ಗ್ಯಾರಂಟಿ ಬಿಕ್ಕಟ್ಟು | ಹಿಮಾಚಲಪ್ರದೇಶದ ಸ್ಥಿತಿ ರಾಜ್ಯಕ್ಕೆ ಬರಲಿದೆ: ಬಿ ವೈ ವಿಜಯೇಂದ್ರ ಟೀಕೆ
ಸಾರಿಗೆ ನಿಗಮದ ಹಣಕಾಸು ಸಂಕಷ್ಟವನ್ನು ನೀಗಲು ಎರಡು ಸಾವಿರ ಕೋಟಿ ರೂ. ಸಾಲ ಎತ್ತಲು ಮುಂದಾಗಿರುವ ರಾಜ್ಯ ಕಾಂಗ್ರೆಸ್ ಸರ್ಕಾರದ ನಡೆಯನ್ನು ಭಾರತೀಯ ಜನತಾ ಪಕ್ಷದ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಖಂಡಿಸಿದ್ದಾರೆ.
ಹಿಮಾಚಲಪ್ರದೇಶದ ಕಾಂಗ್ರೆಸ್ ಸರ್ಕಾರ ಹಣಕಾಸಿನ ಮುಗ್ಗಟ್ಟಿನ ಹಿನ್ನೆಲೆಯಲ್ಲಿ ಗ್ಯಾರಂಟಿ ಯೋಜನೆಗಳನ್ನು ಒಂದೊಂದಾಗಿ ಕೈಬಿಡುತ್ತಿರುವ ಕುರಿತ ವರದಿಗಳನ್ನು ಉಲ್ಲೇಖಿಸಿರುವ ಬಿ ವೈ ವಿಜಯೇಂದ್ರ ಅವರು, ಪೊಳ್ಳು ಭರವಸೆಗಳನ್ನು ನೀಡಿ ಅವುಗಳಿಗೆ ಹಣ ಹೊಂದಿಸಲಾಗದೆ ಗೊಂದಲ ಸೃಷ್ಟಿಸಲಾಗಿದೆ ಎಂದು ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ತಮ್ಮ ಎಕ್ಸ್ ಖಾತೆಯಲ್ಲಿ ಈ ಕುರಿತು ಪೋಸ್ಟ್ ಮಾಡಿರುವ ಅವರು, ಅಭಿವೃದ್ಧಿಶೂನ್ಯ ಯೋಜನೆಗಳು, ವೆಚ್ಚಗಳ ಮೂಲಕ ರಾಜ್ಯ ಸರ್ಕಾರ ಖಜಾನೆ ಖಾಲಿಮಾಡಿದೆ ಎಂದು ಹೇಳಿದ್ದಾರೆ.
ಸರ್ಕಾರದ ಆರ್ಥಿಕ ಸಂಪನ್ಮೂಲವನ್ನು ಆಧರಿಸಿ ಸಮತೋಲನ ಕಾಯ್ದುಕೊಳ್ಳುವಲ್ಲಿ ವಿಫಲರಾಗಿ ತಾವು ನೀಡುವ ಪೊಳ್ಳು ಭರವಸೆಗಳಿಗೆ ಹಣ ಒದಗಿಸಲಾಗದೇ ಯೋಜನೆಗಳು ಹೇಗೆ ವೈಫಲ್ಯ ಸಾಧಿಸುತ್ತವೆ ಎನ್ನುವುದಕ್ಕೆ ಕಾಂಗ್ರೆಸ್ ಆಡಳಿತದ ಹಿಮಾಚಲ ಪ್ರದೇಶ ಸರ್ಕಾರ ಸಾಕ್ಷಿ ಒದಗಿಸಿದೆ ಎಂದು ಹಿಮಾಚಲಪ್ರದೇಶ ಕಾಂಗ್ರೆಸ್ ಸರ್ಕಾರ, ವಿದ್ಯುತ್ ಸಬ್ಸಿಡಿ ಯೋಜನೆಯನ್ನು ಸ್ವಯಂಪ್ರೇರಿತರಾಗಿ ವಾಪಸ್ ಮಾಡಲು ಜನತೆಗೆ ಕರೆ ನೀಡಿರುವ ಕುರಿತ ವರದಿಯನ್ನು ಉಲ್ಲೇಖಿಸಿದ್ದಾರೆ.
ಕರ್ನಾಟಕದಲ್ಲೂ ಸಹ ಪಂಚ ಗ್ಯಾರಂಟಿಗಳನ್ನು ನಿರ್ವಹಿಸುವಲ್ಲಿ ಗೊಂದಲಗಳನ್ನು ಸೃಷ್ಟಿಸಿಕೊಳ್ಳುತ್ತಿರುವ ಕಾಂಗ್ರೆಸ್ ಸರ್ಕಾರ ಶಕ್ತಿ ಯೋಜನೆಯಲ್ಲಿ ಈಗಾಗಲೇ ನಷ್ಟವನ್ನು ಅನುಭವಿಸಿದ್ದು, ಸಾರಿಗೆ ಇಲಾಖೆಯ ನಾಲ್ಕೂ ನಿಗಮಗಳಿಗೆ ಬಡ್ಡಿರಹಿತವಾಗಿ 2 ಸಾವಿರ ಕೋಟಿ ರೂ ಸಾಲ ನೀಡಲು ಮುಂದಾಗಿದೆ ಎಂದು ರಾಜ್ಯದ ಸಾರಿಗೆ ನಿಗಮಗಳ ಹಣಕಾಸು ಬಿಕ್ಕಟ್ಟಿನ ಬಗ್ಗೆ ಗಮನ ಸೆಳೆದಿದ್ದಾರೆ.
