ಗ್ಯಾರಂಟಿ ಯೋಜನೆ ರಾಜ್ಯದ ಸುರಕ್ಷತೆಗೆ ಅಪಾಯ: ವಕೀಲೆ ಪ್ರಮೀಳಾ ನೇಸರ್ಗಿ ವಾದ
ʼʼಕಾಂಗ್ರೆಸ್ ತಂದಿರುವ ಗ್ಯಾರಂಟಿ ಯೋಜನೆಗಳನ್ನು ಕೊನೆಗೊಳಿಸದೇ ಹೋದರೆ ನಮ್ಮ ರಾಜ್ಯದ ಜನರು ಸುರಕ್ಷಿತವಾಗಿ ಇರುವುದಿಲ್ಲ" ಎಂದು ಹಿರಿಯ ವಕೀಲೆ ಪ್ರಮೀಳಾ ನೇಸರ್ಗಿ ಹೈಕೋರ್ಟ್‌ನಲ್ಲಿ ವಾದ ಮಂಡನೆ ವೇಳೆ ಆತಂಕ ವ್ಯಕ್ತಪಡಿಸಿದರು.
ʼʼಕಾಂಗ್ರೆಸ್ ತಂದಿರುವ ಗ್ಯಾರಂಟಿ ಯೋಜನೆಗಳನ್ನು ಕೊನೆಗೊಳಿಸದೇ ಹೋದರೆ ರಾಜ್ಯದ ಜನರು ಸುರಕ್ಷಿತವಾಗಿ ಇರುವುದಿಲ್ಲ" ಎಂದು ಹಿರಿಯ ವಕೀಲೆ ಪ್ರಮೀಳಾ ನೇಸರ್ಗಿ ಹೇಳಿದ್ದಾರೆ.
"ಸಿದ್ದರಾಮಯ್ಯ ಅವರ ಆಯ್ಕೆಯನ್ನು ಅಸಿಂಧುಗೊಳಿಸಬೇಕು" ಎಂದು ಕೋರಿ ವರುಣಾ ಹೋಬಳಿ ಕೂಡನಹಳ್ಳಿಯ ಕೆ.ಎಂ.ಶಂಕರ್ ಸಲ್ಲಿಸಿರುವ ಚುನಾವಣಾ ತಕರಾರು ಅರ್ಜಿಯನ್ನು ಹೈಕೋರ್ಟ್‌ನಲ್ಲಿ ಶನಿವಾರ ನ್ಯಾಯಮೂರ್ತಿ ಎಸ್. ಸುನಿಲ್ ದತ್ ಯಾದವ್ ಅವರಿದ್ದ ಏಕಸದಸ್ಯ ನ್ಯಾಯಪೀಠ ವಿಚಾರಣೆ ನಡೆಸಿತು.
ವಿಚಾರಣೆ ವೇಳೆ ಅರ್ಜಿದಾರರ ಪರ ಸುದೀರ್ಘ ವಾದ ಮಂಡಿಸಿದ ಬಿಜೆಪಿ ನಾಯಕಿಯೂ ಆಗಿರುವ ಪ್ರಮೀಳಾ ನೇಸರ್ಗಿ ಅವರು, "ಗ್ಯಾರಂಟಿ ಯೋಜನೆಗಳು ಮೂಲಭೂತ ಹಕ್ಕು ಮತ್ತು ಸಂವಿಧಾನದ ನಿರ್ಧಾರಕ ತತ್ವಗಳಿಗೆ ವಿರುದ್ಧವಾಗಿವೆ. ಈ ಯೋಜನೆಗಳನ್ನು ಒಳಗೊಂಡ ಪ್ರಣಾಳಿಕೆಯು ನೋಂದಾಯಿತ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ (ಐಎನ್‌ಸಿ) ಪ್ರಣಾಳಿಕೆ ಅಲ್ಲ. ಅದು ಕೆಪಿಸಿಸಿ ಪ್ರಣಾಳಿಕೆಯಾಗಿದೆ. ಕೆಪಿಸಿಸಿ ನೋಂದಾಯಿತ ಪಕ್ಷವಲ್ಲ. ಹೀಗಾಗಿ, ಅದರ ಹೆಸರಿನಲ್ಲಿ ರೂಪಿಸಿರುವ ಪ್ರಣಾಳಿಕೆ ಭ್ರಷ್ಟಾಚಾರಕ್ಕೆ ಸಮ” ಎಂದು ಬಲವಾಗಿ ಪ್ರತಿಪಾದಿಸಿದರು.
