದಲ್ಲಿ ಸಿಎಂ ಸಿದ್ದರಾಮಯ್ಯ ಬೆಂಬಲಕ್ಕೆ ನಿಂತ ಜೆಡಿಎಸ್ ಕಾರ್ಯಾಧ್ಯಕ್ಷ ಜಿ.ಟಿ.ದೇವೇಗೌಡರ ವಿರುದ್ಧ ಬಿಜೆಪಿ ವಿಧಾನ ಪರಿಷತ್ ಸದಸ್ಯ ಹಾಗೂ ಮಾಜಿ ಸಚಿವ ಅಡಗೂರು ಎಚ್.ವಿಶ್ವನಾಥ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ʼಜಿ.ಟಿ.ದೇವೇಗೌಡರು ತಮ್ಮ ಚಮಚಾಗಿರಿಯ ಭಾಷಣದಿಂದ ಮೈಸೂರು ದಸರಾದ ಪಾವಿತ್ರ್ಯತೆ ಹಾಳು ಮಾಡಿದ್ದಾರೆ. ಮುಡಾದಲ್ಲಿ ಅವರೂ ಫಲಾನುಭವಿಯಾಗಿದ್ದು, ಸಿಎಂ ಅವರನ್ನು ಹೊಗಳಿರುವುದು ಬೂಟಾಟಿಕೆಯಂತಿದೆ. ಇಡೀ ಕಾರ್ಯಕ್ರಮವನ್ನು ಗೊಂದಲಮಯ ಮಾಡಿ, ಕೆಡಿಸಿದ್ದಾರೆ. ಅವರಿಗೆ ಕ್ಷಮೆಯೇ ಇಲ್ಲ' ಎಂದು ವಿಶ್ವನಾಥ್‌ ಕಿಡಿಕಾರಿದ್ದಾರೆ.

ಮೈಸೂರಿನಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಇಷ್ಟು ದಿನ ಮುಡಾ ಹಗರಣದ ಕುರಿತು ತುಟಿ ಬಿಚ್ಚದ ಜಿ.ಟಿ.ದೇವೇಗೌಡರು ಈಗ ಏಕೆ ರೋಷಾವೇಶವಾಗಿ ಪ್ರತಿಕ್ರಿಯಿಸಿದ್ದಾರೆ ಎಂದು ಪ್ರಶ್ನಿಸಿದ ಅವರು, ಮುಡಾ ಫಲಾನುಭವಿ ಆಗಿರುವುದೇ ಇದಕ್ಕೆ ಕಾರಣ ಎಂದು ಉತ್ತರವನ್ನೂ ನೀಡಿದರು. ಜಿ.ಟಿ. ದೇವೇಗೌಡರದ್ದು ಎಷ್ಟೋ ನಿವೇಶನಗಳಿವೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಇಂತಹ ಎಲ್ಲ ರಾಜಕಾರಣಿಗಳೂ ಸೇರಿ ಮೈಸೂರನ್ನು ಕಳ್ಳರ ಸಂತೆಯಂತೆ ಬಿಂಬಿಸಿದ್ದಾರೆ' ಎಂದು ಕಿಡಿಕಾರಿದ್ದಾರೆ.

ಜೆಡಿಎಸ್ ವರಿಷ್ಠರು ತಮ್ಮನ್ನು ಶಾಸಕಾಂಗ ಪಕ್ಷದ ನಾಯಕನನ್ನಾಗಿ ಮಾಡಲಿಲ್ಲವೆಂಬ ಕಾರಣಕ್ಕೆ ಜಿ.ಟಿ.ದೇವೇಗೌಡರು ಸಿಎಂ ಸಿದ್ದರಾಮಯ್ಯ ಪರ ಮಾತನಾಡಿದ್ದಾರೆ ಎಂದು ಆರೋಪಿಸಿದರು. ನಾಡದೇವತೆ ಚಾಮುಂಡೇಶ್ವರಿ ಸನ್ನಿಧಿಯಲ್ಲಿ ರಾಜಕೀಯ ಭಾಷಣ ಬೇಕಿರಲಿಲ್ಲ. ಈ ಹಿಂದೆ ಚಾಮುಂಡೇಶ್ವರಿ ಬಗ್ಗೆ ಲಘುವಾಗಿ ಮಾತನಾಡುತ್ತಿದ್ದ ಸಿದ್ದರಾಮಯ್ಯ ಅವರು ಈಗ ಪದೇ ಪದೇ ತಾಯಿಯ ಆಶೀರ್ವಾದ ಬೇಡುತ್ತಿರುವುದು ನೋಡಿದರೆ ಆತಂಕದಲ್ಲಿದ್ದಾರೆ ಎಂಬುದು ಗೊತ್ತಾಗುತ್ತದೆ ಎಂದು ಲೇವಡಿ ಮಾಡಿದ್ದಾರೆ.

ದಸರಾ ಉದ್ಘಾಟನೆಗೆ ಬಂದಿದ್ದ ಸಾಹಿತಿ ಹಂ.ಪ. ನಾಗರಾಜಯ್ಯ ಅವರೂ ಕೂಡ ರಾಜಕೀಯ ಲೇಪದ ಭಾಷಣ ಮಾಡಿದ್ದು ದಸರಾ ಮಹೋತ್ಸವದ ಘನತೆಗೆ ಮಸಿ ಬಳಿದಂತಿದೆ ಎಂದು ಹೇಳಿದ್ದಾರೆ.

ಮುಡಾ ನಿವೇಶನ ಹಂಚಿಕೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ (ಇಡಿ) ಇಸಿಐಆರ್ ದಾಖಲಿಸಿದ ನಂತರ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಪತ್ನಿ ಪಾರ್ವತಿ ಅವರು 14 ನಿವೇಶನಗಳನ್ನು ವಾಪಸ್ ಮಾಡಿದ್ದಾರೆ. ಅಪರಾಧ ಒಪ್ಪಿಕೊಂಡಾಕ್ಷಣ ಮಾಡಿರುವ ಅಪರಾಧ ಹೋಗಿಬಿಡುವುದಿಲ್ಲ. ಶೇ 50:50 ಅನುಪಾತದಲ್ಲಿ ಹಂಚಿಕೆಯಾಗಿರುವ ಎಲ್ಲ ನಿವೇಶನಗಳ ಬಗ್ಗೆಯೂ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದ್ದಾರೆ.

Tags:    

Similar News