ಗೃಹ ಜ್ಯೋತಿ ಯೋಜನೆಯ ನಷ್ಟವನ್ನು ಸರಿದೂಗಿಸಲು ವಾಣಿಜ್ಯ ಹಾಗೂ ಉತ್ಪಾದಕ ವಲಯದ ಮೇಲೆ ವಿದ್ಯುತ್ ದರ ಹೆಚ್ಚಿಸಿರುವುದರ ಪರಿಣಾಮ, ಪರೋಕ್ಷವಾಗಿ ಜನ ಸಾಮಾನ್ಯರು ಇದರ ಬಿಸಿ ಅನುಭವಿಸುವಂತಾಗಿದೆ. ಗೃಹ ಲಕ್ಷ್ಮಿ ಯೋಜನೆಗೆ ಹಣ ಹೊಂದಿಸಲಾಗದೆ ಚುನಾವಣಾ ಸಂದರ್ಭದಲ್ಲಿ ಮಾತ್ರ ಉಳಿಸಿಕೊಂಡಿರುವ ಬಾಕಿ ಕಂತುಗಳನ್ನು ಪಾವತಿಸಿ ಯೋಜನೆಯನ್ನು ಮತಬ್ಯಾಂಕ್ ಸೃಷ್ಟಿಸಿಕೊಳ್ಳಲು ಮಾತ್ರ ಬಳಸಿಕೊಳ್ಳಲಾಗುತ್ತಿದೆ. ಯುವನಿಧಿ ಯೋಜನೆ ಯುವ ಜನರ ಪಾಲಿಗೆ ಗಗನಕುಸುಮವಾಗಿಯೇ ಉಳಿದಿದೆ ಎಂದು ವಿಜಯೇಂದ್ರ ಟೀಕಿಸಿದ್ದಾರೆ.
ಸಮಾಜ ಹಾಗೂ ನಾಡನ್ನು ಕಟ್ಟುವ ಮಾನವ ಸಂಪನ್ಮೂಲದ ಪ್ರಮುಖ ಭಾಗವಾಗಿರುವ ರೈತಾಪಿ ವರ್ಗ, ಶ್ರಮಿಕರು,ಯುವ ಜನರು, ವಿದ್ಯಾರ್ಥಿಗಳ ಹಾಗೂ ಮಹಿಳೆಯರ ಭವಿಷ್ಯಕ್ಕಾಗಿ ಯಾವುದೇ ಯೋಜನೆ ರೂಪಿಸದೇ ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ಅಭಿವೃದ್ಧಿ ಶೂನ್ಯ ಆಡಳಿತ ನೀಡುವ ಮೂಲಕ ತನ್ನ ಖಜಾನೆ ಬರಿದು ಮಾಡಿಕೊಂಡಿದೆ. ಇದು ನಾಡಿನ ಜನರಿಗೆ ತಿಳಿಯದ ವಿಷಯವೇನಲ್ಲ, ಏಕೆಂದರೆ ಇದರ ಪರಿಣಾಮವನ್ನು ತೆರಿಗೆದಾರರು ನಿತ್ಯ ಅನುಭವಿಸುತ್ತಲೇ ಇದ್ದಾರೆ ಎಂದು ಹೇಳಿದ್ದಾರೆ.
ಗ್ಯಾರಂಟಿ ಯೋಜನೆಗಳನ್ನು ಹಿಂತೆಗೆದುಕೊಳ್ಳುತ್ತಿರುವ ಹಿಮಾಚಲಪ್ರದೇಶ ಕಾಂಗ್ರೆಸ್ ಸರ್ಕಾರದ ಸ್ಥಿತಿ ಕರ್ನಾಟಕಕ್ಕೆ ಬಂದರೂ ಅದರಲ್ಲಿ ಆಶ್ಚರ್ಯವೇನಿಲ್ಲ. ಸಿದ್ದರಾಮಯ್ಯ ನವರ ನೇತೃತ್ವದ ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ತಾನು ಜನತೆಗೆ ನೀಡಿರುವ ವಚನ ಪಾಲನೆ ಹಾಗೂ ಜಾರಿಗೊಳಿಸಿರುವ ಯೋಜನೆಯನ್ನು ಸರಿದೂಗಿಸುವ ಬದ್ಧತೆ ಇದ್ದರೆ ಈ ಕೂಡಲೇ ಗ್ಯಾರಂಟಿ ಯೋಜನೆಗಳನ್ನು ಸರಿದೂಗಿಸಲು ರಾಜ್ಯದ ಆರ್ಥಿಕ ಸಂಪನ್ಮೂಲವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಅಭಿವೃದ್ಧಿ ಯೋಜನೆಗಳನ್ನು ಪರಿಚಯಿಸುವ ಬದ್ಧತೆ ಪ್ರದರ್ಶಿಸಲಿ ಎಂದು ಸವಾಲು ಹಾಕಿದ್ದಾರೆ.