“ಸಿದ್ದರಾಮಯ್ಯನವರೇ ಪ್ರಣಾಳಿಕೆ ರೂಪಿಸಿ, ಪ್ರಚಾರ ಮಾಡಿದ್ದಾರೆ. ಗ್ಯಾರಂಟಿ ಯೋಜನೆಗಳ ಕಾರ್ಡ್‌ಗೆ ಸಹಿ ಮಾಡಿರುವುದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮತ್ತು ಸಿದ್ದರಾಮಯ್ಯ. ಹೀಗಾಗಿ, ಕರ್ನಾಟಕದ ವಿಧಾನಸಭಾ ಚುನಾವಣೆಯನ್ನು ಅನೂರ್ಜಿತಗೊಳಿಸಬೇಕು" ಎಂದು ಕೋರಿದರು.
''ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ನೀಡಿರುವ ಸೇವೆಯನ್ನು ಪುರುಷರಿಗೂ ವಿಸ್ತರಿಸದೇ ಇರುವುದು ಸಂವಿಧಾನದ 14ನೇ ವಿಧಿಯ ಉಲ್ಲಂಘನೆ. ಗ್ಯಾರಂಟಿ ಯೋಜನೆಗಳನ್ನು ಅಗತ್ಯ ಇರುವವರಿಗೆ ಮಾತ್ರವೇ ನೀಡಬಹುದಿತ್ತು. ಆದರೆ, ಇದನ್ನು ಎಲ್ಲರಿಗೂ ವಿಸ್ತರಿಸಲಾಗಿದೆ. ರಾಜ್ಯದ ಮತದಾರರನ್ನು ಲಘುವಾಗಿ ಪರಿಗಣಿಸಲಾಗಿದೆ" ಎಂದು ಆಕ್ಷೇಪಿಸಿದರು.
"ಗ್ಯಾರಂಟಿ ಯೋಜನೆಗಳು ಸಂವಿಧಾನಕ್ಕೆ ವಿರುದ್ಧವಾಗಿವೆಯೇ ಎಂಬುದನ್ನು ಪರಿಶೀಲಿಸಬೇಕು. ಪ್ರಕರಣದಲ್ಲಿ ಸಿದ್ದರಾಮಯ್ಯ ಅಪರಾಧಿಯಾಗಿದ್ದಾರೆ. ಹೀಗಾಗಿ, ಅವರ ಆಯ್ಕೆಯನ್ನು ಅಸಿಂಧುಗೊಳಿಸಬೇಕು'' ಎಂದು ಮನವಿ ಮಾಡಿದರು.ಇಡೀ ದಿನದ ಕಲಾಪ ಪೂರ್ತಿ ಪ್ರಮೀಳಾ ನೇಸರ್ಗಿ ಅವರ ವಾದ ಆಲಿಸಿದ ನ್ಯಾಯಪೀಠ, “ನಿಮ್ಮ ವಾದ ಆಸಕ್ತಿಕರವಾಗಿತ್ತು. ನ್ಯಾಯಾಲಯ ಮುಕ್ತ ಮನಸ್ಸಿನಿಂದ ಎಲ್ಲಾ ವಿಚಾರಗಳನ್ನು ಪರಿಶೀಲಿಸಲಿದೆ. ದಸರಾ ರಜೆಯ ಬಳಿಕ ವಿಚಾರಣೆ ಮುಂದುವರಿಸಲಾಗುವುದು" ಎಂದು ತಿಳಿಸಿ ವಿಚಾರಣೆ ಮುಂದೂಡಿತು.